ಪಿ.ಟಿ.ಸಿ.ಎಲ್. ಕಾಯ್ದೆಗೆ ಕಾಲಮಿತಿಯನ್ನು ರದ್ದುಗೊಳಿಸಿ ತಿದ್ದುಪಡಿ ತಂದು ಸುಗ್ರೀವಾಜ್ಞೆಗೆ ಹೊರಡಿಸಲು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ಆಗ್ರಹ
ಬೆಂಗಳೂರು,ಮೇ.೨೦ : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ೧೯೭೮ರಲ್ಲಿ ಜಾರಿಗೆ ತಂದ ಎಸ್.ಸಿ./ಎಸ್.ಟಿ. ಭೂ ಪರಭಾರೆ ನಿಷೇದ ಕಾಯ್ಕೆ ೧೯೭೮-೭೯ಕ್ಕೆ ಕಾಲಮಿತಿಯನ್ನು ತೆಗೆದುಹಾಕಿ, ಕಾಯ್ದೆಗೆ ಸಮಗ್ರವಾದ ತಿದ್ದುಪಡಿ ತಂದು ಪರಿಶಿಷ್ಟಜಾತಿ/ಪಂಗಡಗಳ ಭೂಮಿಗಳನ್ನು ಕಾನೂನು ಬಾಹಿರವಾಗಿ ಕಬಳಿಸಿರುವ ಬಲಾಡ್ಯರಿಂದ ದಲಿತರ ಭೂಮಿ ರಕ್ಷಣೆ ಮಾಡಬೇಕೆಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ಆಗ್ರಹಿಸಿದೆ.
ಈ ಸಂಬoಧ ಕಳದೆ ೧೩೯ ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಒಕ್ಕೂಟ ಈ ಹಿಂದಿನ ಸರ್ಕಾರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದ ಹಿನ್ನಲೆ ಅಹೋರಾತ್ರಿ ಹೋರಾಟ ಪ್ರಾರಂಭಿಸಲಾಗಿತ್ತು.
ಈ ಕುರಿತು ಮಾತನಾಡಿದ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಲ್ಲಿ ಒಬ್ಬರಾದ ಬಸವರಾಜ್ ಕೌತಾಳ್, ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಶೋಷಿತ ದಲಿತರಿಗೆ ಸರ್ಕಾರದಿಂದ ನೀಡಲಾಗಿದ್ದ ಭೂಮಿಯನ್ನು ಕೆಲವು ಬಲಾಡ್ಯರಿಂದ ಕಾನೂನು ಬಾಹಿರವಾಗಿ ಕಬಳಿಸಲಾಗಿದೆ. ಕಾನೂನಿನ ಲೋಪಗಳನ್ನು ದುರುಪಯೋಗ ಮಾಡಿಕೊಂಡು ಎಸ್.ಸಿ.ಎಸ್.ಟಿ ಭೂಮಿಗಳನ್ನು ಕಬಳಿಸುತ್ತಿರುವುದರಿಂದ , ಸರ್ಕಾರ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಕಾಲಮಿತಿಯನ್ನು ತೆಗೆದುಹಾಕಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯ ಡಿಕೆ.ಶಿವಕುಮಾರ್ ನೇತೃತ್ವದ ಜೋಡೆತ್ತಿನ ಸರ್ಕಾರಕ್ಕೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಬಹುಸಂಖ್ಯಾತ ಬೆಂಬಲವನ್ನು ನೀಡಿ ಸರ್ಕಾರ ರಚನೆಗೆ ಕಾರಣವಾಗಿದ್ದಾರೆ. ಈ ಸಂದರ್ಭದಲ್ಲಿ ಎಸ್.ಸಿ.ಎಸ್.ಟಿ. ಭೂ ಪರಭಾರೆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ದಲಿರ ಭೂಮಿಗಳನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಶಿವರಾಯ ಕರ್ಕಿ, ಪಿ.ಟಿ.ಸಿ.ಎಲ್. ಮಂಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.