ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ, ಸಿದ್ದರಾಮಯ್ಯ ನಿವಾಸದ ಎದುರು ಕೋಲಾರ ಸಿದ್ದು ಅಭಿಮಾನಿಗಳು ಧರಣಿ
ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ, ಕೋಲಾರ ಕ್ಷೇತ್ರ ಅವರ ಅಭಿಮಾನಿಗಳು ಮಂಗಳವಾರ ಸಿದ್ದರಾಮಯ್ಯನವರ ಬೆಂಗಳೂರು ನಿವಾಸದ ಮುಂದೆ ಧರಣಿ ನಡೆಸುತ್ತಿದ್ದಾರೆ.
ಕಳೆದ ನವೆಂಬರ್ ತಿಂಗಳಿನಿoದ ಕೋಲಾರದಲ್ಲಿ ತಾವು ಸ್ಪರ್ಧೆ ಮಾಡುವುದಾಗಿ ಓಡಾಡಿದ ಸಿದ್ದರಾಮಯ್ಯನವರು ಕಳೆದ ಜನವರಿ ತಿಂಗಳಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಕೋಲಾರದಲ್ಲಿ ವ್ಯಕ್ತಪಡಿಸಿದ್ದರಾದರೂ, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ತಿಳಿಸಿದ್ದರು. ಕಳೆದ ಎರಡು ತಿಂಗಳಲ್ಲಿ ಸಿದ್ದರಾಮಯ್ಯನವರ ಪರವಾಗಿ ಸುಮಾರು ೧೦ಕ್ಕೂ ಹೆಚ್ಚು ಸಮೀಕ್ಷೆಗಳನ್ನು ವಿವಿಧ ನುರಿತ ತಂಡಗಳು ಮಾಡಿದ್ದವು. ಇದೇ ವೇಳೆ ಸಿದ್ದರಾಮಯ್ಯನವರ ಪರವಾಗಿ ಕೆಲಸ ಮಾಡಲು ಕೋಲಾರದಲ್ಲಿ ಚುನಾವಣಾ ವಾರ್ ರೂಮ್ ಸಹ ಪ್ರಾರಂಭಿಸಲಾಗಿತ್ತು.
ಇಲ್ಲಿಯವರೆಗೆ ನಡೆಸಿರುವ ಸಮೀಕ್ಷೆಗಳ ಪ್ರಕಾರ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದರೂ, ಅದನ್ನು ಮತಗಳನ್ನಾಗಿ ಪರಿವರ್ತಿಸುವ ಸ್ಥಳೀಯ ನಾಯಕತ್ವದ ಕೊರತೆ ಇರುವುದಾಗಿ ಹಾಗೂ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ಎಂದು ಕಾಂಗ್ರೆಸ್ ಎರಡು ಗುಂಪುಗಳಾಗಿ ಗುರುತಿಸಿಕೊಂಡಿದ್ದು ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬoತೆ ಇವರನ್ನು ಒಂದು ಗೂಡಿಸುವುದು ಕಷ್ಟಸಾಧ್ಯವಾಗಿ ಪರಿಣಮಿಸಿತ್ತು.
ಈಗಾಗಲೇ ಸಿದ್ದರಾಮಯ್ಯ ಪರವಾಗಿ ಆಖಾಡದಲ್ಲಿರುವ ಘಟಬಂಧನ್ ನಾಯಕರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲವಾಗಿದ್ದು, ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದರೂ ಸಹ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗೂ ಇದೇ ಘಟಬಂಧನ್ ಮುಖಂಡರ ಹಿಂದೆ ಅಲೆಯಬೇಕಾಗುತ್ತದೆ ಎಂದು ಭಾವಿಸಿ, ಸ್ಥಳೀಯ ಅಭ್ಯರ್ಥಿಯೇ ಲೇಸು ಎನ್ನುವ ಅಭಿಪ್ರಾಯವನ್ನು ಸಮೀಕ್ಷಾ ತಂಡಗಳು ರವಾನಿಸಿದ್ದವು.
ಸಮೀಕ್ಷಾ ತಂಡಗಳ ಮಾಹಿತಿಯನ್ನು ಸಂಗ್ರಹಿಸಿಕೊoಡ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಕೋಲಾರಕ್ಕಿಂತ ವರಣಾ ಕ್ಷೇತ್ರವೇ ಸೇಫ್ ಅನ್ನೋ ಸೂಚನೆಯನ್ನು ನೀಡಿತಲ್ಲದೆ, ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರನ್ನೇ ಕೈಬಿಟ್ಟಿತ್ತು. ಈ ವಿಚಾರ ಕೋಲಾರ ವಿಧಾನಸಭಾ ಕ್ಷೇತ್ರದಾದ್ಯಂತ ಹಬ್ಬಿದ ಕಾರಣ, ಕ್ಷೇತ್ರದಲ್ಲಿ ಕಳೆದ ೩ ದಿನಗಳಿಂದ ಜಾತಿವಾರು ಸಭೆಗಳು ನಡೆಯುತ್ತಿವೆ. ಅಲ್ಲದೆ, ಸಿದ್ದರಾಮಯ್ಯನವರು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು, ಇಲ್ಲಿನ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಕೋಲಾರದ ಸಿದ್ದರಾಮಯ್ಯ ಅಭಿಮಾನಿಗಳು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಸಿದ್ದು ನಿವಾಸದ ಮುಂದೆ ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಲಾಲ್ ಬಹುದ್ದೂರ್ ಶಾಸ್ತ್ರೀ. ದಲಿತ ಮುಖಂಡರಾದ ವಕ್ಕಲೇರಿರಾಜಪ್ಪ, ನಗರಸಭೆಸದಸ್ಯ ಅಂಬರೀಶ್, ವರದೇನಹಳ್ಳಿ ವೆಂಕಟೇಶ್, ಇಕ್ಬಾಲ್ ಅಹ್ಮದ್, ನವೀನ್‌ಕುಮಾರ್, ಪ್ರಸನ್ನಕುಮಾರ್, ಬೋವಿ ಯುವ ವೇದಿಕೆಯ ಎಲ್.ಜಿ.ಮುನಿರಾಜು, ನಗರಸಭೆ ಮಾಜಿ ಸದಸ್ಯರಾದ ಕಾಲಾ ಪ್ರಕಾಶ್, ಸೋಮಶೇಖರ್, ಗಂಗಮನ್ನಪಾಳ್ಯ ರಾಮಯ್ಯ, ಕುಡುವನಹಳ್ಳಿ ಆನಂದ್ ,ಕೋಟೆ ರಾಜೇಶ್ಇದ್ದರು.