• Sun. Apr 28th, 2024

ಅಣ್ಣಾಮಲೈ ಕುರಿತ ರೇಣುಕಾಚಾರ್ಯ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸದೆ ಜಾರಿಕೊಂಡ ಸಂಸದ ಮುನಿಸ್ವಾಮಿ

PLACE YOUR AD HERE AT LOWEST PRICE

ಅಣ್ಣಾಮಲೈ ಗ್ರಾಮ ಪಂಚಾಯ್ತಿ ಚುನಾವಣೆ ಗೆಲ್ಲದಿದ್ದರೂ ರಾಜ್ಯದ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿದ್ದರೆಂಬ ರೇಣುಕಾಚಾರ್ಯ ಪ್ರಶ್ನೆಗೆ ಸಂಸದ ಮುನಿಸ್ವಾಮಿ ಉತ್ತರಿಸಿದೆ ದಿಢೀರ್ ಮಾತು ಸ್ಥಗಿತಗೊಳಿಸಿ ಜಾರಿಕೊಂಡರು.

ಕೋಲಾರ ನಗರದಲ್ಲಿ ಸುದ್ದಿಗಾರರೊಂದಿಗೆ ಉತ್ಸಾಹದಿಂದಲೇ ಮಾತನಾಡಿ ರಾಜ್ಯ ಸರಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದ ಸಂಸದರಿಂದ ತಮ್ಮದೇ ಪಕ್ಷದಹಿರಿಯ ಮುಖಂಡರೊಬ್ಬರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಲಾಗದೆ ತಕ್ಷಣಕ್ಕೆ ಮಾತು ಸ್ಥಗಿತಗೊಳಿಸಿ ಜಾರಿಕೊಂಡಿದ್ದು ಪ್ರಶ್ನೆ ಕೇಳುತ್ತಿದ್ದ ಸುದ್ದಿಗಾರರಿಗೂ ಆಶ್ಚರ್ಯ ತಂದಿತ್ತು.

ಸಂಸದ ಮುನಿಸ್ವಾಮಿ ತಮಗೆ ಬೇಕಾದ್ದನ್ನು ಮಾತ್ರವೇ ಮಾತನಾಡುತ್ತಾರೆ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೂ ಹೋಗುವುದಿಲ್ಲವೆನ್ನುವುದು ಸಂಸದರು ಮಾತನಾಡದೆ ಜಾರಿಕೊಂಡವೀಡಿಯೋ ಮೂಲಕ ವೈರಲ್ ಆಗುತ್ತಿದೆ.

ಇದಕ್ಕೂ ಮುನ್ನ ಸಂಸದರು ಮಾತನಾಡಿ, ಮಾಜಿ ಸಚಿವ ಸುಧಾಕರ್ ಕೋಚಿಮುಲ್ ವಿಭಜನೆ ಮಾಡಿಸಿದರೆಂಬ ಒಂದೇ ಕಾರಣಕ್ಕೆ ದ್ವೇಷ ರಾಜಕಾರಣ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ತಡೆಯಾಜ್ಞೆ ಕೊಡುವಂತೆ ಮಾಡಿದೆ, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಅವರೇ ಮಾಡಿಸಿದ್ದು ಅದಕ್ಕೂ ತಡೆ ಕೊಡಿಸಿಬಿಡಲಿ ಎಂದು ವ್ಯಂಗ್ಯವಾಡಿದರು.

ಹಿಂದೆ ನಮ್ಮ ಸರ್ಕಾರ ಕೋಚಿಮುಲ್ ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟ,ಮೆಗಾಡೇರಿ ಮಾಡುವ ಪ್ರಯತ್ನ ನಡೆಸಿದ್ದು, ಒಕ್ಕೂಟದಲ್ಲಿ ಇದ್ದ ಸಾಲ ಹೇಗೆ ತೀರಿಸುವುದು ಎಂಬ ಗೊಂದಲವಿತ್ತು ಎಂದರು.

ಆದರೆ ಸುಧಾಕರ್ ಪ್ರಯತ್ನದಿಂದ ಚಿಕ್ಕಬಳ್ಳಾಪುರಕ್ಕೆ ಹಾಲು ಒಕ್ಕೂಟ ಸಿಕ್ಕಿತ್ತು. ಇದೀಗ ಅದಕ್ಕೂ ತಡೆಯಾಜ್ಞೆ ನೀಡಿದ್ದಾರೆ, ಸುಧಾಕರ್ ಪ್ರಯತ್ನದಿಂದಲೇ ಅಲ್ಲಿಗೆ ಮೆಡಿಕಲ್ ಕಾಲೇಜು ಬಂದಿರೋದು ಅದಕ್ಕೂ ತಡೆ ಕೊಡಿಸಲಿ ಎಂದ ಅವರು, ನನಗೆ ಕೋಲಾರ,ಚಿಕ್ಕಬಳ್ಳಾಪುರ ಎರಡು ಕಣ್ಣುಗಳಿದ್ದಂತೆ ಎರಡೂ ಜಿಲ್ಲೆಗಳ ಅಭಿವೃದ್ದಿ ಮುಖ್ಯ ಎಂದರು.

ಒಂದು ಕಡೆ ಕೋಚಿಮುಲ್‌ಗೆ ನಷ್ಟವಾಗುತ್ತಿರುವುದರಿಂದ ರೈತರಿಂದ ಖರೀದಿಸುವ ಹಾಲಿನ ದರ ೨ ರೂ ಕಡಿಮೆ ಮಾಡುವುದಾಗಿ ಶಾಸಕ ನಂಜೇಗೌಡರು ಹೇಳುತ್ತಾರೆ, ಮತ್ತೊಂದೆಡೆ ಕೋಚಿಮುಲ್ ಭಾರಿ ಲಾಭದಲ್ಲಿದೆ ಎನ್ನುತ್ತಾರೆ ಇಂತಹ ಗೊಂದಲ ಸೃಷ್ಟಿ ಏಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಭ್ರಷ್ಠಾಚಾರ ದೇಶಕ್ಕೆಲ್ಲಾ ಗೊತ್ತು, ದ್ವೇಷ ರಾಜಕಾರಣ ಬಿಟ್ಟು ಜನರಿಗೆ ನೀಡಿರುವ ಗ್ಯಾರೆಂಟಿಗಳನ್ನು ಮೊದಲು ಜಾರಿಗೆ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ಅದೇನೋ ತನಿಖೆ ಮಾಡುತ್ತಾರೆ ಎಂದರೆ ಹೆದರೋರ‍್ಯಾರೂ ಇಲ್ಲ, ಕಾಂಗ್ರೆಸ್ಸಿಗರ ಮನೆ ಹೆಂಚೇ ತೂತು, ಬೇರೆಯವರ ಮನೆ ದೋಸೆ ತೂತಿನ ಬಗ್ಗೆ ಚಿಂತೆ ಏಕೆ, ನೀಡಿರುವ ಗ್ಯಾಂರೆಂಟಿಗಳನ್ನು ಜಾರಿ ಮಾಡಲಾಗದೇ ಜನರ ದಿಕ್ಕು ತಪ್ಪಿಸಲು ಏನೇನೋ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದೆ ನಮ್ಮ ಸರ್ಕಾರದಲ್ಲಿ ಏನೋ ನಡೆದಿದೆ, ತನಿಖೆ ಮಾಡಿಸುತ್ತೇವೆ ಎಂದು ಜನರನ್ನು ಗ್ಯಾಂರೆಂಟಿಗಳಿಂದ ಮರೆಸುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಜನರೂ ಮರೆಯಲ್ಲ, ನಾವೂ ಹೇಳಿರುವ ಗ್ಯಾರೆಂಟಿಗಳನ್ನು ಜನರಿಗೆ ಕೊಡಿಸದೇ ಬಿಡಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರಗೆ ನೀಡಲು ಮಂಡ್ಯದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ರಕ್ತದಲ್ಲಿ ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷದಲ್ಲಿ ಪ್ರತಿಕಾರ್ಯಕರ್ತರಿಗೂ ಇಂತಹವರೇ ಅಧ್ಯಕ್ಷರಾಗಲಿ ಎಂದು ಹೇಳುವ ಹಕ್ಕಿದೆ ಜತೆಗೆ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ ಆದರೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!