ಅನೇಕ ವರ್ಷಗಳಿಂದ ಒತ್ತುವರಿ ಕಾರಣದಿಂದ ಮುಚ್ಚಿಹೋಗಿದ್ದ ಬಂಗಾರಪೇಟೆ ತಾಲ್ಲೂಕು ತ್ಯಾರ್ನಹಳ್ಳಿ ಬಳಿಯ ಮಾಲೂರು ಸಂಪರ್ಕ ರಸ್ತೆಯನ್ನು ಇಂದು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು.
ಬಂಗಾರಪೇಟೆ ತಾಲ್ಲೂಕು ತ್ಯಾರ್ನಹಳ್ಳಿ ಕಾರಮಂಗಲ, ಹುಲಿಬೆಲೆ, ಐನೋರ ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲ ರೈತರಿಗೆ ಈ ರಸ್ತೆ ಇಲ್ಲದ ಕಾರಣ ತುಂಬಾ ತೊಂದರೆಯಾಗಿತ್ತು. ಅದೇ ರೀತಿ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿ ರೈತರಿಗೂ ಈ ರಸ್ತೆ ಇಲ್ಲದ ಕಾರಣ ತೊಂದರೆಯಾಗಿತ್ತು.
ಇಂದು ಸಂಸದ ಎಸ್.ಮುನಿಸ್ವಾಮಿ ಸಮಕ್ಷಮದಲ್ಲಿ ಎರಡೂ ತಾಲ್ಲೂಕಿನ ಗಡಿ ರೈತರು, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕಿನ ತಹಶಿಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ಸರ್ವೆ ಅಧಿಕಾರಿ ಸಿಬ್ಬಂದಿಗಳು ಸರ್ವೆ ನಡೆಸಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಿದರು.
ಅನೇಕ ವರ್ಷಗಳಿಂದ ಎರಡೂ ತಾಲ್ಲೂಕುಗಳ ಸಂಪರ್ಕ ರಸ್ತೆ ಒತ್ತುವರಿಯಾಗಿ ಮುಚ್ಚಿ ಹೋಗಿ ಓಡಾಡಲು ಮತ್ತು ಬಳೆದ ಬಳೆಗಳನ್ನು ಸಾಗಿಸಲು ಕಷ್ಟಪಡುತ್ತಿದ್ದ ರೈತರಿಗೆ ಇಂದು ತಾತ್ಕಾಲಿಕ ರಸ್ತೆ ನಿರ್ಮಾಣವಾಗಿದ್ದು ಸಂತಸ ತಂದಿದೆ.
ಈ ವೇಳೆ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಬಂಗಾರಪೇಟೆ ತಾಲ್ಲೂಕಿನ ಮಾಲೂರು ಗಡಿಯ ತ್ಯಾರನಹಳ್ಳಿ ಗ್ರಾಮದಲ್ಲಿ ಹಲವು ತಲೆಮಾರುಗಳಿಂದ ಇದ್ದಂತಹ ಬಂಡಿ ದಾರಿ ರಸ್ತೆಯು ಕಾರಣಾಂತರಗಳಿಂದ ಮುಚ್ಚಿಹೋಗಿತ್ತು.
ತ್ಯಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯದ ಮೇರೆಗೆ ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕು ಅಧಿಕಾರಿಗಳ ಸಮಕ್ಷಮದಲ್ಲಿ ರಸ್ತೆ ಮಾಡಿಸುವ ಕಾರ್ಯ ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.
ಬಂಗಾರಪೇಟೆ ಟೇಕಲ್ ಮಾಲೂರು ಮುಖ್ಯ ರಸ್ತೆಯಿಂದ ತ್ಯಾರನಹಳ್ಳಿಯವರೆಗೆ ಪೂರ್ವ ಕಾಲದಿಂದ ಇದ್ದಂತಹ ರಸ್ತೆಯನ್ನು ಇಂದು ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಮಾಡಿ ಜೇಸಿಬಿಗಳ ಮೂಲಕ ಪುನರ್ ರ್ನಿರ್ಮಾಣ ಮಾಡಲಾಯಿತು.
ಸಾರ್ವಜನಿಕರ ಅನುಕೂಲಕ್ಕೆ ಈ ಕೂಡಲೆ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ತುರ್ತಾಗಿ ರಸ್ತೆ ನಿರ್ಮಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಕೆ.ಚಂದ್ರಾರೆಡ್ಡಿ, ಬಂಗಾರಪೇಟೆ ತಹಶೀಲ್ದಾರ್ ದಯಾನಂದ, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ಮಾಲೂರು ತಹಶೀಲ್ದಾರ್ ಮಲ್ಲಿಕಾರ್ಜುನ, ಪೋಲಿಸ್ ಇನ್ಸ್ ಪೆಕ್ಟರ್ ಸಂಜೀವರಾಯಪ್ಪ, ಪಿ.ಡಿ.ಒ ಸುರೇಶ್ ಕುಮಾರ್, ರೈತ ಸಂಘದ ರಾಮೇಗೌಡ, ಮುಖಂಡರಾದ ನಾಗರಾಜಪ್ಪ, ಅಶ್ವಥ್, ಪ್ರಸನ್ನ, ಸುರೇಶ್, ಮಂಜು, ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ರಮೇಶ್ ಗೌಡ, ರಾಮಕೃಷ್ಣಪ್ಪ, ವೆಂಕಟೇಶ್ ಗೌಡ ಮೊದಲಾದವರಿದ್ದರು.