ಮಾರಣಾಂತಿಕ ಖಾಯಿಲೆಗೆ ತುತ್ತಾದ ಮಗನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೆಂದೇ ತನ್ನ ಬಳಿಯಿರುವ ತುಂಡು ಜಮೀನನ್ನು ಮಾರಿ ಬೆಂಗಳೂರಿಗೆ ಬರುವ ಅಪ್ಪ ಕೊನೆಯಲ್ಲಿ ಜೇಬಿನಲ್ಲಿ ಒಂದೂ ರೂಪಾಯಿಯಿಲ್ಲದೇ ಕೈಚೆಲ್ಲುತ್ತಾನೆ. ಈಗ ಅವನ ಬಳಿಯಿರುವುದು ತನ್ನ ಮಗನ ಹೆಣ ಮತ್ತು ಒಂದು ಖಾಲಿ ಟ್ರಂಕು. ಹೆಂಡತಿ ದೂರದ ಊರಿನಲ್ಲಿದ್ದಾಳೆ. ಅವಳಿಗೆ ತೋರಿಸದೆ ಮಗನನ್ನು ಹೇಗೆ ತಾನೇ ಮಣ್ಣು ಮಾಡಿಯಾನು? ಇದೀಗ ಆ ಟ್ರಂಕಿನೊಳಕ್ಕೆ ಮಗನ ಶವವನ್ನು ಹಾಕಿಕೊಂಡು ತನ್ನೂರಿನತ್ತ ನಡೆಯಲು ಶುರು ಮಾಡುತ್ತಾನೆ….
(ಹರಿವು)
ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿ ಮದುವೆಯಾದ ಕೆಲವೇ ದಿನಗಳಲ್ಲಿ ತೀರಿಕೊಂಡಿದ್ದಾನೆ. ಈಗ ಆಕೆ ಆತನ ನೆನಪಿನಲ್ಲೇ ಬದುಕುತ್ತಿದ್ದಾಳೆ. ಒಂದು ಹಂತದಲ್ಲಿ ಆಕೆಯ ದೇಹ ಸಾಂಗತ್ಯ ಬೇಡುತ್ತದೆ. ಅಲ್ಲಿ ಶುರುವಾಗುವುದು ಸಂಧಿಗ್ಧತೆ. ತನ್ನ ಪತಿಯ ನೆನಪಿನಿಂದ ಹೊರ ಬರುವುದು ಸರಿಯಾ? ಕೇವಲ ತನ್ನ ಬಯಕೆಯನ್ನು ಪೂರೈಸುವ ಪರಿಧಿಯೊಳಗೆ ಯಾರಾದರೂ ನಂಬಲರ್ಹ ವ್ಯಕ್ತಿ ಸಿಗಬಹುದಾ?
(ನಾತಿಚರಾಮಿ)
ಆಕೆ ಗರ್ಭಿಣಿ. ಕೆಲವೇ ದಿನಗಳ ಹಿಂದೆ ಗಂಡ ತೀರಿಕೊಂಡಿದ್ದಾನೆ. ಸರ್ಕಾರ ಘೋಷಿಸಿದ ಪರಿಹಾರ ಹಣವನ್ನು ಈಕೆಗೆ ತಲುಪಿಸುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈಕೆಯನ್ನು ಅಲೆದಾಡಿಸುತ್ತಿದ್ದಾರೆ. ಎಲ್ಲವೂ ಸರಿಯಿದ್ದರೂ ಅವರಿಗೆ ಬೇಕಿರುವುದು ಲಂಚ. ಅದನ್ನು ಕೊಡಲು ಈಕೆ ಸಿದ್ಧಳಿಲ್ಲ. ಎಲ್ಲ ಮಿತಿಮೀರಿತು ಇನ್ನು ದಾರಿಯೇ ಇಲ್ಲ ಎನ್ನುವಾಗ ಅದೊಂದು ದಿನ ಬಾಂಬನ್ನು ತನ್ನ ಹೊಟ್ಟೆಗೆ ಸುತ್ತಿಕೊಂಡು ಪಿಸ್ತೂಲು ಹಿಡಿದು ಆ ಕಛೇರಿಗೆ ನುಗ್ಗಿ ಎಲ್ಲರನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾಳೆ….
(Act-1978)
ಇವೆಲ್ಲ ಸಿನಿಮಾಗಳ ಒಂದೊಂದು ಎಳೆಯನ್ನು ಮೇಲೆ ಹೇಳಿದೆನಾದರೂ ಪ್ರತೀ ಸಿನಿಮಾದಲ್ಲೂ ಅದರ ಜೊತೆಗೆ ಮತ್ತೇನನ್ನೋ ಹೇಳಲಾಗಿದೆ. ಉದಾ: ನೈಜ ಘಟನೆಯೊಂದರ ಆಧಾರದ ಮೇಲೆ ಕಥೆ ಹೆಣೆಯಲಾಗಿರುವ “ಹರಿವು” ಸಿನಿಮಾದಲ್ಲಿ ಮೇಲೆ ಹೇಳಿದ ಎಳೆಯ ಜೊತೆಗೆ ಅಪ್ಪನ ಜೊತೆಗಿನ ಬಾಂಧವ್ಯದ ಬಗ್ಗೆ ಮನತಟ್ಟುವ ವಿಷಯವಿದೆ. ಸಿನಿಮಾ ಮುಗಿಯುವ ಹೊತ್ತಿಗೆ ನಮ್ಮ ತಂದೆಯ ಜೊತೆ ನಾವೇನಾದರೂ ಹಾಗೆ ಒರಟಾಗಿ ನಡೆದುಕೊಂಡಿದ್ದರೆ ಕಣ್ಣಂಚು ಒದ್ದೆಯಾಗುವುದು ಗ್ಯಾರಂಟಿ. ಇದೇ ರೀತಿ “ನಾತಿಚರಾಮಿ”, Act-1978 ಸಿನಿಮಾಗಳ ಬಗ್ಗೆಯೂ ಬರೆಯಬಹುದು. ಆದರೆ ಈ ಮೇಲೆ ಹೇಳಿದ ಎಳೆಗಳನ್ನೇ ಗಮನಿಸಿದರೆ ಇವು ಮಾಮೂಲಿ ಬರುತ್ತಿರುವ ಸಿನಿಮಾಗಳ ಕಥೆಗಿಂತ ವಿಭಿನ್ನವಾಗಿವೆ. ಹೇಳಲು ಶುರುಮಾಡಿದಾಗಲೇ ಚಿತ್ರಕಥೆ ಬರೆಯುವವನಿಗೆ “ಹೇಗಪ್ಪಾ, ಇದನ್ನು ದೃಶ್ಯರೂಪಕ್ಕೆ ತರುವುದು?” ಅನ್ನುವ ಪ್ರಶ್ನೆ ಬರುವುದು ಖಂಡಿತ.
ನಿರ್ದೇಶಕ ಮಂಸೋರೆ ಆಯ್ದುಕೊಳ್ಳುವ ವಿಷಯವಸ್ತುಗಳೇ ಹೀಗೆ. ಮೊದಲಿಗೆ ಸಿನಿಮಾ ತಂತ್ರಜ್ಞರಿಗೇ ಸವಾಲು ಅನಿಸುವಂಥವು. ಎಲ್ಲರನ್ನೂ ಅವರ ಕಂಫರ್ಟ್ ಝೋನ್’ನಿಂದ ಹೊರತಂದು ಈಗ ಆಲೋಚಿಸಿ ಅನ್ನುವಂಥವು. ಮಲಯಾಳಂನಂತಹ ಚಿತ್ರರಂಗದಲ್ಲಿ ಈ ಬಗೆಯ ಕಥೆಗಳ ಆಯ್ದುಕೊಳ್ಳುವಿಕೆ ಸಾಮಾನ್ಯ ಅನ್ನಿಸುವಷ್ಟು ಅಳವಡಿಸಿಕೊಳ್ಳುವಿಕೆ ಸಾಮಾನ್ಯವಾಗಿ ಹೋಗಿದ್ದರೂ ಕನ್ನಡದಲ್ಲಿ ಇಂಥವು ಬಹಳ ಕಡಿಮೆ ಎಂದೇ ಹೇಳಬಹುದು. ಹಾಗಿರುವಾಗ ಪ್ರೇಕ್ಷಕನನ್ನು ದೂರುವುದರಲ್ಲಿ ಅರ್ಥವಿಲ್ಲ. ಆದರೆ ಮಂಸೋರೆ ಮಾತ್ರ ನನ್ನ ಕಥೆಗಳ ಆಯ್ಕೆಯೇ ಬೇರೆ ಅನ್ನುವ ರೀತಿಯಲ್ಲಿ ಸಿನಿಮಾದಿಂದ ಸಿನಿಮಾಗೆ ತಮ್ಮನ್ನೇ ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಪ್ರಶಸ್ತಿಗೆ ಅಂತ ಈ ಯಾವುದೇ ಸಿನಿಮಾಗಳನ್ನು ಅವರು ಮಾಡುತ್ತಿಲ್ಲವಾದರೂ, ಅವರ ಕೆಲಸಕ್ಕೆ ಬೆನ್ನು ತಟ್ಟುವಂತೆ ಈಗಾಗಲೇ ರಾಷ್ಟ್ರಪ್ರಶಸ್ತಿಗಳೂ ಸೇರಿದಂತೆ ಈ ಸಿನಿಮಾಗಳು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಮುಂದಿನ ತಿಂಗಳ ಮಾರ್ಚ್ ಮೂರರಂದು ಅವರ ಮುಂದಿನ ಚಿತ್ರ “19.20.21” ಬಿಡುಗಡೆಯಾಗುತ್ತಿದೆ. ನಿನ್ನೆ ಅದರ ಪೋಸ್ಟರ್ ನೋಡಿದೆ. ವಿದ್ಯಾರ್ಥಿಯೊಬ್ಬ ಕೈಕೋಳ ಹಾಕಿಕೊಂಡು ಪೊಲೀಸ್ ಸರ್ಪಗಾವಲಲ್ಲಿ ಪರೀಕ್ಷೆ ಬರೆಯುತ್ತಿರುವ ದೃಶ್ಯ. ಆ ಪೋಸ್ಟರ್ ಅನ್ನೇ ಒಂದೆರಡು ಕ್ಷಣ ಕಣ್ಣಿಟ್ಟು ನೋಡಿದರೆ ಒಂಥರ ಕಷ್ಟ ಅನ್ನಿಸುತ್ತದೆ. ಪರೀಕ್ಷೆ ಬರೆಯುವ ದಿನ ಅದೆಷ್ಟೇ ಚೆಂದ ಓದಿಕೊಂಡಿದ್ದರೂ “ಅವನಿಷ್ಟ ಬಂದದ್ದು ತಿನ್ನಲಿ. ಅವನಿಗೆ ಕಿರಿಕಿರಿಯಾಗುವುದು ಬೇಡ. ಅವನಿಗೆ ಯಾರೂ ಬೈಯಬೇಡಿ” ಅಂತ ನಮ್ಮ ನಮ್ಮ ಮನೆಗಳಲ್ಲೇ ಒಂದು ಕಂಫರ್ಟ್ ಒದಗಿಸಿ “ಆಲ್ ದಿ ಬೆಸ್ಟ್” ಹೇಳಿ ಕಳಿಸಿರುತ್ತಾರೆ. ಪ್ರಶಾಂತ ಭಾವದಿಂದ ಪರೀಕ್ಷೆ ಬರೆಯಲು ಕುಳಿತರೆ ಓದಿದ್ದೆಲ್ಲವೂ ನೆನಪಾಗುತ್ತದೆ. ಪರೀಕ್ಷೆ ಬರೆಯುವ ಅನುಭವ ಹಿತವಾಗಿರುತ್ತದೆ ಅನ್ನುವುದಷ್ಟೇ ಇದಕ್ಕೆ ಕಾರಣ. ಆದರೆ ಈ “19.20.21” ಪೋಸ್ಟರ್ ನೋಡಿದ ತಕ್ಷಣ ಮನಸ್ಸಿಗೆ ಕಸಿವಿಸಿಯಾಯ್ತು. ಒಂದು ಕೈಗೆ ಕೋಳ ಹಾಕಿಸಿಕೊಂಡು ಪರೀಕ್ಷೆ ಬರೆಯಲು ಕೂರುವ ಆ ವಿದ್ಯಾರ್ಥಿಯ ಮನಸ್ಸು ಹೇಗಿರಬಹುದು ಅನ್ನುವ ಕಲ್ಪನೆಯಿಂದ.
ಹಿಂದಿನ ಸಿನಿಮಾಗಳಂತೆಯೇ ಈ ಸಿನಿಮಾದಲ್ಲೂ ಇನ್ನೇನೋ ಇದೆ ಅನ್ನುವ ನಂಬಿಕೆಯಂತೂ ನನಗಿದೆ. Lets wait for March 3rd.
Wish you all the best ಮಂಸೋರೆ Manso Re & ಇಡೀ “19.20.21” ತಂಡಕ್ಕೆ.
#santhuLm ಸಂತೋಷ್ ಕುಮಾರ.