ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರಗಿಡಗಳಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತಸಂಘದಿಂದ ಸಂಸದ ಎಸ್.ಮುನಿಸ್ವಾಮಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಒಂದು ವಾರದೊಳಗೆ ಗಡಿ ಭಾಗದ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನ ಮರಗಿಡಗಳು ಹಾಗೂ ಕೊಳವೆಬಾವಿಗಳಿಗೆ ಪರಿಹಾರ ನೀಡದೇ ಇದ್ದರೆ ಕಾಮಗಾರಿಯನ್ನು ಸಂಪೂರ್ಣವಾಗಿ ಗಡಿಭಾಗದಲ್ಲಿ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೊಂದ ರೈತರಾದ ಚೆಂಗೇಗೌಡ ಹಾಗೂ ಜನಾರ್ಧನ್ ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪಿ ನಂಬರ್ ದುರಸ್ಥಿ ಮಾಡಬೇಕಾದರೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳನ್ನು ರೈತರು ಕಡತಗಳ ಸಮೇತ ಅರ್ಜಿ ಸಲ್ಲಿಸಿದರೆ ನೂರೊಂದು ನೆಪ ಹೇಳಿ ಅದನ್ನು ತಿರಸ್ಕರಿಸಿ ಅದೇ ಕಡತ ದಲ್ಲಾಳಿಗಳ ಮುಖಾಂತರ ಲಕ್ಷಲಕ್ಷ ಲಂಚ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವುದೇ ಸಮಸ್ಯೆಯಿಲ್ಲದೆ ಪಿ ನಂಬರ್ ದುರಸ್ಥಿಯಾಗುತ್ತದೆ. ಇಂತಹ ಅವ್ಯವಸ್ಥೆಯಲ್ಲಿ ಭೂಮಿ ಕಳೆದುಕೊಂಡ ರೈತ ಲಕ್ಷಲಕ್ಷ ಲಂಚ ನೀಡಿ ಪಿ ನಂಬರ್ ದುರಸ್ಥಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜಣ್ಣ, ವೆಂಕಟರಾಮಪ್ಪ, ವಿಶ್ವನಾಥ್, ಜಗದೀಶ್, ಕುಮಾರ್, ವೆಂಕಟೇಶ್, ನಟರಾಜ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು.
ಸುದ್ದಿ ಓದಿ ಹಂಚಿ: