• Fri. Mar 1st, 2024

PLACE YOUR AD HERE AT LOWEST PRICE

ಬೆಂಗಳೂರು:ಪ್ರಮುಖ ಸಾಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸುವ ಮೂಲಕ ಕರ್ನಾಟಕ ಕಾಂಗ್ರೆಸ್ ರಾಜ್ಯದ ಜನರಿಗೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆ ಆಗಿಲ್ಲ ಎನ್ನುವುದನ್ನು ನೆನಪಿಸಿದೆ.

ಇದೇ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 13 ರಂದು ಪ್ರಕಟವಾಗಿತ್ತು. ಪ್ರಚಂಡ ಬಹುಮತ ಗಳಿಸಿದ ಕಾಂಗ್ರೆಸ್ ಸರ್ಕಾರ ರಚಿಸಿತು. ಆದರೆ ಆಡಳಿತ ವಿರೋಧಿ ಅಲೆಯಿಂದಾಗಿ ವಿಪಕ್ಷ ಸ್ಥಾನದಲ್ಲಿ ಕುಳಿತ ಬಿಜೆಪಿಗೆ ಇದುವರೆಗೂ ವಿರೋಧ ಪಕ್ಷದ ನಾಯಕ ಯಾರು ಎಂದು ತೀರ್ಮಾನಿಸಿಲ್ಲ.

ಇದೇ ವಿಚಾರ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಟಾಂಗ್ ನೀಡಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷದವರು ಬಹುತೇಕ ಮರೆತೇ ಹೋಗಿದ್ದಾರೆ ಎಂದು ಲೇವಡಿ ಮಾಡಿದೆ.

ವಿಪಕ್ಷ ನಾಯಕನ ಆಯ್ಕೆಯಲ್ಲಿ ಬಿಜೆಪಿ ಅಸಮರ್ಥ .

ಪ್ರಮುಖ ಸಾಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ. ಬಿಜೆಪಿಗೆ ಆಡಳಿತದಲ್ಲಿ ಮಾತ್ರ ಅಸಾಮರ್ಥ್ಯವಿರುವುದಲ್ಲ, ಆಂತರಿಕ ಕಲಹ ನಿಭಾಯಿಸುವುದರಲ್ಲಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರಲ್ಲೂ ಅಸಮರ್ಥವಾಗಿದೆ ಎಂದು ಕಾಂಗ್ರೆಸ್ ಟೀಕಿ ಮಾಡಿದೆ.

ವಿರೋಧ ಪಕ್ಷದ ನಾಯಕನ ಆಯ್ಕೆಗೆ ನಿಮ್ಮ ವರಿಷ್ಠರಿಗೆ “ಸೂಕ್ತ ಸಮಯ” ಬರಲಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿಗೆ ನಿರ್ಧರಿಸಿರುವ ಜೆಡಿಎಸ್ ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಮಯವಿರುವ ಹೈಕಮಾಂಡಿಗೆ ಸ್ವಂತ ಪಕ್ಷದ ಸಮಸ್ಯೆ ಬಗೆಹರಿಸಲು ಸಮಯವಿಲ್ಲವೇ? ಅಥವಾ ನಿಮ್ಮಲ್ಲಿ ಆ ಹುದ್ದೆಗೆ ಯೋಗ್ಯತೆ, ಅರ್ಹತೆ ಇರುವ ವ್ಯಕ್ತಿ ಯಾರೂ ಇಲ್ಲವೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮತ್ತು ಬಿಜೆಪಿಗೆ ವಿಪಕ್ಷ ಸ್ಥಾನ ಗಟ್ಟಿಯಾಗಿ ನಾಲ್ಕು ತಿಂಗಳು ಕಳೆದರೂ ಇನ್ನೂವರೆಗೆ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಈ ವಿಚಾರವನ್ನು ರಾಜ್ಯ ಜನರಿಗೆ ನೆನಪಿಸುವುದರ ಜೊತೆಗೆ ಕಮಲ ಪಡೆಗೆ ಕುಟುಕಿದೆ.

ವಿಪಕ್ಷ ನಾಯಕನ ಆಯ್ಕೆಗೆ ಕೇಂದ್ರಕ್ಕೆ ಆಸಕ್ತಿ ಇಲ್ಲ?

ಬಿಜೆಪಿಯ ಚುನಾವಣೆಯಲ್ಲಿ ಸೋತ ನಂತರ ವಿರೋಧ ಪಕ್ಷ ನಾಯಕನ ಆಯ್ಕೆ ವಿಚಾರ ಹೈಕಮಾಂಡ್ ಅಂಗಳ ತಲುಪಿತು. ಆದರೆ ಇದುವರೆಗೂ ಈ ಬಗ್ಗೆ ಯಾವುದನ್ನು ಕೇಂದ್ರ ವರಿಷ್ಠರು ತೀರ್ಮಾನಿಸಿಲ್ಲ. ಸೋಲಿನ ಹೊಣೆ ತಾನೆ ಹೊರುವುದಾಗಿ ಹೇಳಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಸೇರಿದಂತೆ ಹಲವರ ಹೆಸರು ವಿಪಕ್ಷ ಸ್ಥಾನದ ಆಯ್ಕೆ ಕೇಳಿ ಬಂತು.

ಕಾಂಗ್ರೆಸ್ ಸರ್ಕಾರದ ಮೊಲದ ಅಧಿವೇಶನಕ್ಕು ಮುನ್ನ ವಿರೋಧ ಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎನ್ನಲಾಗಿತ್ತಾದರೂ ಯಾವುದು ನಡೆಯಲಿಲ್ಲ. ಅಧಿವೇಶನ ವಿರೋಧ ಪಕ್ಷ ಇಲ್ಲದೆ ನಡೆದು ಇತಿಹಾಸ ಸೃಷ್ಟಿಸಿತೇ ಹೊರತು ಕೇಂದ್ರ ಬಿಜೆಪಿ ನಾಯಕನನ್ನು ಆಯ್ಕೆ ಮಾಡಲಿಲ್ಲ. ಈ ಕಾರಣದಿಂದ ಕರ್ನಾಟಕ ಬಿಜೆಪಿ ಭಾರೀ ಮುಜುಗರಕ್ಕೆ ಈಡಾಗಬೇಕಾಯಿತು.

ಸದ್ಯ ನಾಲ್ಕು ತಿಂಗಳಾದರೂ ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿರುವ ಕೇಂದ್ರದ ವರಿಷ್ಠರು ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಆಸಕ್ತಿ ತೋರಿದಂತಿಲ್ಲ. ಇದೇ ವಿಚಾರವನ್ನು ಇದೀಗ ಕಾಂಗ್ರೆಸ್ ಎಳೆತಂದು ಲೇವಡಿ ಮಾಡಿದೆ.

Leave a Reply

Your email address will not be published. Required fields are marked *

You missed

error: Content is protected !!