PLACE YOUR AD HERE AT LOWEST PRICE
ವಿಶ್ವಕಪ್ ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿ ಕ್ರಿಸ್ ಗೆಲ್ ದಾಖಲೆ ಮುರಿದ ರೋಹಿತ್.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಇಂದು ನಡೆಯುತ್ತಲಿರುವ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ.
ಇಂದು ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಸಿಡಿಸಿ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಆ ಮೂಲಕ ಟಿಮ್ ಸೌಥಿಯವರಿಗೆ ವಿಕೆಟ್ ಒಪ್ಪಿಸಿದರು.
ಈ ಪಂದ್ಯದ ಮೊದಲ ಓವರ್‌ನಿಂದಲೇ ಭರ್ಜರಿ ಹೊಡೆತದ ಮೂಲಕ ಬ್ಯಾಟಿಂಗ್ ಆರಂಭಿಸಿದ್ದ ರೋಹಿತ್, ತಮ್ಮ ಬ್ಯಾಟ್‌ನಿಂದ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಆ ಮೂಲಕ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ಒದಗಿಸಿದರು. ಅಲ್ಲದೇ, ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದರು.
ಕಿವೀಸ್ ವಿರುದ್ಧ 4 ಬೃಹತ್ ಸಿಕ್ಸರ್ ಸಿಡಿಸಿದ ‘ಹಿಟ್ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಕ್ರಿಸ್ ಗೇಲ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.
2015ರಿಂದ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ರೋಹಿತ್, ಈ ಮೂರು ಆವೃತ್ತಿಗಳಲ್ಲಿ 27 ಪಂದ್ಯಗಳನ್ನಾಡಿದ್ದು, ಇದುವರೆಗೆ ಬರೋಬ್ಬರಿ 50 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ರೋಹಿತ್ಗೂ ಮೊದಲು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕ್ರಿಸ್ ಗೇಲ್ 35 ವಿಶ್ವಕಪ್ ಪಂದ್ಯಗಳಲ್ಲಿ 49 ಸಿಕ್ಸರ್ ಸಿಡಿಸಿದ್ದರು. ಈ ಇಬ್ಬರ ಬಳಿಕ ಮೂರನೇ ಸ್ಥಾನದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ 25 ವಿಶ್ವಕಪ್ ಪಂದ್ಯಗಳಿಂದ 43, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ 23 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 25 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿ, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಗಾಯಾಳುವಾಗಿ ಬ್ಯಾಟಿಂಗ್ ನಿಲ್ಲಿಸಿದ ಶುಭಮನ್ ಗಿಲ್
ಸದ್ಯ ನಡೆಯುತ್ತಿರುವ ಪಂದ್ಯದಲ್ಲಿ 25 ಓವರ್‌ಗಳು ಮುಗಿದಿದ್ದು, ಕ್ರೀಸ್‌ನಲ್ಲಿ ನಿಂತು ಅರ್ಧಶತಕ ಬಾರಿಸಿ ಶತಕದತ್ತ ಮುನ್ನಡೆಯುತ್ತಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್, ಸ್ನಾಯು ಸೆಳೆತಕ್ಕೊಳಗಾಗಿ ಬ್ಯಾಟಿಂಗ್ ನಿಲ್ಲಿಸಿದ್ದಾರೆ.
65 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್‌ನ ನೆರವಿನಿಂದ 79 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಗಾಯಾಳುವಾದ್ದರಿಂದ ಕ್ರೀಸ್‌ನಿಂದ ನಿರ್ಗಮಿಸಿದ್ದಾರೆ.
ಸದ್ಯ ಕ್ರೀಸ್‌ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 85 ಹಾಗೂ ಶ್ರೇಯಸ್ ಅಯ್ಯರ್ 49 ರನ್ ಗಳಿಸಿ ಮುಂದುವರಿಯುತ್ತಿದ್ದಾರೆ. 36 ಓವರ್‌ಗಳು ಮುಗಿದಿದ್ದು, 265 ರನ್ ಕಲೆ ಹಾಕಿದೆ.