ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪರವಾಗಿ ವೇಮಗಲ್‌ನಲ್ಲಿ ಫೆ ೧೩ರಂದು ನಡೆಸುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಬರುವ ಮಹಿಳೆಯರಿಗೆ ಭರ್ಜರಿಆಮಿಷ ಒಡ್ಡಲಾಗುತ್ತಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರ ಇಲಾಖೆ ವ್ಯಾಪ್ತಿಗೆ ಸೇರಿರುವ ಡಿ.ಸಿ.ಸಿ. ಬ್ಯಾಂಕ್ ಸೂಪರ್‌ಸೀಡ್ ಆಗುವುದನ್ನು ಹಾಗೂ ಜೈಲುಪಾಲಾಗುವುದನ್ನು ತಪ್ಪಿಸಿದ ಸಿದ್ದರಾಮಯ್ಯ ಅವರ ಋಣ ತೀರಿಸಿ ಕೊಳ್ಳಲು ಸುಮಾರು ೫೦ ಲಕ್ಷ ರೂಗಳನ್ನು ವೇಮಗಲ್ ಸಮಾವೇಶಕ್ಕೆ ವೆಚ್ಛ ಮಾಡಿ ೨೫ ಸಾವಿರ ಮಹಿಳೆಯರನ್ನು ಸಂಘಟಿಸುವ ಜವಾಬ್ದಾರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರೇ ಹೊತ್ತಿದ್ದಾರೆ ಎಂದು ದೂರಿದರು,
ಸ್ವಸಹಾಯ ಮಹಿಳಾ ಸಂಘಗಳಿಗೆ ಬಡ್ಡಿ ರಹಿತವಾಗಿ ೧೦ ಲಕ್ಷ ರೂ ಸಾಲ ನೀಡುವುದಾಗಿ ಹಾಗೂ ಸಾಲವನ್ನು ಮನ್ನಾ ಮಾಡುವುದಾಗಿ ಸುಳ್ಳು ಭರವಸೆ ನೀಡಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸುವ ಮಹಿಳೆಯರಿಗೆ ಹಂಚಲು ರೇಷ್ಮೆ ಸೀರೆಗಳನ್ನು ತರಲು ಡಿಸಿಸಿ ಬ್ಯಾಂಕ್ ನಿರ್ದೇಶಕ ಕಡಗಟ್ಟೂರು ದಯಾನಂದ್ ಅವರಿಗೆ ೨೫ ಲಕ್ಷ ರೂ. ನೀಡಿದ್ದಾರೆ. ಮೂಗುತಿಗಳನ್ನು ತರಲು ಟಿ.ಎ.ಪಿ.ಸಿ.ಎಂ.ಸಿ. ಅಧ್ಯಕ್ಷ ನಾಗನಾಳ ಸೋಮಣ್ಣನವರಿಗೆ ಒಪ್ಪಿಸಲಾಗಿದ್ದು, ಭಾನುವಾರ ವೇಮಗಲ್ ಕ್ರೀಡಾಂಗಣದಲ್ಲಿ ಹಂಚಿಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಅರುಣ್ ಪ್ರಸಾದ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ನಗರಸಭೆ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಮುಖೇಶ್, ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಓದಿ ಹಂಚಿ: