• Sat. Mar 2nd, 2024

PLACE YOUR AD HERE AT LOWEST PRICE

ಕರ್ನಾಟಕದಲ್ಲಿ ೭೦ರ ದಶಕದಲ್ಲಿ ಶೋಷಿತ ಸಮುದಾಯಗಳಿಗೆ ಅಕ್ಷರಗಳನ್ನು ಮುಟ್ಟುವಂತಾಗಲು ಕಣ್ಣು ತೆರಸಿದ ದಲಿತ ಚಳುವಳಿ. ರಾಜ್ಯದ ಇತಿಹಾಸದಲ್ಲಿ ದನಿ ಸತ್ತವರಿಗೆ ಅರಿವಿನ ಸೂರ್ಯನಂತೆ ಕಾರ್ಯನಿರ್ವಹಿಸಿದ ಜನರಿಂದಲೇ ರೂಪಗೊಂಡ ಒಂದು ದೊಡ್ಡ ಚಲಿಸುವ ವಿಶ್ವವಿದ್ಯಾಲಯವಾಗಿ ಜನ ಮನ್ನಣೆಗೆ ಪಾತ್ರವಾಗಿತ್ತು.

ತನ್ನ ಚಲನೆಯಲ್ಲೇ ಶೋಷಿತರ ಬಿಡುಗಡೆಗೆ ದಾರಿ ತೋರಿದ ದೀಪವಾದ ದಲಿತ ಸಂಘರ್ಷ ಸಮಿತಿ ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಸಾಧನೆಗಳನ್ನು ತನ್ನ ನಡೆಯ ಮೂಲಕ ಮಾಡಿ ತೋರಿದ್ದು ದೇಶಕ್ಕೆ ಮಾದರಿಯಾಗಿದೆ. ದಲಿತ ಚಳುವಳಿ ತನ್ನ ಚಲನೆಯಲ್ಲಿ ಸಾವಿರಾರು ಸಾಹಿತಿಗಳು, ಸಾಮಾಜಿಕ ಚಿಂತಕರು, ರಾಜಕೀಯ ನಾಯಕರು, ವಿಮರ್ಶಕರು, ಉನ್ನತ ಮಟ್ಟದ ಅಧಿಕಾರಿಗಳು, ಬುದ್ದಿಜೀವಿಗಳು, ಹಾಡುಗಾರರು, ಕಲಾವಿದರು ಹಾಗೂ ಹೋರಾಟಗಾರ ನಾಯಕರನ್ನು ಈ ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ.

ದುಡ್ಡುಕಾಸು ಇಲ್ಲದೆ ತನ್ನ ಜ್ಞಾನ ಶಕ್ತಿಯಿಂದಲೇ ನಡೆದ ಒಂದು ದೊಡ್ಡ ಜನ ಸಮೂಹದ ಸಾಧನೆಗೆ ದಸಂಸ ಒಂದು ಅದ್ಬುತ ಉದಾಹರಣೆಯಾಗಿ ನಮ್ಮ ಮುಂದಿದೆ. ಈ ಜನ ವಿಶ್ವವಿದ್ಯಾಲಯ ತನ್ನ ಬೌದ್ದಿಕತೆಯ ಉಚ್ರಾಯ ಸ್ಥಿತಿ ತಲುಪುವ ಮುನ್ನವೇ ೯೦ರ ದಶಕದಲ್ಲಿ ರಾಜಕೀಯ ನಿಲುವು ತಾಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿಕೊಂಡು ಒಂದು ಸೈದ್ಧಾಂತಿಕ ಕಾರವಿಲ್ಲದೆ ಎರಡು ಬಣಗಳಾಗಿ ವಿಗಟಣೆಗೆ ಕಾರಣವಾಗಿದ್ದು ಮಾತ್ರ ವಿರ್ಪಯಾಸವೇ ಸರಿ.

ಹೀಗೇ ಒಂದು ಜೀವಂತ ವಿಶ್ವವಿದ್ಯಾಲಯವಾಗಿದ್ದ ದಸಂಸದ ಮೊದಲ ತಲೆಮಾರಿನ ನಾಯಕರ ನೆನಪುಗಳು ಹಾಗೂ ಹೆಜ್ಜೆ ಗುರುತುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವುದಾದರೆ, ಅದು ಮುಂದಿನ ಒಂದು ಸಾವಿರ ವರ್ಷಗಳಿಗೆ ಹೊಸ ತಲೆಮಾರಿನ ಜನ ಸಮುದಾಯಗಳಿಗೆ ಬಿಡುಗಡೆಯ ದಾರಿದೀಪವಾಗಬಲ್ಲದು. ಆದರೆ, ಈ ಪ್ರಯತ್ನ ಇನ್ನೂ ಮರೀಚಿಕೆಯಾಗೇ ಉಳಿದಿದ್ದು, ತನ್ನ ಚಲನೆಯನ್ನೇ ಕೊನೆಗೊಳಿಸುತ್ತಿರುವ ದಲಿತ ಚಳುವಳಿಯ ಚಾರಿತ್ರಿಕ ಸಾಧನೆಗಳು ಅಕ್ಷರ ರೂಪಕ್ಕಿಳಿಯದ ಕಾರಣ ಜನರ ಸ್ಮೃತಿಪಟಲದಿಂದಲೇ ಕಳೆದು ಹೋಗುತ್ತಿರುವುದು ಶೋಚನೀಯವಾದದ್ದು.

ಆದರೂ, ಅಳಿವಿನ ಅಂಚಿಗೆ ತಳ್ಳಲ್ಪಡುತ್ತಿರುವ ದಲಿತ ಚಳುವಳಿಗೆ ಮರು ಜೀವ ಕೊಡುವ ಪ್ರಯತ್ನವೂ ಸಹ ಅಷ್ಟೇ ಪ್ರಾಮಾಣಿಕವಾಗಿ ನಡೆಯುತ್ತಿರುವುದು ಗಮನಿಸಬಹುದಾದ ಬೆಳವಣಿಗೆಯಾಗಿದೆ. ದಲಿತ ಸಂಘರ್ಷ ಸಮಿತಿಯನ್ನು ಪುನಶ್ಚೇತನಗೊಳಿಸುತ್ತಿರುವವರಲ್ಲಿ ಎರಡನೇ ತಲೆಮಾರಿನ ನಾಯಕರಲ್ಲೊಬ್ಬರಾದ ಮಂಜುನಾಥ್ ಅಣ್ಣಯ್ಯ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿರುವುದು ಭವಿಷ್ಯದ ತಲೆಮಾರಿನ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ.

ಮಂಜುನಾಥ್ ಅಣ್ಣಯ್ಯ ದಸಂಸ ಚಳುವಳಿಯ ಮೊದಲ ತಲೆಮಾರಿನ ನಾಯಕರಲ್ಲೊಬ್ಬರಾದ ಅಣ್ಣಯ್ಯನವರ ಮಗನಾಗಿದ್ದು, ಕಳೆದ ೪೫ ವರ್ಷಗಳಿಂದ ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಅಣ್ಣಯ್ಯನವರ ಜೊತೆ ಬಾಲ್ಯದಿಂದಲೇ ಅನೇಕ ಹೋರಾಟಗಳು, ವಿಚಾರ ಸಂಕಿರಣಗಳು, ಕಾರ್ಯಕರ್ತರ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದ ಮಂಜುನಾಥ್ ಅಣ್ಣಯ್ಯ ಚಳುವಳಿಯ ಗೀಳನ್ನು ತನ್ನ ನೆತ್ತಿಗೇರಿಸಿಕೊಂಡು ನಿತ್ಯ ಜನ ಸೇವೆಗಾಗಿ ತುಡಿಯುವ ಉತ್ಸಾಹಿ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ವಿಘಟನೆಗೆ ಕಾರಣವಾದ ದಸಂಸ ಕ್ರಮೇಣ ಎರಡು ನಾಲ್ಕ ಆಗಿ, ನಾಲ್ಕು ಎಂಟು ಆಗಿ ಛಿದ್ರ ಛಿದ್ರ ಆಗುತ್ತಿರುವುದನ್ನು ಕಂಡು ಮರುಗಿದ ಮಂಜುನಾಥ್ ಅಣ್ಣಯ್ಯ ಒಡೆದುಹೋಗಿರುವ ಚೂರುಗಳನ್ನು ಒಂದೆಡೆಗೆ ತಂದು ಒಂದು ಒಕ್ಕೂಟದ ರೂಪ ಕೊಡಲು ಸದಾ ಹವಣಿಸುತ್ತಿರುತ್ತಾರೆ. ಇವರ ಪ್ರಯತ್ನದ ಫಲವಾಗಿ ಹಲವು ಬಾರಿ ದಲಿತ ಸಂಘಟನೆಗಳು ಒಂದು ರಾಜ್ಯ ಮಟ್ಟದ ಒಕ್ಕೂಟ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಆಯಾ ಕಾಲಕ್ಕೆ ಅಗತ್ಯವಾದ ಜನಪರ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಿದೆ.

ಮಂಜುನಾಥ್ ಅಣ್ಣಯ್ಯ ಬಾಲ್ಯದಿಂದಲೇ ಬೌದ್ಧ ದಮ್ಮವನ್ನು ಅನುಸರಿಸುತ್ತಿರುವ ಒಬ್ಬ ಶುದ್ಧ ಬುದ್ದನ ಅನುಯಾಗಿದ್ದು, ದಲಿತ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಅನ್ಯಾಯಗಳನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಇವರು, ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಅನೇಕ ಜಿಲ್ಲೆಗಳಲ್ಲೂ ತಮ್ಮದೇ ಪಡೆಯನ್ನು ಕಟ್ಟಿಕೊಂಡು ಜನರ ನೋವುಗಳಿಗೆ ಸ್ಪಂಧಿಸಲು ಸದಾ ಕಾಯೋನ್ಮುಖರಾಗಿದ್ದಾರೆ.

ಚಿಕ್ಕವಯಸ್ಸಿನಿಂದಲೇ ಹೋರಾಟದ ಜೀವನಕ್ಕೆ ಕಾಲಿಟ್ಟ ಮಂಜುನಾಥ್ ಅಣ್ಣಯ್ಯ, ಅಟ್ರಾಸಿಟಿ ವಿರುದ್ಧ ಹೋರಾಟಗಳು, ಭೂಮಿ ಹೋರಾಟಗಳು, ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹೋರಾಟಗಳು, ಇನಾಂತಿ ಅದಾಲತ್ ಹೋರಾಟಗಳು, ಸಮಾನ ಹಾಗೂ ಉಚಿತ ಶಿಕ್ಷಣಕ್ಕಾಗಿ ಹೋರಾಟಗಳು, ಕನ್ನಡದ ನೆಲ,ಜಲಕ್ಕೆ ಸಂಬ0ಧಿಸಿದ ಹೋರಾಟಗಳು, ದಲಿತರಿಗೆ ಪ್ರತೇಕ ಬಜೆಟ್ ಮಂಡಿಸಬೇಕೆ0ಬ ಹೋರಾಟಗಳು, ವಿದ್ಯಾರ್ಥಿ ವೇತನಕ್ಕಾಗಿ ಹೋರಾಟ, ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆ ಜಾರಿಗೆ ಹೋರಾಟ, ಮೌಡ್ಯ ವಿರೋಧಿ ಕಾಯ್ದೆಗೆ ಆಗ್ರಹಿಸಿ ಹೋರಾಟ, ಗೋಹತ್ಯೆ ನಿಷೇದ ಕಾಯ್ದೆಯ ವಿರೋಧಿ ಹೋರಾಟ, ಮಹಿಳಾ ಹಕ್ಕುಗಳಿಗಾಗಿ ಹೋರಾಟ, ವಸತಿ ರಹಿತರಿಗಾಗಿ ನಿವೇಶನ ಹಂಚಿಕೆಗೆ ಆಗ್ರಹಿಸಿ ಹೋರಾಟಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವೀಯಾಗಿದ್ದಾರೆ.

ಇವರ ಹೋರಾಟಗಳಿಗೆ ಮಣಿದ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, sಸದಾನಂದಗೌಡ, ಜಗದೀಶ್ ಶೆಟ್ಟರ್, ಹಾಗೂ ಸಿದ್ಧರಾಮಯ್ಯರೊಂದಿಗೆ ಮಾತುಕತೆ ನಡೆಸುವ ಮೂಲಕ ಹತ್ತು ಹಲವು ಜನಪರ ತೀರ್ಮಾಣಗಳನ್ನು ತೆಗೆದುಕೊಳ್ಳುವ ಮೂಲಕ ಬೆಂಗಳೂರು ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ಬಡ ಕುಟುಂಬಗಳಿಗೆ ವಸತಿ ಗೃಹಗಳು ಹಾಗೂ ರಾಜ್ಯದ ಪರಿಶಿಷ್ಟ ಜಾತಿ/ವರ್ಗಗಳ ಗುತ್ತಿಗೆದಾರರಿಗೆ ರೂ. ೫೦ ಲಕ್ಷ ವರೆಗಿನ ಗುತ್ತಿಗೆಗಳ ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಶೋಷಿತ ಸಮುದಾಯಗಳ ದೀವಟಿಗೆಯಾಗಿ ಹೋರಾಟದ ಜೀವನಕ್ಕೆ ಕಾಲಿಟ್ಟ ಮಂಜುನಾಥ್ ಅಣ್ಣಯ್ಯ, ತಾವು ನಡೆದು ಬಂದ ಹೆಜ್ಜೆಗುರುತಗಳನ್ನು ಹೋರಾಟದ ಹಾಡುಗಳು, ಹೋರಾಟದ ಹಾದಿ ಕೃತಿ, ಬೀಫ್ ಪೊಲಿಟಿಕಲ್ ಬ್ಯಾನ್, ಭಗವತ್ ಗೀತಾ, ಸೇರಿದಂತೆ ೧೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಹೋರಾಟದ ಹಾಡುಗಳ ಸಂಕಲನ, ಹೋರಾಟದ ಹಾಡುಗಳು, ಅರಿವೇ ಅಂಬೇಡ್ಕರ, ಬುದ್ಧನ ಗೀತೆಗಳು, ಸುಳ್ಳು ಸೃಷ್ಠಿಗಳು, ಮತ್ತು ಬಂದಿದೆ ಕೇರಿಗೆ, ದೇವನೂರು ಮಹಾದೇವ ರವರ ಕುಸುಮಾ ಬಾಲೆ, ಇನ್ನೂ ಮೊದಲಾದ ಜನಪದ ಗೀತೆಗಳ ದ್ವನಿ ಮುದ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನ ಜಾಗೃತಿಯ ಹಲವು ದಾರಿಗಳನ್ನು ತೋರಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಮಂಜುನಾಥ್ ಅಣ್ಣಯ್ಯನವರ ಜನಪರ ಸೇವೆಯನ್ನು ಗುರುತಿಸಿ ಹಲವು ಜನಪರ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಸದಾ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮಂಜುನಥ್ ಅಣ್ಣಯ್ಯನವರನ್ನು ಸಮಾಜ ಗುರುತಿಸಿದೆಯಾದರೂ ಸರ್ಕಾರ ಗುರುತಿಸುವ ಮಾಡಿಲ್ಲ. ಸರ್ಕಾರ ಇಂತಹ ಯುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸರ್ಕಾರದ ಹಂತದಲ್ಲಿ ಸೇವೆ ಮಾಡಲು ಅವಕಾಶ ಕಲ್ಪಸಿ ಸಮಾಜಕ್ಕೆ ಒಂದು ಮಾದರಿಯನ್ನು ತೋರಿವ ಮೂಲಕ ಹೊಸ ತಲೆಮಾರಿನ ಯುವ ಪೀಳಿಗೆಗೆ ಸ್ಪೂರ್ತಿ ತುಂಬುವುದಾದರೆ ಭವಿಷ್ಯತ್ತಿನಲ್ಲಿ ಉತ್ತಮ ಯುವ ನಾಯಕರನ್ನು ಕಾಣುವಲ್ಲಿ ಸಂದೇಹವಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸುವುದೇ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You missed

error: Content is protected !!