• Fri. Mar 29th, 2024

ಕೆ.ಶ್ರೀನಿವಾಸಗೌಡರು ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು, ಶಾಸಕ ಸ್ಥಾನವನ್ನು ಹಣ ಹಾಗೂ ಎಂಎಲ್‌ಸಿ ಆಗುವ ದುರಾಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಡ ಇಟ್ಟಿದ್ದಾರೆ : ಇಂಚರ ಗೋವಿಂದರಾಜು 

PLACE YOUR AD HERE AT LOWEST PRICE

ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಸೇರಿದಂತೆ ಮಹಾನ್ ನಾಯಕರನ್ನು ನೀಡಿದ ಜಿಲ್ಲೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಕಪ್ಪುಚುಕ್ಕೆಯಂತಾಗಿದ್ದಾರೆ ಎಂದು ಎಂ.ಎಲ್ .ಸಿ ಇಂಚರ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ದೊಡ್ಡಹಸಾಳದಲ್ಲಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಭಾನುವಾರ ಅವರು ಉದ್ಘಾಟಿಸಿ ಮಾತನಾಡುತ್ತಾ ಜೆ.ಡಿ.ಎಸ್. ಪಕ್ಷದ ಮುಖಂಡರ, ಕಾರ್ಯಕರ್ತರ ಬೆವರ ಹನಿಯಿಂದ ಶಾಸಕರಾದ ಕೆ.ಶ್ರೀನಿವಾಸಗೌಡರು ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು, ಶಾಸಕ ಸ್ಥಾನವನ್ನು ಹಣ ಹಾಗೂ ಎಂಎಲ್‌ಸಿ ಆಗುವ ದುರಾಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಡ ಇಟ್ಟಿದ್ದಾರೆ. ಅಲ್ಲದೆ ಶಾಸಕರು ನಮಗೆ ಟೋಪಿ ಹಾಕಿ ಅಧಿಕಾರ ಅನುಭವಿಸಿದ್ದು, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಕೋಲಾರ ಕ್ಷೇತ್ರದಲ್ಲಿ ನಾವು ಹುಲಿ, ಟಗರಿಗೆ (ವರ್ತೂರು ಪ್ರಕಾಶ್, ಸಿದ್ದರಾಮಯ್ಯ) ಹೆದರುವುದಿಲ್ಲ. ಯಾರೂ ಸಹ ಆತಂಕ ಪಡಬೇಕಾಗಿಲ್ಲ. ಹುಲಿ ಟಗರನ್ನು ಎದುರಿಸುವ ಬಲಿಷ್ಠ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷ ಕಣಕ್ಕೆ ಇಳಿಸಿದೆ. ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೈಬಲ ಪಡಿಸಿ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದು ಕೋರಿದರು.
ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕೃಷ್ಣ ಬೈರೇಗೌಡರು ಕೆ.ಸಿ.ವ್ಯಾಲಿ ಬಗ್ಗೆ ಮಾತನಾಡಿರುವ ಹಾಗೆ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಿ ನೀಡುತ್ತೇವೆ ಎಂದು ಹೇಳಿದ್ದಾರೆ ಹೊರತು ಶಾಶ್ವತವಾಗಿ ನಿಲ್ಲಿಸುವುದಾಗಿ ಎಲ್ಲೂ ಹೇಳಿಲ್ಲ ಎಂದು ತಿಳಿಸಿ ಜಿಲ್ಲೆಗೆ ಅವರ ಕೊಡುಗೆ ಏನೆಂದು ಪ್ರಶ್ನಿಸಿದರು.ಕೃಷ್ಣಬೈರೇಗೌಡರಿಗೆ ರಾಜಕೀಯ ಭವಿಷ್ಯ ನೀಡಿದ್ದು ಜೆಡಿಎಸ್ ಪಕ್ಷ. ರಾಜಕೀಯ ದೃಢೀಕರಣದಿಂದ ಕಾಂಗ್ರೆಸ್ ಪಕ್ಷ ಸೇರಿದ್ದರೂ ದಿವಂಗತ ಬೈರೇಗೌಡರ ಮೇಲಿನ ಅಭಿಮಾನದಿಂದ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಿ ನಿಮ್ಮನ್ನು ಬ್ಯಾಟರಾಯನಪುರದಲ್ಲಿ ಗೆಲ್ಲಿಸಿದ್ದು ಕೋಲಾರದ ಜನತೆ ಎಂಬುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದರು.
ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಇದ್ದ ಗತವೈಭವ ಇಂದು ಮರುಕಳಿಸುತ್ತಿದೆ. ಬಿಜೆಪಿ ಕೋಮು ಸೌಹಾರ್ದತೆ ಕದಡುವ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಒಡಕಿನ ಪಕ್ಷವಾಗಿದೆ. ಯಾವುದೇ ಗೊತ್ತುಗುರಿಯಿಲ್ಲದ ಪಕ್ಷಗಳಿಂದ ನಿಮ್ಮಗಳ ಅಭಿವೃದ್ಧಿ ಸಾಧ್ಯವಿಲ್ಲ, ಸ್ವಾಭಿಮಾನಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪಂಚರತ್ನ ಯೋಜನೆ ಮೂಲಕ ಪಣತೊಟ್ಟಿರುವುದು ಜೆ.ಡಿ.ಎಸ್.ಪಕ್ಷದಿಂದ ಮಾತ್ರ ಸಾಧ್ಯವೆಂದರು.
ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ರಾಜಕಾರಣದಲ್ಲಿ ಲಂಚ ಮುಕ್ತ ,ಭ್ರಷ್ಟಾಚಾರ ಮುಕ್ತ ರಾಜಕಾರಣ ಮಾಡುವ ಮೂಲಕ ಕ್ಷೇತ್ರದಲ್ಲಿ ಒಂದು ಮಾದರಿ ಕ್ಷೇತ್ರವನ್ನು ಮಾಡುವ ನನ್ನದೇ ಕನಸನ್ನು ನನಸು ಮಾಡುವುದೇ ನನ್ನ ಮುಂದಿನ ಗುರಿಯಾಗಿದೆ ಎಂದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ,ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಸರಕಾರದ ಸೌಲಭ್ಯಗಳ ಜತೆಗೆ ವೈಯಕ್ತಿಕವಾಗಿಯೂ ಜನರಿಗೆ ಸೇವೆ ಒದಗುಸುವ ಕೆಲಸ ಮಾಡುತ್ತಿದ್ದಾರೆ. ಅವರು ಶಾಸಕರಾದರೆ ಕೋಲಾರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಈಗಾಗಲೇ ಜೆಡಿಎಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಜನ ಬೆಂಬಲ ಅತ್ಯಧಿಕವಾಗಿ ದೊರೆಯುತ್ತಿದ್ದು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಜಮೀರ್ ಅಹ್ಮದ್, ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್,  ಮುಖಂಡ ವಕ್ಕಲೇರಿ ರಾಮು, ಬಾಲಾಜಿ ಚನ್ನಯ್ಯ, ಬಾಬು ಮೌನಿ, ಎಲ್.ಖಲೀಲ್, ಮುಕ್ಕಡ್ ವೆಂಕಟೇಶ್, ಮುದುವಾಡಿ ಮಂಜು, ಕುರುಬರ ಸಂಘದ ಮಾಜಿ ನಿರ್ದೇಶಕ ಅಶೋಕ್, ಚಂಬೆ ರಾಜೇಶ್, ಕಲ್ಲಹಳ್ಳಿ ಹರೀಶ್, ರಾಜೇಶ್, ತಿರುಮಲೇಶ್, ಶಶಿ, ದೊಡ್ಡಹಸಾಳ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆಂಪಣ್ಣ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!