• Tue. Jun 18th, 2024

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

PLACE YOUR AD HERE AT LOWEST PRICE

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ

ಕೋಲಾರ,ಮೇ.೧೪ : ಕಳೆದ ೨೫ ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಲ್ಲಾ ಎಂ.ಎಲ್.ಸಿ.ಗಳು ಶಿಕ್ಷಕರಿಗೆ ಕೊಟ್ಟ ಭರವಸೆಗಳೆಲ್ಲಾ ಬಗೆಹರಸುವಲ್ಲಿ ವಿಫಲರಾಗಿದ್ದಾರೆ, ಅದರಲ್ಲೂ ಸತತ ೧೮ ವರ್ಷಗಳಿಂದ ಅಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೈ.ಎ.ನಾರಾಯಣಸ್ವಾಮಿ ಸಮಸ್ಯೆಗಳನ್ನು ಬಗೆಹರಿಸದೆ ಶಿಕ್ಷಕರಿಗೆ ದ್ರೋಹವೆಸಗಿದ್ದಾರೆ. ಹಾಗಾಗಿ ಯಾವುದೇ ರಾಜಕೀಯ ಪಕ್ಷಗಳ ಬೆಂಬಲವೂ ಇಲ್ಲದೆ ನೇರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ರುಪ್ಸಾ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ೧೪ ಭರವಸೆಗಳ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕರ್ನಾಟಕ ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕಳೆದ ಎರಡು ದಶಕಗಳ ಕಾಲ ವೈ.ಎ.ನಾರಾಯಣಸ್ವಾಮಿಯವರನ್ನು ನಂಬಿಕೊoಡು ಮತ ನೀಡಿತು. ಸತತ ಮೂರು ಅವಧಿಗಳಿಗೆ ಅವರಿಗೆ ಮತ ನೀಡಿ ಶಿಕ್ಷಕರ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಕಳುಹಿಸಿತು. ಆದರೆ, ಅವರು, ವೇತನ ತಾರತಮ್ಯವನ್ನು ಬಗೆಹರಿಸುವ ಒಂದು ಸಣ್ನ ಪ್ರಯತ್ನವನ್ನೂ ಮಾಡಿಲ್ಲ, ಹಲವು ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಿದ ಹಾಗೂ ನೋವಿನಿಂದ ೫ ಜನ ಶಿಕ್ಷಕರು ಆತ್ಮಹತ್ಯೆಗೆ ಶರಣಾದಾಗಲೂ ವೈ.ಎ.ಎನ್. ತುಟಿ ಬಿಚ್ಚಲಿಲ್ಲ ಎಂದು ಆರೋಪಿಸದ ಅವರು, ೧೯೯೨ರಿಂದ ಶಿಕ್ಷಕರಿಗೆ ನೀಡಲಾಗುತ್ತಿದ್ದ ಕಾಲ್ಪನಿಕ ವೇತನ ನಿಲ್ಲಿಸಲು ಸ್ವತಃ ವೈ.ಎ.ನಾರಾಯಣಸ್ವಾಮಿಯವರೇ ಖುದ್ದು ತಮ್ಮ ಲೆಟರ್ ಹೆಡ್‌ನಲ್ಲಿ ಬರೆದು ಕೊಟ್ಟಿದ್ದು, ಶಿಕ್ಷಕರಿಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ೪ ಲಕ್ಷ ಶಿಕ್ಷಕರು ಖಾಸಗೀ ಶಾಲೆಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ, ಇದೇ ಪರಿಸ್ಥಿತಿ ಕಳೆದ ೫೦ ವರ್ಷಗಳಿಂದ ಮುಂದುವರೆದಿದೆ. ಆರ್ಟಿಕಲ್ ೩೪(ಡಿ) ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಿದೆ. ನೆರೆಯ ರಾಜ್ಯಗಳಲ್ಲಿ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಆದರೆ, ವೈ.ಎ.ನಾರಾಯಣಸ್ವಾಮಿ ಈ ಬಗ್ಗೆ ಕಿಂಚಿತ್ತು ತಲೆಗೆ ಹಾಕಿಕೊಳ್ಳದೆ ಚುನಾವಣೆ ವೇಳೆಗೆ ಶಿಕ್ಷಕರಿಗೆ ಇನ್ನಿಲ್ಲದ ಭರವಸೆ ಕೊಟ್ಟು, ತದನಂತರ ಅವರಿಗೆ ಸಣ್ಣಪುಟ್ಟ ಗಿಫ್ಟ್ ನೀಡಿ ಔತಣಕೂಟ ಏರ್ಪಡಿಸುವ ಮೂಲಕ ಶಿಕ್ಷಕ ಸಮಾಜಕ್ಕೆ ಕಳಂಕ ತಂದು ಮೋಸ ಮಾಡಿದ್ದಾರೆ ಎಂದು ದೂರಿದರು.

ಜೈಲಿನಲ್ಲಿ ಇರುವ ಖೈದಿಯ ಸಂಬಳ ೧೮ ಸಾವಿರ ಇದೆ, ಆದರೆ, ಶಿಕ್ಷಕರ ಸಂಬಳ ಕೇವಲ ೮ ಸಾವಿರ ಇದೆ. ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಈ ಸ್ಥಿತಿ ಬದಲಾಗಬೇಕು, ೨೦೦೬ರ ತನಕ ಶಿಕ್ಷಕರು ನಿವೃತ್ತಿ ವೇತನಕ್ಕೆ ಅರ್ಹರಾಗಿದ್ದರು, ಆದರೆ, ಆನಂತರದ ಶಿಕ್ಷಕರು ಈ ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದಾರೆ, ಇದನ್ನು ಮತ್ತೆ ಜಾರಿಗೆ ತರುವಲ್ಲಿ ಎಲ್ಲಾ ಎಂ.ಎಲ್.ಸಿ.ಗಳು ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ರುಪ್ಸಾ ನೇರವಾಗಿ ಬೀದಿಗಿಳಿದು ಚಳುವಳಿ ನಡೆಸಲಿದೆ, ಇದರ ಪ್ರತಿನಿಧಿಯಾಗಿ ರುಪ್ಸ ತನ್ನ ಪ್ರತಿನಿಧಿಯನ್ನು ತಾನೇ ಆಯ್ಕೆ ಮಾಡಲಿದೆ ಎಂದರು.

ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳೇ ನೇರಕಾರಣರಾಗಿದ್ದಾರೆ. ಇಂದು ರಿಯಲ್ ಎಸ್ಟೇಟ್ ದಂಧೆಕೋರರು ಹಾಗೂ ವ್ಯಾಪಾರಿ ಮನೋಭಾವದ ಕಾರ್ಪೋರೇಟ್‌ಗಳು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾರಣ ಒಂದು ಕಡೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮುಚ್ಚಿಹಾಕಲಾಗುತ್ತಿದೆ ಮತ್ತೊಂದು ಕಡೆ ಖಾಸಗೀ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿ ಸಿಲುಕಿದೆ. ಯಾವುದೇ ಒಂದು ಅಭಿವೃದ್ದಿ ಹೊಂದಿದ ದೇಶದ ರೈತರು, ಶಿಕ್ಷಕರು, ಹಾಗೂ ಯೋದರು ಬೀದಿಗೆ ಬರಬಾರದು, ಆದರೆ, ಇಂದು ನಮ್ಮಲ್ಲಿ ನಡೆಯುತ್ತಿದೆ. ಇದು ದೇಶದ ಬೆಳವಣಿಗೆಯ ದೃಷ್ಟಿಯಿಂದ ಹಿನ್ನಡೆಯಾಗಿದೆ ಎಂದು ಹೇಳಿದರು.

ರುಪ್ಸಾ ಕೋಲಾರ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಮುನಿಯಪ್ಪ ಮಾತನಾಡಿ, ಈ ಬಾರಿ ರುಪ್ಸಾ ರಾಜ್ಯಾಧ್ಯಕ್ಷರೇ ನೇರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದು, ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯವಿಲ್ಲ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನು ಶಿಕ್ಷಕರೇ ನೇರವಾಗಿ ಆಯ್ಕೆ ಮಾಡಿಕೊಳ್ಳುವ ಈ ಚುನಾವಣೆಯಲ್ಲಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಯವರನ್ನು ಬೆಂಬಲಿಸಲಿದೆ ಎಂದು ಘೋಷಣೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಸಿಡೆನ್ಸಿ ಶಾಲೆಯ ಮುಖ್ಯಸ್ಥೆ ನೂರ್‌ಜಾನ್, ರುಪ್ಸಾ ಮುಖಂಡರಾದ ಪ್ರಭಾಕರ್, ಮಾಲೂರು ರಂಜಿತ್ ಕುಮಾರ್, ಬಂಗಾರಪೇಟೆಯ ಸರಸ್ವತಿ, ರವಿಕುಮಾರ್, ಉಪಸ್ಥಿತರಿದ್ದರು.

 

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!