ಕೆಜಿಎಫ್:ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಹಾಗೂ ಆಡಳಿತ ಭಾಷೆಯಾಗಿದ್ದರೂ ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟಿರುವ ಬೆಮೆಲ್ ಕಾರ್ಖಾನೆಯ ಕಾರ್ಮಿಕ ಸಂಘದ ಚುನಾವಣೆ ಪ್ರಚಾರದ ಬ್ಯಾನರ್ ನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಬೆಮೆಲ್ ಕಾರ್ಖಾನೆ ಕಾರ್ಮಿಕ ಸಂಘದ ಚುನಾವಣೆಯು ಇದೇ ತಿಂಗಳ 25ರಂದು ನಡೆಯಲಿದ್ದು, ಕಾರ್ಖಾನೆ ಮುಂದೆ ಕಟ್ಟಿರುವ ಬೃಹತ್ ಫ್ಲೆಕ್ಸ್ ಮತ್ತು ಬ್ಯಾನರ್‍ಗಳಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕನ್ನಡದ ಒಂದೇ ಒಂದು ಅಕ್ಷರವೂ ಕಾಣಸಿಗದೇ ಇರುವುದರಿಂದ ಕನ್ನಡಾಭಿಮಾನಿಗಳು ಸಂಘದ ವಿರುದ್ಧ ಆಕ್ರೋಷಗೊಂಡಿದ್ದಾರೆ.
ಈ ಹಿಂದೆ ಬೆಮೆಲ್ ಕಾರ್ಖಾನೆ ಉಪ ಸಮಿತಿ ಕಾರ್ಮಿಕ ಕಲ್ಯಾಣ ನಿಧಿಯು ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಿದ್ದರೂ ಸಹ ಅದನ್ನು ಇನ್ನೂ ಕಾರ್ಯರೂಪಕ್ಕೆ ತರುವುದಕ್ಕೆ ಏಕೆ ಆಗಿಲ್ಲ ಎಂದು ಬೆಮೆಲ್ ಕಾರ್ಖಾನೆಯಲ್ಲಿನ ಕೆಲವು ಕನ್ನಡಿಗ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.
ಬೆಮೆಲ್ ಆಡಳಿತ ಮಂಡಳಿಯವರೂ ಸಹ ಕನ್ನಡವನ್ನು ಪ್ರಧಾನ ಭಾಷೆಯನ್ನಾಗಿ ಬಳಸಲು ನಿರ್ಧರಿಸಿದ್ದಾರೆ. ಆದರೆ ಕಾರ್ಮಿಕ ಸಂಘಕ್ಕೆ ಮಾತ್ರ ಕನ್ನಡ ಭಾಷೆ ಬೇಡದಂತಾಗಿದೆ. ಕಾರ್ಮಿಕ ಸಂಘಕ್ಕೆ ಕನ್ನಡದ ಅವಶ್ಯಕತೆ ಇಲ್ಲ, ಆದರೆ ಕಾರ್ಖಾನೆಯಲ್ಲಿ ದುಡಿಯುವ ಕನ್ನಡಿಗರು ಬೇಕೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಕಾರ್ಮಿಕ ಸಂಘದವರು ಇದಕ್ಕೆ ಉತ್ತರಿಸಬೇಕಾಗಿದೆ.
ಕೆಜಿಎಫ್ ತಾಲ್ಲೂಕು ಒಂದೆಡೆ ಆಂಧ್ರಪ್ರದೇಶ ಮತ್ತೊಂದೆಡೆ ತಮಿಳುನಾಡಿನ ಗಡಿಗಳಿಗೆ ಹೊಂದಿಕೊಂಡಿದ್ದು, ಎನ್ನಡ, ಎಕ್ಕಡ ಮಧ್ಯೆ ಕನ್ನಡ ಎನ್ನುವಂತಾಗಿದ್ದು, ಕನ್ನಡ ಭಾಷೆಯನ್ನು ಉಳಿಸಿ ಬಳೆಸಬೇಕಾದ ಜವಾಬ್ದಾರಿಯನ್ನು ಹೊತ್ತಕೊಳ್ಳಬೇಕಾದ ಕನ್ನಡ ಸಂಸ್ಥೆಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಿದೆ.