ಸ್ಥಳೀಯ ಅಭ್ಯರ್ಥಿಗಳಿಗೆ ಜನರ ಸಮಸ್ಯೆಗಳ ಅರಿವು ಇರುವುದರಿಂದ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಹೇಳಿಕೊಳ್ಳಲು ಅವಕಾಶ ಇರುವುದರಿಂದ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸ್ಥಳೀಯ ಅಭ್ಯರ್ಥಿಗೆ ಮತ ನೀಡುವಂತೆ ಬಿಜೆಪಿ ಮುಖಂಡ ಡಾ. ಅರಿವಳಗನ್ ಮನವಿ ಮಾಡಿದರು.
ನಗರದ ಅಂಬೇಡ್ಕರ್ ನಗರದಲ್ಲಿನ ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದರೂ, ಸ್ಪರ್ಧಿಸದೆ
ಇದ್ದರು ಮತದಾರರು ಸ್ಥಳೀಯ ಅಭ್ಯರ್ಥಿಗೆ ಮತ ನೀಡಬೇಕೆಂದರು.
ಕೆಜಿಎಫ್ ವಿಧಾನಸಭೆ ಕ್ಷೇತ್ರದ ಪರಿಸ್ಥಿತಿ ಅಧೋಗತಿಗೆ ತಲುಪಿದೆ, ಅದರಲ್ಲೂ ಆರೋಗ್ಯ ಕ್ಷೇತ್ರವನ್ನು ಹೇಳುವರು ಕೇಳುವರು ಇಲ್ಲದಂತಹ ಪರಿಸ್ಥಿತಿ ಇದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗಿದೆ.
ಆದರೆ ರೋಗಿಗಳ ಸೇವೆಗೆ ಅಗತ್ಯವಾಗಿ ಬೇಕಿರುವ ಸವಲತ್ತುಗಳು ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕರಾಗಿರುವ ರೂಪಕಲಾ ಶಶಿಧರ್ ರವರ ತಂದೆ 35 ವರ್ಷಗಳ ಕಾಲ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ ಆಡಳಿತ ನಡೆಸಿದ್ದರು. ಆದರೆ ಗಡಿಭಾಗದಲ್ಲಿರುವ ಕೆಜಿಎಫ್ ವಿಧಾನಸಭೆ ಕ್ಷೇತ್ರಕ್ಕೆ ಒಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಲು ಸಾಧ್ಯವಾಗಲಿಲ್ಲ, ಇನ್ನು ಈಗ ಮಾಡಲು ಸಾಧ್ಯವಿದೆಯೇ ಎಂಬುದನ್ನು ಮತದಾರರು ಚಿಂತಿಸಬೇಕು ಎಂದರು.
ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ತೆರಳಿದರೆ, ದೂರದ ಕೋಲಾರ, ಬೆಂಗಳೂರು ನಗರಕ್ಕೆ ಹೋಗುವಂತೆ ಶಿಫಾರಸ್ಸು ಮಾಡುತ್ತಾರೆ. ಆದ್ದರಿಂದ ಮತದಾರರು ಜಯದೇವ ಆಸ್ಪತ್ರೆಯ ಒಂದು ವಿಭಾಗ ಇಲ್ಲಿ ಪ್ರಾರಂಭಿಸುವ ಅಭ್ಯರ್ಥಿಗೆ ಮತ ನೀಡಿ, ಅದರಲ್ಲೂ ಕೆಜಿಎಫ್ ವಿಧಾನಸಭೆ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗೆ ಮತ ನೀಡುವಂತೆ ಮನವಿ
ಮಾಡಿದರು.
ಮಧ್ಯಪಾನ ಹಾಗೂ ಧೂಮಪಾನಗಳ ಸೇವನೆಯಿಂದ ಹೃದಯಘಾತ ಪ್ರಕರಣಗಳು ಇಂದು ಅಧಿಕವಾಗುತ್ತಿದೆ.
ಪ್ರತಿಯೊಬ್ಬರು ನಿಯಮಿತವಾಗಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದರು.
ಇದರಿಂದ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಲಿದೆ ಎಂದರು. ಅಗ್ನಿಶಾಮಕ ದಳದ ಅಧಿಕಾರಿ ನಾಗರಾಜ್, ಸಮಾಜ ಸೇವಕ ಗುರುಶ್ರೀ ಇತರರು ಹಾಜರಿದ್ದರು.