• Tue. Jun 18th, 2024

PLACE YOUR AD HERE AT LOWEST PRICE

ಡಾ. ರಾಮಮನೋಹರ ಲೋಹಿಯಾ ಎಂದರೆ ಯಾರು? ಅವರ ತತ್ವ ಸಿದ್ಧಾಂತಗಳೇನು? ಎಂಬ ವಿಚಾರಗಳೇ ಬಹಳಷ್ಟು ಯುವ ಜನತೆಯ ಅರಿವಿಗೆ ಇಲ್ಲ, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ಧಾಂತಗಳ ನೆಪದಲ್ಲಿ ಒಂದಷ್ಟು ಪದಗಳು ಚುನಾವಣಾ ಪ್ರಚಾರದಲ್ಲಿ ಬೇಕಾಬಿಟ್ಟಿಯಾಗಿ ಬಳಕೆಯಾಗುವುದು ನಾವು ಕಾಣುತ್ತೇವೆ. ಆದರೆ ಅವು ಬರೀ ಪದಗಳಲ್ಲ ಮ‌ಹನೀಯರು ಕಟ್ಟಿದ ತತ್ವಾದರ್ಶಗಳು, ಸಿದ್ಧಾಂತಗಳು, ಬಂಗಾರದ ಹಾದಿಯ ನುಡಿಮುತ್ತುಗಳು, ಆದರೆ ಇಂದು ತತ್ವಾದರ್ಶಗಳು ಇಲ್ಲದಂತಹ ರಾಜಕೀಯ ವ್ಯಕ್ತಿಗಳು ಆ ಪದಗಳನ್ನು ಬಳಸುವುದರಿಂದ ಅವು ತಮ್ಮ ಮೌಲ್ಯವನ್ನು ಕಳೆದುಕೊಂಡು ಬರೀ ಸವಕಲು ನಾಣ್ಯಗಳಂತಾಗಿವೆ. ಇಂತಹ “ಜಾತ್ಯಾತೀತ” “ಸಮಾಜವಾದ” “ಸಮತಾವಾದ” ಮುಂತಾದ ಹಲವು ಸೈದ್ಧಾಂತಿಕ ಪದ ಸಂಪತ್ತನ್ನು ಸವಕಲು ಮಾಡಿದ ಕೀರ್ತಿ ಇಂದಿನ ನಮ್ಮ ಸ್ವಾರ್ಥ ರಾಜಕಾರಣಿಗಳಿಗೆ ಸಲ್ಲುತ್ತದೆ.

ಇಡೀ ವಿಶ್ವದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಹುಟ್ಟಿಕೊಂಡ, ಹೋರಾಟದ ಕಿಚ್ಚನ್ನು ಹಚ್ಚಿ ರಕ್ತಚೆಲ್ಲಿ ಹೊಸ ಚರೀತ್ರೆಯನ್ನು ಸೃಷ್ಟಿ ಮಾಡಿದ ಮಹತ್ವಪೂರ್ಣ ಸಿದ್ಧಾಂತಗಳು ಇಂದು ಮೂಲೆಗುಂಪಾಗಿ ತನ್ನ ನಿಜವಾದ ಅರ್ಥ ಕಳೆದುಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿಯಾಗಿದೆ. ಏಕೆಂದರೆ ಇಂದು ಅಂತಹ ಸಿದ್ಧಾಂತಗಳಿಗೆ ನೆಲೆಯಿಲ್ಲ, ಬೆಲೆಯಿಲ್ಲ, ಈಗ ರಾಜಕೀಯ ವ್ಯವಸ್ಥೆಯಲ್ಲಿ ಹಣವೇ ಪ್ರಧಾನವಾಗಿದೆ, ತತ್ವಾದರ್ಶಗಳನ್ನು ಪಾಲಿಸುವ ನಿಷ್ಪಕ್ಷಪಾತ, ಸತ್ ಚಾರಿತ್ರ್ಯವುಳ್ಳ ಯಾವ ವ್ಯಕ್ತಿ ಇಂದು ಚುನಾವಣೆಗೆ ನಿಂತರೂ ಆತ ಠೇವಣಿಯನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ದುರಂತವೆಂದರೆ ಕೇವಲ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳು ಭ್ರಷ್ಟರಾಗುತ್ತಿಲ್ಲ ಬದಲಾಗಿ ಮತದಾರರು ಬ್ರಷ್ಟರಾಗುತ್ತಿದ್ದಾರೆ, ಇದು ಪ್ರಸ್ತುತ ಸಮಾಜದ ಬಹುದೊಡ್ಡ ದುರಂತವೇ ಸರಿ, ಭ್ರಷ್ಟಾಚಾರದ ಮೂಲ ಬೇರು ಇರುವುದು ಮತದಾರರು ಮತ ಚಲಾವಣೆ ಮಾಡುವಾಗ ಪಡೆಯುವ ಹಣ ಮತ್ತು ಆಮೀಷವೇ ಆಗಿದೆ, ಮತದಾರರು ತಾವು ಭ್ರಷ್ಟರಾದಾಗ ಅಂತಹ ವ್ಯಕ್ತಿಗಳ ಮತದಾನದಿಂದ ಎಂತಹ ಉತ್ತಮ ವ್ಯಕ್ತಿತ್ವವನ್ನು ಆಯ್ಕೆ ಮಾಡಲು ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಡೀ ವ್ಯವಸ್ಥೆ ನಿಂತಿರುವುದು ಮತದಾನದ ಬೇರಿನ ಮೇಲೆ, ಒಂದು ವ್ಯವಸ್ಥೆ ಬದಲಾಗಬೇಕಾದರೆ ಮತದಾರರು ಬದಲಾಗಬೇಕು, ಮತದಾರರ ಮನಸ್ಥಿತಿ ಬದಲಾಗಬೇಕು, ಈಗ ಸಂವಹನ ವ್ಯವಸ್ಥೆ ಬದಲಾಗಿದೆ, ಸಾಮಾಜಿಕ ಮಾಧ್ಯಮಗಳ ಮೂಲಕ ಒಬ್ಬ ಅಭ್ಯರ್ಥಿಯ ಇಂಚಿಂಚೂ ಮಾಹಿತಿಯೂ ಈಗ ಮತದಾರರಿಗೆ ಗೊತ್ತಾಗುತ್ತದೆ, ಅಭ್ಯರ್ಥಿಯ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಬಗ್ಗೆ ಸಹ ತಿಳಿದಿರುತ್ತದೆ, ಆದರೂ ಸಹ ಹಣದ ಆಸೆಗಾಗಿ, ಆಮೀಷಕ್ಕೆ ಒಳಗಾಗಿ, ಇವನು ನಮ್ಮ ಜಾತಿ, ಜನಾಂಗ, ಮತಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈಗ ಮತ ಚಲಾವಣೆಯಾಗುತ್ತಿರುವುದು ದುರಂತವೇ ಸರಿ, ಇಂತಹ ಸಮಯದಲ್ಲಿ “ಸಮಾಜವಾದ” ಸಮತಾವಾದ” “ಜಾತ್ಯಾತೀತ” ಮುಂತಾದ ಪದಗಳು ಕೇವಲ ಚುನಾವಣಾ ಪ್ರಣಾಳಿಕೆಯಲ್ಲಿ ಬಳಸುವ ಅನಿವಾರ್ಯ ಬಣ್ಣ ಬಣ್ಣದ ಪದಗಳಾಗಿವೆ. ಹಾಗಾಗಿ ಪ್ರಸ್ತುತ ಸಮಯದಲ್ಲಿ ಸಮಾಜವಾದದ ಬಗ್ಗೆ ನಮ್ಮ ಭಾರತದಲ್ಲಿ ಸಮ ಸಮಾಜವನ್ನು ನಿರ್ಮಾಣಮಾಡಲು ಹೋರಾಟ ಮಾಡಿದ ನಿಜವಾದ ಸಮಾಜವಾದಿ ಚಿಂತಕರ ಬಗ್ಗೆ ಒಂದಷ್ಟು ಬೆಳಕು ಚೆಲ್ಲಬೇಕಾಗಿದೆ, ಹಾಗಾಗಿ ಇತಿಹಾಸದಿಂದ ಮತ್ತು ಯುವ ಸಮುದಾಯದ ಅರಿವಿನಿಂದ ಕಾರಣಾಂತರಗಳಿಂದ ದೂರವಾಗುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜವಾದದ ಚಿಂತಕ ಡಾ.ರಾಮಮನೋಹರ ಲೋಹಿಯಾ ರವರ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲಬೇಕಾಗಿದೆ.

ಭಾರತಕ್ಕೂ ಮೊದಲೇ ಮಧ್ಯಯುಗದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶಗಳಾಗಿದ್ದವು, ಹಾಗೆಯೇ ಕೈಗಾರಿಕಾ ಕ್ರಾಂತಿಯ ಪರಿಣಾಮ ಸಮಾಜದಲ್ಲಿ ಬಂಡವಾಳ ಶಾಹಿಗಳ ರಕ್ತಹೀರುವ ಧೋರಣೆಯಿಂದ ಸಾಮಾಜಿಕ ಅಸಮಾನತೆ ಮತ್ತು ವರ್ಗ ತಾರತಮ್ಯವನ್ನು ಅನುಭವಿಸಿದ್ದವು, ಈ ಕಾರಣದಿಂದಲೇ ಸಾಮಾಜಿಕ ಸಮಾನತೆ, ವರ್ಗ ತಾರತಮ್ಯ ರಹಿತ ಸಮಾನ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿ ರೂಪಿತವಾದ ಸಿದ್ಧಾಂತವೇ “ಸಮಾಜವಾದ” ಇದರ ಪಿತಾಮಹ ಕಾರ್ಲ್ ಮಾರ್ಕ್ಸ್. ಇಂತಹ ಸಮಾಜವಾದ ಭಾರತದ ಚಿಂತಕರ ಮೇಲೆ, ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದು ಅಚ್ಚರಿಯೇನಲ್ಲ. ಅಂತಹ ಸಮಾಜವಾದ ಸಿದ್ಧಾಂತದಿಂದ ಪ್ರಭಾವಿತರಾದವರು ಡಾ.ರಾಮ ಮನೋಹರ ಲೋಹಿಯಾ ರವರು ಒಬ್ಬರು, ಆದರೆ ಅವರು ಎಂದೂ ತಮ್ಮನ್ನು ತಾವು ಮಾರ್ಕ್ಸ್ ವಾದಿ ಎಂದಾಗಲಿ ಹಾಗೆಯೇ ಮಾರ್ಕ್ಸ್ ವಿರೋಧಿ ಎಂದಾಗಲಿ ಕರೆಸಿಕೊಂಡವರಲ್ಲ, ಅವರಿಗೆ ಪಾಶ್ಚಿಮಾತ್ಯರ ಮತ್ತು ರಷ್ಯನ್ನರ ಸಮಾಜವಾದಿ ತತ್ವಗಳನ್ನು ಅಷ್ಟಾಗಿ ಹಿಡಿಸುತ್ತಿರಲಿಲ್ಲ, ಕಾರಣ ಭಾರತಕ್ಕೆ ಅನ್ವಯಿಸುವ ಯಾವ ತತ್ವ ಮತ್ತು ಸಿದ್ಧಾಂತಗಳು ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ಅರಿವು ಅವರಿಗೆ ಇತ್ತು.

ಡಾ.ರಾಮಮನೋಹರ ಲೋಹಿಯಾ ರವರು ದಿನಾಂಕ:23-03-1910 ರಂದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್ ಪುರದಲ್ಲಿ ಹುಟ್ಟಿದರು. ಇವರ ತಂದೆ ಹೀರಾಲಾಲ್ ಹಾಗೂ ಇವರ ತಾಯಿ ಚಂದ್ರಿಯವರು. ಇವರು ವೈಶ್ಯ ಕುಟುಂಬದಲ್ಲಿ ಹುಟ್ಟಿದವರಾಗಿದ್ದು, ತಲೆ ತಲಾಂತರಗಳಿಂದ ಇವರ ಮನೆತನದವರು ಕಬ್ಬಿಣದ ವ್ಯಾಪಾರ ಮಾಡುತ್ತಿದ್ದ ಕಾರಣ ಇವರ ಮನೆತನದ ಹೆಸರು “ಲೋಹಿಯಾ” ಎಂಬುದು ಇವರಿಗೂ ಬಂದಿದೆ. ಲೋಹಿಯಾರವರು 1925 ರಂದು ಮುಂಬಯಿ ಮಾರವಾಡಿ ವಿದ್ಯಾಲಯದಲ್ಲಿ ತಮ್ಮ ಮೆಟ್ರಿಕ್ ಪರೀಕ್ಷೆ ಮುಗಿಸಿ, ಕಾಶಿ ವಿಶ್ವವಿದ್ಯಾನಿಲಯದಲ್ಲಿ 1927 ರಲ್ಲಿ ಇಂಟರ್ ಮೀಡಿಯೆಟ್ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. 1929 ರಲ್ಲಿ ಕೋಲ್ಕತ್ತಾದಲ್ಲಿ ಇರುವ ವಿದ್ಯಾಸಾಗರ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದ ನಂತರ ಜರ್ಮನಿಗೆ ಪ್ರಯಾಣಿಸಿ ಅವರು ಅಲ್ಲಿನ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಉಪ್ಪಿನ ಸತ್ಯಾಗ್ರಹ ಕುರಿತಾಗಿ ಪ್ರೌಢ ಪ್ರಬಂಧ ಮಂಡನೆ ಮಾಡಿ ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ ಪದವಿಯನ್ನು 1932 ರಲ್ಲಿ ಪಡೆಯುತ್ತಾರೆ. ಲೋಹಿಯಾರವರು ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡಿದ ಕಾರಣ ಅವರ ಮೇಲೆ ಕಮ್ಯುನಿಸ್ಟ್ ರ ಪ್ರಭಾವ ಉಂಟಾಯಿತು, ಅವರು ಮಾರ್ಕ್ಸ್ ಮತ್ತು ಹೆಗೆಲ್ ರವರ ಬರಹಗಳನ್ನು ಓದಿ ಪ್ರಭಾವಿತರಾದರು, ಆದರೂ ಸಹ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಮಹಾತ್ಮ ಗಾಂಧಿಯವರು. ಗಾಂಧಿಜಿಯವರ ಹಾಗೆಯೇ ಲೋಹಿಯಾರವರು ಸಹ ಸಶಸ್ತ್ರ ಹೋರಾಟವನ್ನು ಬೆಂಬಲಿಸುತ್ತಿದ್ದವರಲ್ಲ, ಅವರು ಜರ್ಮನಿಯಲ್ಲಿ ಇದ್ದರೂ ಸಹ ಭಾರತದಲ್ಲಿ ಆಗುತ್ತಿದ್ದ ವಿದ್ಯಮಾನಗಳ ಬಗ್ಗೆ ಕಾಲಕಾಲಕ್ಕೆ ತಿಳಿದುಕೊಳ್ಳುತ್ತಿದ್ದರು. ಅವರ ತಂದೆ ಹೀರಾಲಾಲ್ ರವರು ಸಹ ಗಾಂಧಿಜಿಯವರ ಅನುಯಾಯಿಗಳಾಗಿದ್ದು ಕಾಲಕಾಲಕ್ಕೆ ಭಾರತದಲ್ಲಿ ಆಗುತ್ತಿದ್ದ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಲೋಹಿಯಾ ರವರಿಗೆ ತಿಳಿಸುತ್ತಿದ್ದರು, ಹೀಗಾಗಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರು ಭಾರತಕ್ಕೆ ಮರಳಿದರು. ಭಾರತದಲ್ಲಿ ಆಗ ರಾಷ್ಟ್ರೀಯ ಕಾಂಗ್ರೆಸ್ ಪ್ರಚಲಿತವಿದ್ದ ಸಂದರ್ಭದಲ್ಲಿ ಅವರು ಭಾರತಕ್ಕೆ ಮರಳಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕಿಂತ ಭಿನ್ನವಾದ ಸಮಾಜವಾದಿ ತತ್ವವನ್ನು ಒಳಗೊಂಡ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು 1934 ರಲ್ಲಿ ಕಟ್ಟುವಲ್ಲಿ ಲೋಹಿಯಾ ರವರು ಸಕ್ರೀಯ ಪಾತ್ರ ವಹಿಸಿದರು. ಸ್ವಾತಂತ್ರ್ಯ ಹೋರಾಟವು ತೀರ್ವಗೊಳ್ಳುತ್ತಿದ್ದ ಸಮಯದಲ್ಲಿ ಎರಡನೆ ಮಹಾಯುದ್ಧ ಘೋಷಣೆ ಆದಾಗ ಭಾರತದ ಗೌರ್ನರ್ ಜನರಲ್ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಮೈತ್ರಿ ಕೂಟದ ಪರವಾಗಿ ಭಾರತವು ಹೋರಾಡುತ್ತದೆ ಎಂಬ ನಿರ್ಣಯವನ್ನು ಕೈಗೊಂಡಾಗ ಅದನ್ನು ತೀರ್ವವಾಗಿ ವಿರೋಧಿಸಿದವರು ಲೋಹಿಯಾರವರು. ಅವರ ಚಿಂತನೆ ಕೇವಲ ಭಾರತ ಸ್ವಾತಂತ್ರ್ಯ ಪಡೆದ ನಂತರವಷ್ಟೇ ನಾವು ಯಾರಿಗೆ ಬೆಂಬಲ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದಾಗಿತ್ತು, ಹಾಗಾಗಿ ಅವರ ನಿರ್ಣಯ ಬ್ರಿಟಿಷ್ ವಿರೋಧಿಯಾದ ಕಾರಣ ಅವರ ಬಂಧನವಾಯಿತು. ಹೀಗೆ ಹಲವಾರು ಸಂದರ್ಭಗಳಲ್ಲಿ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡ ಲೋಹಿಯಾ ರವರು ಹಲವಾರು ಬಾರಿ ಬಂಧನಕ್ಕೆ ಒಳಗಾದರು ಲಾಹೋರಿನ ಜೈಲಿನ ಕಠಿಣ ಶಿಕ್ಷೆಯನ್ನು ಅನುಭವಿಸಿದರು, ಬ್ರಿಟೀಷರು ಜೈಲಿನಲ್ಲಿ ನೀಡುತ್ತಿದ್ದ ಅಮಾನವೀಯ ಶಿಕ್ಷೆಗಳನ್ನು ಅನುಭವಿಸಿದ್ದರು.

ಹೀಗೆ ಮಹಾತ್ಮ ಗಾಂಧೀಜಿಯವರಿಂದ ಪರಭಾವಿತರಾದ ಲೋಹಿಯಾರವರು ತಮ್ಮ ಹತ್ತನೆಯ ವಯಸ್ಸಿನಿಂದ ಅಂದರೆ ತಿಲಕರ ಮರಣದ ಕಾಲದಿಂದಲೂ ಹಲವಾರು ಸ್ವಾಂತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡರೂ ಸಹ ಸ್ವಾತಂತ್ರ್ಯ ನಂತರ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳದೆ ತಮ್ಮದೇ ಆದ ತತ್ವ ಮತ್ತು ಸಿದ್ಧಾಂತಕ್ಕೆ ನೆಲೆಕೊಟ್ಟು 1952 ರಲ್ಲಿ ಸ್ಥಾಪನೆಯಾದ ಪ್ರಜಾ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಯಾದರು, ನಂತರ ಪ್ರಜಾ ಸಮಾಜವಾದಿ ಪಕ್ಷವು ಸಹ ರೈತರ ಹಿತಕ್ಕಾಗಿ ದುಡಿಯದಿದ್ದಾಗ ಬೇಸತ್ತು 1955 ರಲ್ಲಿ ಹೈದರಾಬಾದಿನಲ್ಲಿ ಸ್ಥಾಪನೆಯಾದ ಸಮಾಜವಾದಿ ಪಕ್ಷದ ಅಧ್ಯಕ್ಷರಾದರು, ಅವರು ಕಾರ್ಮಿಕರ ಪರವಾಗಿ, ರೈತರ ಪರವಾಗಿ, ಭೂ ರಹಿತ ಕೃಷಿ ಕಾರ್ಮಿಕರ ಪರವಾಗಿ, ಗೋವಾ ವಿಮೋಚನೆಗಾಗಿ ಹಲವಾರು ಬಾರಿ ಹೋರಾಟ ಮಾಡಿದರು, ಬಂಧನಕ್ಕೊಳಗಾದರು ಹಾಗೆಯೇ ತಮ್ಮ ಪರವಾಗಿ ತಾವೇ ನ್ಯಾಯಾಲಯದಲ್ಲಿ ವಾದ ಮಾಡಿ ತಮ್ಮ ಬಿಡುಗಡೆಗೆ ತಾವೇ ತಮ್ಮ ವಿದ್ವತ್ಪೂರ್ಣ ವಾದಮಂಡನೆ ಮಾಡುತ್ತಿದ್ದರು.

ಭಾರತದ ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಸಿದ್ಧಾಂತಗಳಿಗೆ ತಿಲಾಂಜಲಿ ಹೇಳಿ ವ್ಯಕ್ತಿ ಪೂಜಕರಾಗುತ್ತಿದ್ದಾರೆ ಎಂಬ ವಿಚಾರ ಅರಿತ ಲೋಹಿಯಾರವರು 1962 ರಲ್ಲಿ ನೆಹರು ರವರ ವಿರುದ್ಧವಾಗಿಯೇ ಫೂಲ್ ಪುರ ಚುನಾವಣಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತು ಹೋದರು, ಆದರೆ 1963 ರಲ್ಲಿ ಅದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾ.ಕೇಸ್ಕರ್ ರವರ ವಿರುದ್ದ ಫರೂಕಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ಮತ್ತು 1967 ರಲ್ಲಿ ಸಹ ಕನೂಜ್ ಲೋಕಸಭಾ ಕ್ಷೇತ್ರದಿಂದ ಜಯಶೀಲರಾದರು. ಹೀಗೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಲೋಹಿಯಾ ರವರು ಕಡೆಗೆ ದಿನಾಂಕ 12-10-1967 ರಂದು ಅನಾರೋಗ್ಯದಿಂದ ತಮ್ಮ ಅಂತಿಮ ಯಾತ್ರೆ ಮುಗಿಸಿದರು. ಹೀಗೆ ಹುಟ್ಟುವಾಗ ಒಂದು ದೊಡ್ಡ ವೈಶ್ಯ ಕುಟುಂಬದಲ್ಲಿ ಹುಟ್ಟಿದರೂ ಸಹ ಕಡೆಗೆ ಮರಣ ಹೊಂದಿದಾಗ ಅವರು ಯಾವ ಆಸ್ತಿಯನ್ನು ಹೊಂದದೆ, ಯಾವ ಕುಟುಂಬವನ್ನು ಬಿಟ್ಟು ಹೋಗದೆ, ಭಾರತದ ಸಮಸ್ತ ಬಡವರು, ದೀನದಲಿತರೇ ತನ್ನ ಕುಟುಂಬ ಎಂಬ ನಂಬಿಕೆಯಲ್ಲಿ ಜೀವಿಸಿದವರು ಡಾ.ರಾಮಮನೋಹರ ಲೋಹಿಯಾ ರವರು. ಇದು ಅವರ ಆದರ್ಶಪ್ರಾಯ ಜೀವನವಾಗಿತ್ತು.

ಲೋಹಿಯಾ ರವರು ಸಮಾಜವಾದಿಗಳಾಗಿದ್ದರೂ ಸಹ ಅವರು ಆಫ್ರಿಕಾ, ಏಶಿಯಾ ಹಾಗೂ ಲ್ಯಾಟಿನ್ ಅಮೇರಿಕಾಗಳ ಅಭಿವೃದ್ಧಿಗೆ ಕಮ್ಯುನಿಸಂ ಅಥವಾ ಬಂಡವಾಳಶಾಹಿ ತತ್ವಗಳು ಸೂಕ್ತವಾದ ಸಿದ್ಧಾಂತಗಳಲ್ಲ ಎಂದು ನಂಬಿದ್ದವರು, ಸಾಮ್ರಾಜ್ಯಶಾಹಿಯನ್ನು ವಿರೋಧಿಸಿದವರು. ಭಾರತ ಹಳ್ಳಿಗಾಡಿನಿಂದ ಕೂಡಿದೆ ಹಾಗಾಗಿ ಭಾರತದ ಬಡವರು, ರೈತರು, ಭೂರಹಿತ ಕೃಷಿ ಕಾರ್ಮಿಕರು ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ “ಸಪ್ತ ಕ್ರಾಂತಿ” ಎಂಬ ಕಲ್ಪನೆಯನ್ನು ಹೊಂದಿದ್ದವರು. ಅವರು ಜಾತಿ ಪದ್ಧತಿಯ ವಿರೋಧಿಯಾಗಿದ್ದರು ನಮ್ಮ ಭಾರತದಲ್ಲಿ ನೆಲೆಯೂರಿದ್ದ ಜಾತಿ ಪದ್ಧತಿ ಮತ್ತು ಮೇಲು ಕೀಳು ಎಂಬ ಭಾವನೆ ಸಮಾಜದಲ್ಲಿ ನೆಲೆಯೂರಿದ ಕಾರಣವೇ ನಾವು ಪರಕೀಯರ ಆಳ್ವಿಕೆಗೆ ಒಳಗಾದೆವು ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು ಹಾಗಾಗಿ ಅವರು ವೈಶ್ಯ ಕುಲದಲ್ಲಿ ಹುಟ್ಟಿದರೂ ತಾವು ಮರಣ ಹೊಂದಿದ ನಂತರ ಯಾವುದೇ ಸಂಪ್ರದಾಯದ ರೀತಿ ತಮ್ಮ ಮೃತದೇಹದ ಅಂತಿಮ ವಿಧಿವಿಧಾನಗಳನ್ನು ನಡೆಸಬಾರದೆಂದು ಸೂಚಿಸಿದ್ದರು, ಅದರಂತೆ ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು.

ಹೀಗೆ ನಿಜವಾದ ಸಮಾಜವಾದಿಗಳೆಂದರೆ ತಮಗೇನೂ ಆಸ್ತಿ ಪಾಸ್ತಿ ಮಾಡದೆ ಸಮಾಜಕ್ಕಾಗಿ ಬದುಕಿದವರು. ಈಗಿನ ರೀತಿ ರಾಜಕೀಯಕ್ಕೆ ಬಂದ ತಕ್ಷಣ ಕೋಟ್ಯಾಧಿಪತಿಗಳಾಗುವುದಲ್ಲ. ಲೋಹಿಯಾ ರವರ ಮತ್ತು ಅವರ ಸಮಕಾಲೀನರಾದ ಜಯಪ್ರಕಾಶ್ ನಾರಾಯಣ್ ರವರ ಹೆಸರನ್ನು ಸಹ ಕರ್ನಾಟಕದ ರಾಜಕಾರಣಿಗಳು ಬಳಸಿಕೊಂಡರಾದರೂ ಅವರ ತತ್ವಾದರ್ಶಗಳನ್ನು ಪಾಲಿಸುವಲ್ಲಿ ವಿಫಲರಾದರು. ಈಗ ದೇಶ ಬದಲಾಗುತ್ತಿದೆ, ಕೈಗಾರಿಕೆಗಳು ಹೆಚ್ಚಾಗುತ್ತಿವೆ, ಬಂಡವಾಳ ಶಾಹಿಗಳ ಕರಿ ನೆರಳಿನಿಂದ ಕೃಷಿ ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ ನಡೆದು ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಧಿಕಾರ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕುತ್ತಿದೆ. ಇಂತಹ ಪ್ರಸಕ್ತ ಸನ್ನಿವೇಶದಲ್ಲಿ ಮತದಾರರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು ಮತದಾನ ಈ ಮತದಾನವನ್ನು ಹಣಕ್ಕೆ ಮಾರಿಕೊಳ್ಳದೆ ಗುಣವಂತರನ್ನು ಆಯ್ಕೆ ಮಾಡಿ ನಿಜವಾದ ಸಮ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ.

ರಚನೆ: ಬಿ.ಆರ್.ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ.

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!