• Sat. Jul 27th, 2024

PLACE YOUR AD HERE AT LOWEST PRICE

ಕೋಲಾರ:ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಂತ ಮುದ್ದಿನ ಹಾಗೂ ಮಹತ್ವದ ಯೋಜನೆ. ರಾಜ್ಯವನ್ನು ಹಸಿವು ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

ರಾಜ್ಯದ ಜನ ಸಾಮಾನ್ಯರು ಹಸಿವಿನಿಂದ ನರಳದಂತೆ ತಡೆದು ಪ್ರತಿಯೊಬ್ಬ ಪ್ರಜೆಗೂ ಕಡಿಮೆ ದರದಲ್ಲಿ ಮೂರು ಹೊತ್ತು ಊಟ ಪೂರೈಸುವ ಈ ಯೋಜನೆ ರಾಜ್ಯದೆಲ್ಲೆಡೆ ಪ್ರಾರಂಭಿಸಲಾಗಿದೆ. ಆದರೆ, ಇದು ಸಿದ್ದರಾಮಯ್ಯ ಅವರ ನಿರೀಕ್ಷೆಯಂತೆ ಜನ ಸಾಮಾನ್ಯರಿಗೆ ಎಟುಕುತ್ತಿದೆಯಾ ಎನ್ನುವುದು ಪ್ರಶ್ನೆಯಾಗಿದೆ.

ಕೋಲಾರ ಜಿಲ್ಲಾ ಕೇಂದ್ರದಲ್ಲಿ ಒಂದು ಇಂದಿರಾ ಕ್ಯಾಂಟೀನ್ ಇದೆ. ಇದರ ದುಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಕೋಲಾರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಇರುವ ಈ ಇಂದಿರಾ ಕ್ಯಾಂಟೀನ್ ಸಾಮಾನ್ಯ ಜನರ ಕಣ್ಣಿಗೂ ಅಷ್ಟು ಬೇಗ ಕಾಣುವುದಿಲ್ಲ. 

ಇಂದಿರಾ ಕ್ಯಾಂಟೀನ್ ವಿಳಾಸ ಹೇಳಲೂ ಮುಜುಗರ ಆಗುತ್ತೆ. ಕ್ಯಾಂಟೀನ್ ಬಲಕ್ಕೆ ಸಾರ್ವಜನಿಕ ಶೌಚಾಲಯವಿದ್ದು, ಅದು ಸರಿಯಾದ ನಿರ್ವಹಣೆ ಇಲ್ಲದೆ ಮೂತ್ರ ಗಬ್ಬು ನಾಥ ಕ್ಯಾಂಟೀನ್ ಒಳಗೆ ಹೋದರೂ ಬರುತ್ತೆ. ಎಡಕ್ಕೆ ಖಾಲಿ ನಿವೇಶನ ಇದೆ ಅಲ್ಲಿ ಇಡೀ ಬಸ್ ನಿಲ್ದಾಣಕ್ಕೆ ಬರುವವರೆಲ್ಲಾ ಬಯಲು ಬಹಿರ್ದೆಸೆಗೆ ಹಗಲು-ರಾತ್ರಿ ತೆರದ ಪ್ರದೇಶದಲ್ಲಿ ತೀರಿಸಿಕೊಳ್ಳುತ್ತಾರೆ. ಈ ದುರ್ನಾತವೂ ಇಂದಿರಾ ಕ್ಯಾಂಟೀನ್ ಗೆ ಪ್ರವೇಶ ಮಾಡುತ್ತದೆ.

ಇಷ್ಟೆಲ್ಲಾ ದುರ್ಗಂಧ ತುಂಬಿರುವ ಕಡೆ ನಗರಸಭೆ ಸುಳಿಯುವುದೂ ಇಲ್ಲಾ, ಗೇಟ್ ಮುಂಭಾಗದಲ್ಲೇ ಒಂದು ಲೋಡ್ ಕಸ ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಹೋಗಲಿ ಊಟಕ್ಕೆ ಜನ ಬರಲು ಈ ಕಟ್ಟಡ ಸಾಮಾನ್ಯರಿಗೆ ಕಾಣುವುದೂ ಇಲ್ಲ. ಏಕೆಂದರೆ ಇಡೀ ಕಟ್ಟಡ ಹೂವಿನ ವ್ಯಾಪಾರಿಗಳ ಗುಡಿಸಲುಗಳಿಂದ ಮುಚ್ಚಿಹೋಗಿದೆ.

ಈ ಹೂವಿನ ವ್ಯಾಪಾರಸ್ಥರು ತಮ್ಮಲ್ಲಿ ಉಳಿಯುವ ಹೂಗಳು ಮತ್ತು ಕಸವನ್ನೂ ಸಹ ಇದೇ ಇಂದಿರಾ ಕ್ಯಾಂಟೀನ್ ಪಕ್ಕ ಪ್ರತಿನಿತ್ಯ ಸುರಿಯುತ್ತಿದ್ದು, ಅದೂ ಒಂದು ದೊಡ್ಡ ತಿಪ್ಪೆಯಂತಾಗಿ ಅದರಿಂದಲೂ ದುರ್ನಾಥ ಬರುತ್ತದೆ.

ಬಡವರಿಗೆ ಊಟ ಕೊಡುವ ಅತ್ಯಂತ ಮಹತ್ವದ ಯೋಜನೆಯ ಫಲವನ್ನು ಪಡೆಯಲು ಅವಕಾಶವಿಲ್ಲದಂತ ಪರಿಸರದಲ್ಲಿ ಇಂದಿರಾ ಕ್ಯಾಂಟೀನ್ ಇದ್ದು, ಇಂದಿರಾ ಕ್ಯಾಂಟೀನ್ ಗೆ ಆಗಮಿಸುವ ಜನಸಾಮಾನ್ಯರ ಕೊರತೆ ಎದ್ದು ಕಾಣುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಂಡೂ ಕಾಣದಂತೆ ನೋಡಿಯೂ ನೋಡದಂತೆ ಇರಲು ಕಾರಣವೇನು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

” ನಾನು ಮದ್ಯಾಹ್ನ ಊಟಕ್ಕೆ ಇಂದಿರಾ ಕ್ಯಾಂಟೀನ್ ಹೋಗಲು ಬಹಳ ಪ್ರಯತ್ನ ಮಾಡಿದ್ದೇನೆ. ತುಂಬಾ ಹಸಿದಾಗಲೂ ಅದರ ಸಮೀಪಕ್ಕೂ ಸುಳಿಯಲಾಗಿಲ್ಲ, ಅನಿವಾರ್ಯ ಪರಿಸ್ಥಿತಿಯಲ್ಲಿ ಬೀದಿ ಬದಿ ಹೋಟಲ್ ಗೆ ಹೋಗಿ ಐವತ್ತು ಅರವತ್ತು ರೂಪಾಯಿ ಕೊಟ್ಟು ಊಟ ಮಾಡಬೇಕಾಗಿದೆ. ಇಂದಿರಾ ಕ್ಯಾಂಟೀನ್ ಸುತ್ತಲೂ ಸ್ವಚ್ಚತೆ ಮಾಡಿ ವಾಸನೆ ಮುಕ್ತ ಮಾಡಿದರೆ, ಶುದ್ಧ ವಾತಾವರಣದಲ್ಲಿ ತುಂಬಾ ಜನ ಕೂಲಿಕಾರ್ಮಿಕರು, ಬಡವರು ಊಟ ಮಾಡುವ ಭಾಗ್ಯ ಸಿಗುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಬಡವರ ಬಗ್ಗೆ ಗಮನ ಹರಿಸಬೇಕು.”

-ಮಂಜುನಾಥ್, ಆಟೋ ಚಾಲಕರು.

” ಬಡವರಿಗಾಗಿ ಕಡಿಮೆ ದರದಲ್ಲಿ ಊಟ ಕೊಟ್ಟರೆ ಸ್ವಾಗತಿಸುತ್ತೇವೆ. ಆದರೆ, ಜನ ಸಾಮಾನ್ಯರು ಸಂತೋಷದಿಂದ ಬಂದು ಊಟ ಮಾಡುವ ವಾತಾವರಣ ನಿರ್ಮಿಸದೆ, ಕಸದ ತಿಪ್ಪೆಗಳ ಮದ್ಯೆ ಊಟ ಹಾಕ್ತೀವಿ ಅಂದರೆ ಯಾರು ಬರುತ್ತಾರೆ. ಬಡವರ ಬಗ್ಗೆ ಅಕ್ಕರೆ ಇಲ್ಲದ ಸರ್ಕಾರ ಬಡವರ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ಪೋಲು ಮಾಡುತ್ತಿದೆ. ನಿಜವಾಗಲೂ ಬಡವರ ಬಗ್ಗೆ ಅಕ್ಕರೆ ಇದ್ದರೆ,ಮೊದಲು ಇಂದಿರಾ ಕ್ಯಾಂಟೀನ್ ಸುತ್ತಲೂ ಇರುವ ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿ, ಆನಂತರ ಕ್ಯಾಂಟೀನ್ ಸುತ್ತಲೂ ಕಸದ ರಾಶಿ ತೆಗೆದು ಹುಲ್ಲಿನ ಹಾಸು ಮತ್ತು ಹೂವಿನ ಗಿಡಗಳನ್ನು ಹಾಕುವ ಮೂಲಕ ಹಸಿದು ಬರುವ ಬಡವರು ಸಂತೋಷದಿಂದ ಊಟ ಮಾಡುವ ವಾತಾವರಣ ನಿರ್ಮಿಸಲಿ ಮತ್ತು ಇಂದಿರಾ ಕ್ಯಾಂಟೀನ್ ಎಲ್ಲರಿಗೂ ಕಾಣುವಂತೆ ರೂಪುಗೊಳ್ಳಲಿ. ಇಲ್ಲಾಂದ್ರೆ ನಾವೇ ಬೀದಿಗೆ ಬಂದು ಸರ್ಕಾರಕ್ಕೆ ಕಣ್ಣು ತೆರಸಬೇಕಾಗುತ್ತೆ.”

-ಓಂಶಕ್ತಿ ಚಲಪತಿ. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ.

” ಇಂದಿರಾ ಕ್ಯಾಂಟೀನ್ ಸುತ್ತಲೂ ದೊಡ್ಡ ದಂದೆಯೇ ನಡೀತಾ ಇದೆ. ಚಿಲ್ಲರೆ ಕಾಸಿಗಾಗಿ ಲೈಸೆನ್ಸ್ ಇಲ್ಲದೆ ಹೂವಿನ ಮಳಿಗೆಗಳಿಗೆ ವ್ಯಾಪಾರ ಮಾಡಲು ಇಲ್ಲಿನ ನಗರಸಭೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಹೂವಿನ ವ್ಯಾಪಾರಿಗಳಿಗೆ ಲೈಸೆನ್ಸ್ ಕೊಟ್ಟು ಒಂದು ನಿರ್ದಿಷ್ಟ ಸ್ಥಳದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇನ್ನೂ ಯಾರಿಗೂ ಕಾಣದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಡೆಸುವವರು, ದಿನಕ್ಕೆ 30-50 ಜನರಿಗೆ ಊಟ ಹಾಕಿ ಲೆಕ್ಕ ತೋರಿಸುವ ದಂಧೆ ನಡೆಯುತ್ತಿದೆ. ಜಿಲ್ಲಾಡಳಿತ ಮತ್ತು ನಗರಸಭೆ ಸರ್ಕಾರ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಆಸಕ್ತಿ ತೋರುತ್ತಿಲ್ಲ. ಇವರ ಈ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಜನ ದಂಗೆ ಏಳಬೇಕಾಗುತ್ತೆ ಅನ್ನೋ ಎಚ್ಚರಿಕೆ ವಹಿಸುವುದು ಒಳ್ಳೆಯದು.”

-ಕೆ.ಶ್ರೀನಿವಾಸಗೌಡ. ರೈತ ಮುಖಂಡ.

Leave a Reply

Your email address will not be published. Required fields are marked *

You missed

error: Content is protected !!