• Sat. Jul 27th, 2024

PLACE YOUR AD HERE AT LOWEST PRICE

ಬದುಕಿನ ನ್ಯಾಯವನ್ನು ಜಾನಪದ ಸಾಹಿತ್ಯವು ಎತ್ತಿಹಿಡಿಯುತ್ತದೆ. ಸಮಾನತೆಯೇ ಜಾನಪದದ ಜೀವಾಳ ಎಂದು ಜಾನಪದ ಸಂಶೋಧಕ, ಹಿರಿಯ ಸಾಹಿತಿ ಸ.ರಘುನಾಥ್ ರವರು ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಸ್ಥೆ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಫಾಸಿಲ್ಸ್ನ ೨೯ನೇ ವಾರ್ಷಿಕ ಸಮಾವೇಶ ಮತ್ತು ಅಖಿಲ ಭಾರತ ಜಾನಪದ ವಿಚಾರ ಸಂಕಿರಣದ ಭಾಷೆ ಮತ್ತು ಜಾನಪದ ಸಾಹಿತ್ಯ ವಿಚಾರವಾಗಿ ಮಾತನಾಡಿದರು.

ಅವಿಭಜಿತ ಕೋಲಾರ ಜಿಲ್ಲೆಯ ಭಾಷೆ ಮತ್ತು ಜಾನಪದ ಸಾಹಿತ್ಯ ಈ ನೆಲದ ರೈತ ಮತ್ತು ಶ್ರಮಿಕ ವರ್ಗದ ಭಾಷೆಯಾಗಿದೆ. ಕಂಡಿದ್ದು, ಉಂಡಿದ್ದೂ, ಪರಂಪರೆಯಿoದ ಪಡೆದುಕೊಂಡಿದ್ದು ಇಲ್ಲಿನ ಕಥೆ, ಕಾವ್ಯ, ಕೇಳಿಕೆ, ಜೋಂಕಿಣಿ, ಕೋಲಂಗಿ ಕಲೆಗಳಲ್ಲಿ ಅಭಿವ್ಯಕ್ತಗೊಂಡಿದೆ. ಈ ಭಾಷೆಯ ನಿರ್ಮಿತಿ ಕನ್ನಡ ಮತ್ತು ತೆಲುಗಿನ ಸಂಸ್ಕೃತಿ ಧ್ವನಿಗಳಿಂದ ಕಟ್ಟಿದೆ. ಇಲ್ಲಿ ಈ ಎರಡೂ ಭಾಷೆಗಳಲ್ಲಿ ಒಂದರಿoದ ಇನ್ನೊಂದನ್ನು ಬೇರ್ಪಡಿಸಿದರೆ ಎರಡೂ ಭಾಷೆಗಳು ಸಾಯುತ್ತವೆ. ಮರಸುನಾಡು ಜಾನಪದ ಸಾಹಿತ್ಯವು ಶೇಕಡ ಎಂಬತ್ತರಷ್ಟು ಮಹಿಳೆಯರಿಂದ ಸೃಜನಗೊಂಡಿದೆ. ಪೌರಾಣಿಕ ಕಥನ ಕವಿತೆಗಳು, ವರ್ತಮಾನದ ಸ್ಪಂದನೆಗಳನ್ನೇ ಹೊಂದಿದೆ. ಕರುಣೆ ಜಾನಪದದ ಅಂತರoಗವಾಗಿದೆ. ಎಂದರು.

ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್‌ರವರು ಕೈವಾರ ತಾತಯ್ಯನವರ ತತ್ವಪದಗಳು ಕುರಿತಾಗಿ ಮಾತನಾಡುತ್ತಾ, ತಾತಯ್ಯನವರು ಸಮಾಜದ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ತತ್ವ ಕೀರ್ತನೆಗಳಿಂದ ಮಾನವರನ್ನು ಎಚ್ಚರಿಸಿದ್ದಾರೆ. ಅವರು ಮೀಟಿದ ತಂಬೂರಿಯ ನಾದದಲ್ಲಿ ತತ್ವಪದಗಳ ಗ್ರಾಮೀಣ ಭಾಷೆಯ ಸೊಗಡನ್ನು ಜೀವಂತವಾಗಿರಿಸಿದ್ದಾರೆ. ಸನ್ಮಾರ್ಗದ ಹಾದಿಯಲ್ಲಿ ನಡೆದಾಗ ಬದುಕು ಹಸನಾಗಿ ನೆಮ್ಮದಿಯಿಂದ ಬದುಕಬಹುದು ಎಂದು ಅನುಭವಿಸಿ ಸಾರಿ ಸಾರಿ ಹೇಳಿದ್ದಾರೆ ಎಂದು ಹೇಳುತ್ತಾ ಕೈವಾರ ಕ್ಷೇತ್ರದ ಪರಿಚಯವನ್ನು ಮಾಡಿಕೊಟ್ಟರು.

ಎರಡನೇ ದಿನವಾದ ಇಂದು ಹಲವಾರು ಉಪನ್ಯಾಸಗಳನ್ನು ಮಂಡಿಸಲಾಯಿತು. ಸಮಾರಂಭದಲ್ಲಿ ಪ್ರೊ.ಎಂ.ಎನ್.ವೆoಕಟೇಶ್, ಡಾ.ನಜೀಂದೀನ್, ಡಾ.ಎನ್.ಮುನಿರಾಜು, ಪ್ರೊ.ವಿ.ಎಲ್.ಪಾಟೀಲ್, ಮಧುರೈ ವಿಶ್ವವಿದ್ಯಾಲಯದ ಡಾ.ಸರಸ್ವತಿ ವೇಣುಗೋಪಾಲ್, ಪಾಂಡಿಚೇರಿ ವಿಶ್ವವಿದ್ಯಾಲಯದ ಡಾ.ಚೆಲ್ಲ ಪೆರುಮಾಳ್, ಡಾ.ಎಂ.ವಿ.ಶ್ರೀನಿವಾಸ್, ಡ್ರಾವಿಡ ವಿಶ್ವವಿದ್ಯಾಲಯದ ಪ್ರೊ.ಕೆ.ಎಸ್.ಶ್ಯಾಮಲ, ಪ್ರೊ.ಬಿ.ಕೃಷ್ಣಾರೆಡ್ಡಿ, ಲಲಿತಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎಸ್.ಸಿ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!