• Sat. Mar 2nd, 2024

ಒಂದು ತಿಂಗಳ ಒಳಗೆ ಯರೋಳ್ ಡ್ಯಾಂ ನೀರು ಸರಬರಾಜು:ಶಾಸಕ ಎಸ್.ಎನ್.

PLACE YOUR AD HERE AT LOWEST PRICE

ಯರಗೋಳ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಡ್ಯಾಂನಲ್ಲಿನ ನೀರನ್ನು ಪಟ್ಟಣದ ನಾಗರೀಕರಿಗೆ ತಲುಪಿಸುವ ಕಾರ್ಯವನ್ನು ಮುಂದಿನ ಒಂದು ತಿಂಗಳಲ್ಲಿ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯರಗೋಳ್ ಡ್ಯಾಂನಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದರು.

ಪಟ್ಟಣದ ಡಬಲ್ ರಸ್ತೆ ಇತ್ತೀಚಿನ ದಿನಗಳಲ್ಲಿ ಬಿದ್ದ ಮಳೆಯಿಂದ ಕಿತ್ತು ಹೋಗಿದ್ದು, ಮುಂದಿನ ವಾರದಿಂದ ಸ್ವಂತ ಖರ್ಚಿನಿಂದ ಡಾಂಬರೀಕರಣ ಕಾರ್ಯವನ್ನು ಮಾಡುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಒಳಚರಂಡಿ, ವೈಟ್ ಟ್ಯಾಪಿಂಗ್ ಸಿಮೆಂಟ್ ರಸ್ತೆಗಳು ಮಾಡಲಗುವುದು ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ತಾಲ್ಲೂಕಿಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ಬಿಸಿಎಂ ಹಾಸ್ಟೆಲ್, ಜನರಲ್ ಹಾಸ್ಟೆಲ್, ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್, ದೇವರಾಜ ಅರಸು ಹಾಸ್ಟೆಲ್, ಆದರ್ಶ ಶಾಲೆ ಸೇರಿದಂತೆ ಹಲವು ವಿದ್ಯಾರ್ಥಿನಿಲಯಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ.

ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸಂಕೀರ್ಣ, ಹುಣಸನಹಳ್ಳಿ ರೈಲ್ವೆ ಬಿಡ್ಜ್, ಡಬಲ್ ರಸ್ತೆ ಮೊದಲಾದವನ್ನು ನಿರ್ಮಿಸಲು ನೆರವು ನೀಡಿದರು. ಈ ಹಿಂದೆ ಪಟ್ಟಣದ ಕೆಸಿ ರೆಡ್ಡಿ ಕಾಲೇಜಿನಲ್ಲಿ ಕೇವಲ 400 ಮಂದಿ ವಿದ್ಯಾರ್ಥಿಗಳಿದ್ದು, ಈಗ ಸಾವಿರಾರು ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನಾನು ಶಾಸಕನಾದ ಬಳಿಕ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ಸುಮಾರು 86 ಪ್ರೌಢ ಶಾಲೆಗಳನ್ನು ನಿರ್ಮಾಣ ಮಾಡಿದ್ದೇನೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದೇನೆ ಎಂದರು.

 

ಪಟ್ಟಣದ ಒಬ್ಬಟ್ಲು ಕೆರೆ ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಹಿಂದಿನ ಸರ್ಕಾರದಲ್ಲಿಅನುಮತಿಯನ್ನು ಪಡೆದುಕೊಳ್ಳಲಾಗಿದ್ದು, 1962ರಲ್ಲಿಯೇ ದಾಖಲೆಗಳಲ್ಲಿ ಪುರಸಭೆ ಸೊತ್ತು, ನಿವೇಶನ ಎಂದು ನಮೂದಾಗಿದೆ. ವಾಸ್ತವವಾಗಿ ಒಬ್ಬಟ್ಟು ಕೆರೆ ಜಾಗದಲ್ಲಿ ಈ ಹಿಂದೆಯೂ ಕೆರೆ ಇರಲಿಲ್ಲ.

1988ರವರೆಗೆ ಆ ಜಾಗವನ್ನು ಕನ್ನಡ ಸಂಘ, ಪರಿಶಿಷ್ಟ ಜಾತಿ ಹಾಸ್ಟೆಲ್‍ಗೆ, ಅಲ್ಪಸಂಖ್ಯಾತರ ಹಾಸ್ಟೆಲ್, ತೋಟಗಾರಿಕಾ ಇಲಾಖೆ ಕಚೇರಿ, ಮದರಸಾ, ಸೇರಿದಂತೆ ಸರ್ಕಾರವೇ ಅನೇಕ ಇಲಾಖೆಗಳ ಕಟ್ಟಡಗಳಿಗೆ ಆ ಜಾಗವನ್ನು ಮಂಜೂರು ಮಾಡಿದೆ.

ಸರ್ಕಾರವೇ ನಿರ್ಮಿತಿ ಕೇಂದ್ರದ ವತಿಯಿಂದ 2 ಕೋಟಿ ರೂಗಳ ವೆಚ್ಚದಲ್ಲಿ ಭವನ ನಿರ್ಮಾಣ ಕಾರ್ಯಾದೇಶವನ್ನು ನೀಡಿದ್ದು ಈ ವಾರದಲ್ಲಿ ಹಣವನ್ನು ಬಿಡುಗಡೆ ಮಾಡಿಸಲಾಗುವುದು ಏನೇ ಆಗಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಿಯೇ ತೀರುವುದಾಗಿ ಪ್ರಮಾಣ ಮಾಡುವುದಾಗಿ ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೆಲ್ವಮ್ಮ, ಡಾ.ನಂಜುಂಡಪ್ಪ, ಪರಿಸರ ಪ್ರೇಮಿ ವೆಂಕಟೇಶಪ್ಪ, ಎಸ್‍ಡಿಸಿ ಶಾಲೆ ಶಿಕ್ಷಕ ಶಂಕರ್, ಸಮಾಜ ಸೇವಕ ಮುನಿನಾರಾಯಣಪ್ಪ, ಬೋಧನೆ ವೈ.ವಿ.ರಮೇಶ್, ಪೌರಕಾರ್ಮಿಕರಾದ ಆದಿಲಕ್ಷ್ಮಿ, ವೆಂಕಟೇಶಪ್ಪ, ಸ್ಟಾಫ್ ನರ್ಸ್ ಸವಿತಾ, ಡಿ ಗ್ರೂಪ್ ಸಿಬ್ಬಂದಿ ಪದ್ಮಮ್ಮ, ಅರ್ಚಕ ಹರೀಶ್, ರೈತ ಮಹಿಳೆ ಕೊಂಗನಹಳ್ಳಿ ಶಿಲ್ಪ, ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಗಾಯತ್ರಿ, ಕ್ಯೂಬಿಕ್ ಯುಕ್ತಾ, ಸತೀಶ್‍ಕುಮಾರ್, ಕುಸುಮ ಸೇರಿದಂತೆ 16 ಮಂದಿ ಸಾಧಕರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜೀವಿಕ ರಾಮಚಂದ್ರ ಮತ್ತು ಕಲಾವಿದ ಯಲ್ಲಪ್ಪ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಪುರಸಭಾ ಅಧ್ಯಕ್ಷೆ ಫರ್ಜಾನಾ ಸುಹೇಲ್, ಉಪಾಧ್ಯಕ್ಷೆ ಶಾರದಾ, ತಹಸೀಲ್ದಾರ್ ಎಂ.ದಯಾನಂದ, ಇಒ ವೆಂಕಟೇಶಪ್ಪ, ಪಿಆರ್‍ಇಡಿ ಎಇಇ ಶೇಷಾದ್ರಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಅಪ್ಪಯ್ಯಗೌಡ ಬಿಇಒ ಸುಖನ್ಯ, ಪೊಲೀಸ್ ಇನ್ಸ್ ಪೆಕ್ಟರ್ ಸಮಜೀವರಾಯಪ್ಪ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!