PLACE YOUR AD HERE AT LOWEST PRICE
ಕೋಲಾರ.ನ.28:ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಒತ್ತಾಯಿಸಿ, ಪದವಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶಾಶ್ವತ ನೀರಾವರಿ ಹೋರಾಟ ವೇದಿಕೆಯಿಂದ ಮಂಗಳವಾರ ಬೆಳಿಗ್ಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮಾಡಿದ ನೂರಾರು ಉಪನ್ಯಾಸಕರು ನಂತರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸುಮಾರು ಹತ್ತು ಸಾವಿರದ ಆರುನೂರು (10600) ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ರಜೆ ಸವಲತ್ತುಗಳೂ ಇಲ್ಲದ ಆಧುನಿಕ ಜೀತಗಾರರಂತೆ ಜೀವನ ಮಾಡುತ್ತಿದ್ದರೂ ಸರ್ಕಾರ ಖಾಯಂ ಮಾಡಲು ಮೀನ ಮೇಷ ಎಣಿಸುತ್ತಾ ಇದೆ ಎಂದು ಪ್ರತಿಭಟನಕಾರರು ದೂರಿದರು.
ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣ ತ್ಯಾಗ ಮಾಡಲೂ ಸಹ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಮುಖಂಡರಾದ ನಾಗಮಣಿ, ರವಿಕುಮಾರ್, ಲಕ್ಷ್ಮಿನಾರಾಯಣ, ವಿ.ಬಿ.ಶಿವಣ್ಣ, ಗಿರೀಶ್ ಮೊದಲಾದವರು ವಹಿಸಿದ್ದರು.