ಬಂಗಾರಪೇಟೆ: ಕೆರೆಕೋಡಿ ಗ್ರಾಮದಲ್ಲಿ ಬಹಳಷ್ಟು ಜನ ಕೂಲಿ ಕಾರ್ಮಿಕರು, ಬಡವರು ಇದ್ದೀರಿ. ನಿಮ್ಮೆಲ್ಲರಿಗೂ ಕುಡಿಯಲು ಶುದ್ಧ ನೀರನ್ನು ನೀಡಬೇಕೆಂದು ಇಂದು ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.
ಅವರು ಪಟ್ಟಣದ ಕೆರೆಕೋಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡುತ್ತಾ, ಸುಮಾರು ವರ್ಷಗಳಿಂದ ಎಸ್ ಎನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರನ್ನು ನೀಡುತ್ತಿದ್ದೆವು.
ಆದರೆ ಟ್ಯಾಂಕರ್ ಬರುವ ಸಮಯದಲ್ಲಿ ಸುಮಾರು ಜನ ಕೆಲಸಕ್ಕೆ ಹೋಗಿರುತ್ತಾರೆ. ನೀರು ಹಿಡಿದುಕೊಳ್ಳಲು ಸಾಧ್ಯವಾಗದ ಕಾರಣ ಇಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಗಿದೆ. 24 ಗಂಟೆಗಳ ಸಮಯದಲ್ಲಿ ಯಾವಾಗ ಬೇಕಾದರೂ ನೀರನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಕೆರೆಕೋಡಿ ಗ್ರಾಮದಲ್ಲಿ ಪ್ರಾರಂಭದಲ್ಲಿ ಕೇವಲ 25 ಮನೆಗಳು ಮಾತ್ರ ಇತ್ತು. ಕೆರೆಕೋಡಿ ಗ್ರಾಮಕ್ಕೆ ಬರಲು ರಸ್ತೆಯೂ ಸಹ ಇರಲಿಲ್ಲ. ರಸ್ತೆ ಇಲ್ಲದೆ ಕಟ್ಟೆ ಮೇಲೆ ನಡೆದುಕೊಂಡು ಬರುವ ಪರಿಸ್ಥಿತಿ ಇತ್ತು. ಗ್ರಾಮಕ್ಕೆ ರಸ್ತೆ ಮಾಡಿರುವುದು ಯಾರೆಂದರೆ ಅದು ಕಾಂಗ್ರೆಸ್ ಪಕ್ಷದವರು ಮಾತ್ರ ಎಂದರು.
ಕಟ್ಟೆಯ ಮೇಲೂ ಸಹ ರಸ್ತೆ ಬೇಕೆಂದು ಮನವಿ ಮಾಡಿದ ಮೇರೆಗೆ ಆ ರಸ್ತೆಯನ್ನೂ ಸಹ ಅಭಿವೃದ್ಧಿ ಮಾಡಲಾಗಿದೆ. ಗ್ರಾಮದಲ್ಲಿ ಎಲ್ಲಾ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿ ಮಾಡಿದ್ದೇವೆ. ವಿದ್ಯುತ್, ಚರಂಡಿ ಕಾಮಗಾರಿಗಳನ್ನು ಮಾಡಿದ್ದೇವೆ. ಪುರಸಭೆ ವತಿಯಿಂದ ಮನೆಗಳನ್ನು ಸಹ ನೀಡಿದ್ದೇವೆ ಎಂದರು.
ವಾರ್ಡ್ ನಲ್ಲಿ ಗೆದ್ದಿರುವ ಪುರಸಭೆ ಸದಸ್ಯ ಏನೂ ಕೆಲಸ ಮಾಡಿಲ್ಲ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಜೆಡಿಎಸ್ ಪಕ್ಷದವರು ಇತ್ತೀಚೆಗೆ ಕೆರೆಕೋಡಿ ಗ್ರಾಮದಲ್ಲಿ ಬಂದು ಈ ಭಾಗದಲ್ಲಿ ಇರುವವರೆಲ್ಲರೂ ಬಡವರು ,ಕೂಲಿಕಾರ್ಮಿಕರು ಇವರನ್ನು ಯಾಮಾರಿಸಿ ಮತವನ್ನು ಪಡೆಯಬಹುದೆಂದು ಗಿಮಿಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶಾರದಾ ವಿವೇಕಾನಂದ, ಸದಸ್ಯರಾದ ಅರುಣಾಚಲಂಮಣಿ, ಆರೋಗ್ಯರಾಜನ್, ರೇಣುಕಾ ,ರತ್ನಮ್ಮ, ಗೋವಿಂದ,ಮಾಜಿ ಸದಸ್ಯರಾದ ಮೇಸ್ತ್ರಿ ನಾರಾಯಣಸ್ವಾಮಿ, ಹಾಗೂ ಮುಖಂಡರಾದ ವೆಂಕಟರಾಮಪ್ಪ,ಜಯರಾಮ್, ಜಗನ್, ಮೂರ್ತಿ, ಬಾಬು ,ಅಪ್ಪಯ್ಯ ಮೊದಲಾದವರು ಇದ್ದರು.