ಕೋಲಾರ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಣಕನಹಳ್ಳಿ ನಟರಾಜ್ ಅವರನ್ನು ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೇಮಕ ಮಾಡಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ವಿಧಾನಸಭೆ ಚುನಾವಣೆಯಲ್ಲಿ ರ್ಸ್ಪಸುತ್ತಿರುವುದರಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಓಡಾಡಲು ಕಷ್ಟವಾಗುತ್ತದೆ ಎಂದು ಜೆಡಿಎಸ್ ವರಿಷ್ಠಗೆ ಮನವಿ ಮಾಡಿದ್ದರಿಂದ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿದ್ದ ಬಣಕನಹಳ್ಳಿ ನಟರಾಜ್ ಅವರನ್ನು ನೇಮಕ ಮಾಡಲಾಗಿದೆ.
ಬಣಕನಹಳ್ಳಿ ನಟರಾಜ್ ಅವರು ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ನಂಬಿಕಸ್ತನಾಗಿ ಪಕ್ಷದ ಕಷ್ಟ ಕಾಲದಿಂದಲೂ ಕೋಲಾರ ಜಿಲ್ಲೆಯಲ್ಲಿ ದುಡಿಯುತ್ತಾ ಬಂದಿದ್ದರು. ಇವರ ಜೊತೆಯಲ್ಲಿದ್ದ ಕೆಲವು ಮುಖಂಡರು ಬೇರೆ ಪಕ್ಷಕ್ಕೆ ಹೋದರೂ ಕೂಡ ನಟರಾಜ್ ಅವರು ಮಾತ್ರ ಜನತಾದಳ ಪಕ್ಷದಲ್ಲೇ ಉಳಿದುಕೊಂಡರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇಮಕದ ಆದೇಶವನ್ನು ನಟರಾಜ್ ಅವರಿಗೆ ವಿತರಿಸಿದ್ದು, ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮುಖಂಡ ವಕ್ಕಲೇರಿ ರಾಮು ಮತ್ತಿತರ ಮುಖಂಡರು ಹಾಜರಿದ್ದರು.