• Thu. Apr 25th, 2024

PLACE YOUR AD HERE AT LOWEST PRICE

ಇಂದು ಮಲಯಾಳಂ ಸಿನಿಮಾದ ಮೊದಲ ನಟಿ ಪಿಕೆ ರೋಸಿಯವರ 120ನೇ ಜನ್ಮದಿನವನ್ನು ಗೌರವಿಸುವುದಕ್ಕಾಗಿ ಗೂಗಲ್‌ ತನ್ನ‌ ಡೂಡಲ್ ಗೌರವ ಸೂಚಿಸಿದೆ.
ಭಾರತೀಯ ಸಿನಿಮಾ ಚರಿತ್ರೆ ಅಷ್ಟಾಗಿ ಗುರುತಿಸಿಲ್ಲದ ಪಿ‌ಕೆ ರೋಸಿ ಕೇವಲ ಮೊದಲ ಮಲಯಾಳಿ ನಟಿ ಮಾತ್ರವಲ್ಲ, ಮೊದಲ ದಲಿತ ಸಮುದಾಯದ ನಟಿ ಕೂಡ ಎನ್ನುವುದು ಗಮನಿಸಬೇಕಾದ ವಿಷಯ. ಕೇವಲ ದಲಿತ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಸಿನಿಮಾರಂಗವನ್ನು, ಅಷ್ಟೇಕೆ ತಾನು ಹುಟ್ಟಿ ಬೆಳೆದ ತನ್ನ ಸ್ವಂತ ನೆಲವನ್ನು ಸಹ ಬಿಟ್ಟು ಬದುಕಬೇಕಾಯಿತು.
1903ನೇ ಇಸವಿಯ ಫೆಬ್ರವರಿ 10ರಂದು ಕೇರಳದ ಪುಲಯ ಸಮುದಾಯದ ನಂಡನ್ ಕೊಡಿಲ್ ಪೌಲೋಸ್ ಮತ್ತು ಕುಂಜಿ ದಂಪತಿಗಳ ಮಗಳಾಗಿ ಪಿಕೆ ರೋಸಿ ಜನಿಸಿದರು‌. ದಲಿತ ಅಸ್ಪೃಶ್ಯ ಪುಲಯ ಸಮುದಾಯದ ರೋಸಿ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ಬಡತನದಲ್ಲಿ ಬದುಕಿದ ರೋಸಿ ಕೃಷಿ ಕೂಲಿಯಾಗಿದ್ದವರು.
ಅಭಿನಯದ ಕಡೆ ಆಸಕ್ತಿಯಿದ್ದುದರಿಂದಾಗಿ ಬದುಕು ಕಟ್ಟಿಕೊಳ್ಳಲು ರಂಗಭೂಮಿಯತ್ತ ಆಕರ್ಷಿತರಾಗಿ ಒಂದು ರಂಗತಂಡವನ್ನು ಸೇರಿಕೊಂಡರು. ಆ ಕಾಲದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುವುದು ಅಗೌರವದ ನಡೆಯಾಗಿತ್ತು, ರಂಗನಟಿಯರನ್ನು ಕೀಳಾಗಿ ನೋಡಲಾಗುತ್ತಿತ್ತು.
ಸಮಾಜ ಎಷ್ಟೇ ಅಪಮಾನದಿಂದ ನೋಡಿದರು ಅಭಿನಯದ ಕುರಿತ ತಮ್ಮ ಪ್ರೀತಿಯಿಂದಾಗಿ ರೋಸಿ ರಂಗಭೂಮಿಯನ್ನು ತ್ಯಜಿಸಲಿಲ್ಲ. ಆಗ ಮಲಯಾಳಂ ಸಿನಿಮಾದ ಪ್ರವರ್ತಕ ನಿರ್ದೇಶಕರಲ್ಲೊಬ್ಬರಾಗಿದ್ದ ಜೆಸಿ ಡೇನಿಯಲ್ ತಾವು ತಯಾರಿಸಬೇಕೆಂದುಕೊಂಡಿದ್ದ ‘ವಿಗಟಕುಮಾರನ್’ ಎನ್ನುವ ಮೂಕಿ ಸಿನಿಮಾಕ್ಕೆ ರೋಸಿಯವರನ್ನು ನಾಯಕನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ದಲಿತ ಸಮುದಾಯದ ರೋಸಿಯವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿದ್ದನ್ನು ಸಂಪ್ರದಾಯಸ್ಥ ಜಾತಿವಾದಿಗಳು ಖಂಡಿಸುತ್ತಾರೆ. ಸಿನಿಮಾರಂಗ ಯಾವತ್ತೂ ಮೇಲ್ಜಾತಿಗಳ ಹಿಡಿತದಲ್ಲೇ ಇರುವುದರಿಂದ ಡೇನಿಯಲ್‌ರಿಗೆ ಈ ಸಿನಿಮಾ ಮುಗಿಸುವುದು ಬಹಳ ಕಷ್ಟವಾಗುತ್ತದೆ.
ಕೆಲವು ಮೇಲ್ಜಾತಿಯ ತಂತ್ರಜ್ಞರು ಸಿನಿಮಾದಿಂದ ಹೊರನಡೆಯುತ್ತಾರೆ. ಅನೇಕ ಸವಾಲುಗಳ ನಡುವೆ ಸಿನಿಮಾ ಮುಗಿಸುವ ಡೇನಿಯಲ್ ಸಿನಿಮಾವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಂದು ಘಟನೆ ಎದುರಾಗುತ್ತದೆ. ಸಿನಿಮಾ‌ ಬಿಡುಗಡೆಗೆ ಮುಂಚೆ ಸಿನಿಮಾದ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಇಡೀ ಮಲಯಾಳಂ ಸಿನಿಮಾರಂಗ ಈ ಸಿನಿಮಾದ ವಿರುದ್ಧ ನಿಲ್ಲುತ್ತದೆ.
ಡೇನಿಯಲ್‌ರ ಸತತ ಪ್ರಯತ್ನದಿಂದಾಗಿ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಅಸ್ಪೃಶ್ಯ ಮಹಿಳೆಯ ಜೊತೆಗೆ ಕೂತು ಸಿನಿಮಾ ನೋಡಲು ನಿರಾಕರಿಸುವ ಸಿನಿಮಾ ಮಂದಿ ಚಿತ್ರ ಪ್ರದರ್ಶನಕ್ಕೆ ರೋಸಿ ಬರಬಾರದು ಎನ್ನುವ ಷರತ್ತನ್ನು ವಿಧಿಸುತ್ತಾರೆ.
ತಾವು ನಟಿಸಿದ ಸಿನಿಮಾದ ಪ್ರದರ್ಶನಕ್ಕೆ ತಾವೇ ಹೋಗಲಾಗದ ಕಾರಣಕ್ಕೆ ಚಿತ್ರಮಂದಿರದ ಹೊರಗೆ ಕಾಯಬೇಕಾದ ಪರಿಸ್ಥಿತಿ ರೋಸಿಯವರಿಗೆ ಬರುತ್ತದೆ. ಚಿತ್ರ ಶುರುವಾದ ಮೇಲೆ ಚಿತ್ರಮಂದಿರದಲ್ಲಿ ಗದ್ದಲವಾಗುತ್ತದೆ. ಕಾರಣ ರೋಸಿ ನಟಿಸಿದ್ದ ಪಾತ್ರ ನಾಯರ್ ಸಮುದಾಯದ ಹೆಣ್ಣಿನ ಪಾತ್ರ‌.
ಚಿತ್ರದ ಒಂದು ದೃಶ್ಯದಲ್ಲಿ ಮಲ್ಲಿಗೆ ಹೂವನ್ನು ಮುಡಿದಿರುವ ನಾಯಕಿಯ ಹತ್ತಿರಕ್ಕೆ ಬರುವ ನಾಯಕ ಆಕೆಯ ಮುಡಿಯಲ್ಲಿರುವ ಮಲ್ಲಿಗೆ ಹೂವನ್ನು ಮೂಸಿ ಸಂಭ್ರಮಿಸುತ್ತಾನೆ. ಅಸ್ಪೃಶ್ಯ ದಲಿತ ಸಮುದಾಯದ ಹೆಣ್ಣೊಬ್ಬಳು ನಾಯರ್ ಮಹಿಳೆಯ ಪಾತ್ರ ಮಾಡಿದ್ದಲ್ಲದೆ, ಮೇಲ್ಜಾತಿಯ ಪಾತ್ರವೊಂದು ಆಕೆಯನ್ನು ಕಾಮಿಸುವಂತೆ ಚಿತ್ರಿಸಿದ ಕಾರಣಕ್ಕೆ ಜನ ಸಿಟ್ಟಿಗೆದ್ದು ನಿರ್ದೇಶಕ ಡೇನಿಯಲ್‌ರ ಮೇಲೆ ಹಲ್ಲೆ ಮಾಡುತ್ತಾರೆ.
ರೋಸಿಯವರನ್ನು ಹುಡುಕಿಕೊಂಡು ಹೋದ ಹಲ್ಲೆಕೋರರು ಆಕೆಯ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ತಮ್ಮ ಜೀವ ಉಳಿಸಿಕೊಳ್ಳಲು ದಾರಿಯಲ್ಲಿ ಸಿಕ್ಕ ಲಾರಿಯನ್ನು ಹತ್ತಿಕೊಂಡು ಆವತ್ತು ತ್ರಿವೆಂಡ್ರಂ ಅನ್ನು ಬಿಟ್ಟು ಹೋದ ರೋಸಿ ಕೊನೆಯವರೆಗೂ ತಮ್ಮ ಊರಿಗೆ ಮರಳಲೇ‌ ಇಲ್ಲ. ರೋಸಿ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿದ್ದಕ್ಕಾಗಿ ಚಿತ್ರದ ನಿರ್ಮಾಪಕ ಡೇನಿಯಲ್ ದಿವಾಳಿಯಾಗುತ್ತಾರೆ.
ಮಲಯಾಳಂ ಸಿನಿಮಾರಂಗಕ್ಕೆ ರೋಸಿಯವರ ಮೇಲೆ ಎಷ್ಟು ಸಿಟ್ಟಿರುತ್ತದೆ ಎಂದರೆ ಅವರ ಕೊನೆಗಾಲದವರೆಗೂ ತಮ್ಮ ಐಡೆಂಟಿಟಿಯನ್ನು ಮುಚ್ಚಿಟ್ಟೆ ಬದುಕುತ್ತಾರೆ. ತಾವು ನಟಿ ಎನ್ನುವುದನ್ನು ಹೇಳಿಕೊಳ್ಳಲಾಗದೆ ಜೀವಮಾನವಿಡಿ ನರಳುತ್ತಾರೆ.ದಲಿತರು ಇವತ್ತಿಗೂ ಸಿನಿಮಾರಂಗದಲ್ಲಿ survive ಆಗಬೇಕಾದರೆ ತಮ್ಮ ಐಡೆಂಟಿಟಿಯನ್ನು ಅಡಗಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ.
ದಲಿತರ ಈ Invisibilityಗೆ ಮೊದಲ ಸಂಕೇತವಾಗಿ ಪಿಕೆ ರೋಸಿಯವರು ಇತಿಹಾಸದಲ್ಲಿ ಉಳಿದಿದ್ದಾರೆ. ಭಾರತೀಯ ಸಿನಿಮಾರಂಗದ ಆರಂಭದ ದಿನಗಳಲ್ಲೆ ರೋಸಿಯವರು ಸಿನಿಮಾರಂಗವನ್ನು ಪ್ರವೇಶಿಸಿದರೂ ತಮ್ಮ ಜಾತಿಯ ಕಾರಣಕ್ಕೆ ಶಾಶ್ವತವಾಗಿ ಅಂಚಿಗೆ ತಳ್ಳಲ್ಪಟ್ಟರು. ಅವರ ಬದುಕನ್ನು, ಭಾರತೀಯ ಸಿನಿಮಾದಲ್ಲಿ ದಲಿತರ ಬದುಕಿನ ಆರಂಭದ ಬಿಂದು ಎಂದು ‘Dalit Cinema in India’ ಎನ್ನುವ ತಮ್ಮ ಲೇಖನದಲ್ಲಿ ದಲಿತ ಸಮುದಾಯದ ಮಾರ್ಗಪ್ರವರ್ತಕ ಲೇಖಕ ಪ ರಂಜಿತ್ ದಾಖಲಿಸುತ್ತಾರೆ.
ಅಲ್ಲದೆ ತಮ್ಮ Neelam Cultural Centerನ ಮೂಲಕ ಪ್ರತಿವರ್ಷ ಆಚರಿಸುವ Dalit History Monthನ ಭಾಗವಾಗಿ ಕಳೆದ ವರ್ಷ ಪಿಕೆ ರೋಸಿಯವರ ನೆನಪಿನಲ್ಲಿ ದಲಿತ ಸಿನಿಮಾ ಹಬ್ಬವನ್ನು ಆಯೋಜಿಸುವ ಮೂಲಕ ಗೌರವಿಸಿದ್ದರು.
ಇವತ್ತು ನಾಗರಾಜ್ ಮಂಜುಳೆ, ಪ ರಂಜಿತ್, ಮಾರಿ ಸೆಲ್ವರಾಜ್, ನೀರಜ್ ಗಾಯ್‌ವಾನ್ ಮುಂತಾದವರು ತಮ್ಮ ಸಿನಿಮಾಗಳ ಮೂಲಕ ದಲಿತ ಸಂವೇದನೆಯನ್ನು ಭಾರತೀಯ ಸಿನಿಮಾರಂಗದಲ್ಲಿ ಮೂಡಿಸಿದ್ದಾರೆ.
ದಲಿತ ಸಿನಿಮಾ ಎನ್ನುವುದು ಮುಖ್ಯವಾಹಿನಿಯ ಸಿನಿಮಾ ಆಗಬಹುದು, ದಲಿತರ ವಸ್ತುವನ್ನಿಟ್ಟುಕೊಂಡ ಸಿನಿಮಾಗಳಲ್ಲಿ ರಜನಿಕಾಂತ್ ತರದ ಸ್ಟಾರ್ ನಟರು ಕೂಡ ನಟಿಸಬಹುದು ಅನ್ನುವಷ್ಟರ ಮಟ್ಟಿಗೆ ಮಾನ್ಯತೆ, ಯಶಸ್ಸು ದಲಿತ ಸಿನಿಮಾಗಳಿಗೆ ಸಿಕ್ಕಿದೆ. ಆದರೆ ದಲಿತ ವಸ್ತುಗಳನ್ನು ಇಟ್ಟುಕೊಂಡು ದಲಿತ ನಿರ್ದೇಶಕರೇ ಮಾಡುವ ಸಿನಿಮಾಗಳಲ್ಲಿ ಸ್ತ್ರೀಪಾತ್ರಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ದಲಿತ ಮಹಿಳೆಯರ‌ ಪ್ರಾತಿನಿಧ್ಯದ ಪ್ರಶ್ನೆಯನ್ನು ದಲಿತ ಮಹಿಳೆಯರು ಬಹಳ ಗಂಭೀರವಾಗಿ ಎತ್ತಿದ್ದಾರೆ.
ಪ ರಂಜಿತ್ ತರದ ಮಾರ್ಗ ಪ್ರವರ್ತಕ ಸಿನಿಮಾ‌ ನಿರ್ದೇಶಕರ ಸಿನಿಮಾಗಳಲ್ಲಿಯೂ ಕೂಡ ದಲಿತ ಮಹಿಳೆಯರ ಪಾತ್ರಗಳನ್ನು ಮೇಲ್ಜಾತಿಗಳಿಂದ ಬಂದ, ಶ್ವೇತವರ್ಣದ ನಟಿಯರೇ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆ ಪಾತ್ರಗಳ ಜೊತೆಗೆ ನಮ್ಮನ್ನು ಸಮೀಕರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಿಮರ್ಶೆಯನ್ನು ಕಿರುಬ ಮುನಿಸ್ವಾಮಿ ತರದ ಹೊಸ ತಲೆಮಾರಿನ ಚಿಂತಕಿಯರು ಎತ್ತಿದ್ದಾರೆ.
ದಲಿತ ವಸ್ತುವಿನ ಸಿನಿಮಾಗಳು authentic ಅನ್ನಿಸಿಕೊಳ್ಳಬೇಕಾದರೆ ದಲಿತ ನಿರ್ದೇಶಕರೇ ಬರಬೇಕಾಯಿತು. ಇದೇ ರೀತಿ ದಲಿತ ಹೆಣ್ಣುಮಕ್ಕಳೆ ದಲಿತ ಪಾತ್ರಗಳನ್ನು ನಿರ್ವಹಿಸುವ ಕಾಲ ಬೇಗ ಬರಲಿ ಎಂದು ಆಶಿಸಬೇಕಾಗುತ್ತದೆ. ನೂರು ವರ್ಷಕ್ಕೂ ಮೀರಿ ಸಿನಿಮಾ‌‌ ಇತಿಹಾಸವಿರುವ ದೇಶದಲ್ಲಿ ದಲಿತ ಮಹಿಳೆಯರು ಇವತ್ತಿಗೂ ಸಿನಿಮಾ ರಂಗದಲ್ಲಿ ಅದೃಶ್ಯರಾಗಿಯೇ ಉಳಿದಿರುವಾಗ ಪಿಕೆ ರೋಸಿಯವರು ಶತಮಾನದ ಹಿಂದೆಯೇ ಚಿತ್ರರಂಗಕ್ಕೆ ಬಂದು ಜಾತಿ ವ್ಯವಸ್ಥೆಗೆ ಸವಾಲು ಹಾಕ್ಕಿದ್ದು ಆ ಕಾರಣಕ್ಕಾಗಿಯೇ ತಮ್ಮ ಜೀವಮಾನದುದ್ದಕ್ಕೂ ಅಜ್ಞಾತವಾಗಿಯೇ ಉಳಿದಿದ್ದು ಯಾವತ್ತೂ ದಲಿತ ಸಮುದಾಯ ಮರೆಯಬಾರದ ವಿಷಯ.

ಕೃಪೆ:ಫೇಸ್ ಬುಕ್ ನಲ್ಲಿನ ಬರಹ.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!