PLACE YOUR AD HERE AT LOWEST PRICE
ಜೀವಾ ನವೀನ್ ನಿರ್ದೇಶನದ, ನಮ್ಮ ಹೆಮ್ಮೆಯ ಕಲಾವಿದೆ ಉಮಾ ಅವರು ಅಭಿನಯಿಸಿರುವ ‘ಪಾಲಾರ್‘ ಸಿನಿಮಾ ಅಂತರಿಕ ಒತ್ತಡ, ಬಾಹ್ಯದ ಅಡೆತಡೆಗಳನ್ನು ಮೀರಿ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.
ಸೀಮಿತ ಮಾರುಕಟ್ಟೆಯ, ಮೇಲ್ಜಾತಿಗಳ ಹಿಡಿತದಲ್ಲಿರುವ ಕನ್ನಡ ಸಿನಿಮಾರಂಗದಲ್ಲಿ ದಲಿತರು ನಮ್ಮ ಕತೆಯನ್ನು ಹೇಳುತ್ತೇವೆ ಕೇಳಿ ಎಂದು ಆತ್ಮವಿಶ್ವಾಸದಿಂದ ರೂಪಿಸಿದ, ವಂಚಿತ ಸಮುದಾಯದ ಕಥಾವಸ್ತುವಿನ ಸಿನಿಮಾ ಬಿಡುಗಡೆಯಾಗುವುದು ಒಂದು ಮೇಲ್ಮುಖ ಚಲನೆ. ಸರಪಳಿಯನ್ನು ತುಂಡರಿಸುವ ಕ್ರಿಯೆ.
ಮೊದಲ ತಲೆಮಾರು ಅಂಚಿನಿಂದ ಕೇಂದ್ರದೆಡೆಗೆ ಚಲಿಸುವ ಪಯಣ. ಪಟ್ಟಭದ್ರರ ಕುಹುಕದ ಕಾರಣಕ್ಕೆ ಇಲ್ಲಿ ಆತಂಕ, ತಲ್ಲಣವಿರುತ್ತದೆ. ಈ ಹಿನ್ನೆಲೆಯಲ್ಲಿ ‘ಪಾಲಾರ್’ ಮುಖ್ಯವಾಗುತ್ತದೆ. ಆದರೆ ಈ ಕಾರಣಕ್ಕಾಗಿ ವಿಮರ್ಶೆಯಿಂದ ರಿಯಾಯಿತಿಯನ್ನು ಯಾರೂ ಕೇಳುತ್ತಲೂ ಇಲ್ಲ.
ಯಾಕಂದರೆ ಬೆಳೆಯುವ ಹಂತದಲ್ಲಿ ತುಷ್ಟೀಕರಣವು ಹಾದಿ ತಪ್ಪಿಸುತ್ತದೆ ಎನ್ನುವ ಎಚ್ಚರ ‘ಪಾಲಾರ್’ ಸಿನಿಮಾ ತಂಡಕ್ಕಿದೆ. ಈ ಹಂತದಲ್ಲಿ ಗುಣಮಟ್ಟದ ಕುರಿತು ಮಾತನಾಡುವುದು, ವಿಮರ್ಶೆ ವಸ್ತುನಿಷ್ಠವಾಗಿರಬೇಕೆ, ಬೇಡವೇ ಎನ್ನುವುದಕ್ಕಿಂತ ಮೊದಲ ಬಾರಿಗೆ ಮಾತಾನಾಡುತ್ತಿರುವ ಹೆಜ್ಜೆಗಳಿಗೆ ಕುತೂಹಲದಿಂದ ನೋಡುವ ಕಣ್ಣೋಟದ, ಸ್ಪಂದನೆಯ ಅಗತ್ಯವಿದೆ.
ಮತ್ತು ಖಂಡಿತವಾಗಿ ಇದು ವಿನಾಯಿತಿಯಲ್ಲ. ಆದರೆ ಅದೇ ಸಂದರ್ಭದಲ್ಲಿ ಹೆಜ್ಜೆಗಳನ್ನು ಇಡುತ್ತಿರುವವರು ತಡವರಿಸದಂತೆ, ದಾರಿ ತಪ್ಪದಂತೆ ಹೇಳಬೇಕಾದ ಮಾತುಗಳನ್ನು ಹೇಳಲೇಬೇಕು. ಇಲ್ಲದೇ ಹೋದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ. ಇದೇ ಚಲನಶೀಲತೆಯಲ್ಲವೇ?
‘ಪಾಲಾರ್’ ಸಿನಿಮಾ ತಂಡಕ್ಕೆ ಅಭಿನಂದನೆಗಳು.
ಶ್ರೀಪಾದ್ ಭಟ್.