• Wed. Apr 24th, 2024

ಅಜಾದ್ ಹಿಂದ್ ಫೌಜು ಹರಿಸಿದ ರಕ್ತವನ್ನು ನಾವು ಇಂದು ಸ್ಮರಿಸಬೇಕಿದೆ”

PLACE YOUR AD HERE AT LOWEST PRICE

ಅಂದು ನವೆಂಬರ್ 9ನೇ ತಾರೀಖು 1943 ನೇ ಇಸವಿ ರೈಲು ಟೈಪಿಂಗ್ ನಿಂದ ರಂಗೋನ್ ಗೆ ಹೊರಟಿತ್ತು, ಆದರೆ ರೈಲು ಮುಂದಕ್ಕೆ ಹೊರಡದಂತೆ ಒಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು, ರೈಲು ಹಳಿಯ ಮೇಲೆ ಕುಳಿತು, ಕೆಲವರು ಮಲಗಿ ರೈಲು ಮುಂದಕ್ಕೆ ಹೋಗಲು ಬಿಡುವುದಿಲ್ಲ ಎಂದು ಹಠ ಹಿಡಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಈ ಪ್ರತಿಭಟನಾಕಾರರು ಯಾರೂ ದುಡ್ಡು ಪಡೆದು ಹೋರಾಟ ಮಾಡುತ್ತಿದ್ದ ಕೂಲಿ ಪ್ರತಿಭಟನಾಕಾರರಲ್ಲ, ಹಾಗೆಯೇ ತಮಗೆ ಕೊಟ್ಟಿರುವ ಸವಲತ್ತುಗಳು ಸಾಲದು ಮತ್ತಷ್ಟು ಸವಲತ್ತು ನೀಡಿ ಎಂದು ಹೋರಾಟ ಮಾಡುತ್ತಿದ್ದವರೂ ಅಲ್ಲ. ಅವರೆಲ್ಲಾ ಸಾಯಲು ಹಿಂದೂ ಮುಂದೂ ನೋಡದೆ ತಾವು ಮೊದಲು ಯುದ್ಧಭೂಮಿಗೆ ಕಾಲಿಡಬೇಕು. ಹಿಂದೂಸ್ತಾನವನ್ನು ಬಂಧವಿಮುಕ್ತಿಗೊಳಿಸಬೇಕು. ಡಿಲ್ಲಿಯ ವೈಸ್ ಚಾನ್ಸಲರ್ ಕಛೇರಿಯ ಮೇಲೆ ತಾವೇ ಮೊದಲು ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಹಪಹಪಿಸುತ್ತಿದ್ದವರು. ಅವರ ಮಂತ್ರ ಒಂದೇ “ಡೆಲ್ಲಿ ಚೆಲೋ” ಮತ್ತು”ಸಾವು ಇಲ್ಲವೆ ಸ್ವಾತಂತ್ರ್ಯ” ಅಂತಹ ದೇಶ ಭಕ್ತರು ಮತ್ತಾರು ಅಲ್ಲ ಅವರೇ ಅಜಾದ್ ಹಿಂದ್ ಫೌಜಿನ ಸಿಪಾಯಿಗಳು, ಅವರು ಆ ರೀತಿ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಲು ಕಾರಣ, ನೇತಾಜಿಯವರು ಯುದ್ಧಕ್ಕೆ ಹೊರಡಲು ಮೊದಲು ಸುಭಾಷ್ ಬ್ರಿಗೇಡ್ ನ ಪ್ರಥಮ ದಳಕ್ಕೆ ಮಾತ್ರ ಅನುಮತಿ ನೀಡಿದ್ದರು. ಅನುಮತಿ ಪಡೆದಿದ್ದ ಮೊದಲ ದಳ ಬಹಳ ಉತ್ಸಾಹದಿಂದ ಮತ್ತು ಬಹಳ ಸಂತೋಷದಿಂದ ರೈಲಿನಲ್ಲಿ ಕುಳಿತಿದ್ದರು, ಅವರಿಗೆ ಯುದ್ಧಕ್ಕೆ ಹೊರಡಲು ಅನುಮತಿ ನೀಡಿರುವುದು ದೊಡ್ಡ ವರವಾಗಿ ಬಹಳ ಆನಂದದಿಂದಿದ್ದರು, ಅವರ ಒಕ್ಕೊರಲಿನ ಧ್ವನಿ ಒಂದೇ “ಡೆಲ್ಲಿ ಚೆಲೋ” “ಜೈ ಹಿಂದ್” ಕುದಿಯುತ್ತಿದ್ದ ರಕ್ತದೊಂದಿಗೆ ಮುಗಿಲು ಮುಟ್ಟುವಂತೆ ನಿನಾದ ಮಾಡುತ್ತಿದ್ದ ಸೈನಿಕರು ಬಯಸುತ್ತಿದ್ದ ಪ್ರತಿಫಲ ಒಂದೇ, ಅದು ಹಿಂದೂಸ್ತಾನವನ್ನು ಹಿಂಡಿ ಹಿಪ್ಪೆ ಮಾಡಿರುವ ಬ್ರಿಟೀಷರ ರಕ್ತ ಹೀರುವುದಾಗಿತ್ತು.
    ಒಂದೆಡೆ ತಮ್ಮನ್ನೂ ಹೊರಡಲು ಅನುವು ಮಾಡಿಕೊಡಿ ಎನ್ನುವ ಸಿಪಾಯಿಗಳು, ಮತ್ತೊಂದೆಡೆ ತಮಗೆ ಅನುಮತಿ ಸಿಕ್ಕಿತಲ್ಲ ಎಂಬ ಸುಭಾಷ್ ಬ್ರಿಗೇಡ್ ನ ಸಿಪಾಯಿಗಳು. ಆದರೆ ಅವರ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ ಅವರು ಸುಮಾರು 400 ಮೈಲು ದೂರ ಕ್ರಮಿಸಬೇಕಿತ್ತು. ಅದರಲ್ಲಿ ಸ್ವಲ್ಪ ದೂರ ಮಾತ್ರ ರೈಲು ಪ್ರಯಾಣವಾದರೆ ಉಳಿದ ಪ್ರಯಾಣ ಕಾಲುನಡಿಗೆ ಪ್ರಮಾಣವಾಗಿತ್ತು, ಯಾವುದೇ ವಾಹನ ಸೌಲಭ್ಯ ಇರಲಿಲ್ಲ, ಅವರವರ ಆಯುಧಗಳನ್ನು, ಆಹಾರ ಪದಾರ್ಥಗಳನ್ನು, ಅಗತ್ಯ ಪರಿಕರಗಳನ್ನು ಅವರೇ ಹೊರಬೇಕಾಗಿತ್ತು. ದುರ್ಗಮವಾದ ಕಾಡಿನಲ್ಲಿ ಕಾಲು ನಡಿಗೆಯಲ್ಲಿ ಹೊರಡಬೇಕಿತ್ತು , ಆಕಾಶದಲ್ಲಿ ಬ್ರಿಟೀಷರ ವಿಮಾನಗಳು ಹಾರಾಡುತ್ತಾ ಹದ್ದಿನ ಕಣ್ಣಿಟ್ಟಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಹ ಯುದ್ಧಕ್ಕೆ ಸನ್ನದ್ಧರಾಗಿ ಹೊರಟಿದ್ದರು ಅಜಾದ್ ಹಿಂದ್ ಫೌಜಿನ ಸಿಪಾಯಿಗಳು.
   ಅಜಾದ್ ಹಿಂದ್ ಫೌಜು ಸ್ಥಾಪನೆಯಾಗಿದ್ದ ಹಿನ್ನೆಲೆ ಎಂದರೆ, ಆಗ ಎರಡನೆಯ ಮಹಾ ಯುದ್ದದ ಸಮಯ, 200 ವರ್ಷಗಳ ಬ್ರಿಟೀಷರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನ ಹೇಗಾದರೂ ಮಾಡಿ ಬ್ರಿಟೀಷರನ್ನು ಹೊರದೂಡಲು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾರತದಲ್ಲಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ “ಕ್ವಿಟ್ ಇಂಡಿಯಾ” ಚಳುವಳಿ ಅಂದರೆ ಭಾರತ ಬಿಟ್ಟು ತೊಲಗಿ ಎಂಬ ಶಾಂತಿಯುತ ಹೊರಾಟ ಪ್ರಾರಂಭವಾಗಿದ್ದರೆ, ಮತ್ತೊಂದೆಡೆ ಎರಡನೇ ಮಹಾಯುದ್ಧ ಅಂತ್ಯಭಾಗದಲ್ಲಿ ಪೂರ್ವ ಏಷ್ಯಾದಲ್ಲಿ ಅಂದರೆ ಜಪಾನ್ ಆಕ್ರಮಿತ ಪ್ರದೇಶ ಸಿಂಗಾಪೂರ್ ನಲ್ಲಿ ಅಜಾದ್ ಹಿಂದ್ ಫೌಜು ಸ್ಥಾಪನೆಯಾಯಿತು. ಇದು ಪೂರ್ವ ಏಷ್ಯಾದಲ್ಲಿನ ಭಾರತೀಯ ವಲಸಿಗರಿಂದ ಹಾಗೂ ಯುದ್ಧ ಖೈದಿಗಳಾಗಿದ್ದ ಭಾರತೀಯ ಸೈನಿಕರನ್ನು ಒಟ್ಟುಗೂಡಿಸಿ ಪ್ರಾರಂಭವಾಯಿತು. ರಾಸ್ ಬಿಹಾರಿ ಬೋಸ್ ರವರ ಕಲ್ಪನೆಯಲ್ಲಿ ಕುಡಿಯೊಡೆದ ಸಂಘಟನೆ ನೇತಾಜಿಯವರ ನೇತೃತ್ವದಲ್ಲಿ ದೊಡ್ಡ ಮರವಾಗಿ ಹೊರಹೊಮ್ಮಿತು. ಇದನ್ನು “ಅಝಿ ಹುಕುಮತ್ -ಎ- ಅಜಾದ್ ಹಿಂದ್” ಎಂದಾಗಿತ್ತು ಇದರ ಅರ್ಥ “ಮುಕ್ತ ಭಾರತದ ತಾತ್ಕಾಲಿಕ ಸರ್ಕಾರ”. ಇದು 1943 ರಲ್ಲಿ ಸ್ಥಾಪನೆಯಾಯಿತು ಇದರ ಧ್ಯೇಯ ವಾಕ್ಯ “ಏಕತೆ, ನಂಬಿಕೆ ಮತ್ತು ತ್ಯಾಗ” ಎಂಬುದಾಗಿತ್ತು. ಇಂತಹ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾದ ಸಂಘಟನೆಯಲ್ಲಿ ‌ಸುಮಾರು 3 ಲಕ್ಷ ತರಬೇತಿ ಪಡೆದ ಸೈನಿಕರಿದ್ದರು, ಅಸ್ಸಾಂ ನಲ್ಲಿ ಒಂದು ಡಿವಿಜನ್, ರಂಗೂನ್ ನಲ್ಲಿ ಒಂದು ಡಿವಿಜನ್, ಮಲಯದಲ್ಲಿ ಒಂದು ಡಿವಿಜನ್ ಸೈನ್ಯವಿತ್ತು. ಒಂದೊಂದು ಡಿವಿಜನ್ ನಲ್ಲಿ ನಾಲ್ಕು ಬ್ರಿಗೇಡ್ ಇತ್ತು ಒಂದು ಸುಭಾಸ್ ಬ್ರಿಗೇಡ್, ಎರಡನೆಯದ್ದು ಗಾಂಧಿ ಬ್ರಿಗೇಡ್, ಮೂರನೆಯದ್ದು ಅಜಾದ್ ಬ್ರಿಗೇಡ್ ಹಾಗೂ ನಾಲ್ಕನೇಯದ್ದು ನೆಹರೂ ಬ್ರಿಗೇಡ್. ಹೀಗೆ ಇದೊಂದು ವ್ಯವಸ್ಥಿತ ಸೈನ್ಯವಾಗಿತ್ತು, ಜೊತೆಗೆ ಝಾನ್ಸಿ ರಾಣಿ ದಳ ಎಂಬ ಮಹಿಳಾ ಸೈನಿಕರ ದಳವು ಇತ್ತು ಇದರ ನೇತೃತ್ವ ಕ್ಯಾಪ್ಟನ್ ಲಕ್ಷ್ಮಿ ರವರು ವಹಿಸಿದ್ದರು . ಈ ರೀತಿಯಾದ ವ್ಯವಸ್ಥಿತವಾದ ಸೈನ್ಯವನ್ನು ಕಟ್ಟಿದ ನೇತಾಜಿಯವರ ಕನಸು ಆದಷ್ಟು ಬೇಗ ಹಿಂದೂಸ್ಥಾನವನ್ನು ತಲುಪಬೇಕು, ವೀರೋಚಿತ ಯುದ್ಧದಿಂದ ಬ್ರಿಟೀಷರನ್ನು ಓಡಿಸಿ ಹಿಂದೂಸ್ತಾನವನ್ನು ಬಂಧಮುಕ್ತಗೊಳಿಸುವುದಾಗಿತ್ತು. ನೇತಾಜಿಯವರ ಪ್ರಕಾರ “ಸ್ವಾತಂತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು, ಇದನ್ನು ಭಿಕ್ಷೆ ರೀತಿ ಬೇಡಿ ಪಡೆಯುವುದು ತರವಲ್ಲ ವೀರೋಚಿತ ಹೋರಾಟದಿಂದ ಪಡೆಯಬೇಕು” ಎಂಬುದಾಗಿತ್ತು.
    ನೇತಾಜಿಯವರ ಆಲೋಚನೆ ಬಹಳ ಸರಳವಾಗಿತ್ತು ಆಗ ಭಾರತದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತ್ತು ಎಲ್ಲಿ ನೋಡಿದರೂ ಹೋರಾಟದ ಬಿಸಿ ಹೆಚ್ಚಾಗಿತ್ತು ಹೇಗಾದರೂ ಮಾಡಿ ಬ್ರಿಟೀಷರನ್ನು ಓಡಿಸಬೇಕು ಎಂದು ಪಣ ತೊಟ್ಟಿದ್ದರು ಇಂತಹ ಸಮಯದಲ್ಲಿ ತಾವು ಜಪಾನ್ ಮತ್ತು ಜರ್ಮನಿಯ ಸಹಾಯದೊಂದಿಗೆ ಬ್ರಿಟೀಷರ ವಿರುದ್ಧ ಯುದ್ಧಸಾರಿದಾಗ ಬ್ರಿಟೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರು ಅಂದರೆ ಆಗ ಬ್ರಿಟೀಷರ ನೇತೃತ್ವದಲ್ಲಿ ಇದ್ದವರು ಬಹುಪಾಲು ಸೈನಿಕರು ಭಾರತೀಯರೆ ಆಗಿರುವುದಿಂದ ಯುದ್ಧ ಪ್ರಾರಂಭವಾದೊಡನೆ ಭಾರತೀಯ ಸೈನಿಕರು ಅಜಾದ್ ಹಿಂದ್ ಫೌಜು ಸೇರಿದರೆ ಸುಲಭವಾಗಿ ಯುದ್ಧ ಜಯಿಸಬಹುದು, ಅದೇ ಸಂದರ್ಭದಲ್ಲಿ ಗಾಂಧೀಜಿಯವರು, ನೆಹರುರವರು ಮುಂತಾದ ಪ್ರಮುಖರು ತಮಗೆ ಬೆಂಬಲ ನೀಡಿದಲ್ಲಿ ಅನಾಯಾಸವಾಗಿ ಬ್ರಿಟೀಷರನ್ನು ಓಡಿಸಬಹುದು ಎನ್ನುವುದಾಗಿತ್ತು. ಆ ನಿಟ್ಟಿನಲ್ಲಿ ಸಶಕ್ತ ಸೈನ್ಯವನ್ನು ಕಟ್ಟಿದ್ದರು, ಆದರೆ ಅವರ ಕಲ್ಪನೆಗೂ ಮೀರಿ ಇಲ್ಲಿ ಬ್ರಿಟೀಷರು ನೇತಾಜಿಯವರ ಬಗ್ಗೆ ಮತ್ತು ನೇತಾಜಿಯವರ ಸೈನ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ನೇತಾಜಿಯವರ ಸೈನ್ಯ ನಿಜವಾಗಿಯೂ ಸೈನ್ಯವೇ ಅಲ್ಲ, ಅದೊಂದು ದೊಂಬಿ, ಅವರು ಜಪಾನ್ ಸೈನಿಕರನ್ನು ಕರೆತರುತ್ತಿದ್ದಾರೆ, ಜಪಾನಿಗಳು ಬಹಳ ಕ್ರೂರಿಗಳು ಹೀಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದರು. ಇದರಿಂದ ನೇತಾಜಿಯವರಿಗೆ ನಿರೀಕ್ಷಿತ ಮಟ್ಟದಲ್ಲಿ ಸಹಾಯ ದೊರೆಯಲಿಲ್ಲ.
   ಈ ಎಲ್ಲವನ್ನೂ ನಿರೀಕ್ಷೆ ಮಾಡಿದ್ದ ನೇತಾಜಿಯವರು ಒಂದು ಸುಸಜ್ಜಿತ ಸೇನೆಯನ್ನು ಕಟ್ಟಿದ್ದರು, ಸೈನಿಕರಿಗೆ ಸಂಬಳವನ್ನು ನೀಡುತ್ತಿದ್ದರು ಆ ಸಂಬಳ ಅತಿ ಕಡಿಮೆ 80 ರೂಪಾಯಿಗಳಿಂದ ಪ್ರಾರಂಭವಾದರೆ ಆ ಹಣವನ್ನು ಸಹ ಸೈನಿಕರು ಜೀವನಾವಶ್ಯಕತೆಗೆ ಮಾತ್ರ ಬಳಸಿ ಉಳಿದ ಹಣವನ್ನು ಸೈನ್ಯದ ನಿಧಿಗೆ ಸಮರ್ಪಿಸುತ್ತಿದ್ದರು, ಸೈನಿಕರಿಗೆ ಸಮವಸ್ತ್ರ ಹುದ್ದೆಗೆ ತಕ್ಕಂತೆ ಬ್ಯಾಡ್ಜ್ ನೀಡಿದ್ದರು ಯುದ್ಧದ ರೂಪುರೇಷೆ ತಯಾರಿಸಲು “ವಾರ್ ಕೌನ್ಸಿಲ್” ಸ್ಥಾಪನೆಯಾಗಿತ್ತು, ತಮ್ಮದೇ ಆದ ಬ್ಯಾಂಕ್ ಸ್ಥಾಪನೆ ಮಾಡಿದ್ದರು ಹಾಗೆಯೇ ಆಕ್ರಮಿತ ಪ್ರದೇಶಗಳ ಆಡಳಿತ ನಡೆಸಲು “ಅಜಾದ್ ಹಿಂದ್ ದಳ” ಎಂಬ ಇಲಾಖೆ ಏರ್ಪಾಟು ಆಗಿತ್ತು, ಜೊತೆ ಜೊತೆಗೆ ನೇತಾಜಿಯವರು ಬಹಳ ಎಚ್ಚರಿಕೆಯ ಹೆಜ್ಜೆ ಸಹ ಇಟ್ಟಿದ್ದರು. ಅವರು ಜಪಾನ್ ಸೈನಿಕರ ಕಮಾಂಡರ್ ಜನರಲ್ ಕೂಬೇ ರವರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದರು, ಈ ಒಪ್ಪಂದದ ಪ್ರಕಾರ “ಯುದ್ಧ ಮಾಡಿ ಜಯಿಸಿ ಆಗಲಿ ಅಥವಾ ಬೇರೆ ವಿಧವಾಗಿ ಆಗಲಿ ಹಿಂದೂಸ್ತಾನದ ಯಾವುದೇ ಭಾಗವನ್ನು ಆಕ್ರಮಿಸಿದರೂ ಅದು ಅಜಾದ್ ಹಿಂದ್ ಫೌಜಿನ ಸೈನ್ಯದಿಂದ ಜಯಿಸಿರಲಿ ಇಲ್ಲವೇ ಜಪಾನಿನ ಸೈನಿಕರಿಂದ ಜಯಿಸಿರಲಿ ಅದನ್ನು ಅಜಾದ್ ಹಿಂದ್ ಫೌಜಿನ ಆಡಳಿತಕ್ಕೆ ನೀಡಬೇಕು” ಹಾಗೇಯೇ ಫೌಜಿನ ಸಿಪಾಯಿಗಳು ಮಾತ್ರ ಮೊದಲು ಭಾರತದ ಭೂ ಪ್ರದೇಶಕ್ಕೆ ಕಾಲಿಡಬೇಕು. ಭಾರತದಲ್ಲಿ ತ್ರಿವರ್ಣ ಧ್ವಜ ಮಾತ್ರ ಹಾರಾಡಬೇಕು, ಭಾರತದ ಯಾವುದೇ ಆಸ್ತಿಗೆ ಹಾನಿ ಮಾಡಬಾರದು, ಭಾರತದ ಸ್ತ್ರೀಯರನ್ನು ಗೌರವಿಸಬೇಕು ಅನುಚಿತ ವರ್ತನೆ ಮಾಡಬಾರದು ಹಾಗೇನಾದರೂ ಜಪಾನ್ ಸೈನಿಕರು ಮಾಡಿದಲ್ಲಿ ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಅಜಾದ್ ಹಿಂದ್ ಫೌಜಿನ ಸಿಪಾಯಿಗಳಿಗೆ ಆದೇಶ ನೀಡಿದ್ದರು. ಈ ಎಲ್ಲಾ ಷರತ್ತುಗಳಿಗೂ ಜಪಾನಿಯರು ಒಪ್ಪಿದ್ದರು ಅದರಂತೆ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಬ್ರಿಟೀಷರ ಆಳ್ವಿಕೆಯಿಂದ ವಿಮುಕ್ತಗೊಳಿಸಿ ಅದರ ಆಡಳಿತವನ್ನು ಅಜಾದ್ ಹಿಂದ್ ಫೌಜಿನ ಆಡಳಿತಕ್ಕೆ ಒಳಪಡಿಸಿದರು ಮತ್ತು ಕೊಹಿಮಾ ಮತ್ತು ಇಂಪಾಲದ ಸುಮಾರು 200 ಚದರ ಮೈಲಿ ಭೂ ಪ್ರದೇಶವನ್ನು ನೇತಾಜಿಯವರ ಸೈನ್ಯ ಬ್ರಿಟೀಷರ ವಿರುದ್ಧ ವೀರೋಚಿತವಾಗಿ ಹೋರಾಡಿ ಜಯಿಸಿತ್ತು. ನಿಜವಾಗಿಯೂ ಭಾರತದ ಸ್ವಲ್ಪ ಭಾಗದ ಭೂಪ್ರದೇಶವಾದರೂ ಮೊಟ್ಟ ಮೊದಲು ಸ್ವಾತಂತ್ರ್ಯ ಪಡೆಯಿತು ಎಂದರೆ ಅದು ಫೌಜಿನ ಸೈನಿಕರು ಹರಿಸಿದ ರಕ್ತದ ಫಲ.
   ತಿನ್ನಲು ಆಹಾರವಿಲ್ಲದೆ, ಆಹಾರ ಸಾಮಗ್ರಿಗಳ ಅಭಾವದಿಂದಾಗಿ ಜಪಾನ್ ಸೈನಿಕರು ಯುದ್ಧಮಾಡದೆ ಹಿಂತಿರುಗಿದಾಗ ಅಜಾದ್ ಫೌಜಿನ ಸೈನಿಕರು ತಮಗೆ ತಿನ್ನಲು ಅನ್ನವಿಲ್ಲದಿದ್ದರೂ ಸರಿ ಗುಡ್ಡೆ ಗೆಣಸು ತಿಂದು ಹೋರಾಡಲು ಆಯುಧಗಳು ಇರದಿದ್ದರೂ ಸರಿ ತೋಳ್ಬಲದಿಂದ ಹೋರಾಡುತ್ತಿದ್ದರು. ಯುದ್ಧದಿಂದ ಗಾಯಗಳಾಗಿದ್ದರೂ ಸರಿ ಲೆಕ್ಕಿಸದೆ ಹೋರಾಡಿ ಹುತಾತ್ಮರಾಗುತ್ತಿದ್ದರು ಒಬ್ಬೊಬ್ಬ ಸಿಪಾಯಿಯು ಏಕಕಾಲದಲ್ಲಿ ಬ್ರಿಟೀಷರ ಏಳು ಮಂದಿ ಸೈನಿಕರೊಂದಿಗೆ ಹೋರಾಡುತ್ತಿದ್ದರು. ಅವರ ದೇಶ ಭಕ್ತಿ ವೀರಾವೇಶ ನೋಡಿ ಜಪಾನಿಯರು ಅಚ್ಚರಿಪಟ್ಟಿದ್ದರು. ಇಂತಹ ಸಮಯದಲ್ಲಿಯೇ ಜಪಾನಿನ ಮೇಲೆ ಅಮೇರಿಕಾ ಅಣುಬಾಂಬ್ ದಾಳಿ ಮಾಡಿತು ಇದರಿಂದ ವಿಚಲಿತರಾದ ಜಪಾನಿಯರು ಯುದ್ಧದಿಂದ ಹಿಂದೆ ಸರಿದರು ಮತ್ತು ದಿನಾಂಕ:17-08-1945 ರಂದು ಜಪಾನಿಯರು ಸಂಪೂರ್ಣ ಶರಣಾದರು, ಮತ್ತೊಂದೆಡೆ ರಷ್ಯಾದ ರೆಡ್ ಆರ್ಮಿ ಜರ್ಮನಿಯ ಸೈನ್ಯವನ್ನು ಸೋಲಿಸಿತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಷ್ಯಾದ ಸಹಾಯ ಬಯಸಿ ದಿನಾಂಕ:18-08-1945 ರಂದು ನೇತಾಜಿಯವರು ಜಪಾನಿನ ಯುದ್ಧವಿಮಾನದಲ್ಲಿ ಮಂಚೂರಿಯಾಗೆ ಹೊರಟರು ಆ ವಿಮಾನ ತೈಪೆಯಲ್ಲಿ ಅಪಘಾತಕ್ಕೀಡಾಯಿತು. ನೇತಾಜಿಯವರು ಆ ಅಪಘಾತದಲ್ಲಿ ತೀರಿಕೊಂಡರು ಎಂದು ಹೇಳುವವರು ಕೆಲವರಾದರೆ ಇನ್ನೂ ಬದುಕಿದ್ದಾರೆ ಎನ್ನುವವರು ಹೆಚ್ಚು. ಹೌದು ನಿಜವಾಗಿಯೂ ನೇತಾಜಿಯವರು ಇಂದಿಗೂ ಭಾರತೀಯರ ಹೃದಯಗಳಲ್ಲಿ ಜೀವಂತವಾಗಿದ್ದಾರೆ. ಈ ರೀತಿ ಭಾರತಕ್ಕೆ ಸತ್ಯಾಗ್ರಹದ ಬದಲಾಗಿ ಯುದ್ಧದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂದು ಕಟ್ಟಿದ ಸೈನ್ಯ ತನ್ನ ರಕ್ತ ಚೆಲ್ಲಿ ತಾಯಿಗೆ ತಿಲಕವಿಟ್ಟು ಅಸ್ತಂಗತವಾಯಿತು.
  ನಾವು ಇಂದು 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ ಇಂತಹ ಸುಸಂದರ್ಭದಲ್ಲಿ ನಾವು ಕೇವಲ ಕೆಲವೇ ಕೆಲವು ಹೋರಾಟಗಾರರ ಬಗ್ಗೆ ಮಾತ್ರ ಗಮನ ಹರಿಸದೆ ನಮಗಾಗಿ ವಿದೇಶದಲ್ಲಿ ಸೈನ್ಯ ಕಟ್ಟಿ ಸೈನ್ಯಕ್ಕಾಗಿ ಸರ್ವತ್ಯಾಗವನ್ನು ಮಾಡಿ ಭಾರತದ ಬಂಧ ವಿಮೋಚನೆಗಾಗಿ ವೀರೋಚಿತವಾಗಿ ಹೋರಾಡಿ ರಕ್ತ ಚೆಲ್ಲಿದ ಮಹನೀಯರನ್ನು ಇಂದು ಸ್ಮರಿಸಬೇಕಾಗಿದೆ. ಏಕತೆಗೆ ಭಂಗ ತರುವ ಅನವಶ್ಯಕ ವಿಚಾರಗಳನ್ನು ವೈಭವೀಕರಿಸದೆ ಸ್ವಾತಂತ್ರ್ಯ ಪಡೆಯುವಲ್ಲಿ ನಡೆದ ಮಹನೀಯರ ಬಲಿದಾನ ಪರಿಶ್ರಮವನ್ನು ಸ್ಮರಿಸಬೇಕಾಗಿದೆ ಹಾಗೂ ಅವರ ಆಶಯದಂತೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ವಿಶ್ವಗುರುವಾಗಿಸಬೇಕಾಗಿದೆ.
ರಚನೆ: ಬಿ.ಆರ್.ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ

Leave a Reply

Your email address will not be published. Required fields are marked *

You missed

error: Content is protected !!