ದೂರದ ರಷ್ಯಾದ ಸೈಬಿರಿಯಾದಿಂದ ಯೋಗಾಭ್ಯಾಸಿಗಳ ತಂಡವೊಂದು ಕೋಲಾರ ಅವಿಭಜಿತ ಜಿಲ್ಲೆಯ ಶ್ರೀಕ್ಷೇತ್ರ ಕೈವಾರಕ್ಕೆ ಆಗಮಿಸಿದ್ದು, ಐದು ದಿನಗಳ ಯೋಗಶಿಬಿರವನ್ನು ಹಮ್ಮಿಕೊಂಡಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ತಿಳಿಸಿದರು.
ತಂಡದ ಮುಖ್ಯಸ್ಥರಾಗಿ ಆಗಮಿಸಿರುವ ಯೋಗಶಿಕ್ಷಕ ಎಲೆಕ್ಸಿ ಧರ್ಮಾಧೀಕಾರಿ ಡಾ.ಜಯರಾಂ ಅವರೊಂದಿಗೆ ಮಾತನಾಡಿ, ನಾನು ರಷ್ಯಾದ ಸೈಬಿರಿಯಾದಲ್ಲಿ ಯೋಗವನ್ನು ಬೋಧಿಸುವ ಶಾಲೆಯನ್ನು ಹೊಂದಿದ್ದೇನೆ. ಪ್ರತಿವರ್ಷವೂ ನಾವು ಭಾರತಕ್ಕೆ ಬರುತ್ತೇವೆ. ಸುಮಾರು ೧೫ ವರ್ಷಗಳ ಹಿಂದೆ ನಾನು ತಮಿಳುನಾಡಿನ ಯೋಗ ಗುರುಗಳಾದ ಶಿವಾನಂದ ಪುಲಿಪ್ಪಾಣಿ ಸ್ವಾಮಿಗಳಿಂದ ದೀಕ್ಷೆ ಪಡೆದಿದ್ದಾಗಿ ತಿಳಿಸಿದರು.
ಅಂದು ಗುರುಗಳು ನನ್ನ ಹೆಸರನ್ನು ‘ರುದ್ರಾನ್’ ಎಂದು ಮರುನಾಮಕರಣ ಮಾಡಿದರು. ಅಂದಿನಿಂದಲೂ ಯೋಗಾಭ್ಯಾಸವನ್ನು ವಿಧಿವತ್ತಾಗಿ ಕಲಿತಿದ್ದೇನೆ.
ಭಾರತದಲ್ಲಿ ಜೀವಸಮಾಧಿಯಾಗಿರುವ ಗುರುಗಳು ತುಂಬಾ ಇದ್ದಾರೆ. ಕೈವಾರ ಕ್ಷೇತ್ರ ಯೋಗಿನಾರೇಯಣ ತಾತಯ್ಯನವರ ಜೀವಸಮಾಧಿಯಾಗಿರುವ ಸ್ಥಳಕ್ಕೆ ಬರಬೇಕು ಎಂದು ತಿರ್ಮಾನಿಸಿ ಇಲ್ಲಿಗೆ ಬಂದಿದ್ದೇವೆ. ನಾವು ಗುರುಗಳು ಜೀವಸಮಾಧಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿ ಧ್ಯಾನ, ಪ್ರಾಣಾಯಾಮ ಮುಂತಾದ ಯೋಗಸಾಧನೆಗಳನ್ನು ಮಾಡಿಕೊಳ್ಳುತ್ತೇವೆ ಎಂದರು.
ರಷ್ಯಾದಿಂದ ಬಂದಿರುವ ಯೋಗಾಭ್ಯಾಸಿಗಳಿಗೆ ಧರ್ಮಾಧಿಕಾರಿಗಳು ಕೈವಾರ ಕ್ಷೇತ್ರ, ಸದ್ಗುರು ತಾತಯ್ಯನವರ ಯೋಗಸಾಧನೆ ಮುಂತಾದ ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದರು. ಯೋಗಾಭ್ಯಾಸದ ತಂಡದಲ್ಲಿ ಕ್ಸೇನಿಯಾ, ಮರಿಯಾ, ನಟಲ್ಯ, ಎಲೀನಾ, ತತ್ಯಾನ್ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಹಾಗೂ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.