• Fri. Mar 29th, 2024

ಕೋಲಾರ ವಿಧಾನಸಭಾ ಕ್ಷೇತ್ರ ಪರಿಚಯ,ರಾಜಕೀಯ ಇತಿಹಾಸ ಮತ್ತು ಕ್ಷೇತ್ರದ ಸಮಸ್ಯೆಗಳು

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರ ಪರಿಚಯ :

ಕೋಲಾರ ಎಂದರೆ ಸಿಲ್ಕ್ ಅಂಡ್ ಮಿಲ್ಕ್ ಜೊತೆಗೆ ಟೊಮೆಟೋ ಸೇರೊದಂತೆ ವಿವಿಧ ಬಗೆಯ ತರಕಾರಿಗಳ ಕಣ್ಣ ಮುಂದೆ ಬರುತ್ತದೆ. ಏಷ್ಯಾದಲ್ಲಿಯೇ ಪ್ರಥಮವಾಗಿ ಜಲವಿದ್ಯುತ್ ಪಡೆದ ಮೊದಲ ಜಿಲ್ಲೆ ಕೋಲಾರವಾಗಿದೆ. ಶಿವನಸಮುದ್ರದಲ್ಲಿ ಜಲವಿದ್ಯುತ್ ಪವರ್ ಪ್ಲಾಂಟ್ ವಿದ್ಯುತ್ ಮೊದಲು ಕೊಟ್ಟಿದ್ದೇ ಕೋಲಾರ ಚಿನ್ನದ ಗಣಿಪ್ರದೇಶಕ್ಕೆ ಅಲ್ಲದೆ ಭಾರತ ದೇಶದ ಬೊಕ್ಕಸಕ್ಕೆ ಸುಮಾರು ೮೦೦ ಟನ್ ಚಿನ್ನವನ್ನು ಕೊಟ್ಟಿದ್ದೂ ಇದೇ ಕೋಲಾರ ಜಿಲ್ಲೆ ಅನ್ನೋದೆ ಕೋಲಾರದ ಹೆಗ್ಗಳಿಕೆ.

ಗಂಗರ ರಾಜಧಾನಿಯಾಗುವುದಕ್ಕೂ ಮುನ್ನ ಕೋಲಾರ ಕುವಲಾಲಪುರವಾಗಿತ್ತು.ಇಲ್ಲಿ ವಿವಿಧ ರಾಜವಂಶಗಳ ಆಳ್ವಿಕೆಯಲ್ಲಿ ನಿರ್ಮಾಣವಾದ ಹಲವಾರು ದೇವಾಲಯಗಳು ಇದಾವೆ. ಜಿಲ್ಲೆಯ ಇತಿಹಾಸ ಹೇಳುವ ನೂರಾರು ಶಾಸನಗಳೂ ಇವೆ. ದಲಿತ ಚಳವಳಿ ಮತ್ತು ಅಹಿಂದ ಚಳವಳಿಗಳ ತವರೂರು ಎನಿಸಿಕೊಂಡಿರುವ ಕೋಲಾರ ಬೆಂಗಳೂರಿನ ಜನರಿಗೆ ಹೊಟ್ಟೆ ತುಂಬಿಸುತ್ತಿರುವ ಜಿಲ್ಲೆ ಎಂದರೆ ತಪ್ಪಾಗಲಾರದು. ಸಂವಿಧಾನ ರಚನಾ ಸಮಿತಿ ಸದಸ್ಯ್ದ ಟಿ.ಚನ್ನಯ್ಯ, ಹಿರಿಯ ರಾಜಕಾರಣಿ ದಿವಂಗತ. ಸಿ.ಬೈರೇಗೌಡ, ನೆಲಮೂಲದ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ಸಾಂಸ್ಕೃತಿಕ ಚಿಂತಕ ಲಕ್ಷ್ಮೀಪತಿ ಕೋಲಾರ, ಅಹಿಂದ ಸಂಸ್ಥಾಪಕ ಸಿ.ಎಸ್.ದ್ವಾರಕಾನಾಥ್, ರೈತಮುಖಂಡ ಹೋಳೂರು ಶಂಕರ್ ಇದೇ ಕೋಲಾರ ಕ್ಷೇತ್ರದ ಮೂಲದವರು ಎನ್ನುವುದು ಗಮನಾರ್ಹ.

ಕೋಲಾರದಲ್ಲಿ ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ಅಂತರಗಂಗೆ ಕ್ಷೇತ್ರ, ಶತಶೃಂಗ ಪರ್ವತ ಶ್ರೇಣಿಗಳ ಮೇಲಿರುವ ಶಿವಗಂಗೆಯ ಆದಿಮ ಸಾಂಸ್ಕೃತಿ ಕೇಂದ್ರ, ನಗರ ದೇವತೆ ಕೋಲಾರಮ್ಮ ಪುರಾತನ ಐತಿಹಾಸಿ ದೇವಾಲಯ, ಸೋಮೇಶ್ವರ ದೇವಸ್ಥಾನ, ತೇರಹಳ್ಳಿಯ ಗೌರಿಗಂಗಾಧರೇಶ್ವರ ದೇವಸ್ಥಾನ, ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಮೆಥೋಡಿಸ್ಟ್ ಚರ್ಚ್, ಬ್ರಿಟೀಶರನ್ನೇ ಬೆಚ್ಚಬೀಳಿಸಿದ ಮೈಸೂರಿನ ದೊರೆ ಹೈದರಾಲಿ ತಂದೆ ಫಾತೆ ಮಹಮದ್ ಅಲಿ ಖಾನ್ ಸಮಾಧಿ, ನಿಮ್ನವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿದ ಐತಿಹಾಸಿಕ ನಚಿಕೇತ ನಿಲಯವೆಂಬ ಅತ್ಯುನ್ನತ ಐತಿಹಾಸಿಕ ವಿದ್ಯಾರ್ಥಿ ನಿಲಯ, ಜಿಲ್ಲೆಯ ಧರ್ಮಾಸ್ಪತ್ರೆಯಾಗಿ ಜನ ಮಾನಸದಲ್ಲಿ ಉಳಿದಿರುವ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ ಹಾಗೂ ಇಟಿಸಿಎಂ ಮಿಷನ್ ಹಾಸ್ಪಿಟಲ್. ಗಡಿಯಾರ ಗೋಪುರ, ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟ, ಸೀತಿ ಬೈರವೇಶ್ವರ ಕ್ಷೇತ್ರ ಕೋಲಾರ ವಿಧಾನ ಸಭಾ ಕೇತ್ರದ ಪ್ರಮುಖ ಗುರುತುಗಳಾಗಿವೆ.

ಚಳುವಳಿಗಳ ತವರೂರು ಎಂದೇ ಹೆಸರು ಪಡೆದ ಸಣ್ಣ ಕೆರೆಗಳ ನಾಡು ಕೋಲಾರವು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿರುವ ಜಿಲ್ಲಾ ಕೇಂದ್ರ ಹಾಗೂ ವಿಧಾನಸಭಾ ಕ್ಷೇತ್ರ. ಇಲ್ಲಿ ದಲಿತರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಹೆಸರುವಾಸಿಯಾಗಿದೆ. ಜಾತಿ ಕ್ರೌರ್ಯವನ್ನು ಒಳಗೊಂಡಿದ್ದ ಈ ಕೇತ್ರದಲ್ಲಿ ಪಾಳ್ಯಗಾರಿಕೆ ಸಡಿಲಗೊಂಡಿದೆಯಾದರೂ ಗ್ರಾಮೀಣ ಪ್ರದೇಶದ ನಿತ್ಯ ಜೀವನದಲ್ಲಿ ಜಾತಿ ಅಸ್ಪೃಶ್ಯತೆ ರೂಪಾಂತರ ವೈರಸ್‌ನಂತೆ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತೆ.

ಕೋಲಾರದಲ್ಲಿ ಅತಿದೊಡ್ಡ ಟೊಮ್ಯಾಟೋ ಎಪಿಎಂಸಿ ಮಾರುಕಟ್ಟೆ ಇದ್ದು, ಇಲ್ಲಿನ ಟೊಮ್ಯೊಟೋ ದೇಶಾದ್ಯಂತ ಹಲವಾರು ರಾಜ್ಯಗಳಿಗೆ, ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ರಫ್ತಾಗುತ್ತದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕೋಲಾರದ ಪ್ರಧಾನ ಕಸುಬು. ರೇಷ್ಮೆಯಂತಹ ವಾಣಿಜ್ಯ ಬೆಳೆಯ ಜೊತೆಗೆ ಎಲ್ಲಾ ವಿಧದ ತರಕಾರಿಗಳನ್ನು ಬೆಳೆಯಲಾಗುತ್ತದೆ. ಇಷ್ಟೆಲ್ಲ ಇದ್ದರೂ ಇಲ್ಲಿನ ರೈತರ ಬದುಕು ಮಾತ್ರ ಬಂಗಾರವಾಗಿಲ್ಲ ಎನ್ನುವುದೇ ವಿಪರ್ಯಾಸ.

ಜಾತಿವಾರು ಜನಸಂಖ್ಯೆ:

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಅಂದಾಜು ೨೩೧೭೪೨ ಮತದಾರರಿದ್ದಾರೆ. ಅವರಲ್ಲಿ ೧೧೫೧೦೭ ಪುರುಷರು ೧೧೬೫೮೩ ಮಹಿಳಾ ಮತದಾರರಿದ್ದಾರೆ. ಸಮುದಾಯವಾರು ಅಂದಾಜಿಸುವುದಾದರೆ, ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಸುಮಾರು ೭೦,೦೦೦ಕ್ಕೂ ಹೆಚ್ಚು ಮತದಾರರಿದ್ದರೆ, ಮುಸ್ಲಿಮರು ೫೦,೦೦೦ ಮತದಾರರು ಇರುವ ಎರಡನೇ ದೊಡ್ಡ ಸಮಾಜವಾಗಿದೆ. ಮೂರನೇದಾಗಿ ಒಕ್ಕಲಿಗರು ೩೫,೦೦೦ದಷ್ಟು ಇದ್ದರೆ ಕುರುಬರು ೨೫,೦೦೦ ಮತ್ತು ಇತರೆ ಸಮಾಜಗಳ ೫೦,೦೦೦ ಮತದಾರರಿದ್ದಾರೆ.

ಕೋಲಾರ ವಿಧಾನಸಭಾ ಕ್ಷೇತ್ರ ರಾಜಕೀಯ ಇತಿಹಾಸ:

ಕೋಲಾರದಿಂದ ಇದುವರೆಗೆ ಮೂವರು ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ೧೯೫೭ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ.ಅಬ್ದುಲ್ ರಶೀದ್‌ರವರು ಸ್ವತಂತ್ರ ಅಭ್ಯರ್ಥಿ ಪಿ.ವೆಂಕಟಗಿರಿಯಪ್ಪನವರನ್ನು ೨೭೧೪ ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾದರು. ನಂತರ ೧೯೭೮ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ ಅಬ್ದುಲ್ ಲತೀಫ್ ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಪಿ.ವೆಂಕಟಗಿರಿಯಪ್ಪನವರು ಜನತಾ ಪಕ್ಷದಿಂದ ಸ್ಪರ್ಧಿಸಿದರೂ ೩೯೪ ಸರಳ ಬಹುಮತದಿಂದ ಗೆಲುವು ಸಾಧಿಸಿ ಲತೀಫ್ ಶಾಸಕರಾದರು. ೧೯೮೯ರಲ್ಲಿ ಕಾಂಗ್ರೆಸ್ ಪಕ್ಷದ ಕೆ.ಎ.ನಿಸಾರ್ ಅಹ್ಮದ್ ಜನತಾದಳದ ಕೆ.ಆರ್ ಶ್ರೀನಿವಾಸಯ್ಯರನ್ನು ೬೦೬೪ ಮತಗಳಿಂದ ಸೋಲಿಸಿ ಶಾಸಕರಾಗುವ ಜೊತೆಗೆ ಇಂಧನ ಸಚಿವರೂ ಆಗಿದ್ದರು. ನಿಸ್ಸಾರ್ ಅಹ್ಮದ್ ಕೋಲಾರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಮೂರನೇ ಮತ್ತು ಕೊನೆಯ ಮುಸ್ಲಿಂ ಶಾಸಕರಾದರು. ಆನಂತರದಲ್ಲಿ ಮುಸಲ್ಮಾನ ಅಭ್ಯರ್ಥಿ ಯಾರೂ ಶಾಸಕರಾಗಲೇ ಇಲ್ಲ.

೧೯೯೪ರ ಚುನಾವಣೆಯಲ್ಲಿ ಜನತಾದಳವು ದೇವೇಗೌಡರ ನೇತೃತ್ವದಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ  ಜನತಾದಳದ ಟಿಕೆಟ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎ ನಿಸಾರ್ ಅಹ್ಮದ್‌ರವರನ್ನು ೧೨,೮೨೨ ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ೧೯೯೯ರಲ್ಲಿ ಜೆಡಿಯು ಪಕ್ಷ ಸೇರಿದ ಅವರು ಕಾಂಗ್ರೆಸ್‌ನ ನಜೀರ್ ಅಹ್ಮದ್‌ರನ್ನು ಸೋಲಿಸಿದರು. ೨೦೦೪ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರು ಬಿಜೆಪಿಯ ಎಂ.ಎಸ್ ಆನಂದ್‌ರನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಕೆ.ಶ್ರೀನಿವಾಸಗೌಡರ ವಿಶೇಷವೆಂದರೆ ಮೂರು ಬಾರಿ ಮೂರು ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು. ನಾಲ್ಕನೇ ಬಾರಿ ೨೦೧೮ರಲ್ಲಿ ಜೆಡಿಎಸ್ ಪಕ್ಷದಿಂದ ಕೊನೆಯ ಚುನಾವಣೆ ಎಂದು ಕಣಕ್ಕಿಳಿದ ಶ್ರೀನಿವಾಸಗೌಡರು ಅವಧಿ ಪೂರ್ಣವಾಗುವ ಮೊದಲೇ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

೨೦೦೮ರ ಚುನಾವಣೆ ಹೊತ್ತಿಗೆ ಕೋಲಾರಕ್ಕೆ ವರ್ತೂರು ಪ್ರಕಾಶ್ ಆಗಮಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಕಾಂಗ್ರೆಸ್‌ನಲ್ಲಿದ್ದ ಕೆ.ಶ್ರೀನಿವಾಸಗೌಡರನ್ನು ೨೧,೦೨೯ ಮತಗಳಿಂದ ಸೋಲಿಸಿ ಶಾಸಕರಾದರು. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ವರ್ತೂರು ಪ್ರಕಾಶ್ ಜವಳಿ ಸಚಿವರಾಗಿದ್ದರು. ೨೦೧೩ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು, ಅಷ್ಟರಲ್ಲಿ ಜೆಡಿಎಸ್ ಸೇರಿದ್ದ ಅದೇ ಕೆ.ಶ್ರೀನಿವಾಸಗೌಡರನ್ನು ೧೨,೫೯೧ ಮತಗಳಿಂದ ಎರಡನೇ ಬಾರಿ ಸೋಲಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿ ನಂತರ ಕಾಂಗ್ರೆಸ್ ಸೇರಿದ ಅವರು ಆನಂತರ ಅದರಿಂದಲೂ ಹೊರಬಂದು ‘ನಮ್ಮ ಕಾಂಗ್ರೆಸ್’ ಎಂಬ ಪಕ್ಷ ಸ್ಥಾಪಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಜಮೀರ್ ಪಾಶ ಎದುರು ಗೆದ್ದಾಗ ವರ್ತೂರು ಪ್ರಕಾಶ್ ಕೇವಲ ೩೫,೫೪೪ ಮತಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.

ಹಾಲಿ ಶಾಸಕರ ರಾಜಕೀಯ ಹೆಜ್ಜೆಗುರುತುಗಳು:

ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕಿನ ಕುಡುವನಹಳ್ಳಿ ಗ್ರಾಮದ ನಿವಾಸಿಯಾಗಿದ್ದವರು. ಶೈಕ್ಷಣಿಕವಾಗಿ ಪದವೀದರರಾಗಿದ್ದ ಇವರು. ಮೊದಲ ಬಾರಿಗೆ ೮೦ರ ದಶಕದಲ್ಲಿ ಕೋಲಾರದ ಅಣ್ಣಿಹಳ್ಳಿ ಹಾಲು ಉತ್ತಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಂತರ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಸ ಮಾಡಿದವರು. ದಿವಂಗತ ಸಿ.ಬೈರೇಗೌಡರ ಶಿಷ್ಯರಾಗಿದ್ದ ಶ್ರೀನಿವಾಸಗೌಡರು ೧೯೯೪ರಲ್ಲಿ ಜನತಾದಳ ಪಕ್ಷದ ಮೂಲಕ ಕೋಲಾರ ವಿಧಾನಸಭಾ ಕೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಸತತ ಮೂರು ಬಾರಿ ಕ್ಷೇತ್ರದಿಂದ ೩ ವಿಭಿನ್ನ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಪಡೆದು ಕೋಲಾರ ರಾಜಕೀಯ ಕ್ಷೇತ್ರದ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಂಸದ ಕೆ.ಹೆಚ್.ಮುನಿಯಪ್ಪ ನವರೊಂದಿಗೆ ರಾಜಕೀಯ ವೈರತ್ವ ಬೆಳಸಿಕೊಂಡ ಶ್ರೀನಿವಾಸಗೌಡರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ೨೦೧೮ರ ಚುನಾವಣೆಯಲ್ಲಿ ಸುಮಾರು ೮೨೭೮೮ ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ೪ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೀರ್ತಿ ಕೋಲಾರ ವಿಧಾನಸಭಾ ಕ್ಷೇತ್ರದ ಕೆ.ಶ್ರೀನಿವಾಸಗೌಡರಿಗೆ ಸಲ್ಲುತ್ತದೆ.

ಕ್ಷೇತ್ರದ ಸಮಸ್ಯೆಗಳು :

ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಯಾಗಿರುವ ಕೋಲಾರಕ್ಕೆ ೧೦೦ ಎಕರೆ ವಿಸ್ತಾರದಲ್ಲಿ ಮಾರುಕಟ್ಟೆ ನಿರ್ಮಿಸಬೇಕೆಂಬ ರೈತರ ಬೇಡಿಕೆ ಹಾಗೆಯೇ ಉಳಿದಿದೆ. ಸಮರ್ಪಕ ಬೆಲೆ ಸಿಗದಿದ್ದಾಗ ಹಣ್ಣು ತರಕಾರಿಗಳನ್ನು ರಸ್ತೆಗೆ ಚೆಲ್ಲುವುದರ ಬದಲು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್‌ಗಳನ್ನು ಸ್ಥಾಪಿಸಬೇಕೆಂದು ಎಷ್ಟು ಒತ್ತಡ ತಂದರೂ ಅದು ಸಾಧ್ಯವಾಗಿಲ್ಲ. ಇಲ್ಲಿನ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಲು ಸಣ್ಣಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಸದ್ಯಕ್ಕೆ, ಕೋಲಾರದ ಟೊಮ್ಯಾಟೋ ಹಣ್ಣು ಕೆಚಪ್ ಆಗಲು ಪಕ್ಕದ ಆಂಧ್ರದ ಚಿತ್ತೂರು ಜಿಲ್ಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಇದನ್ನು ಬಗೆಹರಿಸಲು, ಜಿಲ್ಲೆ ಸುಸ್ಥಿರ ಅಭಿವೃದ್ದಿ ಕಾಣುವಂತಾಗಲು ಯಾವ ಶಾಸಕರು ಸಹ ಮನಸ್ಸು ಮಾಡಿಲ್ಲ ಎನ್ನುವುದು ವಾಸ್ತವ.

ಹೋಂಡಾ, ಬಡವೆ, ವಿಸ್ಟ್ರಾನ್ ಸೇರಿದಂತೆ ಹಲವು ಕೈಗಾರಿಕೆಗಳು ಜಿಲ್ಲೆಯಲ್ಲಿದ್ದರೂ ಅವು ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕನಿಷ್ಟ ವೇತನ ಕೊಡದೆ ವಂಚಿಸಿ ಕಾನೂನುಗಳನ್ನು ಗಾಳಿಗೆ ತೂರುತ್ತಿವೆ. ಕೆಜಿಎಫ್ ಗಣಿ ಮುಚ್ಚಿದ ನಂತರ ನಿರುದ್ಯೋಗ ಮಿತಿಮೀರಿದೆ. ಪರಿಣಾಮವಾಗಿ ಪ್ರತಿದಿನ ಹತ್ತಾರು ಸಾವಿರ ಯುವಜನರು ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗಿಬರುತ್ತಿದ್ದಾರೆ.

ಕೆ.ಸಿ ವ್ಯಾಲಿಯಿಂದ ಬರುವ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಕೊಡಲಾಗುತ್ತಿದೆ. ಅದನ್ನು ಕನಿಷ್ಠ ಮೂರು ಬಾರಿ ಶುದ್ಧೀಕರಿಸಬೇಕೆಂಬುದು ಜನರ ಒತ್ತಾಯ. ಎತ್ತಿನ ಹೊಳೆ ಯೋಜನೆ, ಕೃಷ್ಣಾ ಬಿ.ಸ್ಕೀಂ ನೀರಾವರಿ ಯೋಜನೆಯ ಜಿಲ್ಲೆಯ ಪಾಲು ಹಾಗೂ ಕಾವೇರಿ ನೀರಿನ ಬೇಡಿಕೆ ಇನ್ನೂ ಜೀವಂತವಾಗಿದೆ. ಜಿಲ್ಲೆಯ ಮೂಲಸೌಕರ್ಯ ಮತ್ತಷ್ಟು ಸುಧಾರಿಸಬೇಕಿದೆ. ಜನರಿಗೆ ಸುಸಜ್ಜಿತವಾದ ಮನೆಗಳ ಕೊರತೆಯಿದೆ. ಉದ್ಯೋಗ ಸೃಷ್ಟಿಯಾಗಬೇಕಿದೆ. ಉತ್ತಮ ಸರ್ಕಾರಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕಿದೆ.

ಒಟ್ಟಾರೆ ಹೆಚ್ಚು ಹಣ ಚೆಲ್ಲುವವರು ಗೆಲ್ಲುವ ಪರಿಸ್ಥಿತಿಯಿರುವ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ವರ್ಸಸ್ ಅಹಿಂದ ಸಮುದಾಯಗಳ ರಾಜಕೀಯ ನೇರಾ ನೇರಾ ಪೈಪೋಟಿಯಾಗಿದ್ದು, ಕೋಲಾರದಲ್ಲಿ ಈ ಮೇಲಿನ ಜನರ ಸಮಸ್ಯೆಗಳು ಈ ಬಾರಿಯ ಪ್ರಮುಖ ಚುನಾವಣೆಯ ವಿಷಯವಾಗಿದೆ.

೨೦೨೩ರ ಚುನಾವಣೆಗೆ ಕೇತ್ರದ ಆಕಾಂಕ್ಷಿಗಳು :

೨೦೨೩ರ ವಿಧಾನಸಭಾ ಚುನಾವಣೆಗೆ ಕೋಲಾರ ಕೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗುವ ನಿರೀಕ್ಷೆ ಇದೆ. ಕಾಂಗ್ರೆಸ್ ದಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ  ಸ್ಪರ್ದಿಸುವ ಬಗ್ಗೆ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಇನ್ನು ಜೆಡಿಎಸ್ ಪಕ್ಷದಿಂದ ಸಿ.ಎಂ.ಆರ್. ಶ್ರೀನಾಥ್ ಹೆಸರನ್ನು ಮೊದಲ ಪಟ್ಟಿಯಲ್ಲೇ ಘೋಷಣೆ ಮಾಡಿದೆ. ಬಿಜೆಪಿಯಿಂದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಯಾದ ದಿನದಿಂದಲೂ ತಾನೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಓಂಶಕ್ತಿ ಚಲಪತಿ ಈ ಬಾರಿ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಬೇಕೆಂದು ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ. ಇವರೊಂದಿಗೆ ಆಮ್ ಆದ್ಮಿ ಪಕ್ಷದ ಸುಹೇಲ್ ದಿಲ್ ನವಾಝ್ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದಾರೆ ಹಾಗೂ ಆರ್.ಪಿ.ಐ. ಎಸ್.ಡಿ.ಪಿ.ಐ. ಎಲ್.ಜೆ.ಪಿ. ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆಸುತ್ತಿದೆ.

೨೦೦೮ರ ಫಲಿತಾಂಶ:
ಅಹಿಂದ ಸಮಾವೇಶದ ಮೂಲಕ ಕೋಲಾರಕ್ಕೆ ಪ್ರವೇಶ ಕೊಟ್ಟಿದ್ದ ವರ್ತೂರ್ ಪ್ರಕಾಶ್ ೨೦೦೮ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಳೆದ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕೆ.ಶ್ರೀನಿವಾಸಗೌಡ ವಿರುದ್ಧ ೬೬೪೪೬ ಮತಗಳನ್ನು ಪಡೆದು ೨೧೦೨೯ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರ್ಕಾರ ರಚನೆ ಅತಂತ್ರ ಪರಿಸ್ಥಿತಿಯಲ್ಲಿದ್ದಾಗ ಸರ್ಕಾರ ರಚನೆಗೆ ಬೆಂಬಲ ಸೂಚಿಸುವ ಮೂಲಕ ಬಿ.ಎಸ್.ಯಡಿಯೂರಪ್ಪನವರ ಸಂಪುಟದಲ್ಲಿ ಜವಳಿ ಸಚಿವರಾಗಿದ್ದರು.

೨೦೧೩ರ ಫಲಿತಾಂಶ:
೫ ವರ್ಷಗಳ ಕಾಲ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ನಗರದಲ್ಲಿ ಉತ್ತಮ ರಸ್ತೆಗಳು ಹಾಗೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಉತ್ತಮ ರೀತಿಯಲ್ಲಿ ಸ್ಪಂಧಿಸಿದನ್ನು ಬಂಡವಾಳವಾಗಿಸಿಕೊಂಡು ಮತಯಾಚನೆ ಮಾಡಿದ ವರ್ತೂರ್ ಪ್ರಕಾಶ್ ೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರಗೊಂಡಿದ್ದ ಕೆ.ಶ್ರೀನಿವಾಸಗೌಡರ ವಿರುದ್ಧ ೫೬೨೯೫೭ ಮತಗಳನ್ನು ಪಡೆದು ೧೨೫೯೧ ಮತಗಳ ಅಂತರದಿಂದ ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾದರು.

೨೦೧೮ರ ಫಲಿತಾಂಶ:
ಸತತ ಎರಡು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವು ಪಡೆಯಲು ಸಜ್ಜಾಗಿದ್ದ ವರ್ತೂರ್ ಪ್ರಕಾಶ್ ಅವರ ವಿರುದ್ಧ ಸತತ ಎರಡು ಬಾರಿ ಸೋಲನ್ನು ಅನುಭವಿಸಿದ ಜೆಡಿಎಸ್ ಪಕ್ಷದ ಕೆ.ಶ್ರೀನಿವಾಸಗೌಡ ಪಕ್ಷೇತರ ಅಭ್ಯರ್ಥಿ ವರ್ತೂರ್ ಪ್ರಕಾಶ್ ವಿರುದ್ಧ ೮೨೭೮೮ ಮತಗಳನ್ನು ಪಡೆದು ೪೪೨೫೧ ಮತಗಳ ಅಂತರದಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಈವರೆಗೆ ಕ್ಷೇತ್ರದಿಂದ ಆಯ್ಕೆಯಾದವರು:

ವರ್ಷ              ಗೆದ್ದ ಅಭ್ಯರ್ಥಿ                                       ಪಕ್ಷ

೧೯೫೭     ಡಾ. ಅಬ್ದುಲ್ ರಶೀದ್                              ಕಾಂಗ್ರೆಸ್
೧೯೬೨     ಪಿ. ವೆಂಕಟಗಿರಿಯಪ್ಪ                               ಕಾಂಗ್ರೆಸ್
೧೯೬೭     ಪಿ.ವೆಂಕಟಗಿರಿಯಪ್ಪ                               ಸ್ವತಂತ್ರ
೧೯೭೨     ಡಾ.ವೆಂಕಟೆರಾಮಯ್ಯ                            ಸ್ವತಂತ್ರ
೧೯೭೮    ಎಂ.ಅಬ್ದುಲ್ ಲತೀಫ್                             ಕಾಂಗ್ರೆಸ್
೧೯೮೩    ಕೆ.ಆರ್.ಶ್ರೀನಿವಾಸಯ್ಯ                           ಜನತಾಪಕ್ಷ
೧೯೮೫    ಕೆ.ಆರ್.ಶ್ರೀನಿವಾಸಯ್ಯ                          ಜನತಾಪಕ್ಷ
೧೯೮೯    ಕೆ.ಎ.ನಿಸಾರ್ ಅಹ್ಮದ್                               ಕಾಂಗ್ರೆಸ್
೧೯೯೪    ಕೆ.ಶ್ರೀನಿವಾಸಗೌಡ                                    ಜನತಾದಳ
೧೯೯೯    ಕೆ.ಶ್ರೀನಿವಾಸಗೌಡ                                     ಜೆಡಿಯು
೨೦೦೪    ಕೆ.ಶ್ರೀನಿವಾಸಗೌಡ                                    ಕಾಂಗ್ರೆಸ್
೨೦೦೮    ಆರ್.ವರ್ತೂರ್ ಪ್ರಕಾಶ್                        ಸ್ವತಂತ್ರ
೨೦೧೩    ಆರ್.ವರ್ತೂರ್ ಪ್ರಕಾಶ್                        ಸ್ವತಂತ್ರ
೨೦೧೮    ಕೆ.ಶ್ರೀನಿವಾಸಗೌಡ                                    ಜೆಡಿಎಸ್

 

ವಿಶೇಷ ವರದಿ : ಸಿ.ವಿ.ನಾಗರಾಜ್. ಕೋಲಾರ.

Leave a Reply

Your email address will not be published. Required fields are marked *

You missed

error: Content is protected !!