• Sat. Jul 13th, 2024

PLACE YOUR AD HERE AT LOWEST PRICE

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬಗ್ಗುಬಡಿದಿರುವ ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಲಂಕಾಗೆ ಆರಂಭಿಕ ಆಘಾತ ನೀಡಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದಲ್ಲದೇ, ಒಟ್ಟು 21 ರನ್‌ ನೀಡಿ 6 ವಿಕೆಟ್ ಗಳಿಸಿದ್ದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಬಳಿಕ ತನಗೆ ದೊರೆತ 50 ಸಾವಿರ ಡಾಲರ್ ಮೌಲ್ಯದ(ಅಂದಾಜು 42 ಲಕ್ಷ) ನಗದು ಮೊತ್ತವನ್ನು ಶ್ರೀಲಂಕಾದ ಮೈದಾನದ ಸಿಬ್ಬಂದಿಗೆ ಅರ್ಪಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ತನ್ನ ಸಾಧನೆಯ ಬಗ್ಗೆ ಮಾತನಾಡಿದ ಮೊಹಮ್ಮದ್ ಸಿರಾಜ್, “ಇಂದಿನ ಫೈನಲ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿದ್ದೇನೆ. ನನಗೆ ಸಿಕ್ಕಿರುವ ಈ ನಗದು ಬಹುಮಾನವನ್ನು ಮೈದಾನದವರಿಗೆ ನೀಡಲು ಬಯಸುತ್ತೇನೆ. ಅವರು ಅದಕ್ಕೆ ಅರ್ಹರು. ಅವರು ಇಲ್ಲದೇ ಇರುತ್ತಿದ್ದರೆ, ಈ ಪಂದ್ಯಾಕೂಟ ಯಶಸ್ವಿಯಾಗುತ್ತಿರಲಿಲ್ಲ” ಎಂದು ತಿಳಿಸಿ, ಚೆಕ್‌ ಅನ್ನು ಸಿಬ್ಬಂದಿಗಳಿಗೆ ನೀಡಿದರು.

ಸಿರಾಜ್ ಅವರ ಈ ನಡೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು,’ಮಾದರಿ ನಡೆ” ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಪಂದ್ಯಾವಳಿಯುದ್ದಕ್ಕೂ ಮಳೆ ಕಾಟ ನೀಡಿದರೂ ಪಂದ್ಯಗಳು ಸುಗಮವಾಗಿ ಸಾಗಲು ಶ್ರಮಿಸಿದ ಶ್ರೀಲಂಕಾದ ಪೆಲ್ಲೆಕೆಲೆ ಮತ್ತು ಆರ್ ಪ್ರೇಮದಾಸ ಸ್ಟೇಡಿಯಂ ಮೈದಾನ ಸಿಬ್ಬಂದಿಗಳಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕೂಡ 50 ಸಾವಿರ ಡಾಲರ್ ಮೊತ್ತದ ಬಹುಮಾನ ನೀಡಿ ಗೌರವಿಸಿದೆ. ರಾಷ್ಟ್ರೀಯ ಕ್ಯುರೇಟರ್ ಗಾಡ್ಫ್ರೇ ದಬ್ರೇರೆ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ನ ಅಧ್ಯಕ್ಷ ಜಯ್ ಶಾ ಅವರಿಂದ ಸ್ವೀಕರಿಸಿದರು.

ಟೂರ್ನಿಯಲ್ಲಿ ಒಂಭತ್ತು ವಿಕೆಟ್‌ಗಳನ್ನು ಗಳಿಸಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್‌ದೀಪ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಉತ್ತಮ ಕ್ಯಾಚ್‌ ಪಡೆದದ್ದಕ್ಕೆ ರವೀಂದ್ರ ಜಡೇಜಾ, ‘ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ’ಗೆ ಭಾಜನರಾದರು. ಚಾಂಪಿಯನ್ ಆದ ಟೀಮ್ ಇಂಡಿಯಾ ತಂಡಕ್ಕೆ 150(ಅಂದಾಜು 1.26 ಕೋಟಿ) ಡಾಲರ್ ನಗದು ಬಹುಮಾನ ದೊರೆಯಿತು.

Leave a Reply

Your email address will not be published. Required fields are marked *

You missed

error: Content is protected !!