• Tue. Jun 18th, 2024

PLACE YOUR AD HERE AT LOWEST PRICE

ಭಾರತ ದೇಶ ಇಂದು ಅಪಾಯದಲ್ಲಿದೆ, ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸಂವಿಧಾನವೂ ಅಪಾಯದಲ್ಲಿ ಸಿಲುಕಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಕ್ಷಣೆ ಮಾಡಲು ಈ ದೇಶದ ಬಹುಸಂಖ್ಯಾತ ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ಪ್ರತಿಪಾಧಕರು ಅನಿವಾರ್ಯವಾಗಿ ಇಂದು ಒಂದಾಗಬೇಕು ಎಂದು ವಿಡುದಲೈ ಚಿರುತೈಗಳ್ ನಾಯಕ ಹಾಗೂ ತಮಿಳು ನಾಡಿನ ಸಂಸದ ಡಾ.ತೋಳ್ ತಿರುಮಾವಳವನ್ ಕರೆ ನೀಡಿದರು.

ಪಟ್ಟಣದ ಮಾಲೂರಿನ ಹೋಂಡಾ ಕ್ರೀಡಾಂಗಣದಲ್ಲಿ ಸ್ಯಾಮ್ ಆಡಿಯೋಸ್ ವತಿಯಿಂದ ಹಮ್ಮಿಕೊಂಡಿದ್ದ ದೇಶದ ಮೊಟ್ಟ ಮೊದಲ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಬರಹಗಳು ಹಾಗೂ ಭಾಷಣಗಳ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಮನುವಾದ ಎಂಬುವ ಎರಡು ಭಾಗಗಳಾಗಿ ವಿಂಗಡಣೆಗೊಂಡಿದೆ. ಸಂಘಪರಿವಾರ ಮತ್ತು ಮನುವಾದಿ ಶಕ್ತಿಗಳು ಸಂವಿಧಾನವನ್ನು ನಾಶ ಮಾಡಲು ಹೊರಟಿವೆ, ಸಂವಿದಾನ ಮತ್ತು ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದೆ. ಸಂವಿಧಾನ ರಕ್ಷಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

ಅಂಬೇಡ್ಕರ್ ಯಾವುದೇ ನಿಧಿಷ್ಠ ಸಮುದಾಯಕ್ಕಾಗಿ ಸಂವಿಧಾನ ರಚಿಸಲಿಲ್ಲ, ಬದಲಾಗಿ ನವ ಭಾರತ ನಿರ್ಮಾಣಕ್ಕಾಗಿ ಸಂವಿಧಾನ ರಚಿಸಿದರು. ಈ ಹಿಂದೆ ಭಾರತ ಜಾತಿ, ಮತಗಳಿಂದ ಕೂಡಿದ ನರಕ ಭಾರತವಾಗಿತ್ತು, ಅಂಬೇಡ್ಕರ್ ಸಮವಿಧಾನ ರಚನೆಯ ಮೂಲಕ ದೇಶದ ಸಮಸ್ತ ನಾಗರೀಕರಿಗೂ ಸಮಾನ ಅವಕಾಶ ಕಲ್ಪಿಸುವ ಸಮಗ್ರ ಭಾರತ ಕಟ್ಟುವ ಕನಸು ಕಂಡಿದ್ದರು. ಅಂಬೇಡ್ಕರ್ ನವ ಭಾರತ ನಿರ್ಮಾಣಕ್ಕೆ ಸೈನ್ಯ ಕಟ್ಟಲಿಲ್ಲ, ಯಾವುದೇ ಆಯುಧಗಳನ್ನು ಬಳಸುವ ತರಬೇತಿ ನೀಡಲಿಲ್ಲ, ಅವರು ಏಕ ವ್ಯಕ್ತಿಯಾಗಿ ತಮ್ಮ ಲೇಖನ ಹಾಗೂ ಚಿಂತನೆಯಿoದ ಸಂವಿಧಾನವೆಂಬ ಮಹಾ ಶಕ್ತಿಯನ್ನು ಅರ್ಪಿಸಿದ್ದಾರೆ. ಶಿಕ್ಷಣ ಹಕ್ಕು ಬರೀ ಉದ್ಯೋಗಕ್ಕಾಗಿ ಮಾತ್ರ ಇಲ್ಲ, ಶಿಕ್ಷಣದ ಮೂಲಕ ಸ್ವಾಭಿಮಾನಿಯಾಗಬೇಕೆಂಬುದು ಅಂಬೇಡ್ಕರ್ ಆಶಯವಾಗಿದೆ. ಶಿಕ್ಷಣ ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಪ್ರಜಾಪ್ರಭುತ್ವವನ್ನು ಗೌರವಿಸುವಂತೆ ಪ್ರೇರೇಪಿಸುತ್ತದೆ, ಬ್ರಾತೃತ್ವವನ್ನು ಕಲಿಸುತ್ತದೆ, ಸಮಾನತೆಯನ್ನು ಬಯಸುತ್ತದೆ ಅದಕ್ಕಾಗಿ ಅಂಬೇಡ್ಕರ್ ಸಂವಿಧಾನವನ್ನು ಈ ದೇಶಕ್ಕಾಗಿ ಅರ್ಪಿಸಿದ್ದಾರೆ ಎಂದು ತಿಳಿಸಿದರು.

ಸಂವಿಧಾನ ಅಪಾಯದಲ್ಲಿರುವ ಕಾರಣ ಸಾಮಾಜಿಕ ನ್ಯಾಯವೂ ಅಪಾಯದಲ್ಲಿದೆ. ಎಲ್ಲರೂ ಅಂಬೇಡ್ಕರ್ ಕುರಿತು ಉಪನ್ಯಾಸ ಕೊಡ್ತಾರೆ ಆದರೆ ಯಾರೂ ಪಾಲನೆ ಮಾಡುವುದಿಲ್ಲ, ದಲಿತರು, ಅವಕಾಶ ವಂಚಿತರು, ಹಿಂದುಳಿದವರು, ತಳಸಮುದಾಯಗಳು ಶಾಸನ ಸಭೆಗಳಲ್ಲಿ ಭಾಗವಹಿಸುವಂತಾಗಬೇಕು. ಅದಕ್ಕೇ ಪ್ರತಿಯೊಬ್ಬರೂ ತಮ್ಮ ಮತ ಚಲಾವಣೆಗೆ ಮತಗಟ್ಟೆಗೆ ಹೋಗುವಾಗ ಒಬ್ಬರಿಗೆ ಒಂದು ಮತ, ಒಂದು ಮೌಲ್ಯ ಎಂಬುದನ್ನು ನೆನೆಪಿನಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದ ಅವರು, ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವವಾದಿಗಳು ಒಂದಾಗಬೇಕು, ಅಂಬೇಡ್ಕರ್ ಕಂಡ ನವ ಭಾರತದ ಕನಸುಗಳ ಚಿಂತನೆ ಹೊಂದಿರುವವರನ್ನು ಶಾಸನ ಸಭೆಗಳಿಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಕೆಲವ ತಿಂಗಳುಗಳ ಹಿಂದೆ ಮನುವಾದಿ ಸಂಘಟನೆಗಳು ಒಂದೆಡೆ ಸೇರಿ ಹೊಸ ಸಂವಿಧಾನ ರಚಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ೨೦೨೪ರ ಮಹಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ ಆ ಹೊಸ ಸಂವಿಧಾನವನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಅದು ಜಾರಿಯಾದರೆ, ಭಾರತ, ಇಂಡಿಯಾ ಅನ್ನೋ ಹೆಸರುಗಳು ಇರಲ್ಲಾ, ರಾಜದಾನಿ ದೆಹಲಿಯಿಂದ ವಾರಣಾಸಿಗೆ ಬದಲಾಗುತ್ತದೆ. ದೇಶದ ಧ್ವಜ ಸ್ವಸ್ತಿಕ್ ಇರುವ ಖಾವಿಯಾಗಿರುತ್ತೆ. ಪ್ರಜಾಪ್ರಭುತ್ವ ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು ಹೇಳಲಾಗಿದೆ ಎಂದು ತಿರುಮಾವಳವನ್ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವವೇ ಅಂಬೇಡ್ಕರ್ ಅವರನ್ನು ಜ್ಞಾನಿಯನ್ನಾಗಿ ನೋಡುತ್ತಿದೆ. ಆದರೆ ಭಾರತ ಇಂದಿಗೂ ಅಂಬೇಡ್ಕರ್ ಅವರನ್ನು ಜಾತಿಯಿಂದ ಗುರುತಿಸುತ್ತಿರುವುದು ವಿಪರ್ಯಾಸ ಎಂದು ವಿಷಾಧಿಸಿದರು. ಅಂಬೇಡ್ಕರ್‌ರವರನ್ನು ಇಂದು ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ಕಾಣುತಿದ್ದೇವೆ. ನಿಜವಾಗಲೂ ಅಂಬೇಡ್ಕರ್ ಅವರನ್ನು ನಾವು ಅನುಸರಣೆಯಲ್ಲಿ ಕಾಣಬೇಕಿದೆ. ಅಂಬೇಡ್ಕರ್ ಇಲ್ಲದ ಭಾರತ ಧರಿದ್ರ ಭಾರತವಾಗುತ್ತದೆ ಎಂದರು.

ಬಾಬಾ ಸಾಹೇಬರು ಈ ದೇಶದ ಪ್ರತಿಯೊಬ್ಬರಿಗೂ ಒಂದು ಶಕ್ತಿಯನ್ನು ಕೊಟ್ಟಿದ್ದಾರೆ. ಅದು ನಮ್ಮ ಬೆರಳತುದಿಯಲ್ಲಿದೆ. ಅದುವೇ ಮತದಾನದ ಶಕ್ತಿ. “ಮತ ನಿಮ್ಮ ಮಗಳಿದ್ದಂತೆ, ಅದನ್ನು ಮಾರಾಟ ಮಾಡಬೇಡಿ”ಒಂದು ವೇಳೆ ಮಾರಾಟ ಮಾಡಿದರೆ ಅದು ನಿಮ್ಮ ಮಗಳನ್ನು ಮಾರಾಟಕ್ಕಿಟ್ಟಂತೆ ಎಂದು ಎಚ್ಚರಿಸಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಸ್ಯಾಮ್ ಆಡಿಯೋಸ್‌ನ ಆನಂದ್ ಸಿದ್ದಾರ್ಥ್, ಸ್ಯಾಂ ಆಡಿಯೋಸ್ ಮಂಜುನಾಥ್, ಜೆಡಿಎಸ್ ಮುಖಂಡ ರಾಮೇಗೌಡ, ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್, ಕುಮರಿ ನಜ್ಮಾ, ದಸಂಸ ಮುಖಂಡ ಸ್ಪೆಕ್ಸ್ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸರ್ಕಾರಿ ಎಸ್ಸಿ/ನೌಕರರ ಮಾಜಿ ಅಧ್ಯಕ್ಷೆ ವಿಜಯಕುಮಾರಿ ಸೇರಿದಂತೆ ಹಲವು ಸ್ಥಳೀಯ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!