• Sat. Jul 27th, 2024

ಕೋಲಾರ I ಶಿಕ್ಷಕ ಗೆಳೆಯರ ಬಳಗದಿಂದ ಶಾಲೆಗಳಿಗೆ ೪೦ ಲಕ್ಷ ಮೌಲ್ಯದ ಸಲಕರಣೆ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಶಿಕ್ಷಣ ಸಿಗಲು ಸಹಕರಿಸಿ- ಕನ್ನಯ್ಯ

PLACE YOUR AD HERE AT LOWEST PRICE

ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಗುಣಮಟ್ಟದ ಶಿಕ್ಷಣ ಸಿಗಲು ದಾನಿಗಳು,ಸಂಸ್ಥೆಗಳ ನೆರವು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರ ಗೆಳೆಯರ ಬಳಗ ವಿವಿಧ ಕಂಪನಿಗಳನ್ನು ಸಂಪರ್ಕಿಸಿ ೪೦ ಲಕ್ಷ ಮೌಲ್ಯದ ಸಲಕರಣೆಗಳನ್ನು ಒದಗಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು.

ಕೋಲಾರ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಸ್ಯಾಮ್ಸಂಗ್ ಇಂಡಿಯಾ ಮತ್ತು ಶಿಕ್ಷಕ ಗೆಳೆಯರ ಬಳಗದ ಸಹಯೋಗದಲ್ಲಿ ಸುಮಾರು ೧೫ ಶಾಲೆಗಳಿಗೆ ೪೦ ಲಕ್ಷ ಬೆಲೆಬಾಳುವ ಆಧುನಿಕ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ಶಾಲೆಗಳು ಆಧುನಿಕ ತಂತ್ರಜ್ಞಾನದತ್ತ ಮುನ್ನಡೆಸಲು ಇಲಾಖೆಯೂ ಶ್ರಮಿಸುತ್ತಿದ್ದು, ಅದಕ್ಕೆ ಪೂರಕವಾಗಿ ದಾನಿಗಳು,ಪೋಷಕರ ನೆರವು ಅಗತ್ಯವಿದೆ ಎಂದ ಅವರು,ಗ್ರಾಮೀಣ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ಶಿಕ್ಷಣ ಮಕ್ಕಳಿಗೆ ಸಿಗುವಂತೆ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಯತ್ನ ಅಗತ್ಯ ಎಂದರು.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸರ್ಕಾರಿ ಶಾಲೆ ಬೆಳೆಯಬೇಕು, ಸ್ಮಾರ್ಟ್ ಕ್ಲಾಸ್, ಗಣಕಯಂತ್ರ ಶಿಕ್ಷಣ ಸಿಗುವಂತಾಗಬೇಕು, ಮಕ್ಕಳಲ್ಲಿ ಶಿಸ್ತು,ಸಂಸ್ಕಾರ ರೂಪಿಸುವ ಗುಣಾತ್ಮಕ ಶಿಕ್ಷಣ ನೀಡುವ ಸಂಕಲ್ಪ ಶಿಕ್ಷಕರದ್ದಾಗಬೇಕು ಎಂದರು.
ಸಂಘ ಸಂಸ್ಥೆಗಳು, ದಾನಿಗಳು, ಕಂಪನಿಗಳು ನೀಡುವ ಕೊಡುಗೆಯನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ಅಗತ್ಯ, ಈ ನಿಟ್ಟಿನಲ್ಲಿ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದಕ್ಕಾಗಿ ಟ್ಯಾಬ್ ಗಳನ್ನು ಈ ಹಿಂದೆ ನೀಡಿದ್ದು ಈಗ ಪ್ರತಿಯೊಂದು ಶಾಲೆಗೆ ಒಂದು ಲಕ್ಷ ೩೫ ಸಾವಿರದ ೬೫ ಇಂಚಿನ ಸ್ಯಾಮ್ಸಂಗ್ ಟಿವಿ ೯೫ ಸಾವಿರದ ಲ್ಯಾಪ್‌ಟಾಪ್ ಹಾಗೂ ೨೮ ಸೌಂಡ್ ಬಾಕ್ಸ್ ಗಳನ್ನು ನೀಡಿದ್ದಾರೆ ಇವುಗಳನ್ನು ಪ್ರತಿ ಶಾಲೆಯ ಮುಖ್ಯ ಶಿಕ್ಷಕರುಗಳು ಜೋಪಾನವಾಗಿ ಸುರಕ್ಷಿತವಾಗಿ ಇಟ್ಟುಕೊಂಡು ಮಕ್ಕಳಿಗೆ ವಿಷಯವಾರು ಆಧುನಿಕ ತಂತ್ರಜ್ಞಾನದೊಂದಿಗೆ ಪಾಠಗಳನ್ನು ಕಲಿಸಬೇಕೆಂದು ತಿಳಿಸಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ತಮ್ಮ ಶಾಲೆಯ ದಾಖಲೆಗೆ ಈ ಉಪಕರಣ ಸೇರಿಸಿಕೊಂಡು ಸಂಸ್ಥೆಯ ಮುಖ್ಯಸ್ಥರು ಬಂದಾಗ ಅವುಗಳನ್ನು ತೋರಿಸಬೇಕೆಂದು ತಿಳಿಸಿ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಶಿಕ್ಷಕ ಗೆಳೆಯರ ಬಳಗ ೧೬ ವರ್ಷಗಳಿಂದ ಶ್ರಮಿಸುತ್ತಿದ್ದು, ಪ್ರತಿ ವರ್ಷ ನೋಟ್‌ಪುಸ್ತಕ, ಬ್ಯಾಗ್, ಶೂ ಮತ್ತಿತರ ಸಲಕರಣೆ ಕೊಡಿಸಿದ್ದೇವೆ, ಇದರ ಜತೆಗೆ ಶಾಲೆಗಳಿಗೆ ಸುಣ್ಣ,ಬಣ್ಣ, ನೂತನ ಕೊಠಡಿಗಳ ನಿರ್ಮಾಣಕ್ಕೂ ನೆರವಾಗಿದ್ದೇವೆ ಎಂದರು.

ವೇದಿಕೆಯಲ್ಲಿ ಕ್ಷೇತ್ರ ಪ್ರಭಾರಿ ಸಮನ್ವಯಾಧಿಕಾರಿ ಪ್ರವೀಣ್, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಉಪಾಧ್ಯಕ್ಷ ವೀರಣ್ಣ ಗೌಡ, ಕಾರ್ಯದರ್ಶಿ ವೆಂಕಟಚಲಪತಿ ಗೌಡ, ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್,ರಶ್ಮಿ, ಸಿಆರ್‌ಪಿ ಗೋವಿಂದ್, ಸುಬ್ರಮಣಿ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!