ಕೋಲಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಹೆಚ್.ಸಿ.ಮಂಜುನಾಥ್ ಅವರು ೨೦೨೧ನೇ ಸಾಲಿನ ಸರ್.ಸಿ.ವಿ.ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಅವಾರ್ಡ್‌ಗೆ ಭಾಜನರಾಗಿದ್ದು, ಭಾರತರತ್ನ ಸಿ.ಎನ್.ಆರ್.ರಾವ್ ಅವರ ಉಪಸ್ಥಿತಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ಥನಾರಾಯಣ ಪ್ರಶಸ್ತಿ ಪ್ರದಾನ ಮಾಡಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಚಿನ್ನದ ಪದಕ ಹಾಗೂ ಒಂದು ಲಕ್ಷ ರೂಗಳ ನಗದು ಬಹುಮಾನವನ್ನೊಳಗೊಂಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ.ಹೆಚ್.ಸಿ.ಮಂಜುನಾಥ್ ಅವರು ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೧೯ ವರ್ಷಗಳ ಸಂಶೋಧನಾ ಅನುಭವವನ್ನು ಹೊಂದಿರುವ ಅವರು ೩೦೦ಕ್ಕೂ ಹೆಚ್ಚು ಲೇಖನಗಳನ್ನು ಅಂತರರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿ ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಇವರು ವೈಜ್ಞಾನಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಬಾಬಾ ಅಣು ವಿಜ್ಞಾನ ಸಂಸ್ಥೆ ನೀಡುವ ಭಾರತ ಸರ್ಕಾರದ ತರುಣ್ ದತ್ತ ಮೆಮೊರಿಯಲ್ ಅವಾರ್ಡ್, ಇಂಡಿಯನ್ ಸೊಸೈಟಿ ಫಾರ್ ರೇಡಿಯೇಷನ್ ಫಿಸಿಕ್ಸ್‌ನ ನ್ಯೂಕ್ಲಿಯಾನಿಕ್ಸ್ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೀಡ್ ಮನಿ ಟೂ ಯಂಗ್ ಸೈಂಟಿಸ್ಟ್ ರೀಸರ್ಚ್ ಅವಾರ್ಡ್ ಸೇರಿದಂತೆ ೧೯ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಿಜ್ಞಾನಿಗಳಪಟ್ಟಿ
೧೩ ನೇ ಸ್ಥಾನ
ಅಮೇರಿಕಾದ ಸ್ಯಾನ್ ಪೋರ್ಡ್ ವಿಶ್ವವಿದ್ಯಾಲಯ ಸಿದ್ದಪಡಿಸಿರುವ ವಿಶ್ವೆ ಶೇ.೨ ಅಗ್ರಗಣ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸತತವಾಗಿ ೩ ನೇಬಾರಿಗೆ ಸ್ಥಾನ ಪಡೆದಿರುವ ಹೆಚ್.ಸಿ.ಮಂಜುನಾಥ್, ಭಾರತದ ಅಣುಭೌತ ವಿಜ್ಞಾನಿಗಳ ಪಟ್ಟಿಯಲ್ಲಿ ೧೩ನೇ ಸ್ಥಾನ ಪಡೆದಿದ್ದಾರೆ ಎಂಬುದು ಕೋಲಾರ ಜಿಲ್ಲೆಯ ಹಿರಿಮೆಯಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ೮ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಪ್ರಕಟಿಸಿರುವ ಇವರ ಮಾರ್ಗದರ್ಶನದಲ್ಲಿ ೮ ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಪಡೆದಿದ್ದಾರೆ.