PLACE YOUR AD HERE AT LOWEST PRICE
ಕೋಲಾರ ನಗರದ ಕಾರಂಜಿ ಕಟ್ಟೆ ಬಡಾವಣೆಯ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾರತಸೇವಾದಳವತಿಯಿಂದ ಸ್ವಚ್ಛತಾ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರಂಜಿ ಕಟ್ಟೆ ಬಡಾವಣೆಯ ಎಇಎಸ್ ಶಾಲಾ ಭಾರತ ಸೇವಾದಳ ತಂಡದ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕಾಪಾಡುವ ಸಂದೇಶವನ್ನು ಸಾರಲಾಯಿತು.
ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಸಸಿ ನೆಟ್ಟು ಮಾತನಾಡಿ, ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಹಾಗೂ ತಮ್ಮಿಂದ ಆಗುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಪರಿಸರ ಮೇಲೆ ಪ್ರೀತಿ ಬೆಳೆಸಿಕೊಂಡು ಮಾಲಿನ್ಯ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರು.
ತಾಲೂಕು ಭಾರತ ಸೇವಾದಳ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಜನಸಂಖ್ಯೆ ಸ್ಪೋಟ ಹಾಗೂ ಕೈಗಾರಿಕೀಕರಣ, ವಾಹನಗಳ ಸಂಖ್ಯೆಯ ಹೆಚ್ಚಳದಿಂದಾಗಿ ವಿಶ್ವದಲ್ಲಿ ಪರಿಸರ ಮಾಲಿನ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಮನುಕುಲ ಸೇರಿದಂತೆ ಜೀವ ಸಂಕುಲ ಅಪಾಯದಲ್ಲಿ ಸಿಲುಕುವಂತಾಗಿದೆ. ಆರೋಗ್ಯವಂತ ವಿಶ್ವವನ್ನು ಮತ್ತೇ ರೂಪಿಸಲು ಪರಿಸರವನ್ನು ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕೆಂದರು.
ಭಾರತ ಸೇವಾದಳ ತಾಲೂಕುಕಾರ್ಯದರ್ಶಿ ಫಲ್ಗುಣ, ಸೇವಾದಳ ಜಿಲ್ಲಾ ಸಂಘಟಿಕ ಎಂ.ಬಿ.ದಾನೇಶ್ ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರಕಾಪಾಡುವ ವಾಗ್ದಾನ ಮಾಡಿದರು.