ಚುನಾವಣೆಗೂ ಮುನ್ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಸೂಚನೆ ಹೊರಡಿಸುವುದರ ಜೊತೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿರುವ ಹುದ್ದೆಗಳಿಗೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಬೇಕೆಂದು ವಿವೇಕ್ ಇನ್ಪೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್ ಆಗ್ರಹಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ಮೆರೆಯುತ್ತಿದೆ ಎಂದರು.
ಈ ಹಿಂದಿನ ನೇಮಕಾತಿಗಳಲ್ಲಿ ನೋಡುವುದಾದರೆ ೨೫೦ ಕ್ಕೂ ಹೆಚ್ಚು ಕೆ.ಎ.ಎಸ್ ಹುದ್ದೆಗಳಿಗೆ ಅಸೂಚನೆ ಹೊರಡಿಸಲಾಗುತ್ತಿತ್ತು. ಆದರೆ ಇದೀಗ ಹುದ್ದೆಗಳು ಖಾಲಿ ಉಳಿದಿದ್ದರೂ ಕೇವಲ ೫೦ ಅಥವಾ ೧೦೦ ಹುದ್ದೆಗಳಿಗೆ ಅಸೂಚನೆ ಹೊರಡಿಸುತ್ತಿರುವುದು ವಿಪರ್ಯಾಸವಾಗಿದೆ. ಇನ್ನೂ ನೇಮಕಾತಿಗಳನ್ನು ವೇಗವಾಗಿ ಮುಗಿಸದೆ ಕಾಲಹರಣ ಮಾಡುತ್ತಾ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರವು ದ್ರೋಹ ಬಗೆಯುತ್ತಿದೆ ಎಂದು ಹೇಳಿದರು.
ವಿವೇಕ್ ಇನ್ಪೋಟೆಕ್ ಸಂಸ್ಥೆಯಲ್ಲಿ ಕೆ.ಎ.ಎಸ್ ಪರೀಕ್ಷೆಯ ತರಬೇತಿಗಾಗಿ ಉಚಿತ ಪ್ರವೇಶ ಪರೀಕ್ಷೆಯನ್ನು ಮಾ.೧೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸುವ ಆಸಕ್ತ ೧೦೦ ಮಂದಿ ವಿದ್ಯಾರ್ಥಿಗಳಿಗೆ ೪ ತಿಂಗಳ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಇದಕ್ಕೆ ಕೊನೆ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರೀಕ್ಷೆಯನ್ನು ಆನ್‌ಲೈನ್ ಮತ್ತು ಆಪ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ತರಬೇತಿಯನ್ನು ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಖೇಶ್ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಫ್.ಡಿ.ಎ ಮತ್ತು ಎಸ್.ಡಿ.ಎ ಹುದ್ದೆಗಳಿಗೆ ಸರ್ಕಾರವು ಪ್ರತಿವರ್ಷ ಅಸೂಚನೆ ಹೊರಡಿಸಬೇಕು. ಆದರೆ ೩ ವರ್ಷಗಳಿಂದ ಅಸೂಚನೆ ಹೊರಡಿಸದೆ ಮೀನಾಮೇಷ ಎಣಿಸುತ್ತಿದೆ. ೨೦೨೦ ರಲ್ಲಿ ಹೊರಡಿಸಲಾಗಿದ್ದ ಅಸೂಚನೆಯು ಇನ್ನೂ ಪ್ರಕ್ರಿಯೆಯಲ್ಲೇ ಇದೆ. ಅಷ್ಟೇ ಅಲ್ಲದೆ ಗ್ರೂಪ್ ಸಿ ನೇಮಕಾತಿಗಾಗಿ ಅಸೂಚನೆ ಹೊರಡಿಸಿ ಪರೀಕ್ಷೆಯನ್ನು ಮುಗಿಸಲಾಗಿದೆ. ಪರೀಕ್ಷೆ ಮುಗಿದು ಸುಮಾರು ೨ ವರ್ಷ ಕಳೆದರೂ ಇಲ್ಲಿಯವರೆಗೂ ಫಲಿತಾಂಶವನ್ನೇ ನೀಡಿಲ್ಲ. ಇದರಿಂದ ಉದ್ಯೋಗಕಾಂಕ್ಷಿಗಳು ಕೆ.ಪಿ.ಎಸ್.ಸಿ ಹಾಗೂ ಸರ್ಕಾರಕ್ಕೆ ಇಡಿ ಶಾಪ ಹಾಕುವಂತಾಗಿದೆ ಎಂದರು.
ಪಂಚಾಯಿತಿಗಳಲ್ಲಿ ಖಾಲಿ ಇರುವ ಪಿ.ಡಿ.ಓ ಹುದ್ದೆಗಳಿಗೆ ನೇಮಕಾತಿಯನ್ನು ಮಾಡುವುದಾಗಿ ಸರ್ಕಾರ ಕೆಲವು ವರ್ಷಗಳಿಂದ ಹೇಳುತ್ತಲ್ಲೇ ಬರುತ್ತಿದೆ. ಆದರೆ ಇಲ್ಲಿಯವರೆಗೂ ನೇಮಕಾತಿ ಅಸೂಚನೆಯನ್ನು ಹೊರಡಿಸದೆ ಇರುವುದು ಸರ್ಕಾರದ ಬೇಜವಾಬ್ದಾರಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯು ಹೊರಡಿಸಿದ್ದ ೫೪೫ ಪಿ.ಎಸ್.ಐ ನೇಮಕಾತಿಯಲ್ಲಿ ಹಗರಣಗಳು ನಡೆದು ಪ್ರಕರಣವು ಕೋರ್ಟ್‌ನಲ್ಲಿದೆ. ಕನಿಷ್ಟ ಇಲಾಖೆಯು ಹೊರಡಿಸಿದ್ದ ೪೦೨ ಪಿ.ಎಸ್.ಐ ಹುದ್ದೆಗಳಿಗಾದರೂ ಪರೀಕ್ಷೆ ನಡೆಸುತ್ತಾರೆ ಎಂದು ಆಕಾಂಕ್ಷಿಗಳು ಭಾವಿಸಿದ್ದರು. ಆದರೆ ಅವರ ನಿರೀಕ್ಷೆಗಳನ್ನು ಇಲಾಖೆಯ ಹುಸಿಗೊಳಿಸಿದೆ. ಇನ್ನೂ ಸಿ.ಎ.ಆರ್/ಡಿ.ಎ.ಆರ್ ಹಾಗೂ ಸಿವಿಲ್ ಪಿ.ಸಿ. ಹುದ್ದೆಗಳಿಗೆ ಅರ್ಜಿ ಹೊರಡಿಸಲಾಗಿತ್ತು. ಇದರ ಪರೀಕ್ಷೆಯನ್ನು ಸಹ ಇಲಾಖೆ ನಡೆಸಿಲ್ಲ ಎಂದರು.
ಈ ಸಂದರ್ಭದಲ್ಲಿ ಸ್ಪರ್ಧಾರ್ಥಿಗಳಾದ ಮುರಳಿ ಮೋಹನ್, ನವೀನ್ ಕುಮಾರ್, ಪ್ರಸನ್ನ ಕುಮಾರ್, ರಾಜೇಶ್ ಮತ್ತು ಶ್ರೀಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.