PLACE YOUR AD HERE AT LOWEST PRICE
ಇತ್ತೀಚೆಗೆ ಪರೀಕ್ಷೆಯ ಬಗ್ಗೆ ಗೊಂದಲ ಶುರುವಾಗಿದೆ, 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯವೆಂದು, ಹಾಗೆಯೇ ಬೇಡವೆಂದು ಕೆಲವರು ವಾದ ಮಾಡಿ, ಘನ ನ್ಯಾಯಾಲಯದ ಮೆಟ್ಟಿಲೇರಿ ಕಡೆಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು 5 ಮತ್ತು 8ನೇ ತರಗತಿಯವರಿಗೆ ಬೋರ್ಡ್ ಪರೀಕ್ಷೆ ಕಡ್ಡಾಯವೆಂದು ಮಾರ್ಚ್ 27 ರಿಂದ ಪರೀಕ್ಷೆ ನಡೆಸಲು ಆದೇಶಿಸಿದ್ದು, ಆದರೆ ಯಾವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸದೆ ಎಲ್ಲರನ್ನೂ ಉತ್ತೀರ್ಣಗೊಳಿಸಲು ಆದೇಶಿಸಿದ್ದು, ಈಗ ಶಿಕ್ಷಣ ಸಂಸ್ಥೆಗಳು ಬೋರ್ಡ್ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿವೆ. ಈ ಹಂತದಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚೆ ಮಾಡದೆ, ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳು, ಭಾರತದಲ್ಲಿನ ಜನಸಂಖ್ಯಾ ಸ್ಫೋಟ, ನಿರುದ್ಯೋಗ ಸಮಸ್ಯೆ, ಜಾಗತಿಕ ಔದ್ಯೋಗಿಕ ಅವಕಾಶಗಳು ಮುಂತಾದ ಹಲವಾರು ವಿಚಾರಗಳ ಬಗ್ಗೆ ನಾವು ಗಮನಹರಿಸಬೇಕಿದೆ.
ಇತ್ತೀಚಿನ ವಿಶ್ವಸಂಸ್ಥೆಯ ದತ್ತಾಂಶದ ವರ್ಲ್ಡ್ಮೀಟರ್ ವಿಸ್ತರಣೆಯ ಆಧಾರದ ಮೇಲೆ ಅಂದರೆ ನಾವು ಮಾರ್ಚ್ 19, 2023 ರಂದು ಭಾರತದ ಪ್ರಸ್ತುತ ಜನಸಂಖ್ಯೆಯು ಎಷ್ಟು ಇತ್ತು ಎಂದು ಪರಿಶೀಲಿಸುವುದಾದರೆ, ನಮ್ಮ ಜನಸಂಖ್ಯೆ 1,416,681,447 ಆಗಿದೆ. ಅಂದರೆ ನಮ್ಮ ಜನಸಂಖ್ಯೆ ಶರವೇಗ ಮೀರಿ ಬೆಳೆಯುತ್ತಿದ್ದು, ಭಾರತದ ಜನಸಂಖ್ಯೆಯು ಪ್ರಪಂಚದ ಒಟ್ಟು ಜನಸಂಖ್ಯೆಯ 17.7% ಗೆ ಸಮಾನವಾಗಿದೆ. ಹೀಗಾಗಿ ಅವಲಂಬಿತರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಹೀಗಾಗಿ ಬದುಕಲು ಪ್ರತಿಯೊಬ್ಬರು ದುಡಿಯುವ ಅವಶ್ಯಕತೆ ಇದೆ. ಜಗತ್ತಿನ ಶೇಕಡಾ 19% ರಷ್ಟು ಯುವ ಶಕ್ತಿಯನ್ನು ಹೊಂದಿರುವ ಭಾರತ ಭರವಸೆಯನ್ನು ಮೂಡಿಸಿದರೂ, ದೇಶದ ಶೇಕಡಾ 20% ರಷ್ಟು ಜನರಿಗೆ ಮಾತ್ರ ವಿಧ್ಯಾಭ್ಯಾಸದ ತಕ್ಷಣ ಉದ್ಯೋಗ ದೊರೆಯುತ್ತಿದ್ದು ಉಳಿದ ಶೇಕಡಾ 80% ರಷ್ಟು ಜನರು ಉದ್ಯೋಗಾಕಾಂಕ್ಷಿಗಳಾಗಿ ಉಳಿಯಬೇಕಿದೆ. ಹೀಗಾಗಿ ಉದ್ಯೋಗಕ್ಕಾಗಿ ನಾವು ಕೇವಲ ಭಾರತವನ್ನು ಮಾತ್ರ ಅವಲಂಬಿಸಬಾರದು ಬದಲಾಗಿ ಜಾಗತಿಕ ಮಟ್ಟದಲ್ಲಿ ಉದ್ಯೋಗವನ್ನು ಪಡೆಯಬೇಕಿದೆ, ನಾವು ಜಗತ್ತಿನ ಮೂಲೆ ಮೂಲೆಗಳಲ್ಲಿ ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬೇಕಿದೆ, ಹಾಗಾಗಿ ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣದ ವ್ಯವಸ್ಥೆ ಸಹ ಬದಲಾಗಬೇಕಿದೆ.
ಇಂದು ಭಾರತ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ, ವಿಶ್ವದ ಗಮನವನ್ನು ಸೆಳೆಯುವ ಜೊತೆಗೆ ವಿಶ್ವಗುರುವಾಗಲು ಹೊರಟಿದೆ, ಆದರೆ ವಿಶ್ವ ಗುರುವಾಗಲು ಭಾರತಕ್ಕೆ ಇರುವ ದೊಡ್ಡ ಸಮಸ್ಯೆ ಎಂದರೆ, ನಮ್ಮ ಜನಸಂಖ್ಯೆ ಮತ್ತು ಶಿಕ್ಷಣ ವ್ಯವಸ್ಥೆ ನಮಗೆ ದೊಡ್ಡ ಸವಾಲಾಗಿ ನಿಂತಿದೆ, ಜನಸಂಖ್ಯಾ ಸ್ಪೋಟವನ್ನು ತಡೆಯಲಾಗದ ಭಾರತ ಯುವಕರಿಗೆ ಸರಿಯಾದ ಉದ್ಯೋಗ ಸೃಷ್ಟಿಸದೆ ಮಾನವ ಸಂಪನ್ಮೂಲ ವ್ಯರ್ಥವಾಗುವುದರ ಜೊತೆಗೆ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಹಂತದಲ್ಲಿ ನಮ್ಮ ಚಿಂತನೆ ಬದಲಾಗಬೇಕಿದೆ, ನಮ್ಮ ದೃಷ್ಟಿಕೋನ ಬದಲಾಗಬೇಕಿದೆ, ನಮ್ಮ ಕಾರ್ಯವ್ಯಾಪ್ತಿ ಬದಲಾಗಬೇಕಿದೆ. ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿ, ಜಾಗತಿಕ ಮಟ್ಟದಲ್ಲಿ ಉದ್ಯೋಗವನ್ನು ಪಡೆದು ವ್ಯಕ್ತಿ ತನ್ನ ಜೀವನವನ್ನು ರೂಪಿಸಿಕೊಳ್ಳುಬೇಕಾದ ಪರಿಸ್ಥಿತಿ ಬಂದಿದೆ.
ವ್ಯವಸ್ಥೆ ಬದಲಾಗಿದೆ ಮತ್ತು ವ್ಯವಸ್ಥೆ ಮತ್ತಷ್ಟು ಬದಲಾಗಬೇಕಿದೆ, ಇದುವರೆಗೂ ಭಾರತೀಯರು ಅರಬ್ ದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ, ದುಡಿದು ತಮ್ಮ ದುಡಿಮೆಯ ಹಣವನ್ನು ಭಾರತಕ್ಕೆ ಕಳಿಸುತ್ತಿದ್ದ ವ್ಯವಸ್ಥೆಯನ್ನು ಕಂಡಿದ್ದೇವೆ, ಈಗಾಗಲೇ ಫೀಫಾ ವರ್ಲ್ಡ್ ಕಪ್ ಗಾಗಿ ಕತಾರ್ ನಲ್ಲಿ ನಡೆದ ಸ್ಟೇಡಿಯಂ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಜನ ಕಾರ್ಮಿಕರು ಸರಿಯಾದ ಮೂಲ ಸೌಕರ್ಯ ಹಾಗೂ ಸರಿಯಾದ ವೈದ್ಯಕೀಯ ಸೇವೆ ಲಭ್ಯವಾಗದೆ ಆಯೋಜಕರು ಗುಲಾಮರಂತೆ ನಡೆಸಿಕೊಂಡ ಕಾರಣ ದುಡಿಮೆಗಾಗಿ ಕತಾರ್ ಗೆ ತೆರಳಿದ್ದ ಸಾವಿರಾರು ಕೂಲಿ ಕಾರ್ಮಿಕರು ಅನಾಥರಂತೆ ಮರಣಿಸಿದ್ದಾರೆ, ಆ ಸಂಖ್ಯೆಯಲ್ಲಿ ಭಾರತೀಯರ ಪಾಲು ಹೆಚ್ಚಾಗಿದೆ. ಹೀಗಾಗಿ ಕಾಲ ಬದಲಾಗಿದೆ, ಬದಲಾದ ಕಾಲಕ್ಕೆ ತಕ್ಕಂತೆ ಕೇವಲ ಕೂಲಿ ಕಾರ್ಮಿಕರಾಗಿ ವಿಶ್ವದ ಮೂಲೆ ಮೂಲೆಗಳಲ್ಲಿ ಭಾರತೀಯ ಯುವಕರು ದುಡಿಯುವುದಕ್ಕಿಂತ “ಸ್ಕಿಲ್ಡ್ ಬೇಸಿಸ್ ವರ್ಕ್” ಅಂದರೆ ವಿಜ್ಞಾನ, ತಂತ್ರಜ್ಞಾನದ ಬೌದ್ಧಿಕ ದುಡಿಮೆಯಿಂದ ಸಹ ನಾವು ವಿಶ್ವದ ಮೂಲೆ ಮೂಲೆಗಳಲ್ಲಿ ಉದ್ಯೋಗವನ್ನು ಪಡೆಯಬೇಕಾಗಿದೆ, ಹಾಗಾಗಲು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾಗಬೇಕು, ಬೋಧನೆಯ ವಿಷಯ, ವಿಚಾರಗಳು ಬದಲಾಗಬೇಕು, ಜಾಗತಿಕ ಮಟ್ಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪರ್ಧೆಯನ್ನು ಒಡ್ಡಲು ಜಾಗತಿಕ ಭಾಷಾ ಜ್ಞಾನವನ್ನು ಸಹ ಬೆಳೆಸಿಕೊಳ್ಳಬೇಕಿದೆ, ಕಾಲಕ್ಕೆ ತಕ್ಕಂತೆ ವಿಶ್ವದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಗಳಾದ ಬ್ಲಾಕ್ ಚೈನ್ ಡೆವಲಪರ್ಸ್, ಜಾವಾ ಸ್ಕ್ರಿಪ್ಟ್ ಡೆವಲಪರ್, ರೊಬೊಟಿಕ್ ಪ್ರೊಸೆಸ್ ಆಟೊಮೇಶನ್ ಕನ್ಸಲ್ಟಂಟ್, ಬ್ಯಾಕ್ ಎಂಡ್ ಡೆವಲಪರ್, ಗ್ರೌಥ್ ಮ್ಯಾನೇಜರ್, ಸೈಟ್ ರಿಲೈಯೆಬಿಲಿಟಿ ಎಂಜಿನಿಯರ್, ಕಸ್ಟಮರ್ ಸಕ್ಸೆಸ್ ಸ್ಪೆಷಲಿಸ್ಟ್, ರೊಬೊಟಿಕ್ಸ್ ಎಂಜಿನಿಯರ್, ಸೈಬರ್ ಸೆಕ್ಯುರಿಟಿ ಸ್ಪೆಶಲಿಸ್ಟ್, ಪೈಥಾನ್ ಡೆವಲಪರ್, ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್, ಮುಂತಾದ ಹಲವಾರು ಕ್ಷೇತ್ರಗಳು ಉದ್ಯೋಗವನ್ನು ಪಡೆಯಬೇಕಿದ್ದರೆ ವಿದ್ಯಾರ್ಥಿಗಳಿಗೆ ರೋಬೋಟಿಕ್ ವಿಜ್ಞಾನದ ಬಗ್ಗೆ, ಪ್ರಪಂಚದ ವಿವಿಧ ಭಾಷೆಗಳ ಬಗ್ಗೆ, ಆನಿಮೇಶನ್ ಬಗ್ಗೆ, 3ಡಿ ಪ್ರಿಂಟಿಂಗ್ ಬಗ್ಗೆ, ಸಂಪರ್ಕ ಜಾಲದ ಬಗ್ಗೆ, ವರ್ಚುವಲ್ ರಿಯಾಲಿಟಿ ಡೇಟಾ ಬಗ್ಗೆ ಶಿಕ್ಷಣ ನೀಡಬೇಕಾಗಿದೆ. ಇಂತಹ ಶಿಕ್ಷಣ ನೀಡುವಲ್ಲಿ ಸರ್ಕಾರದ ಧೋರಣೆ, ಯೋಜನೆಗಳು, ಶಿಕ್ಷಣ ನೀತಿಗಳು ಬದಲಾಗಬೇಕಿದೆ. ಶಿಕ್ಷಣ ಎಂದರೆ ಇದೊಂದು ಸರ್ಕಾರಕ್ಕೆ ಇರುವ ಹೊರೆ ಎಂಬ ರೀತಿಯಲ್ಲಿ ಕಾಟಾಚಾರಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರಗಳು ರೂಪಿಸದೆ, ಶಿಕ್ಷಣ ಎಂದರೆ ಕೇವಲ ನಾಲ್ಕು ಅಕ್ಷರ ಕಲಿಸಿ ಸರ್ಕಾರ ತನ್ನ ಜವಾಬ್ದಾರಿಯನ್ನು ತೊಳೆದುಕೊಳ್ಳುವ ವ್ಯವಸ್ಥೆಯಾಗದೆ ರಾಷ್ಟ್ರ ಕಾಯುವಲ್ಲಿ ನಾವು ಯೋಧರನ್ನು ಹೇಗೆ ತರಬೇತುಗೊಳಿಸಿ ಸಿದ್ಧಗೊಳಿಸುತ್ತೇವೆಯೋ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಹ ಜಾಗತಿಕ ಔದ್ಯೋಗಿಕ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ನಿಂತು ಗೆದ್ದು ಬರುವ ರೀತಿ ರೂಪಿಸಬೇಕಾಗಿದೆ. ಏಕೆಂದರೆ ಇಡೀ ಜಗತ್ತು ಇಂದು ಭಾರತದ ಕಡೆ ಮುಖ ಮಾಡಿ ನೋಡುವ ಕಾಲ ಬಂದಿದೆ, ಜಗತ್ತಿಗೆ ಇಂದು ಭಾರತದ ಮಾನವ ಸಂಪನ್ಮೂಲದ ಅವಶ್ಯಕತೆ ಎದ್ದು ಕಾಣುತ್ತಿದೆ. ಭಾರತೀಯರಲ್ಲಿನ ಪ್ರಾಮಾಣಿಕತೆ, ದುಡಿಯುವ ಶಕ್ತಿ, ಕೆಲಸದ ನಿಷ್ಠೆ, ಈ ಎಲ್ಲಾ ಕಾರಣಗಳಿಂದ ಭಾರತೀಯರಿಗೆ “ವರ್ಕ್ ವೀಸಾ” ನೀಡುತ್ತಿರುವ ಅವಕಾಶಗಳು ಹೆಚ್ಚಾಗುತ್ತಿವೆ. ಒಂದು ಕಾಲದಲ್ಲಿ “ಅಮೇರಿಕಾ ಫಸ್ಟ್” ಎಂಬ ಸಿದ್ಧಾಂತದೊಂದಿಗೆ ಅಧಿಕಾರಕ್ಕೆ ಬಂದ ಡೋನಾಲ್ಡ್ ಟ್ರಂಪ್ ಭಾರತೀಯರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೂ ಈಗ ಅದೇ ಅಮೇರಿಕಾ ಭಾರತದ ಸುಶಿಕ್ಷಿತ ಯುವಕರತ್ತ ಕೈ ಚಾಚಿದೆ. ವಿಶ್ವದೆಲ್ಲೆಡೆ ಭಯೋತ್ಪಾದನೆಯ ಕರಿನೆರಳು ಚಾಚಿರುವ ಈ ಕಾಲಘಟ್ಟದಲ್ಲಿ ಭಾರತೀಯರ ಬಗ್ಗೆ ನಂಬಿಕೆ, ವಿಶ್ವಾಸದಿಂದ ನೋಡುವ ಕಾಲ ಬಂದಿದೆ. ಈ ವರ್ಷ ಭಾರತವು ವಿಶ್ವದಲ್ಲಿಯೇ ಎನ್ ಆರ್ ಐ ಗಳಿಂದ ಪಡೆಯುವ ವಿದೇಶಿ ವಿನಿಮಯದ ಹಣದಲ್ಲಿ ಮೊದಲ ಸ್ಥಾನ ಪಡೆದಿದೆ. ಇದು ನಮ್ಮ ಜಿಡಿಪಿ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಿದೆ. ಈ ಹಂತದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕಿದೆ.
ಕೇವಲ ಉದ್ಯೋಗಕ್ಕಷ್ಟೇ ಅಲ್ಲ, ಸಾಮಾಜಿಕ ಸುಧಾರಣೆಗೆ ಸಹ ಶಿಕ್ಷಣದ ಅಗತ್ಯತೆ ಇದೆ, ಹಾಗಾಗಿಯೇ ಡಾ. ಬಿ. ಆರ್.ಅಂಬೇಡ್ಕರ್ ರವರು ಸಮಾಜ ಸುಧಾರಣೆಗೆ, ಅಸ್ಪೃಶ್ಯತೆ ನಿವಾರಣೆಗೆ ಕೇವಲ ಕಾನೂನುಗಳು ಸಾಕಾಗುವುದಿಲ್ಲ ಬದಲಾಗಿ ಎಲ್ಲರೂ ಸುಶಿಕ್ಷಿತರಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಾಗಿದೆ ಎಂದರೆ, ಶಿಕ್ಷಣದ ಪಠ್ಯಕ್ರಮದಲ್ಲಿ ವಿವಾದಾಸ್ಪದ ವಿಚಾರಗಳ ಬಗ್ಗೆ ನೀಡುವ ಒತ್ತು, ಜಾಗತಿಕ ವಿಚಾರಗಳಿಗೆ ನೀಡುವುದಿಲ್ಲ, ಒಂದು ಕಾಲದಲ್ಲಿ ಜಗತ್ತನ್ನು ಆಕರ್ಷಿಸುತ್ತಿದ್ದ ಭಾರತದ ಶಿಕ್ಷಣ ವ್ಯವಸ್ಥೆ ಇಂದು ರಾಜಕೀಯ ಓಲೈಕೆಯ ಕಾರಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ, ಒಂದು ಸರ್ಕಾರ ಅಧಿಕಾರಕ್ಕೆ ಬಂದರೆ ಒಂದಷ್ಟು ವಿಚಾರಗಳು ಮುನ್ನೆಲೆಗೆ ಬಂದರೆ, ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೆ ಇದ್ದ ಸರ್ಕಾರ ಜಾರಿಗೆ ತಂದ ಪಠ್ಯವಿಷಯವಸ್ತುಗಳು ಹಿನ್ನೆಲೆಗೆ ಸರಿಯುತ್ತವೆ, ಅವರದ್ದೇ ಆದ ಅಜೆಂಡಾ ಮುನ್ನೆಲೆಗೆ ಬರುತ್ತದೆ. ಒಟ್ಟಾರೆಯಾಗಿ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ತನ್ನ ಗುರಿಯನ್ನು ತಲುಪಲು ವಿಫಲವಾಗಿದೆ ಎಂದರೆ ತಪ್ಪಾಗಲಾರದು.
ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಣದಷ್ಟೇ ಉತ್ತಮ ಶಿಕ್ಷಣ ಒದಗಿಸುವ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಸಹ ದೊರೆಯಬೇಕು. ಬಡವರು ಶ್ರೀಮಂತರು ಎನ್ನುವ ಬೇಧ ಭಾವವಿಲ್ಲದೆ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು, ಆ ಶಿಕ್ಷಣ ವೈಜ್ಞಾನಿಕ ಮನೋಭಾವ ಮತ್ತು ದೃಷ್ಟಿಕೋನ ಹೊಂದಿರಬೇಕು, ಹಾಗಾದಾಗ ಮಾತ್ರ ನಮ್ಮ ಮಕ್ಕಳು ಉತ್ತಮ ಶಿಕ್ಷಣಕ್ಕಾಗಿ ವಿದೇಶಗಳತ್ತ ಮುಖ ಮಾಡದೆ ಭಾರತದಲ್ಲಿ ಓದಿ ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಮರ್ಥ್ಯ ಹೊಂದಬೇಕು ಹಾಗಾಗಲು ಕೇವಲ ಪ್ರಣಾಳಿಕೆಗೆ ಸೀಮಿತವಾಗದ ಪ್ರಾಮಾಣಿಕ ಪ್ರಯತ್ನ ಸರ್ಕಾರಗಳಿಂದ ನಡೆಯಬೇಕಾಗಿದೆ. ಇಂತಹ ದೂರ ದೃಷ್ಟಿಯುಳ್ಳವರು ಸರ್ ಎಂ.ವಿಶ್ವೇಶ್ವರಯ್ಯ ನವರು. ಅವರು ಆಧುನಿಕ ಶಿಕ್ಷಣವನ್ನು ಅಳವಡಿಸಿಕೊಂಡಾಗ ಮಾತ್ರ ಆರ್ಥಿಕ, ಸಾಮಾಜಿಕ ಹಾಗೂ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಪಡೆಯಬಹುದು ಎಂದು ನಂಬಿದ್ದರು. ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೆ ಸಂಜೀವಿನಿ ಎಂದು ನಂಬಿದ್ದವರು ಹಾಗಾಗಿ ಅವರು 1913 ರಲ್ಲಿಯೇ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದಿದ್ದರು. ಆ ಕಾಲದಲ್ಲಿ ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದ ಕಾಲದಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಿ ಮೈಸೂರು ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವಂತೆ ಮಾಡಿದರು. ಬೀದಿ ಬದಿಯ ದೀಪದ ಅಡಿಯಲ್ಲಿ ಓದಿದ ಸರ್ ಎಂ.ವಿಶ್ವೇಶ್ವರಯ್ಯನವರು ಶಿಕ್ಷಣ ಕೇವಲ ಕೆಲವರ ಸ್ವತ್ತಾಗಬಾರದು ಅದು ಎಲ್ಲರ ಅಜನ್ಮ ಸಿದ್ಧ ಹಕ್ಕಾಗಬೇಕು ಎಂದು ನಂಬಿ ಕಾರ್ಯೋನ್ಮುಖರಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದ್ದರು, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸಿದರು, ಮಹಿಳೆಯರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು ಇಂತಹ ಧೀಮಂತ ವ್ಯಕ್ತಿಗಳ ದೂರದೃಷ್ಟಿ ಶಿಕ್ಷಣ ನೀತಿಗಳು ಇಂದು ಪ್ರಸ್ತುತವಾಗಿದೆ.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪೋಷಕರು ವಿಪರೀತವಾದ ಒತ್ತಡವನ್ನು ಹೇರುವ ಸ್ಥಿತಿ ಕಾಣಬಹುದು, ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಮಕ್ಕಳು ಹೆಚ್ಚು ಅಂಕ ಪಡೆಯಬೇಕು, ಟಾಪರ್ ಗಳಾಗಬೇಕು ಎಂಬ ಉದ್ದೇಶದಿಂದ ಒಂದೆಡೆ ಶಾಲೆ, ಮತ್ತೊಂದೆಡೆ ಟ್ಯೂಷನ್ ಹೀಗೆ ಬಿಡುವಿಲ್ಲದ ಒತ್ತಡವನ್ನು ಹೇರುತ್ತಿರುವುದು ಕಾಣಬಹುದು, ಈ ವ್ಯವಸ್ಥೆ ಬದಲಾಗಬೇಕು, ಮಕ್ಕಳಿಗೆ ಪರೀಕ್ಷೆಗಳು ಒಂದು ಕಬ್ಬಿಣದ ಕಡಲೆಯಂತೆ ಆಗಬಾರದು, ಮಕ್ಕಳ ಮೇಲೆ ಪರೀಕ್ಷೆಗಳು ಒತ್ತಡವನ್ನು ಉಂಟುಮಾಡುವಂತೆ ಇರದೆ, ಸ್ವ ಇಚ್ಛೆಯಿಂದ, ಶ್ರದ್ಧೆಯಿಂದ ಈ ಪರೀಕ್ಷೆಗಳು ಕೇವಲ ಉತ್ತೀರ್ಣಕ್ಕಲ್ಲ ಬದಲಾಗಿ ನಾವು ಗಳಿಸುವ ಜ್ಞಾನಕ್ಕೆ ಎಂಬ ಅರಿವು ಮೂಡಿಸಿ ವಿದ್ಯಾರ್ಥಿಗಳ ತರಗತಿಯನ್ನಷ್ಟೇ ಅಲ್ಲ ಜೀವನವನ್ನು ಸಹ ಪಾಸು ಮಾಡುವಂತಿರಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಬದುಕು ತೀವ್ರತರವಾದ ಒತ್ತಡದಿಂದ ಹಾಗೂ ಸಂಬಂಧಗಳು ಮೊದಲಿನಷ್ಟು ಹಿಡಿತ ಸಾಧಿಸದೆ ವಿವಾಹ ವಿಚ್ಛೇದನಗಳು, ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದರಿಂದ ನೈತಿಕ ಶಿಕ್ಷಣದ ಅವಶ್ಯಕತೆ ಎದ್ದುಕಾಣುತ್ತಿದೆ, ತಂದೆ ತಾಯಿ ಪೋಷಕರ ಬಗ್ಗೆ, ಸಾಮಾಜಿಕ ಮೌಲ್ಯಗಳ ಬಗ್ಗೆ , ನಮ್ಮ ನೆಲದ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿಕೊಂಡು ಹೋಗುವ ನೈತಿಕ ಶಿಕ್ಷಣವನ್ನು ಸಹ ಶಿಕ್ಷಣದ ವ್ಯವಸ್ಥೆಯಲ್ಲಿ ಅವಶ್ಯಕವಾಗಿ ಬೋಧಿಸಬೇಕಾಗಿದೆ.
ರಚನೆ:- ಬಿ.ಆರ್.ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ.