• Thu. Apr 25th, 2024

PLACE YOUR AD HERE AT LOWEST PRICE

  • ಮೂರು ಮದುವೆಗಳನ್ನು ಒಟ್ಟಿಗೆ ಆಗಿಲ್ಲ, ಒಬ್ಬೊಬ್ಬರಿಗೆ ವಿಚ್ಛೇದನ ನೀಡಿಯೇ ಆಗಿದ್ದೇನೆ – ಪವನ್ ಕಲ್ಯಾಣ್
  • ಪವನ್ ಕಲ್ಯಾಣ್‌ರ ಮೂರು ಮದುವೆಗಳ ಕುರಿತು ಟೀಕಿಸುವವರು ಬೀದಿ ನಾಯಿಗೆ ಸಮ – ಬಾಲಕೃಷ್ಣ

ಬೆಳ್ಳಿ ತೆರೆಯ ಮೇಲೆ ವಿಲನ್‌ಗಳ ಮುಂದೆ ತೊಡೆ ತಟ್ಟಿ ಘರ್ಜಿಸುವುದು ನಂದಮೂರಿ ಬಾಲಕೃಷ್ಣರ ಜನಪ್ರಿಯ ಮ್ಯಾನರಿಸಂ. ಅಹಾ ಆಪ್ ಅನ್‌ಸ್ಟಾಪಬಲ್ ಟಾಕ್ ಶೋ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್‌ರ ಅಂತರಂಗದ ಕದ ತಟ್ಟಿ ಗೆದ್ದಿದ್ದಾರೆ ಜೈ ಬಾಲಯ್ಯ.

ಅನ್‌ಸ್ಟಾಪಬಲ್ ಟಾಕ್ ಶೋ ಎರಡನೇ ಅವತರಣಿಯ ಅಂತಿಮ ಭಾಗವಾಗಿ ಪವರ್‌ಸ್ಟಾರ್ ಪವನ್‌ಕಲ್ಯಾಣ್‌ರ ಸಂದರ್ಶನವನ್ನು ಬಾಲಕೃಷ್ಣ ಮಾಡಿದ್ದಾರೆ. ಇದು ಮೆಗಾ ಮತ್ತು ನಂದಮೂರಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.

ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆಯೇ ಇಡೀ ತೆಲುಗು ಭಾಷಿಕ ಎರಡು ರಾಷ್ಟ್ರಗಳಲ್ಲದೆ ಪವನ್‌ಕಲ್ಯಾಣ್ ಮತ್ತು ಬಾಲಯ್ಯರ ಕೋಟ್ಯಾಂತರ ಅಭಿಮಾನಿಗಳು ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಫೆ.೩ ರಂದು ಶುಕ್ರವಾರ ಅಹಾ ಆಪ್‌ನಲ್ಲಿ ಈ ಸಂದರ್ಶನದ ಮೊದಲ ಭಾಗ ಸ್ಕ್ರೀನಿಂಗ್ ಆಗುತ್ತಿದೆ. ನೆಚ್ಚಿನ ನಟರ ಹೈ ಬಜೆಟ್ ಸಿನಿಮಾವನ್ನು ಸ್ವಾಗತಿಸುವಂತೆ ಅಭಿಮಾನಿಗಳು ಈ ಸಂದರ್ಶನವನ್ನು ನೋಡಿ ಅಸ್ವಾದಿಸುತ್ತಿದ್ದಾರೆ.

ನಗುಮೊಗ ತೋರಿಸುತ್ತಲೇ ತನ್ನೊಳಗೊಬ್ಬ ಕ್ರಾಂತಿಕಾರಿಯನ್ನಿಟ್ಟುಕೊಂಡಿರುವ, ಕಣ್ಣುಗಳ ಮೂಲಕವೇ ಕೋಪ, ಪ್ರೀತಿಯನ್ನು ತೋರುವ, ಮಾತಿಗಿಂತಲೂ ಮೌನವೇ ಮೂರ್ತಿವೆತ್ತಂತಿರುವ, ಘರ್ಜಿಸಲು ನಿಂತರೆ ಗುಡುಗು ಸಿಡಿಲು ಆರ್ಭಟಿಸುವಂತೆ ನೇರ ಅಭಿಮಾನಿಗಳ ಎದೆಗಿಳಿದು ಶಾಶ್ವತ ಸ್ಥಾನ ಸಂಪಾದಿಸಿಕೊಳ್ಳುವ, ಏಕಾಂಗಿಯಾಗಿರಲು ಬಯಸಿದರೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಈಶ್ವರ, ಪವನೇಶ್ವರ, ಪವರೇಶ್ವರ ಎನಿಸಿಕೊಳ್ಳುತ್ತಿರುವ ಪವನ್ ಕಲ್ಯಾಣ್‌ರನ್ನು ಸಂದರ್ಶಿಸುವುದು ಅವರ ಅಂತರಂಗದ ಭಾವನೆಗಳನ್ನು ಹೊರ ತೆಗೆಯುವುದು ಕಷ್ಟದ ಕೆಲಸ. ಆದರೆ, ಬಾಲಕೃಷ್ಣ ಈ ವಿಚಾರದಲ್ಲಿ ಗೆದ್ದು ಬೀಗಿದ್ದಾರೆ.

ಪವನ್ ಕಲ್ಯಾಣರೊಂದಿಗೆ ತಮ್ಮ ಭೇಟಿಯ ನೆನಪು, ಮೊದಲ ಚಿತ್ರ, ಸಿನಿಮಾದತ್ತ ಸೆಳೆತ, ಸಿನಿಮಾಗೆ ಬರುವ ಮುನ್ನ ಪವನ್ ಕಲ್ಯಾಣ್‌ರ ಮನಸ್ಥಿತಿ, ಮೆಗಾ ಪ್ಯಾಮಿಲಿಯೊಂದಿಗಿನ ಪವನ್ ಕಲ್ಯಾಣ್ ಸಂಬಂಧ, ಪವನ್ ಕಲ್ಯಾಣ್‌ರ ಮೂರು ಮದುವೆಗಳ ಪ್ರಸ್ತಾಪ ಹೀಗೆ ಸರಾಗವಾಗಿ ಪವರ್ ಸ್ಟಾರ್‌ನ ಅಂತರಂಗವನ್ನು ಹೊಕ್ಕಿ ಉತ್ತರಗಳೊಂದಿಗೆ ಹೊರಬರುತ್ತಾರೆ ಬಾಲಯ್ಯ.

ರಾಜಕೀಯವಾಗಿ ಪವನ್ ಕಲ್ಯಾಣ್‌ರ ಮೇಲೆ ಟೀಕೆ ಮಾಡಲು ವಿರೋಧಿಗಳಿಗೆ ದೊಡ್ಡ ಮಟ್ಟದ ಅಸಗಳಿಲ್ಲವಾದರೂ, ಪವನ್ ಕಲ್ಯಾಣರ ವ್ಯಕ್ತಿಗತ ವಿಚಾರಗಳ ಕುರಿತು ದೊಟ್ಟ ಮಟ್ಟದ ಟೀಕೆಗಳು ಕೇಳಿಬರುತ್ತಿದೆ. ಅದರಲ್ಲೂ ಮೂರು ಮದುವೆಗಳ ವಿಚಾರ. ಈ ಕುರಿತು ಸ್ಪಷ್ಟಪಡಿಸುವ ಪವನ್‌ಕಲ್ಯಾಣ್ ನಾನು ಮೂರುಮದುವೆಗಳನ್ನು ಒಟ್ಟಿಗೆ ಆದವನಲ್ಲ, ಆದರೆ ಸಂಬಂಧದಲ್ಲಿ ಸಂಗಾತಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಿಚ್ಛೇದನ ನೀಡಿಯೇ ಮರು ಮದುವೆಯಾಗಿದ್ದೇನೆ. ಆದರೆ, ನನ್ನ ವಿರೋಧಿಸುತ್ತಿರುವವರ ವ್ಯಯಕ್ತಿಕ ಜೀವನದ ಅನೇಕ ವಿಚಾರಗಳ ಕುರಿತು ತಮಗೆ ತಿಳಿದಿದೆ. ಆದರೆ, ನನಗೆ ನನ್ನ ಕುಟುಂಬ ಕಲಿಸಿರುವ ಸಂಸ್ಕಾರ ಅವರನ್ನು ಅದೇ ಭಾಷೆಯಲ್ಲಿ ಅದೇ ಧಾಟಿಯಲ್ಲಿ ಟೀಕಿಸಲು ಬಿಡುತ್ತಿಲ್ಲವೆನ್ನುತ್ತಾರೆ.

ಇದಕ್ಕೆ ಪ್ರತಿ ಉತ್ತರಿಸುವ ಬಾಲಯ್ಯ, ಇಷ್ಟೆಲ್ಲಾ ಹೇಳಿದ ಮೇಲೂ ಮತ್ತೇ ಯಾರಾದರೂ ಪವನ್ ಕಲ್ಯಾಣ್‌ರ ಮೂರು ಮದುವೆಗಳ ಪ್ರಸ್ತಾಪಿಸಿ ಟೀಕಿಸಿದರೆ ಅವರು ಬೀದಿ ನಾಯಿಗೆ ಸಮ ಎನ್ನುವ ಮೂಲಕ ಪವನ್ ಕಲ್ಯಾಣ್ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ.

ಚಿತ್ರ ನಿರ್ದೇಶಕ ತ್ರಿವಿಕ್ರಮ್‌ರನ್ನು ಪವನ್ ಕಲ್ಯಾಣ್ ನನ್ನ ಗುರು ಎನ್ನುವುದು ಬಾಲಯ್ಯರ ಮೆಚ್ಚುಗೆಗೆ ಪಾತ್ರವಾಗುತ್ತದೆ. ತಮ್ಮನ್ನು ಬಾಲ ಎಂದು ಕರೆಯಿಸಿಕೊಳ್ಳುವ ಸವಾಲಿನ ಪ್ರಯತ್ನವನ್ನು ಪವನ್ ಕಲ್ಯಾಣ್ ನಿರಾಕರಿಸುತ್ತಾರೆ. ಈ ಸವಾಲಿನಲ್ಲಿ ತಾನು ಸೋತರೂ ಪರವಾಗಿಲ್ಲ ನಿಮ್ಮ ಮೇಲಿನ ಗೌರವದಿಂದ ಹಾಗೆ ಕರೆಯಲು ಸಾಧ್ಯವೇ ಇಲ್ಲ. ಬೇಕಿದ್ದರೆ ಬಾಲಯ್ಯ ಎಂದು ಕರೆಯುತ್ತೇನೆನ್ನುತ್ತಾ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸುತ್ತಾರೆ.

ಕಾರ್ಯಕ್ರಮದ ಮಧ್ಯೆ ರಾಮ್‌ಚರಣ್‌ರ ದೂರವಾಣಿ ಸಂಭಾಷಣೆಗಳಿವೆ, ಪವನ್‌ಕಲ್ಯಾಣ್‌ರ ಸಹೋದರಿ ಪುತ್ರ ನಟ ಸಾಯಿಧರ್ಮ ತೇಜಾ ಅತಿಥಿಯಾಗಿ ಬಂದು ಹೋಗುತ್ತಾರೆ. ಸ್ವಂತ ದುಡಿಮೆಯ ಹಣಕ್ಕಿರುವ ಮಹತ್ವವನ್ನು ಪವನ್ ಕಲ್ಯಾಣ್ ತಮಗೆ ಅರ್ಥೈಸಿದ್ದನ್ನು ವಿವರಿಸುತ್ತಾರೆ. ಇತರೇ ನಟರ ಯಶಸ್ಸನ್ನು ಹೇಗೆ ಕಾಣಬೇಕೆಂಬ ಕುರಿತು ತಿಳಿಸಿಕೊಟ್ಟಿದ್ದಾರೆನ್ನುತ್ತಾರೆ.

ಒಟ್ಟಾರೆ ಮೆಗಾ ಫ್ಯಾಮಿಲಿ ಮತ್ತು ನಂದಮೂರಿ ಕುಟುಂಬದ ನಟರ ಅಭಿಮಾನಿಗಳ ನಡುವಿನ ಪೈಪೋಟಿ, ಘರ್ಷಣೆಯನ್ನು ಅನ್‌ಸ್ಟಾಪಬಲ್‌ನ ಈ ಶೋ ಕೊಂಚವಾದರೂ ಕಡಿಮೆ ಮಾಡುವಲ್ಲಿ ಸಫಲವಾಗಿದೆ.

ಕೆ.ಎಸ್.ಗಣೇಶ್, ಕೋಲಾರ.

ಸುದ್ದಿ ಓದಿ ಹಂಚಿ :

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!