PLACE YOUR AD HERE AT LOWEST PRICE
ಸತ್ಯಮೇವಜಯತೆ ಘೋಷಣೆಯಡಿ ಏ.೧೦ರಂದು ಕೋಲಾರ ಹೊರವಲಯದ ಟಮಕದಲ್ಲಿ ನಡೆಯಲಿರುವ ಜೈ ಭಾರತ್ ಸಮಾವೇಶದ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ದೆಹಲಿ ಕಚೇರಿಯ ಸಿಬ್ಬಂದಿ ಶುಶಾಂತ್ ನೇತೃತ್ವದ ತಂಡ ಸಿದ್ಧತೆಗಳನ್ನು ಪರಿಶೀಲಿಸಿ, ಸ್ಥಳ ವೀಕ್ಷಣೆ ನಡೆಸಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಷ್ಟ್ರ ಮಟ್ಟದ ಐತಿಹಾಸಿಕ ಸಮಾವೇಶವನ್ನು ಏ.೧೦ರಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ೧೧.೩೦ಕ್ಕೆ ರಾಹುಲ್‌ಗಾಂಧಿ ಆಗಮಿಸಲಿದ್ದಾರೆ.
ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ರಾಜಸ್ಥಾನ, ಛತ್ತೀಸ್‌ಘಡ್, ಹಿಮಾಚಲ್ ಪ್ರದೇಶದ ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಭಾಗವಹಿಸಲಿದ್ದು, ಬಿಜೆಪಿಯವರ ಷಡ್ಯಂತ್ರ, ಕಿರುಕುಳ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ಊಹೆಗೂ ಮೀರಿದಷ್ಟು ಸಂಖ್ಯೆಯಲ್ಲಿ ಜನರು ಬರಲಿದ್ದಾರೆ ಎಂದರು.
ಬಿಜೆಪಿಯ ಧಮನಕಾರಿ ನೀತಿಗಳ ವಿರುದ್ಧ ಇದು ಆರಂಭದ ಹೋರಾಟವಾಗಿದೆ. ಕೋಟ್ಯಾಂತರ ಕಾರ್ಯಕರ್ತರನ್ನು ಹೊಂದಿರುವ ರಾಹುಲ್‌ಗಾಂಧಿ ಬಿಜೆಪಿಗೆ ಹೆದರುವ ಮಾತೇ ಇಲ್ಲ. ರಾಜ್ಯದಲ್ಲಿ ಚುನಾವಣೆ ಬಂದಿದ್ದು, ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿರುವ ಬಗ್ಗೆ ವರದಿ ಬಂದಿದೆ. ಅದಕ್ಕಾಗಿ ಬಿಜೆಪಿಯವರು ಭ್ರಮನಿರಸರಾಗಿದ್ದು, ಸೋಲಿನ ಭೀತಿ ಕಾಡುತ್ತಿದೆ. ರಾಹುಲ್ ಗಾಂಧಿ ಬರುವುದನ್ನು ತಡೆಯುವುದಕ್ಕೂ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ್ ಜೋಡೋ ಮೂಲಕ ದೇಶಾದ್ಯಂತ ರಾಹುಲ್ ಸಂಚರಿಸಿ ಸಂದೇಶ ನೀಡಿರುವುದಕ್ಕೆ ಬಿಜೆಪಿ ಹೆದರಿದೆ. ರಾಹುಲ್ ಗಾಂಧಿ ಹುಲಿ ಇದ್ದಂತೆ ಯಾರಿಗೂ ಹೆದರುವ ಮಾತೇ ಇಲ್ಲ. ದೇಶದ ಉಳಿವಿಗಾಗಿ ಹೋರಾಟ ಮಾಡುತ್ತಲೇ ಇರುತ್ತಾರೆ. ಅಂತಹವರ ಮೇಲೆ ಕೇಸ್ ಹಾಕುವ ಬಿಜೆಪಿಯವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಅಭ್ಯರ್ಥಿಗಳನ್ನು ಹುಡುಕಾಡುತ್ತಿದ್ದಾರೆ. ಅವರ ಕಚೇರಿಯಲ್ಲಿ ಟಿಕೆಟ್ ಕೇಳುವವರಿಲ್ಲ. ಬಿಜೆಪಿಯ ಭ್ರಷ್ಟಾಚಾರ ನೋಡಿ ಮುಖಂಡರೇ ಬೇಸತ್ತು ಪಕ್ಷ ಬಿಟ್ಟು ಬರುತ್ತಿದ್ದಾರೆ. ಅವರದ್ದು ಡಬಲ್ ಎಂಜಿನ್ ಸರಕಾರವಲ್ಲ, ಹಳಿ ತಪ್ಪಿರುವ ಡಬ್ಬ ಎಂಜಿನ್ ಸರಕಾರ ಎಂದು ಲೇವಡಿ ಮಾಡಿದರು.
ಈಗಾಗಲೇ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಏ.೮ರೊಳಗೆ ೨೨೪ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆಯಾಗಲಿದೆ. ಕಾಂಗ್ರೆಸ್‌ನಲ್ಲಿ ಯಾರನ್ನು ಯಾರೂ ಮೂಲೆ ಗುಂಪು ಮಾಡಿಲ್ಲವೆಂದು ಸ್ಪಷ್ಟಪಡಿಸಿ, ಭ್ರಷ್ಟ, ಜನವಿರೋಧಿ ಸರಕಾರವನ್ನು ಮೊದಲು ತೆಗೆಯುವುದೇ ಮೊದಲ ಕರ್ತವ್ಯ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿಗಳಾದ ನಜೀರ್‌ಅಹಮದ್, ಎಂ.ಎಲ್.ಅನಿಲ್‌ಕುಮಾರ್, ಕೆಪಿಸಿಸಿಯ ರಕ್ಷಾ ರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ಯುವ ಮುಖಂಡ ನಂದಿನಿ ಪ್ರವೀಣ್ ಮುಂತಾದವರಿದ್ದರು.