• Wed. Apr 24th, 2024

PLACE YOUR AD HERE AT LOWEST PRICE

ವಿಶೇಷ ವರದಿ : ಸಿ.ವಿ.ನಾಗರಾಜ್,ಕೋಲಾರ.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಿರು ಪರಿಚಯ:

ಬಂಗಾರಪೇಟೆ ಕ್ಷೇತ್ರ ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಗೇ ಸಾಮಾನ್ಯ ಕ್ಷೇತ್ರವಾಗಿತ್ತು. ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಂಗಾರಪೇಟೆ ಕ್ಷೇತ್ರ ೧೯೬೭ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು. ೧೯೭೨ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಬೇತಮಂಗಲವು ಆನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾವಣೆಗೊಂಡು ೨೦೦೮ರಲ್ಲಿ ಕ್ಷೇತ್ರ ಪುರ್ನವಿಂಗಡಣೆಗೊoಡ ನಂತರ ಬೇತಮಂಗಲ ಕ್ಷೇತ್ರ ಬಂಗಾರಪೇಟೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಮೂಲತಃ ಮರಮುಟ್ಲು ಎಂದು ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಪ್ರದೇಶ ಕ್ರಮೇಣ ನಾಗರೀಕತೆ ಬೆಳೆದಂತೆ ಬೌರಿಂಗ್‌ಪೇಟೆಯಾಗಿ ತದನಂತರ ಬಂಗಾರಪೇಟೆ ಎಂದು ಬದಲಾವಣೆಗೊಂಡಿದೆ. ಟಿಪ್ಪು ಸುಲ್ತಾನ್ ತಂದೆ ಹೈದರ್‌ಅಲಿ ಜನ್ಮ ಸ್ಥಳ ಬೂದಿಕೋಟೆ, ಬ್ಯಾಟರಾಯಸ್ವಾಮಿ ಬೆಟ್ಟ, ಮಾರ್ಕಂಡೇಶ್ವರ ಜಲಾಶಯ, ಯರಗೋಳ್ ಡ್ಯಾಂ ಇಲ್ಲಿನ ಪ್ರಮುಖ ಆಕರ್ಷಣೆಗಳು.ವಾದ

ರಾಜಕೀಯ ಇತಿಹಾಸ :
೧೯೫೨ರಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಬೇತಮಂಗಲ-ಬoಗಾರಪೇಟೆ ವಿಧಾನಸಭಾ ಕ್ಷೇತ್ರ ೧೯೭೮ರರ ನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಗಿದೆ. ೧೯೫೭, ೧೯೬೨ ಮತ್ತು ೧೯೬೭ ಕ್ರಮವಾಗಿ ಇ.ನಾರಾಯಣಗೌಡ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಒಂದು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ೧೯೭೨ರಲ್ಲಿ ಕೆಜಿಎಫ್‌ನ ಕಂಗಾoಡ್ಲಹಳ್ಳಿಯ ದೊರೆಸ್ವಾಮಿನಾಯ್ಡು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. ೧೯೭೮ರಲ್ಲಿಕ್ಷೇತ್ರ ಪುರ್ನವಿಂಗಡಣೆಯಾಗಿ ಬೇತಮಂಗಲ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಎಂದು ಘೋಷಿಸಲಾಯಿತು. ಆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಸಿ.ವೆಂಕಟೇಶಪ್ಪನವರು ಜನತಾ ಪಕ್ಷದ ಟಿ.ಚನ್ನಯ್ಯನವರನ್ನು ಸೋಲಿಸಿ, ಬೇತಮಂಗಲ ಕ್ಷೇತ್ರದ ಪ್ರಥಮ ಪರಿಶಿಷ್ಟ ಜಾತಿ ಶಾಸಕರಾಗಿದ್ದಾರೆ. ೧೯೭೮, ೧೯೮೩, ೧೯೯೯ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ೧೯೮೫ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿ.ವೆಂಕಟೇಶಪ್ಪನವರ ಬದಲಿಗೆ ವಿ.ವೆಂಕಟಮುನಿಯವರಿಗೆ ಟಿಕೆಟ್ ನೀಡಿತು. ಆದರೆ ವೆಂಕಟಮುನಿಯವರು ಜನತಾ ಪಕ್ಷದ ಎ.ಚಿನ್ನಪ್ಪನವರ ಎದುರು ಪರಾಭವಗೊಂಡರು.

ಬೇತಮಂಗಲ ನಾರಾಯಣಸ್ವಾಮಿ ಎಂದೇ ಕರೆಸಿಕೊಳ್ಳುವ ಭೋವಿ ಸಮುದಾಯದ ಎಂ.ನಾರಾಯಣಸಾಮಿ ೧೯೮೯, ೧೯೯೪, ೨೦೦೮, ೨೦೧೧ರ ಉಪ ಚುನಾವಣೆ ಸೇರಿದಂತೆ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಸ್ವತಂತ್ರ, ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇದೀಗ ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದಾರೆ. ೨೦೦೪ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಕಾಂಗ್ರೆಸ್ ಪಕ್ಷವು ಹಾಲಿ ಶಾಸಕ ಸಿ.ವೆಂಕಟೇಶಪ್ಪನವರ ಬದಲಿಗೆ ರಾಮಚಂದ್ರ ಎನ್ನುವವರಿಗೆ ಟಿಕೆಟ್ ನೀಡುತ್ತದೆ. ಅವರು ೩೨,೦೯೬ ಮತಗಳನ್ನು ಪಡೆದರೆ, ಜನತಾದಳದಿಂದ ಹೊರಬಂದಿದ್ದ ಎಂ.ನಾರಾಯಣಸ್ವಾಮಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ೪೦,೫೭೦ ಮತಗಳನ್ನು ಪಡೆಯುತ್ತಾರೆ. ಈ ಇಬ್ಬರ ನಡುವಿನ ಕಾಳಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ ವೆಂಕಟಮುನಿಯಪ್ಪನವರು ೪೧,೧೧೭ ಮತಗಳನ್ನು ಪಡೆಯುವ ಮೂಲಕ ಕೇವಲ ೫೪೭ ಮತಗಳ ಅಂತರದಿoದ ಗೆದ್ದು ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುತ್ತಾರೆ.

೨೦೧೩ರ ವಿಧಾನಸಭಾ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗುತ್ತದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಎಂ ನಾರಾಯಣಸ್ವಾಮಿ ವಿರುದ್ಧ ಜನ ಸಿಟ್ಟಿಗೇಳುತ್ತಾರೆ. ಅವರು ಬಿಜೆಪಿಯಿಂದ ಕಣಕ್ಕಿಳಿದರೆ ಕಾಂಗ್ರೆಸ್ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಮತ್ತೆ ಟಿಕೆಟ್ ನೀಡುತ್ತದೆ. ಆ ಚುನಾವಣೆಯಲ್ಲಿ ಎಸ್.ಎನ್ ನಾರಾಯಣಸ್ವಾಮಿಯವರು ೨೮,೩೭೭ ಮತಗಳಿಂದ ಎಂ ನಾರಾಯಣಸ್ವಾಮಿಯವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ. ೨೦೧೮ರ ಚುನಾವಣೆಯಲ್ಲಿ ಬಿಜೆಪಿ ಮುನಿಸಿಕೊಂಡಿದ್ದ ವೆಂಕಟಮುನಿಯಪ್ಪನವರಿಗೆ ಟಿಕೆಟ್ ನೀಡಿ ಮಣೆ ಹಾಕುತ್ತಾರೆ. ಆದರೆ ಕಾಂಗ್ರೆಸ್‌ನ ಎಸ್.ಎನ್ ನಾರಾಯಣಸ್ವಾಮಿಯವರು ೭೦,೮೭೧ ಮತಗಳನ್ನು ಪಡೆದು ಎರಡನೇ ಬಾರಿಗೆ ಆಯ್ಕೆಯಾದರು.

ಕ್ಷೇತ್ರದ ಸಮಸ್ಯೆಗಳು :
ಬಂಗಾರಪೇಟೆಯಲ್ಲಿ ಯಾವುದೇ ಕೈಗಾರಿಕಾ ಪ್ರದೇಶವಾಗಲೀ, ಪ್ರಮುಖ ಸಾರ್ವಜನಿಕ ಉದ್ದಿಮೆಗಳಾಗಲೀ, ಉನ್ನತ ಶಿಕ್ಷಣ ಸಂಸ್ಥೆಗಳಾಲಿ, ಇಂಜಿನಿಯರಿoಗ್ ಕಾಲೇಜು, ಮೆಡಿಕಲ್ ಕಾಲೇಜು ಅಥವಾ ರಾಷ್ಟ್ರೀಯ ಹೆದ್ದಾರಿಗಳಾಗಲೀ ಇಲ್ಲದಕಾರಣ ಬಹುತೇಕ ಎಲ್ಲರೂ ಕೃಷಿ ಆಧಾರಿತ ಜೀವನವನ್ನೇ ಸಾಗಿಸುತ್ತಿದ್ದಾರೆ. ಬಹುದಿನಗಳ ಬೇಡಿಕೆಯಾದ ಕೈಗಾರಿಕಾ ಪ್ರದೇಶ ಘೋಷಣೆ, ರೈತರು ಬೆಳದ ಬೆಳೆಗಳ ರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್, ಪ್ರತಿದಿನ ಬಂಗಾರಪೇಟೆಯಿoದ ಬೆಂಗಳೂರಿಗೆ ೧೦ ಸಾವಿರ ಜನ ಉದ್ಯೋಗ ಹರಿಸಿ ಹೋಗುತ್ತಿದ್ದು ಬಹುತೇಕ ಹೆಣ್ಣು ಮಕ್ಕಳು ಬೆಂಗಳೂರಿನ ಗಾರ್ಮೆಂಟ್ಸ್ಗೆ ಹೋಗುತ್ತಿದ್ದಾರೆ. ಬಂಗಾರಪೇಟೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ವಿಫುಲ ಅವಕಾಶಗಳಿದ್ದು ಜವಳಿ ಪಾರ್ಕ್ ಬೇಡಿಕೆ ಇನ್ನೂ ಜೀವಂತವಾಗಿಯೇ ಇದೆ. ಖಾಸಗೀ ಬಸ್‌ನಿಲ್ದಾಣ ಕಾಮಗಾರಿ ಸಂಪೂರ್ಣ ಸ್ತಬ್ದಗೊಂಡಿದ್ದು ಗ್ರಾಮೀಣ ಪ್ರದೇಶಗಳಿಗೆ ಹೋಗುವ ಬಸ್ಸುಗಳು ನಿಲ್ಲಲು ಸರಿಯಾದ ಜಾಗವಿಲ್ಲದೆ ಜನರಿಗೆ ತೊಂದರೆ ಆಗಿದ್ದು. ಸುಸಜ್ಜಿತ ಬಸ್ ನಿಲ್ದಾಣ ಕಾರ್ಯ ಬಾಕಿ ಇದೆ.

ಪ್ರಸ್ತುತ ರಾಜಕೀಯ ಪಕ್ಷಗಳ ಸ್ಥಿತಿಗತಿ :
ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಕೆ.ಎಚ್ ಮುನಿಯಪ್ಪನವರ ವಿರುದ್ಧ ಬಂಡೆದ್ದ ಕಾಂಗ್ರೆಸ್ ಶಾಸಕರು ಕೆ.ಆರ್ ರಮೇಶ್ ಕುಮಾರ್ ಬಣವಹಿಸಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನಿಸ್ವಾಮಿಯನ್ನು ಬೆಂಬಲಿಸಿದರು. ಪರಿಣಾಮ ಸತತ ಏಳು ಬಾರಿ ಸಂಸದರಾಗಿದ್ದ ಮುನಿಯಪ್ಪನವರು ಸೋತು ಹೋದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುನಿಯಪ್ಪ ಬಣ ಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ. ಚಂದ್ರಾರೆಡ್ಡಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದು ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿರುವ ಹಾಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ನೆಮ್ಮದಿ ಕೆಡಿಸಿದೆ. ಕಳೆದ ೨೦೧೯೪ ಚುನಾವಣೆಯಲ್ಲಿ ಇದೇ ಶಾಸಕರು ಕೆ.ಹೆಚ್.ಮುನಿಯಪ್ಪನವರ ವಿರುದ್ಧ ಕೆಲಸ ಮಾಡಿ ಬಿಜೆಪಿಯ ಎಸ್. ಮುನಿಸ್ವಾಮಿ ಪರವಾಗಿ ಮತ ಹಾಕಿಸಿದ್ದರು. ವಿಶೇಷವೆಂದರೆ ಮುನಿಸ್ವಾಮಿ ಬಿಜೆಪಿ ಸಂಸದರಾದ ನಂತರ ಜಿಲ್ಲೆಯಲ್ಲಿ ಬಿಜೆಪಿ ಉತ್ಸಾಹ ಇಮ್ಮಡಿಯಾಗಿದೆ. ಕಾಂಗ್ರೆಸ್ ಒಳಜಗಳದ ಸಂಪೂರ್ಣ ಲಾಭ ಪಡೆಯಲು ಮುಂದಾಗಿದ್ದು, ತಮ್ಮನ್ನು ಬೆಂಬಲಿಸಿದ ಎಸ್.ಎನ್.ನಾರಾಯಣಸ್ವಾಮಿಗೆ ತಿರುಗುಬಾಣವಾಗಿದ್ದಾರೆ. ಪಕ್ಷ ನಿಷ್ಠೆಯ ಹೆಸರಿನಲ್ಲಿ ಯಾವ ಕೆಲಸಕ್ಕೂ ತಾನು ರೆಡೆ ಎಂಬುದನ್ನು ಈಗಾಗಲೇ ಸಿದ್ದರಾಮಯ್ಯನವರ ಹೇಳಿಕೆ ವಿರುದ್ಧ ಹಳೆ ಚಡ್ಡಿಗಳನ್ನು ಹೊತ್ತು ಪ್ರತಿಭಟಿಸಿ ತೋರಿಸಿದ್ದಾರೆ. ಈಗಾಗಲೇ ಬಂಗಾರಪೇಟೆಯಲ್ಲಿ ಎರಡು ಬಾರಿ ಗೆದ್ದಿರುವುದರಿಂದ ಮೂರನೇ ಬಾರಿಗೆ ಕಮಲ ಅರಳಿಸಲು ಹರಸಾಹಸ ಪಡುಸತ್ತಿದ್ದಾರೆ.

ಕಾಂಗ್ರೆಸ್ :
ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್ ನಾರಾಯಣಸ್ವಾಮಿ ತಮ್ಮಅವಧಿಯಲ್ಲಿ ಜೋಡಿ ರಸ್ತೆ ಸೇರಿದಂತೆ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೆಸರುಗಳಿಸಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದ ಒಳ ಜಗಳದಿಂದ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಬಣದ ಜೊತೆ ಗುರುತಿಸಿಕೊಂಡಿರುವ ಕಾರಣ ಅವರ ವಿರುದ್ಧ ಕೆ.ಎಚ್ ಮುನಿಯಪ್ಪ ಬಣ ಕತ್ತಿ ಮಸೆಯುತ್ತಿದೆ. ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಟಿಕೆಟ್ ತಪ್ಪಿಸಬೇಕೆಂದು ಆ ಬಣ ತಂತ್ರ ಹೆಣೆಯುತ್ತಿದೆ ಎನ್ನಲಾಗಿದೆ. ಮುನಿಯಪ್ಪನವರ ಬಣದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ೨೦೦೪ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಮಚಂದ್ರಪ್ಪನವರು ಮತ್ತೇ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬೆದರಿಕೆ ಒಡ್ಡುತ್ತಿದ್ದಾರೆ.

ಜೆಡಿಎಸ್ :
ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವಾಗಲೇ ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಭೋವಿ ಸಮುದಾಯದ ಮಲ್ಲೇಶ್ ಬಾಬುರವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಚುನಾವಣೆಯಲ್ಲಿ ಅವರು ೪೯,೩೦೦ ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಬೆಳೆಯುತ್ತಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಒಕ್ಕಲಿಗ ಮತಗಳನ್ನು ಅವರು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕ್ಷೇತ್ರದಲ್ಲಿ ಒಕ್ಕಲಿಗರು ಯಾರಿಗೆ ಬೆಂಬಲಿಸುತ್ತಾರೋ ಅವರ ವಿರುದ್ಧ ದಲಿತರು ಮತ ಚಲಾಯಿಸುತ್ತಾರೆ ಎಂಬ ರೂಢಿ ಚಾಲ್ತಿಯಲ್ಲಿದೆ. ಸದ್ಯಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ನೇರಾ ಹಣಾಹಣಿ ನಡೆಯುವ ಲಕ್ಷಣಗಳೇ ಕಾಣಿಸುತ್ತಿದ್ದು ಮಲ್ಲೇಶ್ ಬಾಬು ರವರ ಹಾದಿ ಅಷ್ಟು ಸುಗಮವಾಗಿ ಕಾಣುತ್ತಿಲ್ಲ.

ಬಿಜೆಪಿ :
ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಭೋವಿ ಸಮುದಾಯದ ಎಂ ನಾರಾಯಣಸ್ವಾಮಿ ಇದೀಗ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ. ೨೦೧೮ರಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿರಲಿಲ್ಲ. ಈಗ ಬಿಜೆಪಿ ಟಿಕೆಟ್ ಕೊಟ್ಟರೆ ಪಕ್ಷದಲ್ಲಿ ಉಳಿದುಕೊಳ್ಳುತ್ತೇನೆ, ಇಲ್ಲದಿದ್ದರೆ ಬೇರೊಂದು ಪಕ್ಷಕ್ಕೆ ಸೇರುತ್ತೇನೆ ಎಂದು ಅವರು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.

ಇನ್ನು ಕಳೆದ ಚುನಾವಣೆಯಲ್ಲಿ ಸೋತಿರುವ ವೆಂಕಟಮುನಿಯಪ್ಪನವರು ತಮ್ಮ ಮಗ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ ಮಹೇಶ್‌ಗೆ ಟಿಕೆಟ್ ನೀಡಬೇಕೆಂದು ದುಂಬಾಲು ಬಿದ್ದಿದ್ದಾರೆ. ಮಹೇಶ್ ಕೂಡ ಇಡೀ ಕ್ಷೇತ್ರದಾದ್ಯಂತ ನನಗೇ ಈ ಬಾರಿ ಟಿಕೆಟ್ ಎಂದು ಓಡಾಡಿಕೊಂಡಿದ್ದಾರೆ. ಈ ನಡುವೆ ಭೋವಿ ಸಮುದಾಯದ ಶೇಷು ಎಂಬುವವರು ಸಹ ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳಲ್ಲಿದ್ದ ಅವರು ಈಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.

ಇದೆಲ್ಲದರ ನಡುವೆ ಕ್ಷೇತ್ರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದು ಬಿಜೆಪಿ ಸಂಸದ ಮುನಿಸ್ವಾಮಿಯವರು ತಮ್ಮ ಪತ್ನಿ ಶೈಲಜಾರವರಿಗೆ ಬಂಗಾರಪೇಟೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ ಎನ್ನುವುದು. ಶೈಲಜಾರವರಿಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲದಿದ್ದರೂ ಮುನಿಸ್ವಾಮಿಯವರು ರಾಜ್ಯ ರಾಜಕೀಯದಲ್ಲಿ ಆಸಕ್ತಿ ಹೊಂದಿರುವುದರಿoದ ತಮ್ಮ ಪತ್ನಿಯನ್ನು
ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದಾರೆ ಎನ್ನಲಾಗುತ್ತಿದೆ.

 


ಜಾತಿವಾರು ಜನಸಂಖ್ಯೆ :
ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರ ಬಂಗಾರಪೇಟೆ. ಸುಮಾರು ೭೦-೮೦ ಸಾವಿರದಷ್ಟು ಪರಿಶಿಷ್ಟ ಜಾತಿ ಮತಗಳಿದ್ದು, ಒಕ್ಕಲಿಗರಿದ್ದು ಸುಮಾರು ೪೦ ಸಾವಿರದಷ್ಟು ಒಕ್ಕಲಿರಗರು ಮತಗದ್ದು ಎರಡನೇ ದೊಡ್ಡ ಸಂಖ್ಯೆ ಹೊಂದಿರುವ ಸಮುದಾಯವಾಗಿದೆ. ಇನ್ನೂ ಕುರುಬರು, ಪಳ್ಳಿಗರು, ತಿಗಳರು, ಮುಸ್ಲಿಮರು ಅಂದಾಜು ೧೮-೨೦ ಸಾವಿರ ಮತದಾರರಿದ್ದಾರೆ. ದಲಿತರಲ್ಲಿ ಸುಮಾರು ೧೦ ಸಾವಿರ ಜನಸಂಖ್ಯೆಯಿರುವ ಭೋವಿ ಸಮುದಾಯದ ಮತದಾರರು ಶೇ. ೮೦ರಷ್ಟು ದಲಿತ ಮತದಾರರ ಪ್ಯಾಟ್ರನ್‌ಗೆ ಒಳಪಡದೆ ಇರುವುದು, ಇಲ್ಲಿನ ಪ್ರತಿಫಲಿತಾಂಶ ಇತರೆ ಸಮುದಾಯಗಳ ಮತದಾರರೇ ನಿರ್ಣಾಯಕರಾಗಿ ಕಾಣಿಸಿಕೊಂಡಿದ್ದಾರೆ.

೨೦೦೮-೨೦೧೮ರವರೆಗಿನ ಫಲಿತಾಂಶ :

೨೦೦೪ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾಗಿದ್ದ ಎಂಬ ನಾರಾಯಣಸ್ವಾಮಿ ಬದಲಾದ ಸನ್ನಿವೇಶದಲ್ಲಿ ೨೦೦೮ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ವೆಂಕಟಮುನಿಯಪ್ಪ ವಿರುದ್ಧ ೪೯,೫೫೬ ಮತಗಳನ್ನು ಪಡೆದು ೭೫೦೫ ಮತಗಳ ಅಂತರದಿoದ ಗೆಲುವು ಪಡೆದರು.

೨೦೧೧ ಬೈ ಎಲೆಕ್ಷನ್: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಪರೇಷನ್ ಕಮಲಕ್ಕೆ ಒಳಗಾದ ಕಾಂಗ್ರೆಸ್ ಶಾಸಕ ಎಂ.ನಾರಾಯಣಸ್ವಾಮಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ೨೦೧೧೪ ಬೈ ಎಲೆಕ್ಷನ್‌ನಲ್ಲಿ ೫೬೮೨೪ ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ೪೦೪೩ ಮತಗಳ ಅಂತರದಿoದ ಗೆಲುವು ಸಾಧಿಸಿದರು.

೨೦೧೩ರಲ್ಲಿ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಇಳಿದ ಎಸ್.ಎನ್.ನಾರಾಯಣಸ್ವಾಮಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ೭೧೫೭೦ ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ವಿರುದ್ಧ ೨೮೩೭೭ ಮತಗಳ ಅಂತರದಿoದ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

೨೦೧೮ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ೭೦೮೭೧ ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಜೆಡಿಎಸ್‌ನ ಮಲ್ಲೇಶ್ ಬಾಬು ವಿರುದ್ಧ೨೧೫೭೧ ಮತಗಳ ಅಂತರದಿoದ ಗೆಲುವ ಸಾಧಿಸಿ ಎರಡನೇ ಬಾರಿಗೆ ವಿಧಾನಸೌಧ ಪ್ರವೇಶ ಮಾಡಿದರು. ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದರೂ ಅಲ್ಪಾವಧಿಯಲ್ಲೇ ಅಪರೇಷನ್ ಕಮಲದಿಂದ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಿದ ಕಾರಣ ನಾರಾಯಣಸ್ವಾಮಿ ಅಂಬೇಡ್ಕರ್ ನಿಗಮದ ಸ್ಥಾನ ಉಳಿಯಲಿಲ್ಲ.

೨೦೨೩ರ ಚುನಾವಣೆಗೆ ಕ್ಷೇತ್ರದ ಆಕಾಂಕ್ಷಿಗಳು :

೨೦೧೩-೨೦೧೮ರ ಅವಧಿಯಲ್ಲಿ ಸಿದ್ಧರಾಮಯ್ಯ ಸರ್ಕಾರದ ಸಾಧನೆಗಳು ಹಾಗೂ ಕ್ಷೇತ್ರದಲ್ಲಿ ಮಾಡಲಾದ ಅಭಿವೃದ್ಧಿ ಕಾಮಗಾರಿಗಳು, ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ನಗರದಲ್ಲಿ ಜೋಡಿ ರಸ್ತೆ, ಪುರಸಭೆ ನೂತನ ಕಟ್ಟಡ, ಉದ್ಯಾನವನಗಳು, ಗ್ರಾಮಗಳಲ್ಲ ಸಿ.ಸಿ.ರಸ್ತೆಗಳು, ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ, ರಂಗಮoದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ, ಮೊರಾರ್ಜಿ ವಸತಿ ಶಾಲೆಗಳು, ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿನಿಲಯಗಳು, ಪರಿಶಿಷ್ಟಜಾತಿ/ಪಂಗಡಗಳ ವಿದ್ಯಾರ್ಥಿ ನಿಲಯಗಳ ಕಟ್ಟಡಗಳು ಮೊದಲಾದ ಅಭಿವೃದ್ಧಿ ಕೆಲಸಗಳನ್ನೇ ಆಧಾರವಾಗಿಸಿ ಮೂರನೇ ಬಾರಿಗೆ ಮತಕೇಳಲು ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹ್ಯಾಟ್ರಿಕ್ ಗೆಲುವಿನತ್ತ ಕಣ್ಣು ಹಾಯಿಸಿದ್ದಾರೆ.

ಜೆಡಿಎಸ್ ಪಕ್ಷದಿಂದ ಕಳೆದ ಚುನಾವಣೆಯಲ್ಲಿ ಸುಮಾರು ೪೯೩೦೦ ಮತಗಳನ್ನು ಪಡೆದು ಜಿದ್ದಾಜಿದ್ದಿ ಪೈಪೋಟಿ ನೀಡಿದ ಮಲ್ಲೇಶ್ ಬಾಬು ಈ ಬಾರಿ ಒಂದು ವರ್ಷ ಮುಂಚಿತವಾಗಿಯೇ ಚುನಾವಣಾ ಪ್ರಚಾರ ಆರಂಭಿಸಿದ್ಧಾರಲ್ಲದೆ. ಕಳೆದ ಎರಡು ಅವಧಿಯಲ್ಲಿ ಹಾಲಿ ಶಾಸಕರ ವೈಫಲ್ಯಗಳನ್ನೇ ಜನರ ಮುಂದಿಟ್ಟು ಮತಯಾಚನೆ ಮುಂದಾಗಿದ್ದು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿದ್ದಾರೆ.

ಬಿಜೆಪಿ ಪಕ್ಷದಿಂದ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಶಸಕ ಬಿಪಿ ವೆಂಕಟಮುನಿಯಪ್ಪ ಈ ಬಾರಿ ತಮ್ಮ ಪುತ್ರ ಬಿವಿ ಮಹೇಶ್ ಪರವಾಗಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ತಮಗೇ ಟಿಕೆಟ್ ಬೇಕೆಂದು ಕೇಳುತ್ತಿದ್ದಾರೆ. ಮತ್ತೊಂದು ಕಡೆ ತೆರೆಮರೆಯಲ್ಲಿ ಸಂಸದ ಮುನಿಸ್ವಾಮಿರವರ ಪತ್ನಿ ಶೈಲಜಾ ರವರಿಗೂ ಟಿಕೆಟ್ ಕೊಡಿಸುವ ಪ್ರಯತ್ನ ನಡೆಯುತ್ತಿದ್ದು. ಬಿಜೆಪಿ ಯಾರಿಗೆ ಮಣೆ ಹಾಕುವುದೋ ಕಾದು ನೋಡಬೇಕು.

ಇನ್ನೂ ಕಾಂಗ್ರೆಸ್ ಪಕ್ಷದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಲಿ ಶಾಶಕ ಎಸ್.ಎನ್.ನಾರಾಯಣಸ್ವಾಮಿ ಕೆ.ಹೆಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡಿ ಬಿಜೆಪಿಯ ಮುನಿಸ್ವಾಮಿಯವರಿಗೆ ಬೆಂಬಲಿಸಿದ ಕಾರಣ ೨೦೦೪ರ ಅಭ್ಯರ್ಥಿಯಾಗಿದ್ದ ಎಂ.ರಾಮಚoದ್ರಪ್ಪನವರು ಹೇಗಾದರೂ ಮಾಡಿ ಈ ಬಾರಿ ಕಾಂಗ್ರೆಸ್ ಟಿಕೆಟ್ ತಮಗೇ ಬೇಕೆಂದು ಕೆ.ಹೆಚ್.ಮುನಿಯಪ್ಪನವರ ಮೇಲೆ ಒತ್ತಡ ತರುತ್ತಿದ್ದಾರೆ.

ಕಳೆದ ೫೦ ವರ್ಷಗಳಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಫಲಿತಾಂಶಗಳು :

ವರ್ಷ     ಗೆದ್ದ ಅಭ್ಯರ್ಥಿ                                     ಪಕ್ಷ                  ಮತಗಳು                ಸೋತ ಅಭ್ಯರ್ಥಿ             ಪಕ್ಷ              ಮತಗಳು         ಅಂತರ

೧೯೫೨  ಕೆ. ಚೆಂಗುಲ ರಾಯರೆಡ್ಡಿ (ಕೆ.ಸಿ.ರೆಡ್ಡಿ)    ಕಾಂಗ್ರೆಸ್
೧೯೫೭  ಇ.ನಾರಾಯಣಗೌಡ                       ಸ್ವತಂತ್ರ           ೧೩೪೬೭                ಡಿ.ವೆoಕಟರಾಮಯ್ಯ       ಕಾoಗ್ರೆಸ್        ೧೦೫೬೩          ೨೯೦೪
೧೯೬೨  ಇ.ನಾರಾಯಣಗೌಡ                       ಸ್ವತಂತ್ರ           ೧೯೬೨೬               ಕೆ.ವಿ.ನಾರಾಯಣರೆಡ್ಡಿ     ಕಾoಗ್ರೆಸ್        ೯೫೧೩            ೧೦೧೧೩
೧೯೬೭  ಇ.ನಾರಾಯಣಗೌಡ                       ಕಾಂಗ್ರೆಸ್          ೧೮೦೫೯              ಬಿ.ಎo.ಎಸ್.ಗೌಡ               ಸ್ವತoತ್ರ         ೧೧೮೪೩           ೬೨೧೬
೧೯೭೨  ದೊರೆಸ್ವಾಮಿ ನಾಯ್ಡು                 ಸ್ವತಂತ್ರ            ೨೦೩೮೦             ಕೆ.ಸಿ.ವೆOಕಟೇಶ್                ಕಾoಗ್ರೆಸ್       ೧೪೪೯೦           ೫೮೯೦
೧೯೭೮  ಸಿ.ವೆಂಕಟೇಶಪ್ಪ                           ಕಾoಗ್ರೆಸ್          ೨೭೭೧೫              ಟಿ.ಚನ್ನಯ್ಯ                      ಜನತಾಪಕ್ಷ      ೧೪೦೯೮          ೧೩೬೧೭
೧೯೮೩  ಸಿ.ವೆoಕಟೇಶಪ್ಪ                           ಕಾoಗ್ರೆಸ್           ೨೦೨೫೩          ಲಕ್ಷ್ಮಮ್ಮನಾರಾಯಣರಾಜು    ಸ್ವತಂತ್ರ        ೨೦೧೫೨              ೧೦೧
೧೯೮೫  ಎ.ಚಿನ್ನಪ್ಪ                                  ಜನತಾಪಕ್ಷ     ೩೮೮೪೩          ವಿ.ವೆಂಕಟಮುನಿ                    ಕಾoಗ್ರೆಸ್          ೧೬೩೨೧         ೨೨೫೨೨
೧೯೮೯  ಎo.ನಾರಾಯಣಸ್ವಾಮಿ           ಜನತಾದಳ     ೨೮೧೬೨           ಸಿ.ವೆoಕಟೇಶಪ್ಪ                     ಸ್ವತoತ್ರ          ೨೩೨೮೧            ೪೮೮೧
೧೯೯೪  ಎo.ನಾರಾಯಣಸ್ವಾಮಿ           ಜನತಾದಳ       ೪೩೧೫೭         ಸಿ.ವೆoಕಟೇಶಪ್ಪ                     ಸ್ವತoತ್ರ           ೩೮೪೮೩           ೪೬೭೪
೧೯೯೯  ಸಿ.ವೆoಕಟೇಶಪ್ಪ                           ಕಾoಗ್ರೆಸ್        ೭೫೮೪೪        ಎo.ನಾರಾಯಣಸ್ವಾಮಿ       ಜನತಾದಳ        ೩೨೬೦೪         ೪೩೨೪೦
೨೦೦೪  ವೆoಕಟಮುನಿಯಪ್ಪ ಬಿ.ಪಿ.       ಬಿಜೆಪಿ            ೪೧೧೧೭         ಎಂ.ನಾರಾಯಣಸ್ವಾಮಿ         ಸ್ವತoತ್ರ             ೪೦೫೭೦               ೫೪೭
೨೦೦೮ ಎo.ನಾರಾಯಣಸ್ವಾಮಿ            ಕಾoಗ್ರೆಸ್         ೪೯೫೫೬        ವೆoಕಟಮುನಿಯಪ್ಪ                 ಬಿಜೆಪಿ                 ೪೨೦೫೧            ೭೫೦೫
೨೦೧೧  ಎo.ನಾರಾಯಣಸ್ವಾಮಿ           ಬಿಜೆಪಿ           ೫೬೮೨೪          ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್        ೫೨೭೮೧              ೪೦೪೩
೨೦೧೩  ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್     ೭೧೫೭೦         ಎo.ನಾರಾಯಣಸ್ವಾಮಿ           ಬಿಜೆಪಿ                ೪೩೧೯೩            ೨೮೩೭೭
೨೦೧೮  ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್   ೭೦೮೭೧           ಮಲ್ಲೇಶ್ ಬಾಬು                     ಜೆಡಿಎಸ್              ೪೯೩೦೦           ೨೧೫೭೧

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!