- ರಸ್ತೆ ದುರಸ್ಥಿಪಡಿಸುವ ಆಣೆ ಪ್ರಮಾಣ ಮಾಡಲು ಉಸ್ತುವಾರಿ ಮಂತ್ರಿ ಮುನಿರತ್ನಗೆ ಆಗ್ರಹ
ಕೋಲಾರ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ, ರಸ್ತೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತಸಂಘದಿಂದ ಕೋಲಾರಮ್ಮ ಕೆರೆ ಪಕ್ಕದ ಹದಗೆಟ್ಟಿರುವ ರಸ್ತೆಯಲ್ಲಿ ಜನಪ್ರತಿನಿಽಗಳ ಭಾವಚಿತ್ರ ಹಿಡಿದು ಹೋರಾಟ ಮಾಡಿ, ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಬಿಜೆಪಿ ಮುಖಂಡರು ಪಕ್ಷಾಂತರಗೊಳ್ಳಬಾರದೆಂದು ಕೋಲಾರಮ್ಮ ದೇವಿ ಮೇಲೆ ಪ್ರಮಾಣ ಮಾಡುವ ಜಿಲ್ಲಾ ಉಸ್ತುವಾರಿ ಸಚಿವರೇ, ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಂದ ಜನಸಾಮಾನ್ಯರು ಜೀವ ಕಳೆದುಕೊಳ್ಳುತ್ತಿದ್ದರೂ ಅವರ ಜೀವಕ್ಕೆ ಬೆಲೆ ಇಲ್ಲವೇ. ನಿಮ್ಮ ಅಧಿಕಾರಕ್ಕಾಗಿ ಆಣೆ ಪ್ರಮಾಣ ಮಾಡುವ ತಾವುಗಳು ಮತಬಾಂಧವರ ಸಮಸ್ಯೆಗಳಿಗೆ ಸ್ಪಂದಿಸುವ ಯಾವ ಆಣೆ ಪ್ರಮಾಣ ಮಾಡುತ್ತೀರಾ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸಚಿವರಿಗೆ ಪ್ರಶ್ನೆ ಮಾಡಿದರು.
ಮುಂಗಾರು ಮಳೆ ಅವಽಯಲ್ಲಿ ರಸ್ತೆಗಳೆಲ್ಲಾ ಕೆರೆ, ಕುಂಟೆಗಳಾಗಿ ಸಮಸ್ಯೆ ಎದುರಾದರೆ ಬೇಸಿಗೆಯಲ್ಲಿ ಅದೇ ರಸ್ತೆಗಳು ಸರಿಪಡಿಸದೆ ಧೂಳಿನಿಂದ ಜನಸಾಮಾನ್ಯರಿಗೆ ನಾನಾ ಖಾಯಿಲೆಗಳು ಆವರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾವಿರಾರು ರೂಪಾಯಿ ಸುರಿಯಬೇಕಾದ ಮಟ್ಟಕ್ಕೆ ಜಿಲ್ಲೆಯ ರಸ್ತೆಗಳು ಹದಗೆಟ್ಟಿವೆ ಎಂದು ಕಿಡಿಕಾರಿದರು.
ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಽಕಾರಿಗಳ ಮತ್ತು ಗುತ್ತಿಗೆದಾರರು ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಒಂದು ವರ್ಷದಲ್ಲೇ ಸಂಪೂರ್ಣವಾಗಿ ನಕ್ಷತ್ರಗಳಂತೆ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಆ ಗುಂಡಿಗಳನ್ನು ಮುಚ್ಚಲು ಮತ್ತೆ ಇಲಾಖೆ ಲಕ್ಷಾಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಕೊಂಡು ಗುಂಡಿಗಳನ್ನು ಮುಚ್ಚದೆ ಹಣವನ್ನು ಜೇಬಿಗೆ ಸೇರಿಸಿಕೊಂಡು ಮತ್ತೆ ಹದಗೆಟ್ಟಿದೆ ಎಂದು ಸರ್ಕಾರಕ್ಕೆ ವರದಿ ನೀಡಿ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿಕೊಂಡು ಹಳೆಯ ರಸ್ತೆಗೆ ಹೊಸ ರೂಪ ಕೊಡುವ ಬಿಲ್‌ಗಳನ್ನು ತಯಾರು ಮಾಡಿ ಹಣವನ್ನು ಲೂಟಿ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರಸ್ತೆ ನಿರ್ಮಾಣದ ಗುಣಮಟ್ಟದ ಬಗ್ಗೆ ಇಂಡಿಯನ್ ರೋಡ್ ಕೆಲವು ನಿಯಮಗಳನ್ನು ರೂಪಿಸುತ್ತದೆ. ಯಾವುದೇ ರಸ್ತೆ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುವುದಿಲ್ಲವೋ ಆ ಗುತ್ತಿಗೆದಾರರು ನಿಯಮಗಳ ಪ್ರಕಾರ ರಸ್ತೆ ಅಭಿವೃದ್ಧಿ ಮಾಡಿರುವುದಿಲ್ಲ. ನಿಯಮಗಳನ್ನು ಪಾಲಿಸಿದರೆ ಕನಿಷ್ಠ ಪಕ್ಷ ರಸ್ತೆ ೧೦ ವರ್ಷ ಬಾಳಿಕೆಗೆ ಬರುತ್ತದೆ. ಆದರೆ, ೪೦ ಪರ್ಸೆಂಟ್ ಕಮೀಷನ್‌ನಿಂದಾಗಿ ರಸ್ತೆಗಳು ಹಾಳಾಗುತ್ತಿವೆ ಎಂದು ದೂರಿದರು.
ಯಾವುದೇ ಹದಗೆಟ್ಟ ರಸ್ತೆಯಲ್ಲಿ ದುರಂತ ಸಂಭವಿಸಿದರೆ ಅದಕ್ಕೆ ಕಾರಣ ಗುತ್ತಿಗೆದಾರರ ಹಾಗೂ ಅಕಾರಿಗಳ ಬೇಜವಾಬ್ದಾರಿ ಆದ ಕಾರಣ ರಸ್ತೆಯಲ್ಲಿ ಮೃತಪಟ್ಟ ಸಂತ್ರಸ್ತರಿಗೆ ರಸ್ತೆ ನಿರ್ವಹಣೆ ಹೊತ್ತವರೇ ಪರಿಹಾರ ನೀಡಬೇಕೆಂಬ ಹೈಕೋರ್ಟ್ ಆದೇಶ ಜಾರಿಯಾಗಬೇಕು ಎಂದು ಆಗ್ರಹಿಸಿದರು.
೪೮ ಗಂಟೆಯಲ್ಲಿ ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ ಜನಸಾಮಾನ್ಯರ ಅಮೂಲ್ಯ ಜೀವ ಉಳಿಸುವ ಜೊತೆಗೆ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕು. ಇಲ್ಲವಾದರೆ ಹದಗೆಟ್ಟಿರುವ ರಸ್ತೆಗಳಲ್ಲಿ ಜನಪ್ರತಿನಿಗಳ ಹಾಗೂ ಅಧಿಕಾರಿಗಳ ಭೂತ ದಹನ ಮಾಡುವ ಮೂಲಕ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ.
ಆಗ ಆಗುವ ಅನಾಹುತಗಳಿಗೆ ಲೋಕೋಪಯೋಗಿ ಇಲಾಖೆ ಅಽಕಾರಿಗಳೇ ನೇರ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಅಭಿಯಂತರರು ಚಂದ್ರಶೇಖರ್, ರವಿಕುಮಾರ್ ಮುಂಗಾರು ಮಳೆಯಿಂದ ಜಿಲ್ಲೆಯ ರಸ್ತೆಗಳು ಹಾಳಾಗಿವೆ ಸರ್ಕಾರಕ್ಕೆ ಅನುದಾನಕ್ಕಾಗಿ ಪತ್ರ ಬರೆದಿದ್ದೇವೆ. ಅನುದಾನ ಬಂದ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಫಾರೂಖ್‌ಪಾಷ, ಬಂಗಾರಿ ಮಂಜು, ವೆಂಕಟೇಶಪ್ಪ, ಕುವ್ವಣ್ಣ, ಗೋವಿಂದಪ್ಪ, ಮಾಸ್ತಿ ವೆಂಕಟೇಶ್, ಮುನಿರಾಜು, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ಕಿರಣ್, ಹರೀಶ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಕೋಟೆ ಶ್ರೀನಿವಾಸ್, ಮಂಜುಳಮ್ಮ, ಯಾರಂಘಟ್ಟ ಗಿರೀಶ್, ಬಾಬು, ವಿಜಯ್‌ಪಾಲ್, ಭಾಸ್ಕರ್ ಮುಂತಾದವರಿದ್ದರು.