• Sat. Jul 13th, 2024

PLACE YOUR AD HERE AT LOWEST PRICE

ಮುಂಬರುವ ಎಲ್ಲಾ ತಲೆಮಾರುಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ಯಾರೂ ಕೇಳಿಸಿ ಕೊಳ್ಳದಂತೆ ವಿಶ್ವದಾದ್ಯಂತ ಹಸಿದು ಅಳುತ್ತಿರುವ ಮಕ್ಕಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಭಿವೃದ್ಧಿಯ ಭ್ರಮೆಯಲ್ಲಿ ವಂಶನಾಶಕ್ಕೆ ಸಲ್ಲುತ್ತಿರುವ ಮತ್ತು ಬೇರೆ ಇನ್ನಾವ ಗ್ರಹಕ್ಕೂ ಗುಳೆ ಹೋಗಲು ಸಾಧ್ಯವಿಲ್ಲದ ಅಸಂಖ್ಯಾತ ಮೂಕ ಪ್ರಾಣಿಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ನಾವು ಜಾಣಕುರುಡು ಮತ್ತು ಜಾಣಕಿವುಡಿನಿಂದ ವರ್ತಿಸಲು ಸಾಧ್ಯವಿಲ್ಲ.

ಓಜೋನ್ ಪದರದಲ್ಲಿ ಆಗಿರುವ ರಂಧ್ರಗಳಿಂದಾಗಿ ನನಗೆ ಹಗಲಿನಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಡೆಯಲು ಭಯವಾಗುತ್ತದೆ. ವಾತಾವರಣದಲ್ಲಿ ತುಂಬಿಹೋಗಿರುವ ಮಲಿನಗಾಳಿಯಲ್ಲಿರುವ ರಾಸಾಯನಿಕ ವಸ್ತುಗಳನ್ನು ನೆನೆದು ಉಸಿರಾಡಲು ಭಯವಾಗುತ್ತದೆ. ಐದಾರು ವರ್ಷಗಳ ಹಿಂದೆ ನನ್ನ ತಂದೆಯೊಡನೆ ಒಮ್ಮೆ ಮೀನು ಹಿಡಿಯಲು ವ್ಯಾಂಕೋವರ್ ಗೆ ಹೋಗಿದ್ದಾಗ ದೊರೆತ ಕ್ಯಾನ್ಸರ್ ಪೀಡಿತ ಮೀನನ್ನು ಕಂಡು ನನಗೆ ದಿಗಿಲಾಯಿತು. ಈಗ ಪ್ರತಿದಿನ ಎಷ್ಟೋ ಪ್ರಾಣಿಗಳು ಮತ್ತು ಸಸ್ಯಗಳು ವಂಶನಾಶಕ್ಕೆ ಗುರಿಯಾಗಿ ಇನ್ನಿಲ್ಲದಂತೆ ಕಣ್ಮರೆ ಆಗುತ್ತಿದ್ದು ಈ ಕೆಟ್ಟ ಸುದ್ಧಿಯನ್ನು ಕೇಳುತ್ತಲೇ ಇದ್ದೇವೆ.

ನನ್ನ ಪುಟ್ಟ ಜೀವನದಲ್ಲಿ ಕಾಡುಪ್ರಾಣಿಗಳ ಬೃಹತ್ತಾದ ಹಿಂಡುಗಳು, ಬಗೆ ಬಗೆಯ ಕಾಡುಗಳು, ಮಳೆಕಾಡಿನ ಹಕ್ಕಿಗಳು ಮತ್ತು ಬಣ್ಣ ಬಣ್ಣದ ಚಿಟ್ಟೆಗಳ ಕನಸನ್ನು ಕಾಣುತ್ತಾ ಬಂದಿದ್ದೇನೆ. ಇದನ್ನೆಲ್ಲಾ ಕಾಣಲು, ಕೇಳಲು ನಮ್ಮ ಮುಂದಿನ ತಲೆಮಾರುಗಳ ಮಕ್ಕಳಿಗೆ ಸಾಧ್ಯವೇ? ಎಂಬ ವಿಸ್ಮಯ ಮತ್ತು ಗಾಬರಿ ಉಂಟಾಗುತ್ತಿದೆ.

ಇಂಥ ಅಲ್ಪ ಸಂಗತಿಗಳನ್ನು ಕುರಿತು ಈ ಚಿಕ್ಕ ವಯಸ್ಸಿನಲ್ಲಿ ನೀವು ಎಂದಾದರೂ ನನ್ನಂತೆ ಭಯ ಮತ್ತು ಚಿಂತೆಯಿಂದ ಆಲೋಚನೆ ಮಾಡಿದ್ದೀರಾ ?

ನಾನಾವಿಧವಾದ ಅನರ್ಥಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿದೆ. ನಮ್ಮ ಎಲ್ಲಾ ಸಮಯವನ್ನು ಮೀಸಲಿಟ್ಟು ಏನಾದರೂ ಕಾರ್ಯವನ್ನು ಮಾಡಲೇಬೇಕಾದ ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾದ ತುರ್ತು ಈಗ ಎದುರಾಗಿದೆ. ನಾನೊಬ್ಬ ಚಿಕ್ಕ ಹುಡುಗಿ. ನನ್ನಲ್ಲಿ ಯಾವ ಪರಿಹಾರವೂ ಇಲ್ಲ. ಈ ಶೃಂಗಸಭೆಯಲ್ಲಿ ಭಾಗವಹಿಸಿದ ನೀವೆಲ್ಲರೂ ಇದನ್ನು ಅರಿತುಕೊಳ್ಳಬೇಕು ಮತ್ತು ಏನಾದರೂ ಒಂದನ್ನು ಮಾಡಲೇಬೇಕು.

ಓಜೋನ್ ಪದರದಲ್ಲಿನ ರಂಧ್ರಗಳನ್ನು ಹೇಗೆ ಮುಚ್ಚಿ ಹಾಕಬೇಕು, ನಿಮಗೆ ಗೊತ್ತಿಲ್ಲ ! ಮೃತನದಿಗಳಲ್ಲಿ ಸಾಲ್ಮನ್ ಮುಂತಾದ ಮೀನುಗಳನ್ನು ಹೇಗೆ ಮರಳಿ ತರುವುದು ? ನಿಮಗಾರಿಗೂ ಗೊತ್ತಿಲ್ಲ !ವಂಶನಾಶಗೊಂಡು ಕಣ್ಮರೆ ಆಗಿರುವ ಪ್ರಾಣಿ ಮತ್ತು ಸಸ್ಯವನ್ನು ವಾಪಸ್ ತರುವುದು ಹೇಗೆ ? ನಿಮಗೆ ಗೊತ್ತಿಲ್ಲ ! ಈಗ ಮರುಭೂಮೀಕರಣಕ್ಕೆ ಒಳಗಾಗಿರುವ ಮತ್ತು ಹಿಂದೊಮ್ಮೆ ಕಾಡುಗಳಾಗಿದ್ದ ಪ್ರದೇಶಗಳನ್ನು ಎಲ್ಲಿಂದ ತರುತ್ತೀರಿ ? ನಿಮಗೆ ಗೊತ್ತಿಲ್ಲ !

ಈ ಅನರ್ಥಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದಾದರೆ, ದಯವಿಟ್ಟು ನಿಸರ್ಗದ ವೈಭವವನ್ನು ನಾಶಪಡಿಸುವುದನ್ನು ಈಗಲೇ ನಿಲ್ಲಿಸಿರಿ !

– ಸೆವೆರ್ನ್ ಸುಜುಕಿ, 12 ವರ್ಷಗಳ ಬಾಲಕಿ ಮಾಡಿದ ಶೃಂಗ ಸಭೆಯ ಭಾಷಣ, ರಿಯೋ, 1992

– ಕನ್ನಡೀಕರಣ – ಪ್ರೊ:ವಿ.ಚಂದ್ರಶೇಖರ ನಂಗಲಿ, 21.6.23

~~~~~~~~~

– Full video link: https://www.youtube.com/watch?v=oJJGuIZVfLM

 

– Full transcript: https://creativesystemsthinking.wordpress.com/2014/04/21/a-12-year-old-fighting-for-our-planets-future/

Leave a Reply

Your email address will not be published. Required fields are marked *

You missed

error: Content is protected !!