• Mon. Apr 29th, 2024

ಕೋಲಾರ ರೈತಸಂಘದ ಮುಖಂಡರಿಂದ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಚುನಾವಣೆಗೆ ಮುನ್ನಾ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾಗೆ ಆಗ್ರಹ

PLACE YOUR AD HERE AT LOWEST PRICE

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಭರವಸೆ ನೀಡುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಯ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತಸಂಘದ ಕೋಲಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ೫ ಗ್ಯಾರೆಂಟಿಗಳನ್ನು ಘೋಷಿಸಿರುವ ರಾಜ್ಯ ಸರಕಾರಕ್ಕೆ ೬ನೇ ಗ್ಯಾರೆಂಟಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಯೋಜನೆಯು ನುಂಗಲಾರದ ತುತ್ತಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ವಿಚಾವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಸಾಕಷ್ಟು ಹಳ್ಳಿಗಳಲ್ಲಿ ಸಾಲ ಮರುಪಾವತಿ ಮಾಡದೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಚುನಾವಣೆಗೆ ಮೊದಲು ಜಿಲ್ಲೆಯ ವೇಮಗಲ್‌ನಲ್ಲಿ ನಡೆದಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿಯೂ ಭರವಸೆ ನೀಡಿದ್ದರು. ಅವರು ಹೇಳಿದ ಮಾತನ್ನು ಕೇಳಿ ಇಂದು ಮತ ನೀಡಿ ಮಹಿಳೆಯರು ತಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ನಮಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಿ ಅವರ ಮಾತನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಮಹಿಳಾ ಸಂಘಗಳ ಪದಾಧಿಕಾರಿಗಳಾದ ಚೌಡಮ್ಮ, ಶೈಲಜಾ ಮಾತನಾಡಿ, ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಹಾಲು ಮೊಸರು ಅರ್ಚನೆ ಮಾಡಿ ಸ್ತ್ರೀಶಕ್ತಿ ಸಾಲಮನ್ನಾ ಮಾಡುವಂತೆ ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ಕೊಟ್ಟ ಮಾತಿನಂತೆಯೇ ನಡೆದುಕೊಂಡು ಇಂದು ಸಾಲಮನ್ನಾ ಮಾಡಲೇಬೇಕೆಂದು ಒತ್ತಾಯಿಸಿದರು.

ನಾವು ಯಾವುದೇ ಕಾರಣಕ್ಕೂ ಸಾಲ ಮರುಪಾವತಿ ಮಾಡುವುದಿಲ್ಲ. ಈ ಬಗ್ಗೆ ಜಿಲ್ಲೆಯಾದ್ಯಂತ ಮಹಿಳೆಯರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ, ಸರಕಾರದ ಮುಂದಿನ ಆದೇಶದವರೆಗೂ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ತೆರಳದಂತೆ ಸೂಚಿಸಿದ್ದಾರೆ.

ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಸಾಲ ಮನ್ನಾ ಮಾಡದೆ ಹೀಗೆಯೇ ನಿರ್ಲಕ್ಷಿಸಿಕೊಂಡು ಹೋಗಿದ್ದೇ ಆದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಅನಾಹುತಗಳಿಗೆ ಮುಖ್ಯಮಂತ್ರಿಗಳೇ ನೇರ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿ, ಕೂಡಲೇ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಯ್ಯ, ಯಾರಂಘಟ್ಟ ಗಿರೀಶ್, ನಾರಾಯಣಗೌಡ, ವೆಂಕಟಮ್ಮ, ರಾಧಮ್ಮ, ಶೋಭ, ಸುಗುಣ, ಸೌಮ್ಯ ಮತ್ತಿತರರು ಹಾಜರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!