• Mon. May 29th, 2023

ಬ್ಲಡ್ ಕ್ಯಾನ್ಸರನ್ನೇ ಗೆದ್ದು ಹೊಸ ಬದುಕಿನತ್ತ ಮರಳಿದ ಬಾಲಕಿ – ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಿದ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಧನ್ಯವಾದ

ಆರು ವರ್ಷದ ಬಾಲಕಿಯೊಬ್ಬಳು ಕಳೆದ ೨೦೧೯ ರಲ್ಲಿ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸುದ್ದಿ ತಿಳಿದ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಖುದ್ದು ಮಗುವಿನ ಮನೆಗೆ ಹೋಗಿ ಚಿಕಿತ್ಸೆಗೆ ೧.೫ ಲಕ್ಷ ನೆರವು ಒದಗಿಸಿದ್ದರಿಂದಾಗಿ ಆಕೆ ಇದೀಗ ಕ್ಯಾನ್ಸರ್ ಗೆದ್ದು ಆರೋಗ್ಯವಂತಳಾಗಿ ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದು, ಜೀವ ಉಳಿಸಿದ ನೆರವಿಗೆ ಬ್ಯಾಂಕಿಗೆ ಆಗಮಿಸಿ ಧನ್ಯವಾದ ಸಲ್ಲಿಸಿದಳು.

 

ಕೋಲಾರ ತಾಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ ೬ ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು,ತಲೆಯಲ್ಲಿ ಪೂರ್ಣ ಕೂದಲು ಉದುರಿಹೋಗಿತ್ತಲ್ಲದೇ ರೋಗ ಪ್ರಥಮ ಹಂತದಲ್ಲಿರುವುದರಿಂದ ಕೂಡಲೇ ಚಿಕಿತ್ಸೆ ನೀಡಿದಲ್ಲಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.

 

ಆದರೆ ಖಾಸಗಿ ಶಾಲೆಯೊಂದರ ವಾಹನ ಚಾಲಕರಾಗಿದ್ದ ಸುಮಂತ್ ಕುಮಾರ್, ಸಾಲ ಮಾಡಿ ೧.೫ ಲಕ್ಷಕ್ಕೂ ಹೆಚ್ಚಿನ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದರು. ಉಳಿದಂತೆ ಸೆಂಟ್‌ಜಾನ್ಸ್ ಆಸ್ಪತ್ರೆಯ ವೈದ್ಯರ ಪ್ರಕಾರ ಚಿಕಿತ್ಸೆಗೆ ೭.೫ ಲಕ್ಷ ರೂಗಳ ಅಗತ್ಯವಿದ್ದು, ಈ ಹಣ ಕ್ರೋಢೀಕರಿಸಲಾಗದೇ ಆತಂಕದಲ್ಲೇ ಜೀವನ ದೂಡುತ್ತಿದ್ದರು.

ಗೋವಿಂದಗೌಡರಿಂದ
ಮಾನವೀಯ ನೆರವು
ಮುದ್ದಾದ ಈ ಬಾಲಕಿಯ ಅನಾರೋಗ್ಯದ ಕುರಿತು ತಿಳಿದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪೋಷಕರನ್ನು ಕರೆಸಿಕೊಂಡು ವಿವರ ಪಡೆದು ತಕ್ಷಣವೇ ೫೦ ಸಾವಿರ ನೆರವು ನೀಡಿ, ಉಳಿದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒದಗಿಸುವುದಾಗಿ ತಿಳಿಸಿದ್ದಲ್ಲದೇ ಆಕೆಯ ಚಿಕಿತ್ಸೆಗೆ ಉಳಿದ ಹಣ ನೀಡಿ ಧೈರ್ಯ ತುಂಬಿದ್ದರು.

 

ಅಂದು ಸಹಾಯಹಸ್ತ ಚಾಚಿ ಹೃದಯ ತುಂಬಿ ಮಾತನಾಡಿದ್ದ ಗೋವಿಂದಗೌಡರು, ಈ ಮುದ್ದಾದ ಮಗುವನ್ನು ಕಂಡಾಗ ದೇವರು ಬಡವರಿಗೆ ಏಕೆ ಇಂತಹ ದೊಡ್ಡ ಕಾಯಿಲೆಗಳನ್ನು ನೀಡಿದ ಎಂದು ವಿಷಾದವಾಗುತ್ತದೆ ಎಂದು ನೊಂದು ತಿಳಿಸಿದ್ದರು.

 

ಶಾಲೆಗೆ ಹೋಗಿ ಎಲ್ಲರಂತೆ ಕಲಿಯಬೇಕಾದ ಮಗು ಇಂದು ನೋವಿನಿಂದ ಕಾಲ ನೂಕುತ್ತಿದೆ, ಆ ಮಗುವಿನ ಕಣ್ಣುಗಳಲ್ಲಿ ಭಯ ಕಾಣುತ್ತಿದೆ,ಜತೆಗೆ ಇಂತಹ ಮುದ್ದಾದ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ತಂದೆ,ತಾಯಿಯ ದುಃಖಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕಾದ ಅಗತ್ಯವೂ ಇದೆ ಎಂದು ಹೇಳಿ ನೆರವಾಗಿದ್ದರು.

ಅಂದು ದುಃಖಿತರಾಗಿದ್ದ ತಂದೆತಾಯಿಗೆ ಧೈರ್ಯ ತುಂಬಿದ್ದ ಅವರು, ಚಿಂತೆ ಮಾಡದಿರಿ, ಇಂತಹ ಮುದ್ದಾದ ಮಗುವನ್ನು ದೇವರು ಉಳಿಸಿಕೊಡುತ್ತಾನೆ, ಚಿಕಿತ್ಸೆಗೆ ಹಣದ ಕುರಿತು ಚಿಂತೆ ಮಾಡದಿರಿ, ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಅಗತ್ಯ ನೆರವು ಪೂರ್ತಿ ನಾನೇ ಒದಗಿಸುವುದಾಗಿ ಭರವಸೆ ನೀಡಿ ಅದರಂತೆ ಚಿಕಿತ್ಸೆಗೆ ಅಗತ್ಯವಾದ ನೆರವನ್ನು ಮೂರು ಬಾರಿ ಒದಗಿಸಿದ್ದರು.

ಬದುಕುಳಿಯಲು
ನೆರವಾದವರಿಗೆ ಕೃತಜ್ಞತೆ
ಚೇತರಿಕೆ ಧನ್ಯವಾದ
ಗೋವಿಂದಗೌಡರ ಹೃದಯವಂತಿಕೆ ಹಾಗೂ ಹಾರೈಕೆಯಿಂದ ಇದೀಗ ಬ್ಲಡ್ ಕ್ಯಾನ್ಸರ್ ಅನ್ನು ಗೆದ್ದು ಚೇತರಿಸಿಕೊಂಡಿರುವ ಈ ಬಾಲಕಿ ಕಾರುಣ್ಯ ತಾನು ಬದುಕುಳಿಯಲು ನೆರವಾದ ಬ್ಯಾಲಹಳ್ಳಿ ಗೋವಿಂದಗೌಡರನ್ನು ತಮ್ಮ ಪೋಷಕರೊಂದಿಗೆ ಶನಿವಾರ ಭೇಟಿಯಾಗಿ ಧನ್ಯವಾದ ಸಲ್ಲಿಸಿದಳು.

 

ಈ ಮಗುವಿಗೆ ಇದೀಗ ಎದೆ ಬಳಿ ಕಿಮೋಪೋರ್ಟ್ ಅಳವಡಿಸಿದ್ದು, ಅದನ್ನು ನ.೨ ರ ಸೋಮವಾರ ತೆಗೆಯುತ್ತಿದ್ದು, ಅದಕ್ಕಾಗಿ ಇನ್ನೂ ೧.೮ ಲಕ್ಷ ನೆರವಿನ ಅಗತ್ಯವಿದೆ ಎಂದು ಪೋಷಕರು ತಿಳಿಸಿ, ಒಟ್ಟಾರೆ ಮಗು ಸಾವಿನ ಭಯದಿಂದ ಪಾರಾಗಿದ್ದಾಳೆ ಎಂದು ಕೃತಜ್ಞತೆ ತಿಳಿಸಿದರು.

 

ಈ ಚಿಕಿತ್ಸೆಗೂ ನೆರವಾಗುವ ಭರವಸೆ ನೀಡಿದ ಬ್ಯಾಲಹಳ್ಳಿ ಗೋವಿಂದಗೌಡರು ಸಾವಿಗೆ ಹತ್ತಿರವಾಗಿದ್ದ ಮಗುವಿನಲ್ಲಿ ಆತ್ಮಸ್ಥೈರ್ಯ ತುಂಬಿ, ಚಿಕಿತ್ಸೆಗೆ ನೆರವಾಗುವ ಮೂಲಕ ಆ ಮಗುವನ್ನು ಕ್ಯಾನ್ಸರ್ ಮಾರಿಯಿಂದ ರಕ್ಷಿಸಿ ಹೃದಯವಂತಿಕೆ ಮೆರೆದಿದ್ದು ಮಾತ್ರವಲ್ಲ, ಆ ಮಗುವಿಗೆ ಸುಂದರ ಬದುಕು ಸಿಗಲು ನೆರವಾಗಿದ್ದಾರೆ.

 

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

ಇದನ್ನೂ ಓದಿ: ಪಾರೇಹೊಸಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಜಾನಪದ ಕಲಾ ಸಂಭ್ರಮ

Leave a Reply

Your email address will not be published. Required fields are marked *

You missed

error: Content is protected !!