- ಶಸ್ತ್ರಚಿಕಿತ್ಸೆ ಹಣ ಪಾವತಿಸದ್ದಕ್ಕೆ ಡಿಸ್ಚಾರ್ಜ್ ಮಾಡದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸಂಸದ ಮುನಿಸ್ವಾಮಿ
ಕೋಲಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೋರ್ವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಬಿಲ್ ಪಾವತಿಸಲಾಗದ ಕಾರಣ ಆಸ್ಪತ್ರೆ ಆಡಳಿತ ಮಂಡಳಿ ಡಿಸ್ಚಾರ್ಜ್ ಮಾಡುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿದ ಸಂಸದ ಎಸ್.ಮುನಿಸ್ವಾಮಿ ಸದರಿ ಆಸ್ಪತ್ರೆಗೆ ತೆರಳಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೋಲಾರ ನಗರದ ವಂಶೋದಯ ಆಸ್ಪತ್ರೆಯಲ್ಲಿ ಅಮರುಲ್ಲಾ ಎಂಬಾತ ಕ್ಯಾನ್ಸರ್ ಸಂಬಂಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಬಿಲ್ ಪಾವತಿಸಿರದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲು ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದ ಕೂಡಲೇ ಆಸ್ಪತ್ರೆಗೆ ತೆರಳಿದ ಸಂಸದರು, ೫೦ ಸಾವಿರರೂ ಆರ್ಥಿಕ ನೆರವು ನೀಡಿದರು.
ಬಿಲ್ ೫೪ ಸಾವಿರರೂ ಆಗಿದೆ. ಅವರು ನಮಗೆ ಹಣವನ್ನು ಕಟ್ಟುತ್ತೇವೆ ಎಂದು ಹೇಳಿದ್ದರೇ ಹೊರತು ಇಲ್ಲವೆಂದು ಹೇಳಿರಲಿಲ್ಲ. ನಮ್ಮ ಗಮನಕ್ಕೆ ತಂದಿದ್ದರೆ ಚಾರಿಟಿಯಲ್ಲಿನ ಹಣ ಬಳಕೆ ಮಾಡಿಕೊಳ್ಳುತ್ತಿವು. ಬಿಲ್ ಮೊತ್ತವನ್ನು ಇನ್ನೂ ಕಡಿಮೆ ಮಾಡಲಾಗುವುದಾಗಿ ಆಸ್ಪತ್ರೆಯವರು ಸಂಸದರಿಗೆ ತಿಳಿಸಿದರು. ಆ ಹಣವನ್ನು ರೋಗಿಗೆ ನೀಡಿ ಕಳುಹಿಸುವಂತೆ ಸಂಸದರು ಸೂಚಿಸಿದರು. ಅಲ್ಲದೆ ಇದೇ ವೇಳೆ ಮತ್ತೋರ್ವ ರೋಗಿ ಸಯ್ಯದ್ ಇಸ್ಮಾಯಿಲ್ ಎಂಬುವರಿಗೂ ೪೦ ಸಾವಿರರೂ ಆರ್ಥಿಕ ನೆರವು ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಮುನಿಸ್ವಾಮಿ, ಯಾರೇ ಬಡವರು ಬಂದರೆ ಚಿಕಿತ್ಸೆ ನೀಡಬೇಕು. ಈ ಪ್ರಕರಣದಲ್ಲಿ ಬಂದ ಕೂಡಲೇ ರೋಗಿಗೆ ಚಿಕಿತ್ಸೆ ನೀಡಿರುವುದು ದೊಡ್ಡತನ. ಆದರೆ, ಡಿಸ್ಚಾರ್ಜ್ ಮಾಡಿದ್ದರೆ ಇನ್ನೂ ದೊಡ್ಡತನ ಕಾಣುತ್ತಿತ್ತು. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.
ಇಂತಹ ಸಂದರ್ಭಗಳಲ್ಲಿ ಚಾರಿಟಿ ಬಳಸಿಕೊಳ್ಳಲಿ ಅಲ್ಲದೆ, ನಮ್ಮಿಂದಲೂ ಆದಷ್ಟು ಸಹಾಯ ಮಾಡಲಾಗುವುದು. ಇಂತಹ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರಮೋದಿ ಅನೇಕ ಯೋಜನೆಗಳನ್ನು ತಂದಿದ್ದಾರೆ.
ರೋಗಿಗಳ ಕಡೆಯವರು ಹಣ ಕಟ್ಟಿಲ್ಲವೆನ್ನುವ ಕಾರಣಕ್ಕಾಗಿ ಈ ರೀತಿ ತೊಂದರೆ ಕೊಡುವ ಕೆಲಸಗಳು ಎಲ್ಲಿಯೂ ಆಗಬಾರದು. ಇದರಿಂದಾಗಿ ಆಸ್ಪತ್ರೆಗಳಿಗೆ ಅಲ್ಲದೆ ಕೋಲಾರ ಜಿಲ್ಲೆಯ ಬಗ್ಗೆಯೂ ಕೆಟ್ಟ ಸಂದೇಶ ಹೋಗುತ್ತದೆ. ಹಾಗಾಗಿ ಆಸ್ಪತ್ರೆಗಳಿಗೆ ಹಣವೇ ಮುಖ್ಯವೆಂದುಕೊಳ್ಳದೆ ನಂಬಿಕೆ, ಮಾನವೀಯತೆಗಳನ್ನು ಉಳಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮುಖಂಡರಾದ ಬೆಗ್ಲಿ ಸಿರಾಜ್, ಜಮೀನ್ ಉಲ್ಲಾ ನವೀದ್, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಮತ್ತಿತರರಿದ್ದರು.