PLACE YOUR AD HERE AT LOWEST PRICE
ಉಡುಪಿಯಲ್ಲಿ ಒಂದೇ ಮನೆಯ ನಾಲ್ವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಅಯ್ನಾಝ್ ಕೊಲ್ಲುವ ಉದ್ದೇಶದಿಂದಲೇ ಪ್ರವೀಣ್ ಮನೆಗೆ ಬಂದಿದ್ದ. ಕೊಲೆಗೆ ಎರಡು ಮೂರು ಕಾರಣಗಳನ್ನು ನೀಡಿದ್ದಾನೆ. ಆದರೆ ಅದನ್ನು ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಹಂತದ ವಿಚಾರಣೆಯ ಬಳಿಕ ಇಂದು(ನ.15) ಸಂಜೆ ಕರೆದಿದ್ದ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಾಲ್ವರನ್ನು ಕೊಲೆಗೈದಿರುವುದು ತಾನೇ ಎಂದು ಪ್ರವೀಣ್ ಅರುಣ್ ಚೌಗಲೆ(39) ತಿಳಿಸಿದ್ದಾನೆ. ಕೊಲೆಗೈಯ್ಯಲು ಎರಡು ಮೂರು ಕಾರಣ ತಿಳಿಸಿದ್ದಾನೆ. ಈ ಎಲ್ಲ ಕಾರಣಗಳ ಬಗ್ಗೆ ನಾವು ದೃಢಪಡಿಸದೆ ವಿಚಾರ ತಿಳಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
‘ಏರ್ ಇಂಡಿಯಾ ಕ್ಯಾಬಿನ್ ಕ್ರೂ ಉದ್ಯೋಗಿಯಾಗಿರುವ ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ. ತನ್ನ ಸಹೋದ್ಯೋಗಿಯಾಗಿದ್ದ ಅಯ್ನಾಝ್ ಅವರನ್ನು ಕೊಲೆಗೈಯ್ಯಲು ಮನೆಗೆ ಬಂದಿದ್ದಾನೆ. ಇದು ಆತನ ಪೂರ್ವ ನಿಯೋಜಿತ ಕೃತ್ಯ. ಚಾಕುವಿನಿಂದ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಯ್ನಾಝ್ ಅವರನ್ನು ಕೊಲೆಗೈಯ್ಯುತ್ತಿದ್ದಾಗ ತಡೆಯಲು ಬಂದ ಹಿನ್ನೆಲೆಯಲ್ಲಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದಲೇ ಮನೆಯಲ್ಲಿದ್ದವರ ಮೇಲೂ ಚಾಕು ಇರಿದು ಕೊಲೆಗೈದಿದ್ದೇನೆ ಎಂಬುದು ಒಪ್ಪಿಕೊಂಡಿದ್ದಾನೆ.
ಸದ್ಯದ ವಿಚಾರಣೆಯಲ್ಲಿ ಈತನೊಬ್ಬನೇ ಕೃತ್ಯ ಎಸಗಿದ್ದಾನೆ. ಕೊಲೆಗೈದ ನಂತರ ಹೇಗೆಲ್ಲ ಪರಾರಿಯಾದ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈತ ಮದುವೆಯಾಗಿರುವುದಾಗಿಯೂ ತನಿಖೆಯಿಂದ ತಿಳಿದುಬಂದಿದೆ’ ಎಂದು ಉಡುಪಿ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
‘ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ಮೇಲ್ನೋಟಕ್ಕೆ ಎರಡು ಮೂರು ಉದ್ದೇಶ ತಿಳಿಸಿದ್ದಾನೆ. ಶೀಘ್ರದಲ್ಲೇ ಆರೋಪಿಯು ನೀಡಿರುವ ಮಾಹಿತಿಯನ್ನಾಧರಿಸಿ, ತನಿಖಾಧಿಕಾರಿಗಳು ದೃಢೀಕರಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 15-20 ಜನರನ್ನು ವಿಚಾರಣೆ ನಡೆಸಿದ್ದೇವೆ. ಈತ ಕೊಲೆಗೈದಿರುವುದನ್ನು ಒಪ್ಪಿಕೊಂಡಿರುವುದರಿಂದ ಪ್ರವೀಣ್ ಅರುಣ್ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.