• Wed. Nov 29th, 2023

ವಾರ್ ರೂಂ ನಿಂದ ಪೋಲ್ ಹೌಸ್ ಸಂಸ್ಥೆ ಪ್ರಥಮ ಸಮೀಕ್ಷಾ ವರದಿ ಪ್ರಕಟ- ಕೋಲಾರ ವಿಧಾನಸಭಾ ಕ್ಷೇತ್ರದ ಜನರ ಒಲವು ಸಿದ್ದರಾಮಯ್ಯ ಪರ

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದು ಈಗಾಗಲೇ ಕೋಲಾರದಲ್ಲಿ ತಮ್ಮ ಸ್ಪರ್ಧೆಯ ಬಗ್ಗೆ ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗಾಗಿ ಪೋಲ್ ಹೌಸ್ ಸಂಸ್ಥೆ  ಕೋಲಾರದಲ್ಲಿ ವಾರ್ ರೂಂ ಉದ್ಘಾಟನೆ ಮಾಡಿತ್ತು. ಪೋಲ್ ಹೌಸ್ ಸಂಸ್ಥೆ ತನ್ನ ಕಾರ್ಯಚಟುವಟಿಕೆಯ ಮೊದಲ ಸಮೀಕ್ಷೆ ವರದಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಿದೆ.

ಪೋಲ್ ಹೌಸ್ ಸಂಸ್ಥೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆಯನ್ನು ನಡೆಸಿ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಮತ್ತು ಕೋಲಾರ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವುದನ್ನು ಸಮೀಕ್ಷೆಯಲ್ಲಿ ಅರಿಯುವುದಾಗಿತ್ತು.

ಪೋಲ್ ಹೌಸ್ ಸಂಸ್ಥೆ ಕೇವಲ ಒಂದು ವಾರದಲ್ಲಿ ಸಂಪೂರ್ಣ ಕೋಲಾರ ವಿಧಾನಸಭಾ ಕ್ಷೇತ್ರದ ಬಗ್ಗೆ ಸಮೀಕ್ಷೆಯನ್ನು ನಡೆಸಿತ್ತು. ಸುಮಾರು 60 ಜನರ ತಂಡದಿಂದ ಸಮೀಕ್ಷೆ ನಡೆದಿದ್ದು ವರದಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಿದೆ.

ಸಮೀಕ್ಷೆ ವರದಿಯಲ್ಲಿರುವ ಪ್ರಮುಖ ಅಂಶಗಳು:

ಸುಮಾರು 20 ಸಾವಿರ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿತ್ತು, ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಗ್ಗೆ ಖಚಿತವಾದ ಬಳಿಕ ಕಾಂಗ್ರೆಸ್ ಪಕ್ಷದ ಸಂಘಟನೆ ತೀವ್ರವಾಗಿದೆ. ರಹಸ್ಯವಾಗಿ ಕಾಂಗ್ರೆಸ್ ನಾಯಕರು ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರೆ.

ಕೋಲಾರದ ಜನ ಸಿದ್ದರಾಮಯ್ಯ ಅವರು ಇಲ್ಲಿಂದ ಆಯ್ಕೆಯಾದರೆ ನಮ್ಮ ಊರಿನಿಂದ ಆಯ್ಕೆಯಾದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭಾವನಾತ್ಮಕತೆ ಹೊಂದಿದ್ದಾರೆ. ಸಿಎಂ ಅಭ್ಯರ್ಥಿಯಾಗಿರುವುದರಿಂದ ಭರಪೂರ ಅನುದಾನಗಳು ಈ ಕ್ಷೆತ್ರಕ್ಕೆ ಹರಿದು ಬರಲಿದ್ದು ಕೋಲಾರ ಅಭಿವೃದ್ಧಿಯತ್ತ ಸಾಗುತ್ತದೆ ಎನ್ನುವ ಅಭಿಪ್ರಾಯ ಹೊಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಮಾಜಿ ಲೋಕಸಭಾ ಸದಸ್ಯ ಕೆ.ಎಚ್. ಮುನಿಯಪ್ಪರವರ ಮಾತುಕತೆಯಿಂದಾಗಿ ಕ್ಷೇತ್ರದ ಜನರಲ್ಲಿ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ಹಾಲಿ ಶಾಸಕ  ಕೆ. ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಸಿಕ್ಕಿದೆ.

ಕೋಲಾರದ ಫ್ರಂಟ್ ಲೈನ್ ನಾಯಕರಾಗಿರುವ ವಿಧಾನಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ನಜೀರ್ ಅಹ್ಮದ್, ವಿ.ಆರ್.ಸುದರ್ಶನ್ ಸೇರಿದಂತೆ ಹಿರಿಯ ನಾಯಕರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದು ಪಕ್ಷ ಸಂಘಟನೆ ಪ್ರಬಲವಾಗುತ್ತಿದೆ. ಮುಸ್ಲಿಂ ಸಮುದಾಯ, ಕುರುಬರು, ತಿಗಳರು ಮತ್ತು ದಲಿತರು ಪ್ರಬಲವಾಗಿದ್ದು ಇವರೆಲ್ಲರ ಬೆಂಬಲ ಈ ಬಾರಿ ಸಿದ್ದರಾಮಯ್ಯ ಅವರಿಗಿದೆ.

ಒಕ್ಕಲಿಗರ ಸಮುದಾಯದಿಂದ ಸಿ.ಎಂ.ಆರ್ ಶ್ರೀನಾಥ್ ಅಭ್ಯರ್ಥಿಯಾಗಿದ್ದರೂ ಕೂಡ ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಒಕ್ಕಲಿಗರ ಸಮುದಾಯದ ಬಹುಪಾಲು ಮತಗಳು ಸಿದ್ದರಾಮಯ್ಯ ಅವರ ಪರವಾಗುವ ಸಂಭವವಿದೆ.

ಅಚ್ಚರಿ ಎಂಬಂತೆ ಈ ಬಾರಿ ತಿಗಳ ಸಮುದಾಯ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಮುಂದಾಗಿದೆ. ಕೋಲಾರದಲ್ಲಿ ತಿಗಳ ಸಮುದಾಯ ಇಲ್ಲಿಯವರೆಗೂ ಒಂದೇ ಪಕ್ಷವನ್ನು ಸತತವಾಗಿ ಬೆಂಬಲಿಸಿಕೊಂಡು ಬಂದಿರಲಿಲ್ಲ. ಈ ಬಾರಿ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಕಡೆ ತಮ್ಮ ಒಲವು ಮೂಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!