ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ನಗರೋತ್ಥಾನ-4 ಯೋಜನೆಯ ಕಾಮಗಾರಿಗಳ ಅನುಷ್ಟಾನದಲ್ಲಿ ವಿಳಂಬದ ಬಗ್ಗೆ ನಗರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾ ಘೋಷ್ಟಿಯಲ್ಲಿ ವಿವರಿಸಿದರು.
ನಗರಸಭೆ ವ್ಯಾಪ್ತಿಯ 35 ವಾರ್ಡುಗಳಲ್ಲಿ ನಗರೋತ್ಥಾನ-4ರ ಯೋಜನೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ರೂ.25.00 ಕೋಟಿ ವೆಚ್ಚದ ಕಾಮಗಾರಿಗಳಿಗೆ ಪೌರಾಡಳಿತ ಇಲಾಖೆ ಟೆಂಡರ್ ಕರೆಯಲಾಗಿರುತ್ತದೆ. ಪ್ರಥಮವಾಗಿ ಟೆಂಡರ್ ಕರೆದಾಗ ಒಂದೇ ಬಿಡ್ ಸಲ್ಲಿಕೆಯಾಗಿದ್ದ ಕಾರಣ ಮರು ಟೆಂಡರ್ ಕರೆಯಲಾಗಿರುತ್ತದೆ ಎಂದರು.
ಒಬ್ಬ ಗುತ್ತಿಗೆದಾರ ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಮೊರೆ ಹೋಗಿ ಇಡೀ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು, ಸುಮಾರು 4 ತಿಂಗಳ ಕಾಲ ವಿಳಂಬವಾಗಿರುತ್ತದೆ. ಪ್ರಕರಣದ ಮಾಹಿತಿ ಪಡೆದ ಖುದ್ಧು ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿಗಳು ಪ್ರಾರಂಭವಾಗಬೇಕಾಗಿರುವ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸರ್ಕಾರಿ ಆಭಿಯೋಜಕರ ಮುಖಾಂತರ ಸಲ್ಲಿಸುವಂತೆ ಮಾಡಿರುತ್ತೇನೆ ಎಂದರು.
ನ್ಯಾಯಾಲಯವು ದಿನಾಂಕ:10-02-2023 ರಂದು ವಾದವನ್ನು ಆಲಿಸಿ, ಅರ್ಜಿದಾರರಿಗೆ ಟೆಂಡರ್ ಸಲ್ಲಿಸಿಕೊಳ್ಳಲು ಮತ್ತೊಂದು ಅವಕಾಶವನ್ನು ನೀಡಿ ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶಿಸಿದ್ದು, ನ್ಯಾಯಾಲಯದ ಆದೇಶದಿಂದ ಕೆ.ಜಿ.ಎಫ್. ನಗರದ ಎಲ್ಲಾ ನಗರಸಭೆ ಸದಸ್ಯರು ಪ್ರಸ್ತಾವನೆ ನೀಡಿರುವ ಸಾರ್ವಜನಿಕರಿಗೆ ಅತೀ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ವಳ್ಳಲ್ ಮುನಿಸ್ವಾಮಿ, ಉಪಾದ್ಯಕ್ಷೆ ದೇವಿ ಗಣೇಶ್ ಮೊದಲಾದವರಿದ್ದರು.