ಬಂಗಾರಪೇಟೆ ತಾಲ್ಲೂಕಿನ ಹುನುಕುಂದ ಗ್ರಾಮದ ವಾಸಿ ಶಂಕ್ರಪ್ಪ ಎಂಬುವವರು ಸರ್ವೇ ನಂಬರ್ 29 ರ ಜಮೀನಿನಲ್ಲಿ ಅಕ್ರಮವಾಗಿ 11 ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿ ಅಬಕಾರಿ ನಿರೀಕ್ಷಕರಾದ ರಮಾಮಣಿರವರು 15-04-2021ರಂದು ಪ್ರಕರಣವನ್ನು ದಾಖಲಿಸಿದ್ದರು.
ನಂತರ ಸದರಿ ಪ್ರಕರಣವನ್ನು ಅಬಕಾರಿ ಅಧಿಕಾರಿ ಪ್ರಕೃತಿ ಪಿ ಜೈನ್ ರವರು ತನಿಖೆ ನಡೆಸಿ ಅಂತಿಮ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದರಿ ಪ್ರಕರಣವು ಕೋಲಾರದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗೆ ಶಿಕ್ಷೆಯಾಗಿದೆ.
ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದು ಸಾಬೀತಾಗಿರುವುದರಿಂದ ನ್ಯಾಯಾಲಯವು ಆರೋಪಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿ ಅಂತಿಮ ತೀರ್ಪನ್ನು ನೀಡಿದೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಾರಾಕುಲ್ಲಾ ಹುಸೇನಿ ರವರು ವಾದವನ್ನು ಮಂಡಿಸಿದ್ದರು. ಕೋಲಾರ್ ಜಿಲ್ಲೆಯ ಅಬಕಾರಿ ಉಪಯುಕ್ತರಾದ ರಮೇಶ್ ಕುಮಾರ್ ರವರು ಪ್ರಕರಣದ ತನಿಖೆಗೆ ಮಾರ್ಗದರ್ಶನ ನೀಡಿದ್ದರು.