• Sat. Mar 2nd, 2024

ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಎಲ್.ಜೆ.ಪಿ. ಸ್ಪರ್ಧೆ – ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್

PLACE YOUR AD HERE AT LOWEST PRICE

ಜನತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಡಬಲ್ ಇಂಜಿನ್ ಸರ್ಕಾರದ ಶೇ.೪೦ ಕಮಿಷನ್ ಆಡಳಿತ ಹಾಗೂ ಸರ್ಕಾರದ ವೈಫಲ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿ ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಲೋಕ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್ ತಿಳಿಸಿದರು.

ತಾಲ್ಲೂಕಿನ ಕೊಂಡರಾಜನಹಳ್ಳಿ ಪಂಚಾಯ್ತಿಯ ಅಂತರಗಂಗೆ ಬೆಟ್ಟದ ಮೇಲಿನ ಪಾಪರಾಜನಹಳ್ಳಿ ದರ್ಗಾ ಮುಂದೆ ನಡೆದ ಲೋಕಜನಶಕ್ತಿ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ರವರ ಆದೇಶದ ಮೇರೆಗೆ ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚಾರ ಮಾಡಿ, ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಹಾಗೂ ಬೂತ್ ಸಮಿತಿಗಳನ್ನು ಮಾಡುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಎರಡರಿಂದ ಮೂರು ಮಂದಿ ಆಕಾಂಕ್ಷಿಗಳು ಇದ್ದು, ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಪಕ್ಷದ ಸಂಘಟನೆಗೆ ದಲಿತ ಸೇನೆ ಶಕ್ತಿ ತುಂಬುತ್ತಿರುವದರಿಂದ ಲೋಕ ಜನಶಕ್ತಿ ಪಕ್ಷದ ಕಡೆ ಜನರ ಒಲವು ಹೆಚ್ಚುತ್ತಿದೆ ಎಂದ ಅವರು, ರಾಷ್ಟೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ರವರು ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು , ಇದೇ ವೇಳೆ  ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ೨೨೪ ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಲೋಕಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಮ್ಜದ್ ಪಾಷ ಮಾತನಾಡಿ, ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ. ಮತ್ತೊಂದೆಡೆ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ.ಜೆಡಿಎಸ್ ಕಾಂಗ್ರೆಸ್ ಪರಸ್ಪರ ಕಾಲೆಳೆದುಕೊಳ್ಳುವುದರಲ್ಲೇ ಕಾಲ ಕಳೆದಿವೆ ಎಂದು ಆರೋಪಿಸಿದರು.

ಇನ್ನು ಅಭಿವೃದ್ಧಿಯ ಬಗ್ಗೆ ನೋಡಿದರೆ, ಕೋಲಾರ ೩೦ ವರ್ಷದಿಂದ ಅಭಿವೃದ್ಧಿ ಕಂಡಿಲ್ಲ ಎಂಬುದು ರಸ್ತೆಗಳಿಂದ ಸಾಬೀತಾಗಿದೆ. ಮೂಲ ಸೌಲಭ್ಯಗಳಿಂದ ವಂಚಿತವಾಗಿ ಜಿಲ್ಲಾ ಕೇಂದ್ರ ದೊಡ್ಡಹಳ್ಳಿಯಾಗಿ ಮಾರ್ಪಿಟ್ಟಿದೆ. ಹೀಗಾಗಿ ಪಕ್ಷಸಂಘಟನೆ ಮೂಲಕ ಸಮಸ್ಯೆಗಳನ್ನು ಜನರ ಮುಂದಿಟ್ಟು ಲೋಕಜನಶಕ್ತಿ ಪಾರ್ಟಿಗೆ ಅಧಿಕಾರ ಕೊಡುವಂತೆ ಮನವಿ ಮಾಡಲಾಗುತ್ತದೆ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಲಸಿಗರಿಂದ ಮತದಾರರಿಗೆ ಅನ್ಯಾವಾಗಿದ್ದು ಹೀಗಾಗಿ ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಮತದಾರರ ಮನ್ನಣೆ ಸಿಗಲಿದೆ ಎಂದ ಅವರು, ಕೋಲಾರಕ್ಕೆ ಸಿದ್ಧರಾಮಯ್ಯ ಬರಲಿ, ಮೋದಿಯೇ ಬರಲೀ ಅಥವಾ ಯಾವುದೇ ದೊಣ್ಣೆ ನಾಯಕನೇ ಎಲೆಕ್ಷನ್‌ಗೆ ನಿಲ್ಲಲಿ. ನಾನಂತೂ ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಜನಶಕ್ತಿ ಪಾರ್ಟಿ ರೇಖಾಪುಟ್ಟೇಗೌಡ, ಕೆಜಿಎಫ್ ಜೆ.ರಾಜಾ, ಮನೋಹರ್, ಗಾಂಧಿನಗರ ಉದಯ್ , ಜಿಲ್ಲಾಧ್ಯಕ್ಷೆ ಸೌಭಾಗ್ಯ ಗುಣಾಂಭಸಿದ್ದೇಗೌಡ, ಪ್ರಭು, ಕಲೀಂ, ಷೇಕ್‌ಪಾಷಾ ವಾಜಿದ್‌ಖಾನ್, ಮುಬಾರಕ್, ಪಾಲಸಂದ್ರ ಬಡಾವಣೆಯ ಸುಬ್ರಮಣಿ, ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!