• Thu. Sep 28th, 2023

ಪರಿಸರ ಸಂರಕ್ಷಿಸಿಕೊಳ್ಳದಿದ್ದರೆ ಭೂಗರ್ಭದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ – ವಿಜ್ಞಾನ ಲೇಖಕ ನಾಗೇಶ್ ಹೆಗಡೆ

PLACE YOUR AD HERE AT LOWEST PRICE

ಭೂಮಿಯ ಉಷ್ಣಾಂಷ ೨ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಷ್ಯ ಭೂಗರ್ಭದಲ್ಲಿ ಬದುಕಬೇಕಾದ ಪರಿಸ್ಥಿತಿ ಬರಬಹುದು, ಈ ಕುರಿತು ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಜಾಗೃತಿ ಅರಿವು ಮೂಡಿಸಿ ಅನುಷ್ಠಾನಕ್ಕೆ ತರಬೇಕಾಗಿದೆಯೆಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ೨೬ ನೇ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲ ಕೃತಿ ಇರುವುದೊಂದೆ ಭೂಮಿ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರುಮಾತನಾಡುತ್ತಿದ್ದರು.

ಮಕ್ಕಳನ್ನು ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಬೆರೆಯಲು ಬಿಡಬೇಕು, ಆದರೆ ಪೋಷಕರು ಮಕ್ಕಳನ್ನು ಪ್ರಕೃತಿಯಿಂದ ಹೊರಗಿಟ್ಟು ಬೆಳೆಸುವ ಮೂಲಕ ಮಕ್ಕಳು ಪ್ರಕೃತಿ ನಡುವಿನ ಬಾಂಧವ್ಯವನ್ನು ಕಡಿಯುತ್ತಿದ್ದಾರೆಂದರು.

ಪರಿಸರ ಮುಗ್ದತೆ ದಾಟಿ ಔದ್ಯೋಗಿಕ ಯುಗದಲ್ಲಿ ಭೂಮಿ ತನ್ನ ಸಹನಾಶಕ್ತಿಯನ್ನು ಕಳೆದುಕೊಂಡು ಕೆಲವರ ಮೂಲಕ ಮಾತನಾಡಿಸಲು ಆರಂಭಿಸಿದೆ, ಕೇಳಿಸಿಕೊಂಡು ಪರಿಸರ ಸಂರಕ್ಷಣೆಗೆ ಕಾರ್ಯೋನ್ಮುಖರಾಗಬೇಕಿದೆಯೆಂದರು.

ಒಂದು ಮರವನ್ನು ಕತ್ತರಿಸಿ ಬೇಕಾದ ಆಕಾರಕ್ಕೆ ತಂದು ಮಾರಾಟ ಮಾಡಿದರೆ ಆರ್ಥಿಕತೆ ಹೆಚ್ಚುತ್ತದೆ ಎನ್ನುವುದು ಅದೇ ಮರ ಹಸಿರಾಗಿ ನಿಂತಿರುವಾಗಲೇ ಮನುಷ್ಯನಿಗೆ ಹೆಚ್ಚು ಪ್ರಯೋಜನಕಾರಿ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸಬೇಕಾಗಿದೆಯೆಂದರು.
ಸಣ್ಣ ಕತೆಗಳು ಮತ್ತು ಯಶಸ್ವಿಗಾಥೆಗಳ ಮೂಲಕ ನಿತ್ಯದ ಕೆಲಸಗಳಲ್ಲಿಯೇ ಚಿಕ್ಕ ಪರಿವರ್ತನೆ ಮಾಡಿಕೊಂಡರೆ ಪರಿಸರ ರಕ್ಷಣೆ ಸಾಧ್ಯವಾಗುತ್ತದೆ, ಈ ಕುರಿತು ಜನಪ್ರತಿನಿಗಳನ್ನು ಓಲೈಸುವ ಕೆಲಸವನ್ನು ಮಾಡಬೇಕಾಗಿದೆಯೆಂದರು.

ಪರಿಸರ ಸಂರಕ್ಷಣೆಯ ಕೆಲಸಗಳು ಆಗೇ ಇಲ್ಲ ಎಂದು ಭಾವಿಸಬೇಕಾಗಿಲ್ಲ, ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿನ ಸೈನೆಡ್ ಗುಡ್ಡಗಳ ಮೇಲೆ ಅರಣ್ಯ ಬೆಳೆಸುವ ಕೆಲಸವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆಯೆಂದರು.

ಪ್ರಪಂಚದಲ್ಲಿ ಪ್ರಸ್ತುತ ೧೩೮೦೦ ಅಣುಬಾಂಬ್‌ಗಳಿದ್ದರೂ, ಜಪಾನ್ ಹಿರೋಶಿಮಾ ನಾಗಸಾಕಿ ಮೇಲೆ ಅಣುಬಾಂಬ್ ಪ್ರಯೋಗದ ನಂತರ ಯಾವ ದೇಶವೂ ಅಣುಬಾಂಬ್ ಪ್ರಯೋಗಕ್ಕೆ ಮುಂದಾಗಲಿಲ್ಲ ಎನ್ನುವುದು ಕೂಡ ಅಣುಬಾಂಬ್ ದುಷ್ಪರಿಣಾಮಗಳ ಕುರಿತು ವಿವೇಕ ಇರುವುದೇ ಕಾರಣ ಎಂದು ಭಾವಿಸಬೇಕಾಗುತ್ತದೆ ಎಂದರು.

ಪರಿಸರ ಮಾರಕ ಪ್ಲಾಸ್ಟಿಕ್ ನಿಷೇಧದಂತ ನೀತಿಗಳನ್ನು ರೂಪಿಸಲು ಪಟ್ಟಭದ್ರ ಕಂಪನಿಗಳು ಬಂಡವಾಳಶಾಹಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ಮುಂದಿನ ೬೦ ವರ್ಷಗಳನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಜಗತ್ತು ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ವಿಷಾದಿಸಿದರು.

ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು ಸೌರಶಕ್ತಿ ವಿದ್ಯುತ್‌ನಿಂದ ಚಾರ್ಜ್ ಮಾಡಿಕೊಂಡಾಗ ಮಾತ್ರವೇ ಪರಿಸರ ಸ್ನೇಹಿಆಗಲು ಸಾಧ್ಯ, ಕಲ್ಲಿದ್ದಲು ಸುಟ್ಟು ತಯಾರಿಸುವ ವಿದ್ಯುತ್ ಬಳಸಿದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ತ್ಯಾಜ್ಯ ಮರುಬಳಕೆಯಂತ ಪರಿವರ್ತಿತ ಆವೃತ್ತಗಳಿಂದ ಹೊಸ ಆರ್ಥಿಕತೆಯನ್ನು ಸೃಷ್ಟಿಸಬಹುದು ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ಪ್ರತಿಪಾದಿಸಿದರು.

ಪತ್ರಕರ್ತ ವಿಶಾಖ ಇರುವುದೊಂದೆ ಭೂಮಿ ಕೃತಿಯ ಕುರಿತು ಮಾತನಾಡಿ, ನಾಗೇಶ್ ಹೆಗಡೆ ತಮ್ಮ ಚೊಚ್ಚಲ ಕೃತಿಯಲ್ಲಿಯೇ ಪರಿಸರ ಪ್ರe ಮೂಡಿಸುವ ಸಾಮಾಜಿಕ ಜವಾಬ್ದಾರಿಯ ಮಾನವ ಅಂತಕರಣದ ಕೃತಿಯನ್ನು ಬರೆದು ಬರವಣಿಗೆಯ ಮೌಲ್ಯರ್ವಸಿದ್ದಾರೆಂದರು.
ಪರಿಸರ ಕುರಿತಂತೆ ಪ್ರಜೆಗಳು ಹಾಗೂ ಪ್ರಭುತ್ವವನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಭಾಷೆಯ ಬಳಕೆ ಮತ್ತು ಹೊಣೆಗಾರಿಕೆಯ ವಿಚಾರದಲ್ಲಿ ಅಕೃತತೆಯ ದೃಷ್ಠಿಯಿಂದ ಪರಿಸರ ಬರಹಗಾರರಿಗೆ ಪ್ರೇರಣೆ ಹಾಗೂ ಪರಿಸರವಾದಿಗಿಗೆ ಇರುವುದೊಂದೆಭೂಮಿ ದಾರಿದೀಪವಾಗಿದೆಯೆಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಆಕಾಶಗಂಗೆ ನಕ್ಷತ್ರ ಪುಂಜದಲ್ಲಿರುವ ಸೌರಮಂಡಲದ ಏಕೈಕ ನೀಲಿ ಗ್ರಹ ಇರುವುದೊಂದೆಭೂಮಿಯಾಗಿದ್ದು, ೪೬೦ ಕೋಟಿ ವರ್ಷಗಳ ಈ ಭೂಮಿಯಲ್ಲಿ ಕೆಲವೇ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮನುಷ್ಯ ಪ್ರಗತಿ ನೆಪದಲ್ಲಿ ಪ್ರಕೃತಿಯನ್ನು ಸರ್ವನಾಶ ಮಾಡಿ ತನ್ನ ಅವನತಿಗೆ ಹಾದಿ ಮಾಡಿಕೊಳ್ಳುತ್ತಿದ್ದಾನೆ, ಆಧುನಿಕತೆಯ ಜೊತೆಗೆ ಆದಿವಾಸಿ ಮನಸ್ಥಿತಿ ಬಂದಾಗ ಮಾತ್ರವೇ ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿ, ಈ ವಿಚಾರದಲ್ಲಿ ಇರುವುದೊಂದೆ ಭೂಮಿ ವಿದ್ಯಾರ್ಥಿ ಯುವ ಸಮೂಹಕ್ಕೆ ಮಾರ್ಗದರ್ಶಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
ಓದುಗ ಕೇಳುಗ ಬಳಗದ ಎಚ್.ಎ.ಪುರುಷೋತ್ತಮ್‌ರಾವ್ ಸ್ವಾಗತಿಸಿ, ಜೆ.ಜಿ.ನಾಗರಾಜ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!