• Wed. Sep 18th, 2024

PLACE YOUR AD HERE AT LOWEST PRICE

ಕೆಜಿಫ್:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಸಚಿವರುಗಳನ್ನು ಕಾಡಿ ಬೇಡಿ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕೆಜಿಎಫ್ ತಾಲೂಕನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸಿದ್ದೇನೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ತಾಲ್ಲೂಕಿನ ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಮದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್‍ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ 270ಕ್ಕೂ ಅಧಿಕ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

2018ರಲ್ಲಿ ಕೆಜಿಎಫ್ ತಾಲೂಕು ಪ್ರತ್ಯೇಕವಾಗಿ ಸರ್ಕಾರ ಘೋಷಣೆ ಮಾಡಿತು, ಆದರೆ ತಾಲೂಕು ಆಡಳಿತ ಸೌಧ ಕಟ್ಟಡಕ್ಕೆ ಸೂಕ್ತ ಸ್ಥಳ ಇರಲಿಲ್ಲ. ಸೂಕ್ತ ಸ್ಥಳ ಗುರುತಿಸಿ ಕಟ್ಟಡಕ್ಕೆ 10 ಕೋಟಿ ರೂ ಹಣ ಬಿಡುಗಡೆಗೊಳಿಸಿ ಎಲ್ಲಾ ಇಲಾಖೆಗಳು ಒಂದೆ ಕಡೆ ಸಾರ್ವಜನಿಕರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದೇನೆ.

5 ವರ್ಷಗಳ ಅವಧಿಯಲ್ಲಿ 2 ವರ್ಷ ಕೋವಿಡ್ ನಿಂದ ಅನುದಾನಗಳು ಸಿಗಲಿಲ್ಲ ಇಲಾಖಾ ಅಧಿಕಾರಿಗಳ ಬಳಿ ಕಷ್ಟಪಟ್ಟು ಅನುದಾನ ತಂದು ದ್ವಿಪಥ ರಸ್ತೆ, ವಿದ್ಯುತ್ ದೀಪಗಳು, ಸಿಸಿ ರಸ್ತೆ, ಕುಡಿಯುವ ನೀರು, ಮನೆಗಳು ಸೇರಿದಂತೆ ಮೂಲಸೌಲಭ್ಯಗಳಿಗೆ ಒತ್ತು ನೀಡಿದ್ದೇನೆ ಎಂದರು.

ಹಿಂದಿನ ಅವಧಿಯಲ್ಲಿ ಕೈಗೊಂಡಿದ್ದ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಯನ್ನು ಗುಜರಾತ್‍ನ ಗುತ್ತಿಗೆದಾರ  ಪೂರ್ಣಗೊಳಿಸದೆ ನಿಲ್ಲಿಸಿದ್ದರು. ಗುತ್ತಿಗೆದಾರರು ಕೈಗೆ ಸಿಗುತ್ತಿರಲಿಲ್ಲ. ಸದಸನದಲ್ಲಿ ಗದ್ದಲ ಮಾಡಿ ಲೋಕೋಪ ಇಲಾಖೆಗೆ ಹಸ್ತಾಂತರ ಮಾಡಿಸಿ ಪಿಚ್ಚಹಳ್ಳಿಯಿಂದ ಆಂದ್ರ ಗಡಿವರೆಗೂ 50 ಕೋಟಿಯ ರಸ್ತೆಯನ್ನು ಅಭಿವೃಧ್ಧಿ ಮಾಡಿದ್ದೇನೆ.

ಕೆಜಿಎಫ್‍ನಲ್ಲಿ 10 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ಲೋಕಾರ್ಪಣೆಯಾಗಿದೆ. ಆಂದ್ರ ಗಡಿಯಲ್ಲಿರುವ ಜೀಡಮಾಕನಹಳ್ಳಿ ಬಳಿ 1 ಎಕರೆಗೆ 25 ಕೋಟಿ ಬೆಲೆ ಇರುವ ಪ್ರದೇಶದಲ್ಲಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡಲು 71 ಲಕ್ಷ ರೂ ಹಣವನ್ನು ಮೀಸಲಿಟ್ಟಿದ್ದೇವೆ.

ಇದರಿಂದ ಕೆಜಿಎಫ್ ತಾಲೂಕಿನ ರೈತರ ಬೆಳೆಗಳಿಗೆ ಬಂಗಾರ ಬೆಲೆ ದೊರೆಯಲಿದೆ. ಅನ್ನದಾತ ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಆತ್ಮ ಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರೈತಾಪಿ ಕುಟುಂಭಗಳಿಗೆ ನೆರವಾಗಿ ನಿಲ್ಲಲು ಕೋಲ್ಡ್ ಸ್ಟೋರೇಜ್ ಸ್ಥಾಪನೆಯನ್ನು ಶೀಘ್ರದಲ್ಲೇ ಪ್ರಾರಂಭ ಮಾಡುತ್ತೇವೆಂದರು. ಪಾರಂಡಹಳ್ಳಿ ಬಳಿ ತಾಪಂ ಕಟ್ಟಡವನ್ನು ಸಹ ನಿರ್ಮಾಣ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರವು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನುಡಿದಂತೆ ನಡೆದುಕೊಳ್ಳುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ. 2023ರಲ್ಲಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆಯಾದರೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ, ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿ ಭರವಸೆ ಕೊಟ್ಟರು.

ಪ್ರತಿ ಗ್ರಾಪಂಗೆ 100 ಮನೆಗಳನ್ನು ಮಂಜೂರು ಮಾಡಿದ್ದು, 16 ಗ್ರಾಪಂಗಳಲ್ಲಿ ಅರ್ಹ ಬಡವರನ್ನು ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ, ಸತತವಾಗಿ 40 ವರ್ಷಗಳಿಂದ ರೈತರು ಸಾಗುವಳಿ ಚೀಟಿಗಾಗಿ ಕಛೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದರು. ಆದರೆ ತಾವು 53 ಅರ್ಜಿ ಸಲ್ಲಿಸಿರುವ ರೈತರ ಜಮೀನುಗಳಿಗೆ ಅಧಿಕಾರಿಗಳನ್ನು ಖುದ್ದು ಬೇಟಿ ಮಾಡಿಸಿ ಸಾಗುವಳಿ ಮಾಡಿಕೊಳ್ಳುತ್ತಿರುವ ರೈತರ ಜಮೀನುಗಳನ್ನು ದರಖಾಸ್ತು ಕಮಿಟಿಯಲ್ಲಿ ಪಾಸ್ ಮಾಡಿಸಿ ಸಾಗುವಳಿ ಚೀಟಿ ವಿತರಿಸಿದ್ದೇನೆ ಎಂದರು.

ಎನ್.ಜಿ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಅನೇಕ ಗ್ರಾಮಗಳಿಂದ ನೂರಾರು ಮಂದಿ ಅನ್ಯ ಪಕ್ಷದ  ಕಾರ್ಯಕರ್ತರು ಸ್ಥಳೀಯ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಭಾರ್ಗವ್ ರಾಮ್ ನೇತೃತ್ವದಲ್ಲಿ ತಾಪಂ ಮಾಜಿ ಸದಸ್ಯ ನಾರಾಯಣಪ್ಪ, ಗ್ರಾಪಂ ಸದಸ್ಯೆ ಲಕ್ಷಮ್ಮ, ಮುಖಂಡರಾದ ನಾರಾಯಣಪ್ಪ, ರಾಜ್ ಕುಮಾರ್ ಸೇರಿದಂತೆ 270ಕ್ಕೂ ಅಧಿಕ ಮಂದಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ರಾಧಕೃಷ್ಣರೆಡ್ಡಿ, ಜಿಪಂ ಮಾಜಿ ಸದಸ್ಯ ಅ.ಮು ಲಕ್ಷ್ಮೀನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ವಿಜಿಯಶಂಕರ್, ವಿಜಯರಾಘವರೆಡ್ಡಿ, ಎನ್.ಜಿ ಹುಲ್ಕೂರು ಮುಖಂಡ ಭಾರ್ಗವ್ ರಾಮ್, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಗ್ರಾಪಂ ಅಧ್ಯಕ್ಷ ರಾಂಬಾಬು,   ಮಾಜಿ ಸದಸ್ಯ ಜಯರಾಮ ರೆಡ್ಡಿ, ಸೊಸ್ಯಟಿ ಅಧ್ಯಕ್ಷ ಕಾರಿಪ್ರಸನ್ನ, ನಿರ್ದೇಶಕ ಸುರೇಂದ್ರಗೌಡ, ಮುಖಂಡರಾದ ರಾಮಕೃಷ್ಣಾರೆಡ್ಡಿ, ಸ್ಕೂಲ್ ವೆಂಕಟೇಶಪ್ಪ, ನಂಜುಡೇಗೌಡ, ಚಂದ್ರಕಾಂತ್, ಬುಜ್ಜಿ, ಮೂಷ್ಠೂರು ಲಕ್ಷ್ಮೀಪತಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!