10 ವರ್ಷಗಳ ಹಿಂದೆ ಬರಗಾಲದ ವೇಳೆ ಕುಡಿಯುವ ನೀರಿಗೂ ಆಹಾಕಾರವಿತ್ತು. ಆಗ ನಾನು ಸೋತರು ಜನತೆ ನನಗೆ ಕೊಟ್ಟ ಪ್ರೀತಿ ವಾತ್ಸಲ್ಯಕ್ಕೆ ಬದ್ಧನಾಗಿ ನನ್ನ ಸ್ವಂತ ಹಣದಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಒದಗಿಸಿದ್ದೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಅವರು ಬಂಗಾರಪೇಟೆ ತಾಲ್ಲೂಕಿನ ಹುಲಿಬೆಲೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕ್ಷೇತ್ರದಾದ್ಯಂತ ಯಾವುದೇ ತಾರತಮ್ಯವಿಲ್ಲದೆ ಪ್ರತಿ ಗ್ರಾಮ ಮತ್ತು ವಾರ್ಡ್ ಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ಆದರೆ ಈ ಕ್ಷೇತ್ರದವರಲ್ಲದ ಮಲ್ಲೇಶ್ ಬಾಬು ಇತ್ತೀಚಿಗೆ ಹುಲಿಬೆಲೆ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮದಲ್ಲಿ ಶಾಸಕರು ಅಭಿವೃದ್ಧಿ ಮಾಡಿಲ್ಲ. ಚುನಾವಣೆಗೆ ಮಾತ್ರ ಬರುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದು ಸರಿಯಲ್ಲ ಎಂದರು.
ನಾನು ಶಾಸಕನಾದ ನಂತರ ಹುಲಿಬೆಲೆ ಗ್ರಾಮದ ಎಲ್ಲಾ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿವೆ. ಹೈಮಾಸ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ರೈತರಿಗೆ 8ಕ್ಕೂ ಹೆಚ್ಚು ಕೊಳವೆ ಬಾವಿಗಳ ಮಂಜೂರು, ಟೇಕಲ್ ಮುಖ್ಯರಸ್ತೆಯಿಂದ ನೆತ್ತಿಬೆಲೆ ಗ್ರಾಮದವರಿಗೆ ಡಾಂಬರೀಕರಣ.
ಮಾದರಿ ರಂಗಮಂದಿರ, 1.5 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ, ಸ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗಿದೆ. ಚುನಾವಣೆ ವೇಳೆ ಬಂದು ಸುಳ್ಳು ಹಬ್ಬಿಸುವ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಜೆಡಿಎಸ್ ಮಲ್ಲೇಶ್ ಬಾಬುರನ್ನ ನಂಬಬೇಡಿ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡ ದೇಶಿಹಳ್ಳಿ ವೆಂಕಟರಾಮಪ್ಪ, ರಾಮಕೃಷ್ಣ, ವೆಂಕಟೇಶ್, ಹೆಚ್.ಕೆ.ನಾರಾಯಣಸ್ವಾಮಿ, ಚಿಕ್ಕ ಅಂಕಂಡಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ ಹರೀಶ್ ಮೊದಲಾದವರಿದ್ದರು.