• Fri. May 3rd, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲೂಕಿನಲ್ಲಿ ಮಂಗಳವಾರ ನಡೆದ ೬ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ 5 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, ಬಿಜೆಪಿ-ಜೆಡಿಎಸ್ ಬೆಂಬಲಿತರು ಒಂದು ಗ್ರಾಪಂನಲ್ಲಿ ಜಯಗಳಿಸಿದ್ದಾರೆ.

ತಾಲೂಕಿನ ಮೂರು ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದೋಣಿಮಡಗು ಗ್ರಾಪಂನಲ್ಲಿ ಚುನಾವಣೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತರೇ ಗೆಲುವು ಸಾಧಿಸಿದ್ದಾರೆ. ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ಇಲ್ಲದಿದ್ದರೂ ಕೊನೆಕ್ಷಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇಲ್ಲಿಯೂ ಸಹ ಕಾಂಗ್ರೆಸ್ ಬೆಂಬಲಿತರೇ ಗೆಲುವು ಸಾಧಿಸಿದ್ದಾರೆ.

ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಾಕರಸನಹಳ್ಳಿ ಗ್ರಾಮದ ಮಂಜುಳ ಜಯಣ್ಣ ಅವರು ೧೨ ಮತಗಳನ್ನು ಪಡೆದು ಹಾಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಮಹದೇವ್ ೭ ಮತಗಳ ವಿರುದ್ದ ೫ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾಗೇಯೇ ಉಪಾಧ್ಯಕ್ಷರಾಗಿ ನಾಗರತ್ನ ೧೦ ಮತಗಳನ್ನು ಪಡೆದು ಅಮರಮ್ಮ ೯ ಮತಗಳನ್ನು ಪಡೆದ ವಿರುದ್ದ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯಾ ಕರ‍್ಯನಿರ್ವಹಿಸಿದರು.

ತಾಲೂಕಿನ ಗಡಿಭಾಗದಲ್ಲಿರುವ ದೋಣಿಮಡಗು ಗ್ರಾಪಂನಲ್ಲಿ ಹೆಚ್ಚಾಗಿ ಕಾಂಗ್ರೆಸ್ ಬೆಂಬಲಿತರೆ ಇದ್ದರೂ ಸಹ ಮೊದಲನೇ ಅವಧಿಯಲ್ಲಿ ಸಾಮಾನ್ಯ ಸ್ಥಾನಕ್ಕೆ ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದವರ ಹೆಸರು ಒಂದೇ ಆಗಿದ್ದರಿಂದ ಗೊಂದಲ ಸೃಷ್ಠಿಯಾಗಿ ಬಿಜೆಪಿಯ ಮಂಜುಳಾ ಮಹದೇವ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ಇದೇ ರೀತಿ ಗೊಂದಲ ಸೃಷ್ಠಿಯಾಗಿ ಗೆಲುವು ಸಾಧಿಸಿಲು ಬಿಜೆಪಿಯವರು ಕಾತುರದಿಂದಿದ್ದರೆ, ಇತ್ತ ಕಾಂಗ್ರೆಸ್ ಬೆಂಬಲಿತರು ಆತಂಕದಿಂದಲೇ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸಿದರು.

ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಭದ್ರಕೋಟೆ ಆಗಿದೆ. ಇಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಪಂಗಡಕ್ಕೆ ಮೀಸಲಿರಿಸಿದ್ದರಿಂದ ಬೀರಂಡಹಳ್ಳಿ ಗ್ರಾಮದ ಏಕೈಕ ಸದಸ್ಯೆ ಗಿರಿಜಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು   ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಿರಿಸಿದ್ದು, ಈ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದೆ.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಮ್ಮುಖದಲ್ಲಿ ಎಲ್ಲಾ ಸದಸ್ಯರು ಸೇರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮೀಸಲಿರಿಸಿದ್ದರಿಂದ ಒಮ್ಮತವಾಗಿ ಬೈರನಾಯಕನಹಳ್ಳಿ ಮೂರ್ತಿರಿಗೆ ಭರವಸೆ ನೀಡಿದ್ದರು. ಹುದುಕುಳ ಗ್ರಾಮದಿಂದ ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪರಿಶಿಷ್ಠ ಜನಾಂಗದ ಶ್ರೀರಾಮ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಮೂರ್ತಿ ಹಾಗೂ ಶ್ರೀರಾಮ್ ಇಬ್ಬರೂ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಬಂಡಾಯವಾಗಿ ಸ್ಪರ್ಧಿಸಿದ್ದ ಹುದುಕುಳ ಶ್ರೀರಾಮ್ ೧೦ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಶಾಸಕರ ಆಪ್ತರಾಗಿದ್ದ ಮೂರ್ತಿ ೭ ಮತಗಳನ್ನು ಪಡೆದು ಸೋತಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಶ್ರೀರಾಮ್  ಗೆಲುವು ಸಾಧಿಸಿದ್ದಾರೆ.

ಚಿಕ್ಕಅಂಕಂಡಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಪಂಗಡ ಮಹಿಳೆಗೆ ಮೀಸಲಿರಿಸಿದ್ದರೆ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮೀಸಲಿರಿಸಿದ್ದರು. ಈ ಎರಡೂ ಸ್ಥಾನಗಳಲ್ಲಿ ಪರಿಶಿಷ್ಠ ಪಂಗಡದವರೇ ಆಯ್ಕೆಯಾಗಿರುವುದು ವಿಶೇಷವಾಗಿದೆ. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಕಾರ‍್ಯನಿರ್ವಹಿಸಿದರು. ಪಿಡಿಒ ವಿ.ಚಿತ್ರಾ ಹಾಜರಿದ್ದರು.

ತಾಲೂಕಿನ ಆಲಂಬಾಡಿ ಜೊತೇನಹಳ್ಳಿ ಗ್ರಾಪಂಗೆ ಸತತ ಎರಡನೇ ಬಾರಿಗೆ ಅದ್ಯಕ್ಷರಾಗಿ ನಾರಾಯಣಮ್ಮ, ಉಪಾದ್ಯಕ್ಷರಾಗಿ ರಾಮಚಂದ್ರ ಆಯ್ಕೆಯಾಗಿರೆ. ಅಧ್ಯಕ್ಷ ಸ್ಥಾನಕ್ಕೆ ನಾರಾಯಣಮ್ಮ ಹಾಗೂ ಚೌಡಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ರಾಮಚಂದ್ರ ಒಬ್ಬರು ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಹಾಗೂ ಉಪಾಧ್ಯಕ್ಷ ಸ್ಥಾನವು ಅವಿರೋಧವಾಗಿ ಆಯ್ಕೆಯಾಗಿದೆ.

ಒಟ್ಟು ೧೮ ಸದಸ್ಯರನ್ನು ಒಳಗೊಂಡಿರುವ ಈ ಗ್ರಾಪಂನಲ್ಲಿ ನಾರಾಯಣಮ್ಮ ರವರಿಗೆ ೧೨ ಮತಗಳು ಹಾಗೂ ಚೌಡಮ್ಮ ರವರಿಗೆ ಮೂರು ಮತಗಳು, ಒಂದು ಮತ ಆಸಿಂದು ಆಗಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಮೀಸಲಿರಿಸಿದ್ದರೂ ಸಹ ಅಧ್ಯಕ್ಷರಾಗಲು ಇತರೆ ಸದಸ್ಯರು ಯಾರೂ ಪ್ರಯತ್ನ ಮಾಡದೇ ಇರುವುದರಿಂದ ೨ನೇ ಅವಧಿಗೂ ಅಧ್ಯಕ್ಷರಾಗಿ ನಾರಾಯಣಮ್ಮ ರವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪಂಚಾಯತ್ ರಾಜ್ ಇಲಾಖೆಯ ಎಇಇ ಹೆಚ್.ಡಿ.ಶೇಷಾದ್ರಿ ಕಾರ‍್ಯನಿರ್ವಹಿಸಿದರು. ಪಿಡಿಒ ಚಂದ್ರಕಲಾ ಹಾಜರಿದ್ದರು.

 ಚಿನ್ನಕೋಟೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುನಂದಮ್ಮ ಹಾಗೂ ಉಪಾಧ್ಯಕ್ಷರಾಗಿ ವಿವೇಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿನ್ನಕೋಟೆ ಗ್ರಾಪಂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಿಡಿತದಲ್ಲಿರುವುದರಿಂದ ಶಾಸಕರ ತೀರ್ಮಾನವೇ ಅಂತಿಮವಾಗಿರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಕಾರ‍್ಯನಿರ್ವಹಿಸಿದರು. ಪಿಡಿಒ ಪಿ.ನಾರಾಯಣಪ್ಪ ಹಾಜರಿದ್ದರು.

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ತಾಲೂಕಿನ ಗಡಿಭಾಗದ ಬಲಮಂದೆ ಗ್ರಾಪಂನ ನೂತನ ಅಧ್ಯಕ್ಷರಾಗಿ ದೊಡ್ಡಪನ್ನಾಂಡಹಳ್ಳಿ ಗ್ರಾಮದ ಎಂ.ಸರಸ್ವತಿ ರಾಮಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಬಲಮಂದೆ ಗ್ರಾಮದ ಚಂದ್ರಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಸಿ.ವೆಂಕಟೇಶಪ್ಪ ಕಾರ‍್ಯನಿರ್ವಹಿಸಿದರು. ಪಿಡಿಒ ಮಧುಚಂದ್ರ ಹಾಜರಿದ್ದರು.

ತಾಲೂಕಿನ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪ್ರತಿಷ್ಠಿತ ಐನೋರಹೊಸಹಳ್ಳಿ ಗ್ರಾಪಂನಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಬೆಂಬಲಿತರಾಗಿ ಕಣಿಂಬೆಲೆಯ ಕೆ.ಜಿ.ಮಂಜುನಾಥ್ ಚುನಾವಣೆಯ ಮೂಲಕ ಗೆಲುವು ಸಾಧಿಸಿದ್ದು, ಆಡಳಿತರೂಢ ಕಾಂಗ್ರೆಸ್‌ಗೆ ನಿರಾಸೆಯಾಗಿದೆ.

ಐನೋರಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನವು ಎಸ್ಸಿಗೆ ಮೀಸಲಿರಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಜಿ.ಮಂಜುನಾಥ್ ೧೩ ಮತಗನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ವಸಂತ ೬ ಮತಗಳನ್ನು ಪಡೆದು ಸೋತಿದ್ದಾರೆ. ಒಂದು ಮತವು ಅಸಿಂಧುವಾಗಿದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ್ದು, ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ವೇತ ೧೩ ಮತಗನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ರಾಧಾ ೭ ಮತಗಳನ್ನು ಪಡೆದು ಸೋತಿದ್ದಾರೆ. ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಎಇಇ ರವಿ ಕಾರ‍್ಯನಿರ್ವಹಿಸಿದರು. ಪಿಡಿಒ ಶಂಕರ್ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!